Jan 23, 2009

ತಪ್ಪೊಪ್ಪಿಗೆ

ಕವನ ಬರೆಯುವುದೇಗೆಂದು ನನಗೆ ಖಂಡಿತ ಗೊತ್ತಿಲ್ಲ,
ಆದ್ದರಿಂದಲೇ ಇತರರ ಕವನಗಳ, ವಿಶೇಷವಾಗಿ ಮೊದಲ ಸಾಲುಗಳನ್ನು
ಕುತೂಹಲದಿಂದ ಗಮನಿಸುವೆ,
ಕವನ ಹೇಗೆ ಶುರುಮಾಡುತ್ತಾರೆಂಬುದನ್ನು ಅರಿಯುವ ಆಸೆಯಿಂದ
ಕಳ್ಳ ಬೆಕ್ಕಿನಂತೆ ತುಸು ತೆರೆದ ಬಾಗಿಲಲ್ಲಿ ಹೊಂಚಿಹಾಕಿ ನೋಡುವೆ.
ನಂತರ ಅವರ ಕವನ ರಚಿಸುವ ಬಗೆಯನ್ನು ಕಿಟಕಿಯಿಂದ ಇಣುಕಿ ನೋಡುವೆ,
ಅವರು ಪದಗಳ ಸಾಂಗತ್ಯ ಸಾಧಿಸುವ ಪರಿಯನ್ನು ಪರಿಶೀಲಿಸುವೆ,
ಪದಗಳ ಕೆಣಕುವುದನ್ನು, ಜೊತೆ ಸೆಣಸಾಡುವುದನ್ನು, ಪಳಗಿಸುವುದನ್ನು,
ಹೆಕ್ಕಿ ಪೋಣಿಸಿ, ಮತ್ತೆ ಅದರ ಸೌಂದರ್ಯ ಸವಿಯುವುದನ್ನು,
ಮೊದಲು ಎಚ್ಚರಿಕೆಯಿಂದ, ನಂತರ ತೀವ್ರಗತಿಯಲ್ಲಿ ಸಂಪೂರ್ಣವಾಗಿ,
ದಯವಿಟ್ಟು ತಪ್ಪಾಗಿ ಅರ್ಥೈಸಬೇಡಿ, ನಾನಲ್ಲಿ ಹೆಚ್ಚು ಸಮಯ ಇರುವುದಿಲ್ಲ,
ಅವರು ಆ ರೊಮಾಂಚನದ ಅನುಭೂತಿ ಪಡೆಯುವ ಕ್ಷಣದವರೆಗೆ ಮಾತ್ರ ಅಲ್ಲಿರುವೆ,
ಆಮೇಲೆ ಆ ಕಿಟಕಿಯ ಬಳಿಯಿಂದ ವಾಪಸ್ಸಾಗುವೆ,
ರವಿಯ ಕಿರಣಗಳಾಗಷ್ಟೇ ಧರೆಗೆ ಚುಂಬಿಸುತ್ತಿದ್ದವು,
ಮುಂಜಾವಿನ ಮುಂದಿನ ಕೆಲಸದ ಸಲುವಾಗಿ, ಕೈಯಲ್ಲಿ ಪೆನ್ಸಿಲ್ ಹಿಡಿದು,
ರಸ್ತೆಯ ಬದಿಯಿಂದ ನಡೆದು ಬಂದೆ.

( ಮೂಲ ಕವಿ: ಗಿಲಿಯನ್ ವೆಗನರ್ )

No comments: