Jul 30, 2009

ಬೆಂಕಿ ಮತ್ತು ಹಿಮ

ಕೆಲವರು ಹೇಳುತ್ತಾರೆ
ಜಗತ್ತು ಬೆಂಕಿಯಿಂದ ಭಸ್ಮವಾಗತ್ತದೆ ಎಂದು
ಮತ್ತೆ ಕೆಲವರು ಹೇಳುತ್ತಾರೆ ಹಿಮದಿಂದ ಎಂದು
ಮಹದಾಸೆಯಿಂದ ನಾನು ಮನಗಂಡಿರುವುದೇನೆಂದರೆ,
ನಾನು ಬೆಂಕಿಯ ಪರವಾಗಿರುವವರನ್ನು ಬೆಂಬಲಿಸುತ್ತೇನೆ.
ಆದರೆ, ಒಂದು ವೇಳೆ ಜಗತ್ತು ಎರಡು ಬಾರಿ ನಾಶಗೊಳ್ಳುವ ಸನ್ನಿವೇಶದಲ್ಲಿ,
ನನಗನ್ನಿಸುತ್ತದೆ, ನಾನು ಸಾಕಷ್ಟು ದ್ವೇಷವನ್ನೂ ಕಂಡಿದ್ದೇನೆ
ಸರ್ವನಾಶವಾಗಲು ಹಿಮವೂ ಸಹ ಒಂದು ಅದ್ಭುತವೇ ಸರಿ
ಮತ್ತೆ ಅಷ್ಟು ಸಾಕಾಗುತ್ತದೆ.

ಮೂಲ ಕವಿ : ರಾಬರ್ಟ್ ಫ್ರಾಸ್ಟ್
ಕನ್ನಡಕ್ಕೆ : ಚಂದಿನ

ಮಂಜಿನ ಮಳೆ

ಅರಳಿ ಮರದಿಂದ
ಕಾಗೆ ನನ್ನ ಮೇಲೆ ಒಮ್ಮೆಗೆ
ಮಂಜಿನ ಮಳೆ ಉದುರಿಸಿದ
ಪರಿಯಿಂದಾಗಿ

ಕೂಡಲೇ ಬದಲಾದ ಮನಃಸ್ಥಿತಿ,
ನನ್ನ ಹೃದಯಕ್ಕೆ ತುಸು ನೆಮ್ಮದಿ;
ಬೇಸರ ತುಂಬಿದ ದಿನದಿಂದ
ಸ್ವಲ್ಪ ಮಟ್ಟಿಗೆ ವಿಮುಕ್ತಿ

ಮೂಲ ಕವಿ : ರಾಬರ್ಟ್ ಫ್ರಾಸ್ಟ್
ಕನ್ನಡಕ್ಕೆ : ಚಂದಿನ

Jul 28, 2009

ಪ್ರತಿಬಿಂಬ

ಅಸ್ಪಷ್ಟ ಹಾದಿಯ ಹಕ್ಕಿಗೆ
ಹಲವಾರು ಹಂಬಲದ ತೇರು
ಕಲಹ, ಕದನ, ಕೋಲಾಹಲ
ಉನ್ಮತ್ತ ಚಿತ್ತಕ್ಕೆ ಪಿತ್ತ

ವೇಗ, ಉದ್ವೇಗದ ಸವಾರಿ
ಹಗಲುವೇಶದ ಅನಾಮಧೇಯ
ಹರಹರ ಅರ್ಧನಾರೀಶ್ವರನಿಗೆ
ಸಂಯಮ ಎಂದೋ ಪರಾರಿ

ಮಾತಿಗಿಲ್ಲ ಪುರಸೊತ್ತು
ಮತಿಗೆ ಎಲ್ಲಿಲ್ಲದ ಕಸರತ್ತು
ನುಸುಳುವ ಸ್ಮಶಾನ ಮೌನಕ್ಕೆ
ಧಾರಾವಾಹಿಯ ತಪ್ಪದ ಕಿರಿಕಿರಿ

ಏನೇನೋ ಲೆಕ್ಕಾಚಾರ
ಇಲ್ಲಿ ಎಲ್ಲವೂ ಅಗೋಚರ
ಪಿಸುಮಾತು, ಗುಸುಗುಸು
ಸಂಚಿಗೆ ಮದ್ಯಸಾರದ ನೈವೇದ್ಯ

ಬಡಪಾಯಿ ಶಂಭುವಿಗೇಕೋ
ರಿಂಗಣಿಸುವ ತವಕ, ತಲ್ಲಣ
ಅತಂತ್ರತೆ, ಅಸಹಾಯಕತೆ
ನಿತ್ಯನೂತನದ ಕಾರ್ಯಸಿದ್ಧಿ

Jul 23, 2009

ತುದಿಗಾಲ ತುಡಿತ

ಮನೆಯ ಹಿತ್ತಲಲ್ಲಿ ಗುಲಾಬಿ ಮೊಗ್ಗು
ಆ ಬದಿಯ ಮನೆಯೊಡತಿಗೆ ಏಕೋ
ಎಲ್ಲಿಲ್ಲದ ಉರುಪು, ಉಮ್ಮಸ್ಸು

ಪಂಚರಂಗಿ ಪರಮಾತ್ಮ ಆ ಮನೆಯೊಡೆಯ
ಅಲೆಯುವ ಪರದೇಸಿ ಪುಣ್ಯಾತ್ಮ
ಹಸಿದಾಗ ಅಪ್ಪಣೆಯ ಬೇಡುವುದೇ

ಮಿಡಿಗಾಯಿ ಮರದಲ್ಲಿ, ಸಂಯಮ ಬತ್ತಿರಲು
ರುಚಿ ನೋಡುವ ತವಕ ತುದಿಯಲ್ಲಿ ಕೊತ ಕೊತ
ಆಗ ನೋಟವೂ ಮಂಪರು, ಮಂಪರು

ತರ್ಕಕ್ಕೆ ನಿಲುಕದ ಅಂಗಾಂಗ ಪುಳಕ
ನಿಟ್ಟುಸಿರಿಡುವವರೆಗೂ ಅದೇ ಸಂಗ್ರಾಮ, ಸಂಭ್ರಮ
ಮಂದಹಾಸದಿ ಮತ್ತೆ ವಾಸ್ತವಕ್ಕೆ ಮರು ಪ್ರವೇಶ

Jul 16, 2009

ಮತ್ತೆ ಬರುವನು ಚಂದಿರ - 29

ಅತಂತ್ರ ಸ್ಥಿತಿಯ ಭೀಕರ ಚಿತ್ರ
ಕದಡಿ, ಕಾಡುವ ಭಾವಾತಿರೇಕ
ಮುಕ್ತಿ, ಮೋಕ್ಷಗಳ ಶೋಧನೆಗೆ
ಅಂತಿಮ ಎಲ್ಲಿ ಹೇಳೊ ಚಂದಿರ

ವಾಸ್ತವದ ವ್ಯವಹಾರಿಕ ನೆಲೆಯಲ್ಲಿ
ಮೌಲ್ಯಗಳ ಹುಡುಕುವ ನೆಪವೇಕೆ
ಪ್ರತಿಫಲದ ಆಪೇಕ್ಷೆಯಿಂದ ಬೆಸದ
ಸ್ನೇಹಕೆ, ಜರಿಯುವೆ ಏಕೆ ಚಂದಿರ

ಸೈದ್ಧಾಂತಿಕ, ತಾತ್ವಿಕ ನೆಲೆಗಟ್ಟು,
ಗತಕಾಲದ ವೈಭವಗಳ ಜೊತೆಗೆ
ವಾಸ್ತವಕ್ಕೆ ಹಿಡಿದಾಗ ನೈಜ ಕನ್ನಡಿ
ನಿರ್ಲಿಪ್ತ ನಗೆ ಬೀಸುವ ಚಂದಿರ

ಚಾರಿತ್ರಿಕ ಪಾತ್ರದ ಹಿನ್ನಲೆಯಲ್ಲಿ
ಸಮಕಾಲೀನ ಪ್ರತಿರೂಪಗಳನ್ನು
ಪ್ರತಿಮೆಗಳಾಗಿ ಬಳಸುವ ಪ್ರಕ್ರಿಯೆ
ಶ್ರೇಷ್ಟತೆಗೆ ಮಾದರಿಯೆ ಚಂದಿರ

ವಿಭಿನ್ನ ಮಗ್ಗುಲುಗಳಿಗೆ ತಿರುಗಿಸಿ
ಸೂಕ್ಷ ಪರಿಶೀಲನೆಗೆ ಅಳವಡಿಸಿ
ನಿರ್ಲಿಪ್ತ ಮನಸ್ಥಿತಿ ಹಿನ್ನಲೆಯಲ್ಲಿ
ಸತ್ಯಕ್ಕೆ ಹತ್ತರವಾಗುವೆ ಚಂದಿರ

ಬಿಡಿ ಬಿಡಿಯಾಗಿ ಕಡಿದ ನಂತರ
ವಿಚಿತ್ರವಾಗಿ ಜೋಡಿಸುವುದನ್ನೇ
ಕ್ರೀಯಾಶೀಲತೆಗೆ ಕನ್ನಡಿಯೆಂದು
ಸೃಜನಶೀಲ ತಾನೆನ್ನುವ ಚಂದಿರ

ಆಕರ್ಷಕವಾಗಿ, ಸಾರ್ಥಕವಾಗಿ
ಕಟ್ಟಿಕೊಡುವ ಕಠಿಣ ಪರಿಶ್ರಮಕ್ಕೆ,
ಸಂಯಮ, ಸಹನೆಯ ಪರೀಕ್ಷೆಗೆ
ಹಿಂಜರಿಯುವೆ ಏಕೆ ಚಂದಿರ

ಭಾವ ಲಯಗಳ ಮಿಡಿತದಿಂದ
ಭಾವ ಲಹರಿಯ ಹಿಡಿತದಿಂದ
ಚಲನಶೀಲತೆ ಮೊಟಕುಗೊಳ್ಳದೆ
ಸತತ ಚಲಿಸುತಿರು ಚಂದಿರ

ಬಾಳಿನ ಅನಿರೀಕ್ಷಿತ ತಿರುವುಗಳಿಗೆ
ಕುತೂಹಲ ಕೆರಳಿಸುವ ಸನ್ನಿವೇಶಕೆ,
ಮುಗ್ಥ ಅಚ್ಚರಿಗಳಿಗೆ ಬೆರಗಾಗುತ
ಜೀವ ಚೈತನ್ಯ ತುಂಬಿಸು ಚಂದಿರ

ತಂತ್ರ ಮಂತ್ರಕೆ ತಲೆದೂಗುತ್ತಾ
ಅಂಧ ಆಮಿಷಗಳಿಗೆ ಜಾರಿ ಬಿದ್ದು
ಧರ್ಮ ಸಂಕಟಕ್ಕೆ ಸಿಕ್ಕಿ ಕೊಂಡೆನು
ಪಾರುಮಾಡೊ ಗೆಳೆಯ ಚಂದಿರ