Showing posts with label ರೈನರ್ ಮಾರಿಯ ರಿಲ್ಕ್. Show all posts
Showing posts with label ರೈನರ್ ಮಾರಿಯ ರಿಲ್ಕ್. Show all posts

Oct 17, 2011

ಗುಲಾಬಿ



ಗುಲಾಬಿ,
ಆ ಅಪ್ಪಟ ದ್ವಂದ್ವತೆ,
ಯಾರ ನಿದ್ದೆಗೂ ದಕ್ಕದ ಖುಷಿ,
ಎಷ್ಟೋ ರೆಪ್ಪೆಗಳಡಿಯಲ್ಲಿ.

***

Rose,
oh pure contradiction, joy
of being No-one's sleep, under so
many lids.

ಮೂಲ :ರೈನರ್ ಮಾರೀಯಾ ರಿಲ್ಕ್
ಕನ್ನಡಕ್ಕೆ :ಚಂದಿನ

Jan 17, 2009

ಸಂಜೆ

ಅಂಬರ ಕಡುನೀಲಿ ಕೋಟು ಧರಿಸುತ್ತದೆ,
ಪುರಾತನ ಸಾಲು ಮರಗಳದನ್ನು ಹಿಡಿದಿಟ್ಟಿವೆ;
ನೀನು ನೋಡುತ್ತಿರು: ನೆಲ ನಿನ್ನ ಕಣ್ನೋಟದಿಂದ ದೂರ ಸರಿದಂತಾಗುತ್ತದೆ,
ಆ ಸ್ವರ್ಗದೆಡೆಗೆ ಪಯಣಿಸುವಂತೆ, ಇಲ್ಲ ಜಾರಿ ಬೀಳುವಂತೆ;

ಅದು ನಿನ್ನ ಎಲ್ಲಿಯೂ ಕೊಂಡೊಯ್ಯುವುದಿಲ್ಲ, ಯಾವ ಮನೆಯಲ್ಲೂ ಬಿಡುವುದಿಲ್ಲ,
ಆ ಕಗ್ಗತ್ತಲು ಕವಿದ ಮನೆಗಳಂತೆ, ಸ್ಥಬ್ಧ ಹಾಗು ಕತ್ತಲು ಅಲ್ಲಿಲ್ಲ,
ಪ್ರತೀ ರಾತ್ರಿ ಉತ್ಕಟಾಕಾಂಕ್ಷೆಯಿಂದ ಮೂಡಿ, ಹೊಳೆಯುವ ನಕ್ಷತ್ರದಂತೆ;
ಆ ಅನನ್ಯತೆಯೆಡೆಗೆ ಕರೆಯುವುದಿಲ್ಲ.

ಬದುಕಿನ ಅಗಾಧತೆ ಹಾಗು ಭಯ, ಈ ಲೆಕ್ಕವಿಲ್ಲದ ಪರಿಧಿಗಳಿರುವುದರಿಂದ,
ನಿನಗೆ ಬದುಕು ಅರ್ಥಪೂರ್ಣವಾಗಿಸಲು ಬಿಡುವುದಿಲ್ಲ,
ನಿನ್ನ ಹಾಗು ನಕ್ಷತ್ರದಲ್ಲಿರುವ, ಇದೊಂದು ಬಗೆಯ ಕಲ್ಲು.

( ಮೂಲ ಕವಿ: ರೈನರ್ ಮಾರಿಯ ರಿಲ್ಕ್ )

ಸಮರ್ಪಣೆ

ಇದುವರೆಗೂ ಮಾತನಾಡದ ವಿಷಯಗಳಲ್ಲಿ,
ನನಗೆ ದೃಢವಾದ ನಂಬಿಕೆಯಿದೆ.
ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ
ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ
ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ ಧ್ಯೇಯೋದ್ದೇಶ.

ಈ ವರ್ತನೆ ಅತಿಯಾಯಿತೆನಿಸಿದರೆ, ದೇವರೆ ಕ್ಷಮಿಸು,
ಇಷ್ಟೆ ನಾ ಹೇಳ ಬಯಸುವುದು:
ನನ್ನ ಪರಿಶ್ರಮವೇ ನನ್ನ ಬೆನ್ನೆಲುಬು, ನನಗೆ ದಾರಿದೀಪ,
ನನ್ನ ಸಂಯಮ, ಸಹನೆ ಹಾಗೂ ಆತ್ಮವಿಶ್ವಾಸವೆಲ್ಲ,
ಆ ಪುಟ್ಟ ಮಕ್ಕಳು ನಿನಗೆ ತೋರುವ ಮುಗ್ಧ ಪ್ರೀತಿಯಂತೆ.

ಇವೆಲ್ಲವೂ ಈಗ ಹೊರಹೊಮ್ಮಿ ನದಿಗಳಂತೆ ಹರಿಯುತ್ತಿವೆ,
ವಿಶಾಲ ಭೂಪ್ರದೇಶ ತನ್ನ ಕೈಚಾಚಿ, ಆ ಸುಪ್ತ ಸಾಗರ
ಸೇರಲು ಹಾತೊರೆಯುವಂತೆ,
ಎಂದೂ ಕ್ಷೀಣಿಸದೆ ಭೋರ್ಗರೆವ ಅಲೆಗಳಂತೆ
ನಿನ್ನನ್ನು ಒಪ್ಪಿಕೊಳ್ಳುತ್ತೇನೆ,
ಇದುವರೆಗೂ ಯಾರೂ ಮಾಡದ ಹಾಗೆ,
ಮತ್ತೆ ಮತ್ತೆ ಅದನ್ನೇ ಸಾರಿ ಹೇಳುತ್ತೇನೆ.

ಮತ್ತೆ ಇದು ಅಂಹಃಕಾರವೆನ್ನುವ ಧೋರಣೆ ನಿಮ್ಮದಾದರೆ
ಅಡ್ಡಿಯಿಲ್ಲ, ಅದೇ ನನ್ನ ಪ್ರಾರ್ಥನೆ ಸಮರ್ಥಿಸಲಿ
ಏಕೆಂದರೆ, ಅದು ಅಷ್ಟೊಂದು ಗಂಭೀರವಾಗಿ ಮತ್ತು ಏಕಾಂಗಿಯಾಗಿ,
ನಿಮ್ಮ ಹಣೆಯ ಮುಂದೆ ನಿಂತಿದೆ, ಮೋಡಗಳ ಸುತ್ತಿಕೊಂಡು.

( ಮೂಲ ಕವಿ: ರೈನರ್ ಮಾರಿಯ ರಿಲ್ಕೆ )

Jan 15, 2009

ಸಾವು

ನೀನು ಬಾ, ನೀನೇ ಕೊನೆಯವನು, ನಾನು ಗುರುತಿಸುವಂತವನು,
ತಡೆಯಲಾರದ ನೋವು ಈ ಶರೀರದ ಎಲ್ಲಾ ನರ-ನಾಡಿಗಳಲ್ಲಿ:
ನಾನು ನನ್ನ ಸ್ಪೂರ್ತಿಯೊಂದಿಗೆ ಉರಿಯುತ್ತೇನೆ, ನೋಡುತ್ತಿರು,
ಈಗ ನಾನು ನಿನ್ನಲ್ಲಿ ಉರಿಯುತ್ತೇನೆ: ಹತ್ತಿರ ಬರುವ ಬೆಂಕಿಯ
ಜ್ವಾಲೆಗಳಿಂದ ಈ ಕಟ್ಟಿಗೆ ಸಾಕಷ್ಟು ಸಮಯದಿಂದ ತಡೆದಿಟ್ಟಿತ್ತು,
ಆದರೆ ನೀನು ಅದನ್ನು ಹಾಗೇ ಉರಿಸುತ್ತಿದ್ದೆ,
ಈಗ ಅದನ್ನು ನನ್ನದಾಗಿಸಿಕೊಂಡು, ನಿನ್ನಲ್ಲಿ ಉರಿಯುತ್ತೇನೆ.

ನನ್ನ ಸದ್ಗುಣ, ಸರಳತೆಗಳನ್ನು ನಿನ್ನ ಕನಿಕರವಿಲ್ಲದ ಜ್ವಾಲೆ
ನರಕಸದೃಶವನ್ನಾಗಿಸಿದೆ, ಅದು ಇಲ್ಲಿರುವಂತಹುದ್ದಲ್ಲ.
ಪರಿಶುದ್ಧವಾಗಿತ್ತು, ಭವಿಷ್ಯತ್ತಿನ ಯೋಚನೆಗಳಿಂದ ಮುಕ್ತವಾಗಿತ್ತು,
ನನ್ನ ಹೆಣಸುಡಲು ಜೋಡಿಸಿರುವ ಕಟ್ಟಿಗೆಯಲ್ಲಿ, ಅಂತಿಮ ನೋವಿಗಾಗಿ
ತಯಾರಿಸಿಟ್ಟ ಜಾಗದಲ್ಲಿ ನನ್ನನ್ನು ಬಂಧಿಸಿದ್ದೇನೆ,
ಭವಿಷ್ಯತ್ತಿಗೆ ಖಂಡಿತವಾಗಿ ಏನೂ ಖರೀದಿಸಬೇಕಾಗಿಲ್ಲ ನನಗೆ,
ಆದರೆ ನನ್ನ ಹೃದಯದಲ್ಲಿ ತುಂಬಿರುವುದೆಲ್ಲಾ ಈಗ ಮೌನವಾಗಿದೆ.

ಇದು ನಾನೇನಾ, ಭೂತಕಾಲವೆಲ್ಲ ಗುರುತಿಸಲಾಗದಷ್ಟು ಸುಟ್ಟಿದೆ?
ನನಗೆ ನೆನಪುಗಳ ಹಿಡಿದಿಟ್ಟು ಹೊತ್ತು ಬರಲಾಗಲಿಲ್ಲ ಒಳಗೆ.
ಓ ಜೀವವೇ! ಓ ಬದುಕೇ! ಓ ನೀನು ಹೊರಗೇ ಇರುವೆ!
ಮತ್ತೆ ನಾನು ಈ ಜ್ವಾಲೆಗಳಲ್ಲಿದ್ದೇನೆ.
ಮತ್ತೆ ನನ್ನ ಬಲ್ಲವರು ಯಾರೂ ಇಲ್ಲಿ ಇಲ್ಲ.

( ಮೂಲಕವಿ: ರೈನರ್ ಮಾರಿಯ ರಿಲ್ಕ್ )

ಬಾಲ್ಯ

ಅದರ ಬಗ್ಗೆ ಸಾಕಷ್ಟು ಯೋಚಿಸುವುದು ಸರಿಯೆ,
ಆ ರೀತಿ ಕಳೆದುಕೊಂಡದ್ದಕ್ಕೆ ಪದಗಳನ್ನು
ಹುಡುಕುವ ಪ್ರಯತ್ನದ ಮೊದಲೇ,
ನಮಗೆ ಗೊತ್ತಿರುವಂತೆ, ಹೇಗೆ ಸಂಪೂರ್ಣವಾಗಿ ಮಾಯವಾದವಲ್ಲಾ,
ಆ ದೀರ್ಘ ಬಾಲ್ಯದ ಮಧ್ಯಾಹ್ನಗಳು, ಏಕೆ?

ನಮಗೆ ಈಗಲೂ ಕಾಡುತ್ತಿವೆ-: ಕೆಲವು ಸಲ ಈ ಮಳೆಯಿಂದಾಗಿ,
ಆದರೆ ನಾವು ಅದರ ಅರ್ಥಗಳನ್ನು ಹೇಳಲಿಕ್ಕಾಗದ ಸ್ಥಿತಿಯಲ್ಲಿದ್ದೇವೆ,
ಮತ್ತೆ ಆ ಅರ್ಥಪೂರ್ಣ ಬದುಕು ನಮಗೆಂದಿಗೂ ದಕ್ಕಲಾರದು,
ಮತ್ತೆ ಒಂದಾಗುವುದು, ಬೇಟಿಯಾಗುವುದು, ಹಾಗೇ ಕಾಲಕಳೆಯುವುದು.

ಆ ಕಾಲದಲ್ಲಿ, ನಮಗರಿವಿರದ, ನಮಗೇನೂ ಆಗದ ಆ ವಯಸಿನಲ್ಲಿ,
ಕೆಲವು ವಸ್ತುಗಳ ಹಾಗು ಜೀವಿಗಳ ಹೊರತು ಪಡಿಸಿ:
ಅವರ ಜಗದಲ್ಲಿ ಯಾವುದೊ ಮನುಷ್ಯರಂತೆ ಬದುಕುತ್ತಾ,
ಕತ್ತಿನವರೆಗೂ ಅಂಖ್ಯೆ-ಸಂಖ್ಯೆಗಳ ತಂಬಿ ಗಂಭೀರ ಸ್ಥಿತಿಯಲ್ಲಿದ್ದೇವೆ.

ಮತ್ತೆ ಈಗ ಒಬ್ಬಂಟಿಯಾಗಿ ಕುರಿಕಾಯುವವನ ಹಾಗಾಗಿದ್ದೇವೆ,
ಒತ್ತಡ, ಬಿರುಕುಗಳೊಡನೆ, ಭಾವ, ಬಂಧಗಳಿಂದ ಬಹಳ ದೂರಸಾಗಿದ್ದೇವೆ,
ಅಷ್ಟು ದೂರದಿಂದಲೇ ಸೇರಿಸುತ್ತಾ , ತೀಡಿ, ತೀಡಿ ನಿಧಾನವಾಗಿ ಹೊಸ ಹಗ್ಗವ ನೇಯ್ದು
ಚಿತ್ರದ ಮುಂದಿನ ಭಾಗಕ್ಕೆ ಸೂಕ್ತವೆಂಬಂತೆ ಸೇರಿಸಿದ್ದೇವೆ.
ಈಗ ಅದರ ಮೇಲೆ ನಡೆದು ಹೋಗಲು ನಮಗೇ ಭಯಾನಕವೆನ್ನಿಸುತ್ತಿದೆ.

(ಮೂಲ ಕವಿ: ರೈನರ್ ಮಾರಿಯ ರಿಲ್ಕ್)

Jan 14, 2009

ಕೆಂಡದ ಮಗು

ಕೆಲವು ಸಲ ಅವಳು ಆ ಪುಟ್ಟ ಕೆಂಬಣ್ಣದ ಬಟ್ಟೆಯೊಂದಿಗೆ
ಹಳ್ಳಿಯನ್ನೆಲ್ಲಾ ಸುತ್ತುತ್ತಾಳೆ.
ಎಲ್ಲವೂ ಅವಳಲ್ಲಿ ಅಡಗಿಸಿಕೊಂಡು, ಅರಗಿಸಿಕೊಂಡಂತೆ,
ಆದರೂ, ಅವಳಿಗರಿವಿಲ್ಲದೇ, ಅವಳ ಮುಂದಿನ ಬದುಕಿನ ಲಯದೊಂದಿಗೆ,
ನಿಧಾನಗತಿಯಲ್ಲಿ ಚಲಿಸುತ್ತಿದ್ದಂತೆ ತೋರುತ್ತದೆ.

ಸ್ವಲ್ಪ ಓಡುತ್ತಾಳೆ, ಹಿಂಜರಿಯುತ್ತಾಳೆ, ನಿಲ್ಲುತ್ತಾಳೆ,
ಅರ್ಧ ತಿರುಗಿ...
ಮತ್ತೆ, ಸದಾ ಹಗಲುಗನಸು ಕಾಣುತ್ತಾ, ತಲೆ ಅದರ
ಪರ ಅಥವಾ ವಿರೋಧವಾಗಿ ಅಲುಗಾಡಿಸುತ್ತಾಳೆ.

ನಂತರ, ಅವಳೇ ಕಂಡುಕೊಂಡ ಭಂಗಿಗಳೊಂದಿಗೆ,
ತುಸು ನರ್ತಿಸುತ್ತಾಳೆ ಮತ್ತೆ ಮರೆತು ಬಿಡುತ್ತಾಳೆ
ನಿಸ್ಸಂದೇಹವಾಗಿ ಅವಳ ಹಂಬಲಿಸಿದ ಬದುಕಿನ
ಹುಡುಕಾಟದಲ್ಲಿ ವೇಗವಾಗಿ ಮುನ್ನಡೆದಿದ್ದಾಳೆ.

ಯಾವಾಗಲೂ ಅವಳಿಗಂಟಿಕೊಂಡಿರುವ,
ಆ ಪುಟ್ಟ ಮಗುವನ್ನು ಬಿಟ್ಟು ಹೊರಬರುವುದು ವಿರಳ
ಮತ್ತೆ ಯಾವಾಗಲೂ ಅವಳೊತ್ತುಕೊಂಡಿರುವುದು ಅದೇ
ನಿತ್ಯ ಸೋಲು, ಸೆಣಸಾಟ, ಆಘಾತಗಳು.

ತೊಟ್ಟ ಆ ಬಟ್ಟೆ ಮಾತ್ರ ಅವಳ ನೆನಪಲ್ಲಿರುತ್ತದೆ,
ಮುಂದೆ ಅವಳ ಸಿಹಿ ಶರಣಾಗತಿಯಲ್ಲಿ;
ಅವಳ ಸಂಪೂರ್ಣ ಬದುಕು ಸಮಸ್ಯೆಗಳ ಸುಳಿಯಲ್ಲಿದ್ದಾಗ,
ಯಾವಾಗಲೂ ಆ ಪುಟ್ಟ ಕೆಂಪು ಉಡುಪು ಮಾತ್ರ ಸರಿಯೆಂದೆನಿಸುತ್ತದೆ.

(ಮೂಲ ಕವಿ: ರೈನರ್ ಮಾರಿಯ ರಿಲ್ಕ್ )