ಜೀವಂತಿಕೆ ತೊರೆದ ದೈನಂದಿನ
ಸತತ ಕಾಡುತಿಹುದು ಒಂಟಿತನ
ಬರಡಾಗಿದೆ ಬದುಕು ಪ್ರತಿದಿನ
ಹಸಿರಾಗುವ ಬಯಕೆ ಚಂದಿರ
ಯಾಂತ್ರಿಕ ಬದುಕಿಗೆ ಬಲಿಯಾಗದೆ
ಬೆತ್ತಲೆ ಮರವು ಚಿಗುರುವಂತೆ
ಮೂಡಿ ಬರಲಿ ಭಾವ ಬೆಸುಗೆ
ಅನುರಕ್ತನಾಗುವೆ ಚಂದಿರ
ಅರಳಿದಾಗ ಭಾವಕೋಶ
ಹಾತೊರೆಯುವ ವಿಶೇಷ
ಪರಿಮಳಸೂಸಿ ಕಾಯುತಿದೆ
ಹೂವು ದುಂಬಿಗಾಗಿ ಚಂದಿರ
ತಲ್ಲಣಿಸದಿರು ಮುಗ್ಧ ಮನವೆ
ಉತ್ಕಟ ಒಲವು ನಿನ್ನ ಬಲವೆ
ಹುಚ್ಚುತನಕೆ ಪೆಚ್ಚಾಗದಿರು
ಸರಿದೂಗುವನು ಚಂದಿರ
ಬಿಸಿಲುಗುದುರೆಯ ಬೆನ್ನತ್ತಿ
ಗೊಂದಲಗಳ ಗೂಡು ಕಟ್ಟಿ
ತವಕ ತಲ್ಲಣಗಳ ತಣಿಸಲಾಗದೆ
ಮಣ್ಣು ಸೇರಿದೆ ಚಂದಿರ
ವರ್ತಮಾನದ ಕಟು ವಾಸ್ತವದಿಂದ
ಪಲಾಯನಗೈಯದಿರು ಗೆಳೆಯನೆ
ಮುಖಾಮುಖಿಯ ಸಮಯವಿದು
ಸಮರಕೆ ಸಿದ್ಧನಾಗು ಚಂದಿರ
ಪುಟ್ಟ ಪುಟ್ಟ ವಿವರ ಚತುರ
ಸರಳ ಹಾದಿಗೆ ಸೂಕ್ತ ಚೋರ
ಮರೆಯದಿರು ಮಾಯೆ ಬದುಕು
ಮರಳಿ ಬರುವನು ಚಂದಿರ
ಭೂಗೋಳ, ಚರಿತ್ರೆ, ಸಂಸ್ಕೃತಿಯ
ತಳಪಾಯದಿಂದ ಬೆಳೆದುನಿಂತು
ಸಾಧ್ಯತೆಗಳ ಅಸಾಧ್ಯತೆಯೆಡೆಗೆ
ಅಗಾಧ ಪಯಣವೊ ಚಂದಿರ
ಕುತಂತ್ರಗಳ ಕೃತಕ ಗೆಲುವು
ಹತಾಶೆಗಳ ಸಹಜ ಸೃಷ್ಠಿ
ವಿಲಕ್ಷಣ ಮನಸ್ಧಿತಿಗೆ ನಲುಗಿ
ಜಡವಾಗದಿರೊ ಚಂದಿರ
ಕಲ್ಪನಾಲೋಕದಿ ಕನಸು ಕಾಣುತ
ಕೇಡಿನ ಕಲ್ಪನೆ ಸತತ ಕಾಡುತ
ಮಾನಸಿಕ ತುಮುಲದಿ ತತ್ತರಿಸಿ
ಬೀದಿಗೆ ಬಂದಿಹನೊ ಚಂದಿರ
No comments:
Post a Comment