Jan 11, 2009

ಮತ್ತೆ ಬರುವನು ಚಂದಿರ - 11

ಭವ್ಯ ಕನಸೊಂದ ತುಳುಕು ಹಾಕಿಸಿ
ಕಲ್ಪನೆಯ ಸಿರಿಯನ್ನು ದಯಪಾಲಿಸಿ
ಮತ್ತದೇ ಸ್ಥಿತಿಯೊಂದಿಗೆ ನನ್ನ ಉಳಿಸಿ
ಮರೆಯಾಗುವ ಚೋರ ಚಂದಿರ

ಸಹಜ ಸೌಂದರ್ಯವೇ ಮೂಲ ಆಕರ್ಷಣೆ
ಇತಿಮಿತಿಗಳ ಹಿನ್ನಲೆಯಲ್ಲಿಯೆ ವೈವಿಧ್ಯತೆ
ಸೃಜನಶೀಲತೆಯೆ ಮಾನವನ ಸಾಧ್ಯತೆ
ಸಿದ್ದನಾಗಿರುವನವ ನೋಡ ಚಂದಿರ

ನಸುಬೆಳಕು ಮನೆಯೊಳಗೆ ಎಸೆದವರು ಯಾರು
ಜೋಡಿನೆರಳುಗಳ ತೆಕ್ಕೆ ಹೆಣೆದವರು ಯಾರು
ಬಿಸಿಲು ಕಣ್ಮರೆಯಾಗಿ ಸೂರ್ಯನ ನೆರಳು
ಇರುಳಲ್ಲಿ ನಗುತಿರುವನಾ ಚಂದಿರ

ಬೆಳಕು ಮೌನವಾಗಿ ಕರಗಿತು
ಕತ್ತಲು ನೆರಳ ಜೊತೆಗೂಡಿತು
ಇತ್ತಲಮರ ಕಪ್ಪಾದ ಸಮಯ
ಮೆಲ್ಲಗೆ ಹೊರಬರುವನಾಗ ಚಂದಿರ

ಅರೆಗತ್ತಲ ಹರೆಯಕೆ ಮರುಗ ಬೇಡ
ಬಾಗಿಲನು ತೆರೆದು ಗಾಳಿ ಬೆಳಕರಿಸು
ಬೆಳಕಿನ ವಿಸ್ತಾರವಿಹದು ಅಪಾರ
ಜಗದ ಉದ್ದಗಲ ಕಾಣೊ ಚಂದಿರ

ಶಕ್ತಿ ಸಾಮರ್ಥಗಳ ಕುಗ್ಗಿಸ ಬಲ್ಲ
ಜಾಣ ಸಾವಾಲುಗಳೆದುರಿಸ ಬಲ್ಲ
ಸಾಧು, ಸಂತರನೆಲ್ಲ ಸಲಹ ಬಲ್ಲ
ಅತೀವ ಚಾಣಾಕ್ಷನಿವ ಚಂದಿರ

ವಿಷಾದದರಿವೆಯಲಿ ಸುತ್ತಿಟ್ಟು
ತೀವ್ರವಾಗಿ ಉರಿಯುತಿಹ ಸಿಟ್ಟು
ಹೊತ್ತಿ ಉರಿಯುವ ಸಮಯಕೆ
ಎದ್ದು ಚುರುಕಾದನೊ ಚಂದಿರ

ಪುಳಕಗೊಂಡ ಪರಿಮಳ ಒಪ್ಪಿಸಿಕೊಂಡು
ಹಾತೊರೆಯುತ ಹೆಜ್ಜೆ ಮುಂದಿಟ್ಟು
ನಿಟ್ಟುಸಿರು ಪಿಸುಮಾತಿಗೆ ಮುತ್ತಿಟ್ಟು
ಮತ್ತಿನಲಿ ತೇಲಾಡುವನೊ ಚಂದಿರ

ನೀರವ ದೂರದಲಿ ಮಳೆಯಾದ ಘಮಲು
ತಂಗಾಳಿ ಜೊತೆಯಲ್ಲಿ ತೇಲಿ ಬರುತಿರಲು
ಮಬ್ಬುಗತ್ತಲಲಿ ಸಖಿ ಸನಿಹದಲ್ಲಿರಲು
ಮೈಸವರಿ ಮೈಮರೆಸುವ ಚತುರ ಚಂದಿರ

ಹೊರಟ ಹಾದಿಯಲ್ಲೆಡೆ ಹೊಂಬಿಸಿಲು
ಹಳದಿ ಹೂವುಗಳ ಸಾಲು ಸಾಲು
ತೆರೆದ ಹಾದಿಯಲೆಲ್ಲಾ ಹೂ ಹಾಸಿಗೆ
ರೋಮಾಂಚನ ಆ ಸ್ಪರ್ಶಕೆ ಚಂದಿರ

No comments: