Sep 14, 2024

ಬಿಟ್ಟುಹೋದ ಚಪ್ಪಲಿ

 

ಬಿಟ್ಟುಹೋದವರು ಯಾರೋ?

ಬಹುತೇಕ ಸವೆಸಿ, ಮುಪ್ಪಾಗಿಸಿ, 

ಬಹುಶಃ ಮರೆತಿದ್ದಾರೆ,

ಇಲ್ಲಾ ಮರೆಯಾಗಿದ್ದಾರೆ.

ಅವರ ಸಮಯದ ಸ್ಥಿತಿಗತಿಗೆ 

ಹಿಡಿದ ಕನ್ನಡಿ

ಬಿಟ್ಟ ಹಳೆ ಜೋಡಿ.


ಕಂಡರೆ

ದುಭಾರಿಯದ್ದೇನಲ್ಲಾ,

ಯಾವ ಕಂಪನಿಯದ್ದೋ ಗೊತ್ತಿಲ್ಲ?

ಇತ್ತೀಚೆಗೆ ಯಾರೂ ತೊಟ್ಟಂತಿಲ್ಲ.

ಈಗ ನೀರಸ ನಿರಶನದಲ್ಲಿ 

ಧೂಳಪ್ಪಿಕೊಂಡು ಮಲಗಿದ ತಬ್ಬಲಿ.


ಯಾರು ಗಮನಿಸದಿದ್ದರೂ,

ಬಳಕೆಗಿನ್ನೂ ಸಿದ್ಧನಿದ್ದೇನೆಂದು

ಹೇಳುವ ಸಡಗರವಿದಕೆ ಏಕೋ?

ಯಾವ ಸೂಚನೆ, ಸುಳಿವಿಲ್ಲದಿದ್ದರೂ

ಬಳಸಿದವರ, ಬಳಸುವವರ ಆಗಮನಕೆ

ಕಾಯುತಿಹುದು ಇನ್ನೂ ಶಬರಿಯಂತೆ.


ಅಸಮ ಸವೆತದ ಏರಿಳಿತ 

ತೊಟ್ಟ ಪಾದಗಲಿಟ್ಟ ಪ್ರತಿ ಹೆಜ್ಜೆಯ ಲೆಕ್ಕ, ಜಾಗದ ಹೆಗ್ಗುರುತು,

ಒಟ್ಟು ಪಯಣದ ಮೊತ್ತ, 

ಬಿಟ್ಟ ಚಪ್ಪಲಿ ಸುತ್ತ!


ಎದ್ದು ಕಾಣುವಂತೆ, 

ಅಲ್ಲಲ್ಲಿ ಇನ್ನೂ ಹೊಸತಂತೆ, 

ಬಹುತೇಕ ನುಣ್ಣಾಗಿಸಿ, ಹಣ್ಣಾಗಿಸಿ 

ಮೇಲ್ಪದರ ಹರಿದು 

ಸೀಳುಗಳ ಸಾಲು, ಸಾಲಿನ ನಡುವೆ

ಅಳಿದುಳಿದ ಒಂದಷ್ಟು ಮಾಸಿದ ಬಣ್ಣ. 


ಹಲವು ಪದರಿನ ಆಲಿಂಗನ,

ಅವರಿಬ್ಬರ ನಡುವಿನ 

ಸಂಕೀರ್ಣ ಸಂಘರ್ಷಗಳ, 

ಅಬ್ಬರದ ವಾದವಿವಾದಗಳ ಯಾನಕ್ಕೆ,

ಸಹನೆ ಸಂಯಮದ ಧ್ಯಾನಕ್ಕೆ,

ಗಂಭೀರ ಅನುಸಂಧಾನಕ್ಕೆ,

ಜೀವಂತ ಸಾಕ್ಷಿ.


ಬದುಕು ಮುಗಿಸಿದ ಮಾಲೀಕ,

ಆ ನೆನಪಿನ ಬುಟ್ಟಿಹೊತ್ತ ತಾನು 

ಸ್ವಗತದಲ್ಲಿ ಲೀನ,

ಸುದೀರ್ಘ ಮೌನ.


ಅದರೂ

ಪರಿಪೂರ್ಣ ಬದುಕಿಗೆ, ಬಳಕೆಗೆ,

ಯಾರೂ ತಾಗದ ತುತ್ತತುದಿಗೆ 

ಒಮ್ಮೆ ತಾಗುವ ತವಕ.

ಹರಿದು, ಮುರಿದು ಬಿಟ್ಟ ಜೋಡಿಗೆ,

ಅನಾಮಧೇಯ ಪಾದರಕ್ಷೆಗೆ.