Jan 17, 2009

ಸಮರ್ಪಣೆ

ಇದುವರೆಗೂ ಮಾತನಾಡದ ವಿಷಯಗಳಲ್ಲಿ,
ನನಗೆ ದೃಢವಾದ ನಂಬಿಕೆಯಿದೆ.
ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ
ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ
ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ ಧ್ಯೇಯೋದ್ದೇಶ.

ಈ ವರ್ತನೆ ಅತಿಯಾಯಿತೆನಿಸಿದರೆ, ದೇವರೆ ಕ್ಷಮಿಸು,
ಇಷ್ಟೆ ನಾ ಹೇಳ ಬಯಸುವುದು:
ನನ್ನ ಪರಿಶ್ರಮವೇ ನನ್ನ ಬೆನ್ನೆಲುಬು, ನನಗೆ ದಾರಿದೀಪ,
ನನ್ನ ಸಂಯಮ, ಸಹನೆ ಹಾಗೂ ಆತ್ಮವಿಶ್ವಾಸವೆಲ್ಲ,
ಆ ಪುಟ್ಟ ಮಕ್ಕಳು ನಿನಗೆ ತೋರುವ ಮುಗ್ಧ ಪ್ರೀತಿಯಂತೆ.

ಇವೆಲ್ಲವೂ ಈಗ ಹೊರಹೊಮ್ಮಿ ನದಿಗಳಂತೆ ಹರಿಯುತ್ತಿವೆ,
ವಿಶಾಲ ಭೂಪ್ರದೇಶ ತನ್ನ ಕೈಚಾಚಿ, ಆ ಸುಪ್ತ ಸಾಗರ
ಸೇರಲು ಹಾತೊರೆಯುವಂತೆ,
ಎಂದೂ ಕ್ಷೀಣಿಸದೆ ಭೋರ್ಗರೆವ ಅಲೆಗಳಂತೆ
ನಿನ್ನನ್ನು ಒಪ್ಪಿಕೊಳ್ಳುತ್ತೇನೆ,
ಇದುವರೆಗೂ ಯಾರೂ ಮಾಡದ ಹಾಗೆ,
ಮತ್ತೆ ಮತ್ತೆ ಅದನ್ನೇ ಸಾರಿ ಹೇಳುತ್ತೇನೆ.

ಮತ್ತೆ ಇದು ಅಂಹಃಕಾರವೆನ್ನುವ ಧೋರಣೆ ನಿಮ್ಮದಾದರೆ
ಅಡ್ಡಿಯಿಲ್ಲ, ಅದೇ ನನ್ನ ಪ್ರಾರ್ಥನೆ ಸಮರ್ಥಿಸಲಿ
ಏಕೆಂದರೆ, ಅದು ಅಷ್ಟೊಂದು ಗಂಭೀರವಾಗಿ ಮತ್ತು ಏಕಾಂಗಿಯಾಗಿ,
ನಿಮ್ಮ ಹಣೆಯ ಮುಂದೆ ನಿಂತಿದೆ, ಮೋಡಗಳ ಸುತ್ತಿಕೊಂಡು.

( ಮೂಲ ಕವಿ: ರೈನರ್ ಮಾರಿಯ ರಿಲ್ಕೆ )

No comments: