ಕೆಲವು ಸಲ ಅವಳು ಆ ಪುಟ್ಟ ಕೆಂಬಣ್ಣದ ಬಟ್ಟೆಯೊಂದಿಗೆ
ಹಳ್ಳಿಯನ್ನೆಲ್ಲಾ ಸುತ್ತುತ್ತಾಳೆ.
ಎಲ್ಲವೂ ಅವಳಲ್ಲಿ ಅಡಗಿಸಿಕೊಂಡು, ಅರಗಿಸಿಕೊಂಡಂತೆ,
ಆದರೂ, ಅವಳಿಗರಿವಿಲ್ಲದೇ, ಅವಳ ಮುಂದಿನ ಬದುಕಿನ ಲಯದೊಂದಿಗೆ,
ನಿಧಾನಗತಿಯಲ್ಲಿ ಚಲಿಸುತ್ತಿದ್ದಂತೆ ತೋರುತ್ತದೆ.
ಸ್ವಲ್ಪ ಓಡುತ್ತಾಳೆ, ಹಿಂಜರಿಯುತ್ತಾಳೆ, ನಿಲ್ಲುತ್ತಾಳೆ,
ಅರ್ಧ ತಿರುಗಿ...
ಮತ್ತೆ, ಸದಾ ಹಗಲುಗನಸು ಕಾಣುತ್ತಾ, ತಲೆ ಅದರ
ಪರ ಅಥವಾ ವಿರೋಧವಾಗಿ ಅಲುಗಾಡಿಸುತ್ತಾಳೆ.
ನಂತರ, ಅವಳೇ ಕಂಡುಕೊಂಡ ಭಂಗಿಗಳೊಂದಿಗೆ,
ತುಸು ನರ್ತಿಸುತ್ತಾಳೆ ಮತ್ತೆ ಮರೆತು ಬಿಡುತ್ತಾಳೆ
ನಿಸ್ಸಂದೇಹವಾಗಿ ಅವಳ ಹಂಬಲಿಸಿದ ಬದುಕಿನ
ಹುಡುಕಾಟದಲ್ಲಿ ವೇಗವಾಗಿ ಮುನ್ನಡೆದಿದ್ದಾಳೆ.
ಯಾವಾಗಲೂ ಅವಳಿಗಂಟಿಕೊಂಡಿರುವ,
ಆ ಪುಟ್ಟ ಮಗುವನ್ನು ಬಿಟ್ಟು ಹೊರಬರುವುದು ವಿರಳ
ಮತ್ತೆ ಯಾವಾಗಲೂ ಅವಳೊತ್ತುಕೊಂಡಿರುವುದು ಅದೇ
ನಿತ್ಯ ಸೋಲು, ಸೆಣಸಾಟ, ಆಘಾತಗಳು.
ತೊಟ್ಟ ಆ ಬಟ್ಟೆ ಮಾತ್ರ ಅವಳ ನೆನಪಲ್ಲಿರುತ್ತದೆ,
ಮುಂದೆ ಅವಳ ಸಿಹಿ ಶರಣಾಗತಿಯಲ್ಲಿ;
ಅವಳ ಸಂಪೂರ್ಣ ಬದುಕು ಸಮಸ್ಯೆಗಳ ಸುಳಿಯಲ್ಲಿದ್ದಾಗ,
ಯಾವಾಗಲೂ ಆ ಪುಟ್ಟ ಕೆಂಪು ಉಡುಪು ಮಾತ್ರ ಸರಿಯೆಂದೆನಿಸುತ್ತದೆ.
(ಮೂಲ ಕವಿ: ರೈನರ್ ಮಾರಿಯ ರಿಲ್ಕ್ )
No comments:
Post a Comment