Jan 9, 2009

ವಿರಹ ಗೀತೆ

ತೀವ್ರ ನೋವಿನ ಸಾಲುಗಳ ನಾ ಬರೆಯಬಲ್ಲೆ ಈ ರಾತ್ರಿ

ಈ ರೀತಿ: ಈ ರಾತ್ರಿ ಬಿರುಕುಬಿಟ್ಟಿದೆ,
ನಡುಗುತ್ತಿದೆ ಆ ನೀಲಾಕಾಶ, ಆ ನಕ್ಷತ್ರಗಳೆಲ್ಲೋ ದೂರದಲ್ಲಿ.

ಈ ರಾತ್ರಿಯ ತಂಗಾಳಿ ಸುತ್ತಿ ಸುತ್ತಿ ಹಾಡುತ್ತಿದೆ ಯಾವುದೋ ರಾಗದಲ್ಲಿ.
ತೀವ್ರ ನೋವಿನ ಸಾಲುಗಳ ನಾ ಬರೆಯಬಲ್ಲೆ ಈ ರಾತ್ರಿ
ನಾ ಅವಳ ಪ್ರೀತಿಸಿದೆ, ಅವಳೂ ಸಹ ಆಗಾಗ ನನ್ನ ಪ್ರೀತಿಸಿದಳು.

ಈ ತಂಪು ರಾತ್ರಿಗಳಲ್ಲಿ ನಾ ಅವಳ ಆಲಂಗಿಸಿ,
ತೃಪ್ತಿಯಾಗುವವರೆಗೂ ಮತ್ತಿನ ಮಳೆ ಸುರಿಸುತ್ತಿದ್ದೆ,
ಆ ವಿಶಾಲ ಆಗಸದಡಿಯಲ್ಲಿ.

ಅವಳು ನನ್ನ ಪ್ರೀತಿಸಿದಳು, ನಾನು ಸಹ ಆಗಾಗ ಅವಳ ಪ್ರೀತಿಸಿದೆ
ಅದ್ಭುತ ವಿಶಾಲಾಕ್ಷಿಯುಳ್ಳವಳ ನಾ ಹೇಗೆತಾನೆ ಪ್ರೀತಿಸದಿರಲು ಸಾಧ್ಯ

ತೀವ್ರ ನೋವಿನ ಸಾಲುಗಳ ನಾ ಬರೆಯಬಲ್ಲೆ ಈ ರಾತ್ರಿ
ಅವಳಿಲ್ಲದಂತೆ, ಅವಳ ಕಳೆದುಕೊಂಡಂತೆ ಯೋಚಿಸುವಾಗ.

ಕೇಳಿಸಿಕೊ, ಈ ದೀರ್ಘ ರಾತ್ರಿ, ಇನ್ನೂ ದೂರವಾಗಿದೆ ಅವಳಿಲ್ಲದೆ
ಅಗಲಿಕೆಯ ಸಾಲುಗಳು ಬೀಳುತ್ತಿವೆ ಹೃದಯದ ಮೇಲೆ,
ಮಂಜು ಸುರಿಯುವಂತೆ ಆ ಹಸಿರು ಹುಲ್ಲಿನ ಮೇಲೆ

ಅವಳು ಜೊತೆಗಿರದಿದ್ದರೇನಂತೆ, ದೊಡ್ಡ ವಿಷಯವೇನಲ್ಲ
ಈ ರಾತ್ರಿ ಬಿರುಕು ಬಿಟ್ಟಿದೆ, ಅವಳು ಜೊತೆಗಿಲ್ಲ

ಅಷ್ಟೆ, ಯಾರೋ ಹಾಡುತ್ತಿದ್ದಾರೆ ದೂರದಲ್ಲಿ, ಬಹಳ ದೂರದಲ್ಲಿ,
ಅವಳ ಕಳೆದುಕೊಂಡ ಅತೃಪ್ತಿ ಕಾಡುತ್ತಿದೆ ಈಗ.

ಅವಳ ಹತ್ತಿರ ಹೋಗಲು, ನನ್ನ ಕಣ್ಣು ಹುಡುಕುತ್ತಿದೆ,
ನನ್ನ ಹೃದಯ ಹುಡುಕುತ್ತಿದೆ: ಅವಳು ನನ್ನ ಜೊತೆಗಿಲ್ಲ.

ಈ ರಾತ್ರಿ, ಆ ಮರದ ರೆಂಬೆಗಳೂ ಸಹ ನೀರಸವಾಗಿವೆ.
ನಾವು ಸಹ ಆ ಸಮಯದಿಂದ, ಮೊದಲಿನಂತಿಲ್ಲ.

ಖಂಡಿತ ನಾನವಳ ಪ್ರೀತಿಸಿಲ್ಲ, ಆದರೂ ಹೇಗೆ ಪ್ರೀತಿಸಿದೆ.
ನನ್ನ ದನಿ ಏಕೋ ತಂಪಾಗಲು ಯತ್ನಿಸುತ್ತಿದೆ, ಅವಳ ಮತ್ತೆ ಸೇರಲು.

ಯಾರದೋ ಮುತ್ತುಗಳು ಅವಳಿಗೆ ಈಗ, ನನ್ನ ಮುತ್ತುಗಳಂತೆ.
ಅವಳ ಮಾತು, ದೇಹ, ಆ ವಿಶಾಲ ಕಣ್ಣುಗಳು.

ನಾನವಳ ಪ್ರೀತಿಸುವುದಿಲ್ಲ, ಖಂಡಿತ, ಆದರೂ ಪ್ರೀತಿಸುತ್ತೇನೆ.
ಈ ಪ್ರೀತಿ ಕ್ಷಣಿಕ: ಮರೆಯಲು ಹೆಚ್ಚು ಸಮಯ ಬೇಕಾಗಬಹುದು.

ಇಂಥಹ ರಾತ್ರಿಗಳಲ್ಲಿ, ನಾ ಅವಳ ಅಪ್ಪಿಕೊಳ್ಳುತ್ತಿದ್ದೆ ಗಟ್ಟಿಯಾಗಿ,
ಈ ಜೀವಕ್ಕೆ ನೋವಾಗಿದೆ ಈಗ, ಅವಳಿಲ್ಲದಾಗಿನಿಂದ.

ಆದರೂ ಇದೇ ಕೊನೆಯ ಸಲ ಅವಳು ನನಗೆ ನೋವು ಕೊಡುಲು ಸಾಧ್ಯ,
ಮತ್ತೆ, ಇದೇ ಕೊನೆಯ ಸಾಲು ನಾನು ಅವಳಿಗಾಗಿ ಬರೆಯುವುದು ಸತ್ಯ.

( ಮೂಲ ಕವಿ: ಪ್ಯಾಬ್ಲೊ ನೆರುದ )

1 comment:

Anonymous said...

nimma anuvadada virha gite chennagide.Prakash.B.Jalahalli