Showing posts with label ಸಾರಾ ತೀಯಸ್ಡೇಲ್. Show all posts
Showing posts with label ಸಾರಾ ತೀಯಸ್ಡೇಲ್. Show all posts

May 27, 2009

ಜ್ಞಾನ

ನನ್ನ ರೆಕ್ಕೆಗಳ ಮುರಿಯುವುದನ್ನು ನಿಲ್ಲಿಸಿದಾಗ
ದೋಷಪೂರಿತ ವಸ್ತುಗಳ ಎದುರಲ್ಲಿ,
ಹಾಗೇ ತಿಳಿದುಕೊಂಡೆ, ಒಪ್ಪಂದಗಳು ಕಾದಿರುವುದನ್ನು
ಯಾವಾಗಲೋ ತೆರೆದುಕೊಳ್ಳುವ ಪ್ರತಿ ಬಾಗಿಲ ಹಿಂದೆ,
ನಾನು ನೋಡಿದಾಗ ಬದುಕನ್ನು ಕಣ್ಣುಗಳಿಂದ,
ಪ್ರಶಾಂತವಾಗಿ ಬೆಳೆದು, ಬಹಳ ಬುದ್ಧಿವಂತಿಕೆಯೊಂದಿಗೆ,
ಬದುಕು ನನಗೆ ಸತ್ಯವನ್ನು ನೀಡಿರಬಹುದಾದರೂ,
ಅದು ಬದಲಾಗಿ ಪಡೆದುಕೊಂಡಿದೆ -- ನನ್ನ ಯೌವನವನ್ನು.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಯುದ್ಧಕಾಲದಲ್ಲಿ ವಸಂತ

ಎಲ್ಲೋ, ಬಹಳ ದೂರದಲ್ಲಿ ವಸಂತಕಾಲ ಇರುವಂತೆ ಅನ್ನಿಸುತ್ತಿದೆ ನನಗೆ,
ಎಲೆಗಳ, ಮೊಗ್ಗುಗಳ ಸುವಾಸನೆ ಎಷ್ಟೋ ಕಳೆಗುಂದಿದೆ—
ಓಹ್, ವಂಸತದ ಹೃದಯ ತಾನೆ ಹೇಗೆ ಬರಲೊಪ್ಪೀತು
ವೇದನೆಯಿಂದ ನರಳುತ್ತಿರುವ ಪ್ರಪಂಚಕ್ಕೆ,
ತೀವ್ರ ವೇದನೆ?

ಸೂರ್ಯ ಉತ್ತರಕ್ಕೆ ಮುಖ ಮಾಡಿದಾಗ, ದಿನಗಳು ಸುದೀರ್ಘವಾಗುತ್ತವೆ,
ನಂತರ ಸಂಜೆಯ ತಾರೆ ಪ್ರಾಕಾಶಮಾನವಾಗಿ ಬೆಳೆಯುತ್ತದೆ—
ದಿನದ ಬೆಳಕಿಗೆ ಹಾಗೇ ಇರಲು ಹೇಗೆ ಸಾಧ್ಯ
ಗಂಡಸರು ಯುದ್ಧದಲ್ಲಿ ಹೊಡೆದಾಡಲೆಂದು
ಹಾಗೇ ಹೊಡೆದಾಡುತ್ತಿರಲು?

ಹುಲ್ಲು ನಡೆದಾಡುತ್ತಿದೆ ನೆಲದಲ್ಲಿ,
ಬೇಗನೆ ಬೆಳೆದು ಅಲೆಗಳನ್ನು ಹೊಮ್ಮಿಸುತ್ತದೆ—
ಅದಕ್ಕೆ ಹೃದಯ ಇದ್ದೀತೇ ತೂಗಾಡಲು
ಸಮಾಧಿಗಳ ಮೇಲೆ,
ಹೊಸ ಸಮಾಧಿಗಳು?

ಮರದ ರೆಂಬೆಗಳಡಿಯಲ್ಲಿ ಪ್ರೇಮಿಗಳು ನಡೆಯುತ್ತಿದ್ದರು
ಪಕ್ವವಾದ ಸೇಬು ಸಹಜವಾಗಿ ಉಸಿರಾಟ ನಿಲ್ಲಿಸುತ್ತವೆ—
ಆದರೆ, ಈಗ ಆ ಪ್ರೇಮಿಗಳ ಗತಿಯೇನು
ಸಾವಿನಿಂದಾಗಿ ಬೇರೆಯಾದವರು,
ಅಸಹಜ, ಅನ್ಯಾಯ ಸಾವಿನಿಂದ?

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಯಥಾಸ್ಥಿತಿ

ಮೆಟ್ಟಿಲ ಮೇಲಿಂದ ಕೇಳಿಸಿದ್ದು ಅವನ ಹೆಜ್ಜೆಯ ಸದ್ದೇ?
ಬಾಗಿಲ ಬಡಿದ ಶಬ್ದ ಕೇಳಿಸಿತಲ್ಲಾ, ಅದು ಅವನು ಮಾಡಿದ್ದೇ?
ಈಗಾಗಲೇ ಬಹಳ ದಣಿದಿದ್ದೇನೆ, ಆ ಬಗ್ಗೆ ಯೋಚಿಸುವುದೂ ಕೂಡ ಬಹತೇಕ ನಿಲ್ಲಿಸಿದಂತೆ,
ಆದರೂ ಒಮ್ಮೊಮ್ಮೆ ನನಗನ್ನಿಸುತ್ತದೆ, ಅವನು ಮತ್ತೊಮ್ಮೆ ಬರಬಹುದೆಂದು.

ನನಗೆ ಕೇಳಿಸಿದ್ದು ಬೀಸುವ ಗಾಳಿಯ ಸದ್ದು, ಅದು ನನ್ನನ್ನು ಕಂಡು ಸದಾ ಅಣಕಿಸುತ್ತದೆ,
ಆ ಹಾಳಾದ ಗಾಳಿ ಅವನಿಗಿಂತಲೂ ಮಹಾಕ್ರೂರಿ;
ಬಾಗಿಲನ್ನು ಬಡಿದದ್ದೂ ಸಹ ಅದೇ ಗಾಳಿ,
ಆದರೆ ಅವನು ಮತ್ತೆಂದಿಗೂ ಬಾಗಿಲು ಬಡಿಯುವುದೂ ಇಲ್ಲ ಅಥವಾ ಒಳಗೆ ಬರುವುದೂ ಇಲ್ಲ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 26, 2009

ನೆಮ್ಮದಿ

ನೆಮ್ಮದಿ ನನ್ನೊಳಗೆ ಹರಿಯುತ್ತದೆ
ಕಡಲ ಬದಿಗಿರುವ ಕೊಳದೊಳಗೆ ದೊಡ್ಡ ಅಲೆಗಳು ನುಸುಳುವಂತೆ;
ಅವು ಎಂದೆಂದಿಗೂ ನನ್ನದಾಗಿರುತ್ತವೆ,
ಅದು ಮತ್ತೆ ಸಮುದ್ರಕ್ಕೆ ಮರಳುವಂತೆ ಅಲ್ಲ.

ನಾನೊಂದು ಕಡುನೀಲಿ ಕೊಳ
ಕಂಗೊಳಿಸುವ ನೀಲಾಕಾಶವನ್ನು ಸದಾ ಧ್ಯಾನಿಸುವುದು;
ನನ್ನ ನಂಬಿಕೆಗಳು ಸ್ವರ್ಗದಂತೆ ಬಲು ಎತ್ತರ,
ಅವೆಲ್ಲವೂ ನಿನ್ನೊಳಗೆ ಪರಿಪೂರ್ಣಗೊಂಡಿವೆ.

ನಾನೊಂದು ಚಿನ್ನದ ಕೊಳ
ಸೂರ್ಯ ಮುಳುಗುವಾಗ ಉರಿದು ಸಾಯುವಂತೆ—
ನೀನು ನನಗೆ ಅಗಾಧ ಆಗಸದಂತೆ,
ನಿನ್ನ ನಕ್ಷತ್ರಗಳನ್ನು ಸೆರೆ ಹಿಡಿಯಲು ಬಿಡು

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 22, 2009

ನನಗಾಗಿ ಅಲ್ಲ

ಏಪ್ರಿಲ್ ರಾತ್ರಿಗಳು ನಿಶ್ಚಲ ಮತ್ತು ಸುಮಧುರ
ಎಲ್ಲಾ ಮರಗಳು ಹೂವುಗಳಿಂದ ಶೃಂಗಾರಗೊಂಡಿರುತ್ತವೆ
ನೆಮ್ಮದಿಯೆಂಬುದು ನಿಶಬ್ಧವಾಗಿ ಅವರ ಬಳಿಗೆ ನಡೆದು ಬರುತ್ತದೆ
ಆದರೆ ನನಗಾಗಿ ಅಲ್ಲ.

ನನ್ನ ನೆಮ್ಮದಿ ಅವಿತುಕೊಂಡಿದೆ ಅವನ ಹೃದಯದಲ್ಲಿ
ಅಲ್ಲಿಗೆ ಹೋಗಲು ನನಗೆ ಸಾಧ್ಯವಿಲ್ಲ,
ಈ ರಾತ್ರಿ ಎಲ್ಲರಿಗೂ ಪ್ರೀತಿ ಸಿಗುತ್ತದೆ
ಆದರೆ ನನಗಾಗಿ ಅಲ್ಲ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಭಸ್ಮವಾದ ಪ್ರೀತಿ

ಸೊರಗಿದ ನನ್ನ ಪ್ರೀತಿಯನ್ನು ಬೂದಿಯಾಗಿಸುವೆ
ಆ ಮರದಡಿಯಲ್ಲಿ,
ಆಗಸವ ಚುಂಬಿಸಲು ಹಾತೊರೆಯುವ ದಟ್ಟ ಕಾಡಲ್ಲಿ
ಯಾರಿಗೂ ಕಾಣದಂತೆ.

ಅವನ ತಲೆಗೆ ಯಾವ ಹೂವುಗಳನ್ನೂ ಹಾಕುವುದಿಲ್ಲ,
ಪಾದದ ಬಳಿ ಕಲ್ಲನ್ನೂ ಸಹ ನೆಡುವುದಿಲ್ಲ,
ಅವು ತೀವ್ರವಾಗಿ ಪ್ರೀತಿಸಿದ ತುಟಿಗಳು
ಕಹಿಯಾದ ಸಿಹಿ.

ಅವನ ಸಮಾಧಿಯ ಹತ್ತಿರ ಇನ್ನೆಂದೂ ಸುಳಿಯುವುದಿಲ್ಲ,
ತೀಕ್ಷ್ಣವಾಗಿ ತಂಪಾಗಿರುವ ಮರಗಳಿರುವುದರಿಂದ.
ಸಾಧ್ಯವಾದಷ್ಟೂ ಸಂತಸ ಪಡೆಯಲೆತ್ನಿಸುವೆ
ನನ್ನ ಕೈಗಳು ಹಿಡಿಯುವಷ್ಟು.

ದಿನ ಪೂರ ಹೊರಗೇ ಕಳೆಯುತ್ತೇನೆ ಸೂರ್ಯನಿರುವಲ್ಲಿ,
ವಿಶಾಲವಾಗಿ ಬೀಸುತ್ತಿರುವ ಮುಕ್ತ ಗಾಳಿಯಲ್ಲಿ,
ಆದರೂ ಸಹ, ಪ್ರತೀರಾತ್ರಿ ಅಳುತ್ತಾ ಕಣ್ಣೀರಿಡುತ್ತೇನೆ
ಯಾರಿಗೂ ತಿಳಿಯದ ಸಮಯದಲ್ಲಿ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 21, 2009

ಪ್ರೀತಿಯ ನಂತರ

ಇನ್ನು ಅಲ್ಲಿ ಯಾವ ಮೋಡಿಯೂ ನಡೆಯುವುದಿಲ್ಲ
ಎಲ್ಲರಂತೆಯೇ ನಾವೂ ಸಹ ಭೇಟಿಯಾಗುತ್ತೇವೆ
ನೀನು ಯಾವ ವಿಸ್ಮಯವನ್ನೂ ನನ್ನಲ್ಲಿ ಸೃಷ್ಟಿಸಲು ಆಗುತ್ತಿಲ್ಲ,
ಹಾಗೇ ನಾನೂ ಸಹ ನಿನ್ನಲ್ಲಿ.

ನೀನು ಬೀಸುವ ಗಾಳಿಯಾಗಿದ್ದೆ ಮತ್ತೆ ನಾನು ಸಾಗರ---
ಅಲ್ಲಿ ಯಾವ ಅದ್ಭುತವೂ ಘಟಿಸುವುದಿಲ್ಲ
ನಾನು ಬೆಳೆದಿದ್ದೇನೆ ಲೆಕ್ಕವಿಲ್ಲದಷ್ಟು
ದಡದ ಪಕ್ಕದಲ್ಲಿರುವ ಹೊಂಡದಂತೆ.

ಆದರೆ, ಹೊಂಡವು ಭೋರ್ಗರೆವ ಅಲೆಗಳು ಅಪ್ಪಳಿಸುವುದರಿಂದ ಪಾರಾದರೂ
ಮತ್ತೆ ಅಲೆಗಳ ತೀವ್ರ ಏರಿಳಿತಗಳನ್ನು ಕ್ರಮೇಣ ಕ್ಷೀಣಿಸಿ ನಿಲ್ಲಿಸಿದರೂ
ಅದು ಸಾಗರಕ್ಕಿಂತಲೂ ಹೆಚ್ಚು ಕಹಿಯಾಗಿ ಬೆಳೆಯುತ್ತದೆ
ಎಲ್ಲಾ ಅದರ ನೆಮ್ಮದಿಗಾಗಿ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

“ನಿನಗೆ ಗೊತ್ತಾಗಲೇ ಇಲ್ಲವೇ?”

ನಿನಗೆ ಗೊತ್ತಾಗಲೇ ಇಲ್ಲವೇ, ತುಂಬಾ ಹಿಂದೆ, ನೀನೆಷ್ಟೊಂದು ನನ್ನ ಪ್ರೀತಿಸುತ್ತಿದ್ದೆ ಎಂದು---
ನಿನ್ನ ಪ್ರೀತಿ ಎಂದಿಗೂ ಕಡಿಮೆಯಾಗುವ, ಮತ್ತೆ ಕಳೆದು ಹೋಗುವ ಸಾಧ್ಯತೆ ಇಲ್ಲವೇ ಇಲ್ಲವೆಂದು?
ನೀನು ಆಗ ಯೌವನದಲ್ಲಿದ್ದೆ, ಹೆಮ್ಮೆಯಿಂದ ತಾಜಾ ಹೃದಯದೊಂದಿಗೆ,
ತಿಳಿದುಕೊಳ್ಳುವುದಕ್ಕೆ ನೀನು ಸಾಕಷ್ಟು ಚಿಕ್ಕವನಾಗಿದ್ದೆ.

ವಿಧಿ ಬಿರುಗಾಳಿಯಿದ್ದಂತೆ, ಅದರ ಮುಂದೆ ಕೆಂಪು ಎಲೆಗಳು ಹಾರುತ್ತವೆ
ತುಂಬಾ ಬಿರುಕುಂಟಾಗಿದೆ, ವರ್ಷದಲ್ಲಿ ಸಂಭವಿಸಿದ ತೀಕ್ಷ್ಣ ಕಲಹಗಳಿಂದ---
ಇತ್ತೀಚೆಗೆ ನಮ್ಮ ಭೇಟಿ ವಿರಳ, ಆದರೂ ನೀನು ಮಾತನಾಡುವುದು ಕೇಳಿಸಿಕೊಂಡಾಗ
ನಿನ್ನ ಗುಟ್ಟೇನೆಂದು ಗೊತ್ತಾಗುತ್ತದೆ, ನನ್ನ ಪ್ರಿಯನೆ, ನನ್ನ ಗೆಳೆಯನೆ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ನಿನ್ನ ನೆನಪಾದಾಗ

ನಿನ್ನ ಬಗ್ಗೆ ಯೋಚಿಸಿದೆ, ನೀನು ಹೇಗೆ ಈ ಸೌಂದರ್ಯವನ್ನು
ಇಷ್ಟಪಡಬಹುದೆಂಬ ಕುತೂಹಲದಿಂದ,
ಹಾಗೇ ಈ ಉದ್ದನೆಯ ಕಡಲತೀರದಲ್ಲಿ ಏಕಾಂಗಿ ನಡೆಯುತ್ತಾ
ನಾನು ಕೇಳಿಸಿಕೊಂಡೆ, ಅಲೆಗಳು ಲಯಬದ್ಧವಾಗಿ ಬಿರುಸಾಗಿ ಸೀಳುವ ಸದ್ದನ್ನು
ಒಮ್ಮೆ ನೀನು ನಾನು ಅವುಗಳ ಹಳೆಯರಾಗವನ್ನು ಕೇಳಿಸಿಕೊಂಡಂತೆ.

ನನ್ನ ಸುತ್ತಲೂ ಮಾರ್ದನಿಸುವ ಮರಳು ಗುಡ್ಡಗಳು, ಹಿಂದೆ ಎಲ್ಲೋ
ತಣ್ಣಗೆ ಹಾಯಾಗಿ ಬೆಳ್ಳಿಯಂತೆ ಮಿಂಚುತ್ತಿರುವ ಸಾಗರ---
ನಾವಿಬ್ಬರೂ ಸಾವಿನ ಮುಕಾಂತರ ಸಾಗುತ್ತೇವೆ, ಹಾಗೇ ವಯಸ್ಸು ಹೆಚ್ಚಾದಂತೆ
ಮತ್ತೆ ನೀನು ಆ ಶಬ್ಧವನ್ನು ನನ್ನೊಂದಿಗೆ ಕೇಳುವ ಮೊದಲೇ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಏಕಾಂಗಿ

ಪ್ರೀತಿಯಿದ್ದರೂ ಸಹ, ನಾನು ಏಕಾಂಗಿ
ನಾನು ಎಲ್ಲವನ್ನೂ ಪಡೆದಿದ್ದರೂ, ನೀಡಿದ್ದರೂ ಸಹ
ನಿನ್ನ ನವಿರಾದ ಹಾರೈಕೆಯ ಜೊತೆಗಿದ್ದರೂ,
ಒಮ್ಮೊಮ್ಮೆ ಬದುಕುವ ಹಂಬಲ ನನಗಿಲ್ಲ.

ನಾನು ಒಬ್ಬಂಟಿ, ಅತಿ ಎತ್ತರದ ಶಿಖರದ ತುದಿಯಲ್ಲಿ
ನಿಂತಂತೆ ಅನ್ನಿಸುತ್ತದೆ, ದಣಿದು ಬತ್ತಿರುವ ಬರಡು ಜಗದಲ್ಲಿ,
ಕೇವಲ ಹಿಮವೊಂದೇ ನನ್ನ ಸುತ್ತುಲೂ ಮುತ್ತಿಕೊಂಡಂತೆ,
ನನ್ನ ಮೇಲೆ ಕೊನೆಯಿಲ್ಲದ ನೆಲೆಯೊಂದು ತೆರೆದಿಟ್ಟಂತೆ

ಮರೆಯಾದ ಭೂರಮೆ ಮತ್ತು ಅವಿತುಕೊಂಡ ಸ್ವರ್ಗ
ಕೇವಲ ನನ್ನಲ್ಲಿರುವ ಚೈತನ್ಯದ ಹೆಮ್ಮೆಯಿಂದಲೇ
ನನಗೆ ನೆಮ್ಮದಿಯಿಂದಿರಲು ಸಾಧ್ಯವಾಗಿದೆ
ಸತ್ತು, ಏಕಾಂಗಿಯಾಗಿರದೆ ಇರುವವರಿಂದ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 20, 2009

ಸುಂದರ ಕಲ್ಪನೆ

ಅವಳ ನುಡಿಗಳು ಪಾರದರ್ಶಕ ನೀರಿನಂತೆ
ಕಲ್ಲಿನ ಮೇಲೆ ಹನಿಹನಿಯಾಗಿ ತೊಟ್ಟಿಕ್ಕುತ್ತಿದೆ
ದೂರದ ದಟ್ಟಡವಿಯಲ್ಲಿ, ಆ ಸ್ತಬ್ಧ ದಿಗಂತದಲ್ಲಿ
ಮೌನವು ಏಕಾಂಗಿಯಾಗಿ ಆಟವಾಡುತ್ತದೆ.

ಅವಳ ಭಾವನೆಗಳು ತಾವರೆ ಹೂವಿನಂತೆ
ಪವಿತ್ರ ಸರೋವರದಲ್ಲಿ ಪೂರ್ಣವಾಗಿ ಅರಳಿದೆ
ಬದಿಯ ಮಂದಿರದ ಮಹಾದ್ವಾರದ ಅಡಿಯಲ್ಲಿ
ಮೌನವು ನೆಲೆಸಿ ಕನಸು ಕಾಣುತ್ತದೆ.

ಅವಳ ಮುತ್ತುಗಳು ನಗುವ ಗುಲಾಬಿಗಳಂತೆ
ಗಾಢ ಮುಸ್ಸಂಜೆಗೂ ಹೊಳಪು ತರುತ್ತವೆ
ಆ ಬೃಂದಾವನವು ಮುಚ್ಚುವ ಸಮಯಕ್ಕೆ
ಮೌನವು ಅಲ್ಲಿ ನಿದ್ದೆಗೆ ಜಾರುತ್ತದೆ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 19, 2009

ಕೂಗು

ಓಹ್, ಅಲ್ಲಿ ಎಷ್ಟೋ ಆಕರ್ಷಕ ಕಣ್ಣುಗಳಿವೆ, ಅವನಿಗೆ ಕಾಣಲು ಮತ್ತೆ ಕೆರಳಲು
ಹಾಗು ಸಾಕಷ್ಟು ಮಾಂತ್ರಿಕ ಕೈಗಳು ಹಾತೊರೆಯುತ್ತಿವೆ,
ಅವನ ಕೈಗಳನ್ನು ಮೃದುವಾಗಿ ಸವರಿ ಮಂತ್ರಮುಗ್ಧನನ್ನಾಗಿಸಲು
ಆದರೆ ನನ್ನ ಪ್ರಿಯಕರನಿಗೆ ಖಂಡಿತವಾಗಿಯೂ ನಾನೇ ಹಾಗು ನನ್ನದೇ
ಏಕೈಕ ಧ್ವನಿ.

ಓಹ್, ನೆಮ್ಮದಿಯ ವಿಶ್ರಾಂತಿಗಾಗಿ ಅವನ ತಲೆಯನ್ನೊರುವ ದಿಂಬಾಗಲು
ಅಲ್ಲಿ ಎಷ್ಟೋ ಮೋಹಕ ಬಗೆಬಗೆಯ ಕುಚಗಳು ಕುತೂಹಲದಿಂದ ಕಾದಿವೆ,
ಹಾಗೇ ತಮ್ಮ ಮಾದಕ ತುಟಿಗಳ ಮೇಲೆ ಅವನ ತುಟಿಗಳನ್ನಿಟ್ಟು ಅಮಲೇರಿಸಲು
ಅಲ್ಲಿ ಲೆಕ್ಕವಿಲ್ಲದಷ್ಟು ಕೆಂದುಟಿಗಳು ಕಾತುರದಿಂದ ತಳಮಳಗೊಂಡಿವೆ
ಆದರೆ, ನಾನು ಸಾಯುವವರೆಗೆ ಖಚಿತವಾಗಿ ನಾನೇ ಹಾಗು ನನ್ನದೇ
ಏಕೈಕ ಕೂಗು

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ