ಜಾಗತೀಕರಣ, ಉದಾರೀಕರಣ,
ಖಾಸಗೀಕರಣ, ಗ್ರಾಹಗೀಕರಣಗಳೆಂಬ
ವಿಷದ ಶೂಲಗಳೆಸೆದು ಕರಣಗಳ ಕಡಿದು,
ಅಂತಃಕರಣದ ಹರಣಗೈದು,
ಪ್ರಕ್ಷುಬ್ಧ ಆತ್ಮಗಳ ಸೃಷ್ಟಿಸಿಹರು,
ಗೆದ್ದಿಲು ಹಿಡಿದ ಬೇರುಗಳಿಗೆ
ಕೃತಕ ಗೊಬ್ಬರ ಎರಚಿ,
ಮುಂಗಾರಿನತ್ತ ಉಬ್ಬೇರಿಸಿ,
ಸಾಧಕರಂತೆ ಬೀಗುವರು.
ಹಣದುಬ್ಬರಕ್ಕೆ ತತ್ತರಿಸಿದ
ಪೋಷಕರ ಪರದಾಟ,
ಹುಟ್ಟುವ ಮಗುವಿಗೆ ಮುಂಗಡ
ಶಾಲೆ ಪ್ರವೇಶ ಕಾದಿರಿಸಲು.
ಮನ, ಮತಿಗಳ ಗೇಣಿಗಿಟ್ಟು
ನೆಲೆ, ನಲಿವಿಗಾಗಿ ನೊಗವೊತ್ತಿದ್ದಾರೆ.
ಅಮ್ಮನ ಹಿಡಿಶಾಪ,
ಪಾಪ ಕೊಳೆತ ತರಕಾರಿ ಕೊಟ್ಟವನಿಗೆ,
ಕಸದ ಬುಟ್ಟಿಗೆ ಎಸೆಯುವವರೆಗೂ.
ಇನ್ನೂ ಅಲ್ಲಲ್ಲಿ
ಹೂಗಳು ಪರಮಳ ಸೂಸಿ
ದುಂಬಿಗಳ ಸೆಳೆಯುತ್ತಿವೆ,
ಕೇರಿ ಕೆರೆಯೊಳಗೆ ಕಪ್ಪೆಗಳ ಕೂಟ,
ಹಕ್ಕಿಗಳ ಹಿಂಡು ದೂರದಲ್ಲಿ
ಕಲರವವಿಟ್ಟು ಅಣಕಿಸುತ್ತಿವೆ,
ಆಲಿಸಿದವರ ಹಾಡನ್ನು
ಕೇಳುವ ಪುರಸೊತ್ತಿಲ್ಲ.