Jan 21, 2009

ಮತ್ತೆ ಬರುವನು ಚಂದಿರ - 12

ಸದಾ ಹೊಸತು ತುಡಿಯುತಿರಲು
ಹಳೆಯ ನೆನಪು ಬಾರದಿರಲು
ದಿನವು ರವಿಯು ಮೂಡುತಿರಲು
ಮತ್ತೆ ಬರುವ ಚಂದಿರ

ದಿನವೆಲ್ಲ ಧನ್ಯತೆ ನಕ್ಕಾಗ ಸ್ನೇಹಿತೆ
ಬಚ್ಚಿಡುವ ಕಳವಳ ಎದೆಯಗೂಡೊಳಗೆ
ಬಿಚ್ಚಿಡುವ ತಳಮಳವು ತುದಿಗಾಲಲಿರಲು
ಕುಣಿದಾಡಿತೆನ್ನ ಮನ ಚಂದಿರ

ಹರಿದು ಹೋದ ಒಲವಿಗೆ
ಬಿರುಕು ಬಿಟ್ಟಿದೆ ಬಂಧನ
ಬದುಕು ತವಕ ತಲ್ಲಣ
ಬೆಳಕು ನೀಡೊ ಚಂದಿರ

ಬೆಚ್ಚನ ಮೃದು ಹಾಸಿಗೆಯಲಿ
ತೆಳುವಾದ ಹುರುಪಿನಲಿ
ಕಣ್ತುಂಬ ಕನಸುಗಳೊತ್ತು
ಕವಿಯಾದೆನೊ ಚಂದಿರ

ಎಳೆಬಿಸಿಲು ಮೈಸವರಿ
ಮೈ ಮರೆಸಿದೆ ಕಾನನ
ಗಿರಿಶಿಖರವು ಕಲೆಯಾಗಿ
ಕಣ್ತುಂಬಿತೊ ಚಂದಿರ

ನಿಗೂಢ ಪಯಣದ ಪರಧಿಯಲಿ
ಕ್ಷಣ ಕ್ಷಣವು ಕುತೂಹಲ ಬಾನಲ್ಲಿ
ತಳಮಳ, ತಲ್ಲಣಗಳು ಮನದಲ್ಲಿ
ಇದು ಯಾವ ವಿಸ್ಮಯವೊ ಚಂದಿರ

ಕ್ಷಿಪ್ರ ಗತಿಯ ರಭಸದೊಡೆತಕೆ
ಛಿದ್ರವಾಗಿದೆ ತೋರುಗನ್ನಡಿ
ವಿತಂಡ ವಾದ-ವಿವಾದದಿಂದ
ವಿಲೀನವಾಗಿದೆ ಮೌಲ್ಯ ಚಂದಿರ

ನಿಶ್ಚಲತೆಯ ನಿಗೂಢ ನಡೆಗೆ
ಸರಳತೆಯ ಸುಪ್ತ ಸ್ವಭಾವಕೆ
ಅಡತಡೆಗಳು ಬಿಗಿದಿಟ್ಟರೆ
ಅರಳುವುದೆ ಮನ ಚಂದಿರ

ಎದ್ದು ಬಾರೊ ಭಗ್ನ ಮೂರ್ತಿ
ನಿದ್ದೆ ಮಾಡುವ ಸರದಿ ಸಾಕು
ಯುದ್ದ ಸಾರಲು ಸಿದ್ದನಾಗು
ಸಾರಥಿಯಾಗುವ ಚಂದಿರ

ಸೂಕ್ಷ್ಮ ಸೆಳೆವಿನ ಅರಿವಿನಿಂದ
ಅಂತರಂಗವನಾಳೊ ಗೆಳೆಯ
ಸಮರ ಸಾರಲು ಸಹನೆಯಿರಲಿ
ಜೊತೆಗೆ ಬರುವನು ಚಂದಿರ

No comments: