Jul 30, 2015

ಮದ್ಯ ಮಧ್ಯ ಪದ್ಯ!

ಸುಂದರ ಸಾಲಿನ ಶೇಖರಣೆ;
ಕದ್ದ ಮಾಲಿಗೆ ಒಗ್ಗರಣೆ.
ಪ್ರಭಾವಕ್ಕೆ ಉಕ್ಕಿದ;
ಪ್ರೇರಣೆಗೆ ಹಿಗ್ಗಿದ,
ಇಲ್ಲಾ ಭಾರಕ್ಕೆ ಬಾಗಿದ
ಬಾಳೆಗೊನೆ.
ಅಲ್ಲ.

ಇಲ್ಲಾ,
ಭಾವತೀರಯಾನ.
ಅರೆ ಬೆಂದ ಅನ್ನ.
ಋತು, ಮದಿರೆ, ಮಾನಿನಿ.
ಕಾವ ಕರಗಿಸುವ ಕಾವಲಿ.
ಪ್ರೀತಿ, ಗೀತಿ ಇತ್ಯಾದಿ.,
ಕಾಡು, ಕಡಲು, ಕಿನಾರೆ.
ಹೌದಾ?

ಅಥವಾ,
ಆತ್ಮವಿಲ್ಲದ, ಇಲ್ಲಾ ಏನೂ ಒಲ್ಲದ,
ಇಲ್ಲಸಲ್ಲದ ನೆವವೊಡ್ಡಿ ಎಂದೋ ಪರಾರಿಯಾದ              
ರಾಮ, ಯೇಸು, ಅಲ್ಲಾ?
ಅಲ್ಲ. ಖಂಡಿತ
ಅಲ್ಲವೇ ಅಲ್ಲ.

ಅದು ಕಾಲ, ದೇಶವ ದಾಟಿ
ಮೆಟ್ಟಿನಿಲ್ಲುವ ಆತ್ಯಾಪ್ತ ಸಖಿ.
ಕದಡಿ, ಒದ್ದಾಡಿ, ಗುದ್ದಾಡಿ,
ಎಡೆಬಿಡದೆ ಕಾಡಿ, ಕಾಡಿಸಿಕೊಳ್ಳುವ,
ಮಧುರ, ಮಾದಕ ಅನುಭಾವ,
ಇಲ್ಲಾ ನೀರವ ಮೌನ!

ಬದುಕು.
ನೀನು, ನಾನು, ಅವನು, ಅವಳು.
ದಿನ, ರಾತ್ರಿ.
ಭೂಮಿ, ಭಾನು.
ಸೂರ್ಯ, ಚಂದ್ರ.
ಉಳಿದಂತೆ ಮತ್ತದೇ
ಕಾಗುಣಿತಾ.
ಗುಣಿತಾ.
ಗುಣಿ.
ತಾ!





Jun 5, 2014

ಹೈಕು


ತೀಕ್ಷ್ಣ ಚಳಿಗಾಲ –
ಕಂಡರಾಗದ ದಂಪತಿಗಳನ್ನೊಲಿಸುತ್ತದೆ ಮುಂದೂಡಲು 
ತಮ್ಮ ವಿಚ್ಛೇದನವನ್ನು. 

Nov 10, 2013

ಸೂ...ಮಗ!


ಕ್ಷಣ ಮರೆತು,
ಶಪಿಸದರು ಮತ್ತೆ
ಬೆಳೆದು ಬಂದ ಹಾದಿ.
ನೀತಿ, ನಿಯಮಗಳಲ್ಲಿ
ಸನಾತನ ಪರಂಪರೆಗಳಲ್ಲಿ,
ತಪ್ಪಿಯೂ ಹುಡುಕಬೇಡ ಯಾವ ಹುಳುಕು.
ನಾ ಬಲ್ಲೆ,
ಆ ತೊಳಸು ಬಳಸಿನ ಹಾದಿಗಳ ಒಳಮರ್ಮ.
ಆದರೂ ಇರಸುಮುರುಸಾಗುವುದು ನಾನೊಲ್ಲೆ.
ಒಗ್ಗದ, ಒಗ್ಗಿಸಿಕೊಳ್ಳಲು ಆಸಕ್ತಿ ಇಲ್ಲದ
ಹೊಸ ಆಯಾಮಗಳಿಗೆ ತೆರೆದುಕೊಳ್ಳಲು
ನಾನು ಸದ್ಯ ತಯಾರಿಲ್ಲ.
ತಾಳ್ಮೆವಹಿಸು,
ಶತಮಾನಗಳೆ ಉರುಳಿವೆಯಲ್ಲಾ ನಿರಾಯಾಸವಾಗಿ.
ದೂಷಿಸದಿರು ಮತ್ತೆ,
ಬತ್ತಳಿಕೆಯೊಳಗಿಟ್ಟುರುವೆ ಎಷ್ಟೋ ಮುಖವಾಡಗಳನ್ನು.
ಮರೆತೊ, ಇಲ್ಲಾ ಆಲಕ್ಷ್ಯದಿಂದಲೊ
ಅವುಗಳ  ಅದಲುಬದಲು
ಅಥವಾ ಮುಖಾಮುಖಿಯಿಂದ
ಗೊಂದಲ, ದ್ವಂದ್ವತೆ, ತಿಕ್ಕಾಟ ಗೋಚರಿಸುವುದು ಸಹಜ.
ಹೀರಿಕೊ ಮರುಭೂಮಿಯಂತೆ,
ಬಿಂಬಿಸದಿರು ದೊಡ್ಡ ತೊಡಕಂತೆ,
ಹೀರಿಕೊ ಸದ್ದಿಲ್ಲದೆ
ಯಾರಿಗೂ ತಿಳಿಯದ ಹಾಗೆ.
ಸದಾ ಇರಲಿ ಮೊಗದಲ್ಲಿ
ಬಾಡದ ಕಿರಿನಗು,
ನಕಲಿಯಾದರೂ ಸರಿಯೆ
ನನ್ನ ಮುಖವಾಡಗಳಂತೆ.
ಸಂಸಾರದ ಗುಟ್ಟಿನ ಮಹತ್ವ
ಹೇಳಿಕೊಡಬೇಕೆ ನಿನಗೆ
ಹೊಸದಾಗಿ.

ಏರು,
ಎಲ್ಲಾ ಮಜಲುಗಳ ಏರು,
ಸಹಕರಿಸುವೆ ಸಾವಧಾನದಿಂದ,
ತೊಡಕಾಗದಂತೆ ಎಚ್ಚರವಹಿಸುವೆ.
ಆದರೆ ನೆನಪಿರಲಿ,
ಎತ್ತರ ಎಷ್ಟಾದರೂ ಸರಿಯೆ ಸಹಿಸಿಕೊಳ್ಳುವೆ,
ಆದರೆ ನನ್ನ ಮೀರದಂತೆ ನೋಡಿಕೊ,
ಪ್ರತಿಷ್ಠೆ, ಘನತೆಗೆ ಧಕ್ಕೆಯಾಗದಂತೆ,
ನಡೆ-ನುಡಿಗಳಲ್ಲಿ ನಿಗಾವಹಿಸು.
ಸಭ್ಯತೆ, ಸೌಮ್ಯತೆ, ವಿನಯಶೀಲತೆ
ಎಲ್ಲಾ ಒಡವೆಗಳ ತೊಟ್ಟು,
ಕರ್ತವ್ಯನಿಷ್ಠೆಯಿಂದ,
ಸಾಗಲಿ ಪಯಣ
ಅಲುಗಾಡದೆ.

ನಿನಗೆ ಶುಭವಾಗಲಿ.

Oct 23, 2013

ನೀಲು ನೆನಪಲ್ಲಿ...


ನೀಲು –
ಅವಳ ಸೆಳೆಯಲು
ನೂರಾರು ಉದಯೋನ್ಮುಖ ಕವಿಗಳು ಎಷ್ಟು ಹೆಣಗಾಡಿದರೂ
ಅವಳು ಎಲ್ಲರ ಕಿವಿಹಿಂಡಿ ಕಿರುನಕ್ಕಿದ್ದು
ಅವರಿಗೆ ತುಸು ತೃಪ್ತಿ ಕೊಟ್ಟಿತ್ತು.

ನೀಲು –
ಎಲ್ಲಾ ಸಭ್ಯ,  ಸುಸಂಸ್ಕೃತರನ್ನು
ನಯವಾಗಿ ತಿರಸ್ಕರಿಸಿ
ಅಪ್ಪಟ ಒರಟನೊಬ್ಬನ ತೀವ್ರವಾಗಿ ವರಿಸಿದ್ದು
ಈಗ ಇತಿಹಾಸ.

ನೀಲು –
ಅವಳ ಗಾಢ ನಡೆ-ನುಡಿಯ ಸೊಗಡು
ಸೌಮ್ಯ ಮಾನಿನಿಯರಿಗೆ ಗರ ಬಡಿಸಿ,
ಮಹನೀಯರಿಗೆ ಬಿಸಿತುಪ್ಪವಾಗಿದ್ದು ಸುಳ್ಳಲ್ಲ.

ನೀಲು –
ಅವಳ ಮಾದಕ ಉನ್ಮಾದತೆಗೆ
ನಿಬ್ಬೆರಗಾದ ಪಡ್ಡೆ ಹುಡುಗರ ನಿಯಂತ್ರಿಸಲು
ಬಂದ ಪೋಲೀಸರು ಚಣ ಪೋಲಿಗಳಾಗಿದ್ದು ಸತ್ಯ.

Sep 26, 2013

ನಾಡಹಬ್ಬ



ತೂರಿ  ಜಿಗಿವ ಹಾಲ  ನೊರೆಯ ಜೋಗದಂತೆ
ಕನ್ನಡಿಗರೆ ಬನ್ನಿರಿ, ಮೈಗೊಡವಿಕೊಂಡು ನುಗ್ಗಿರಿ.
ಜಾತಿ ಭೇದ ತುಳಿಯುತಾ, 
ಮನದ ಮಲಿನ ತೊಳೆಯುತಾ,
ಮನುಜ ಮತವೆ ಹಿತವೆನ್ನುತಾ
ಹಾಡಿರಿ, ಕುಣಿಯಿರಿ,  ನಾಡಹಬ್ಬ ನಡೆಸಿರಿ.

ಬುದ್ಧ, ಬಸವ, ಮಹಾವೀರ, ಕಬೀರರಂತೆ
ಕ್ರಾಂತಿ, ಶಾಂತಿ, ಕಾಂತಿಧೂತರಾಗಿ,
ನೆಲೆಯ, ನುಡಿಯ ನಲಿವಿಗಾಗಿ,
ನಾಡ, ನದಿಯ ಹೃದಯವಾಗಿ,
ದಸರಾ, ದಸರಾ, ದಸರಾ ಎಂದು
ಹಾಡಿರಿ, ಕುಣಿಯಿರಿ, ನಾಡಹಬ್ಬ ನಡೆಸಿರಿ.



Aug 27, 2013

ಹಳಸಿದ ಅನ್ನ



ಮರಗಳ ತೊರೆದು
ಮನೆಗಳ ಹಪ್ಪಿಕೊಂಡ
ಜೇನು.
ವರ್ತುಲ ರಸ್ತೆ
ಹಸುಗಳ ನಿಲ್ದಾಣ.
ಗಡುವುಗಳ ಲೆಕ್ಕಾಚಾರಕ್ಕೆ
ಗತಿಸಿದ ಭೂಪ.
ಅನಾಥ ಶವಕ್ಕೆ
ಬೀದಿ ನಾಯಿಗಳ ಬೆಂಗಾವಲು.
ಕೋಳಿ ತುಟ್ಟಿಯಾದಂತೆ
ಕುಲುಮೆಗೆ ಕಪೋತ.
ಇಂಗದ ಹಸಿವಿಗೆ
ಹಳಸಿದ ಅನ್ನ.
ಸೊಳ್ಳೆಗಳ ಆಕ್ರಮಣಕ್ಕೆ
ದಿಕ್ಕೆಟ್ಟ ಸಂತ.
ಮಾಯವಾದ ಮೌನ
,
ಮಂದಹಾಸ.
ಮಗಳಿಗೆ ಗುಬ್ಬಿ
ಹುಡುಕುವ ಹಟ.