Showing posts with label ಡರೋತಿ ಪಾರ್ಕರ್. Show all posts
Showing posts with label ಡರೋತಿ ಪಾರ್ಕರ್. Show all posts

May 26, 2009

ಹುಡುಗಿಯ ಉಡುಗೊರೆ

ಹುಡುಗಿ, ಹುಡುಗಿ, ಮೊದಲಿಡಬೇಡ
ನಿನ್ನ ಹೃದಯದೆಡೆಗಿನ ಮಾತನ್ನು;
ಆ ಸಂದರ ಪದಗಳು ಹಾಗೇ ನಳನಳಿಸುತ್ತಿರಲಿ;
ಹೇಳಬೇಕಾಗಿರುವುದನ್ನು ಎಂದಿಗೂ ಮೆಲ್ಲಗೆ ಪಿಸುಗೊಡದೆ.
ಹಾಗೇ ಬಿಂಬಿಸಿಕೊ, ಒಂದು ಪದ, ಇಲ್ಲಾ ಒಂದು ನೋಟದಿಂದ,
ಮಿತಭಾಷಿಯಾಗಿ, ಆಳವಿಲ್ಲದ ಪುಟ್ಟ ಕೊಳದಂತೆ.
ಸಾಧ್ಯವಾದಷ್ಟು ತಂಪಾಗಿದ್ದು, ಬೇಗನೆ ಮಾಯವಾಗು
ಏಪ್ರಿಲ್ ತಿಂಗಳ ಮಂಜಿನ ಹನಿಯಂತೆ;
ಆದಷ್ಟು ಮೃದುವಾಗಿದ್ದು, ಉಲ್ಲಾಸದಿಂದಿರು
ಮೇ ತಿಂಗಳ ಚೆರ್ರಿ ಹೂವಿನಂತೆ.
ಹುಡುಗಿ, ಹುಡುಗಿ, ಮಾತನಾಡಲೇ ಬೇಡ
ನಿನ್ನ ಕೆನ್ನೆಗಳ ಸುಡುವ ಆ ಕಣ್ಣೀರಿನ ಬಗ್ಗೆ-
ಅವಳಿಗೆ ಖಂಡಿತ ಅವನನ್ನು ಜಯಿಸಲಾಗುವುದಿಲ್ಲ, ಯಾರ
ಮಾತಲ್ಲಿ ಕಳೆದುಕೊಳ್ಳುವ ಭಯ ಕಂಡುಬರುವುದೊ ಅವಳಿಗೆ.
ಸಾಧ್ಯವಾದಷ್ಟು ಎಚ್ಚರದಿಂದಿರು, ಮತ್ತೆ ದುಃಖದಿಂದಲ್ಲ,
ನಿನ್ನ ಪ್ರೀತಿಯ ಹುಡುಗ ಸಿಕ್ಕೇಸಿಕ್ಕುತ್ತಾನೆ.
ಗಂಭೀರವಾಗಿರಬೇಡ, ಅಥವಾ ಪ್ರಾಮಾಣಿಕವಾಗಿ,
ನಿನ್ನ ಬಯಕೆ ಖಚಿತವಾಗಿ ನೆರವೇರುತ್ತದೆ-
ಒಂದುವೇಳೆ ಅದು ನಿನ್ನನ್ನು ಸಂತಸವಾಗಿಟ್ಟರೆ, ಮಗಳೆ,
ನೀನೇ ಮೊಟ್ಟಮೊದಲಿಗಳೆಂಬ ಹೆಗ್ಗಳಿಕೆ ನಿನ್ನದಾಗುತ್ತದೆ.

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ನಾಸ್ತಿಕತೆಯೊಳಗಿನ ದೋಷ

ಕುಡಿಯಿರಿ, ಕುಣಿಯಿರಿ, ನಕ್ಕು ನಲಿಯಿರಿ ಹಾಗೇ ವಿಶ್ರಮಿಸಿ,
ಪ್ರೀತಿಸಿ, ಮಧ್ಯರಾತ್ರಿ ಮೀರುವವರೆಗೂ ಸದ್ದುಮಾಡುತ್ತಾ,
ನಾಳೆ ನಾವು ಖಂಡಿತ ಸಾಯುತ್ತೇವೆ!
( ಆದರೆ, ಕರ್ಮ, ನಾವ್ಯಾರು ಹಾಗೆ ಮಾಡುವುದೇ ಇಲ್ಲ )

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

May 25, 2009

ಗಂಡಸರು

ಅವರ ಮುಂಜಾವಿನ ತಾರೆ ನೀನೆಂದು ಹೊಗಳುತ್ತಾರೆ
ಏಕೆಂದರೆ ನೀನಿದ್ದ ಹಾಗೆಯೇ ನೀನಿರುವೆ.
ಒಂದುವೇಳೆ ಅವರ ಭಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ,
ಅವರು ನಿನ್ನನ್ನು ವಿಭಿನ್ನವಾಗಿ ಬಂಬಿಸಲು ಯತ್ನಿಸುತ್ತಾರೆ;
ಸುರಕ್ಷಿತ ಹಾಗು ಸಂತೃಪ್ತಿಯಾಗಿ ನಿನ್ನನ್ನು ಆಸ್ವಾದಿಸಿದ ನಂತರ,
ನಿನ್ನನ್ನು ಸಂಪೂರ್ಣವಾಗಿ ಬದಲಾಯಿಸಲು ಹಂಬಲಿಸುತ್ತಾರೆ.
ನಿನ್ನ ಮನಸ್ಥಿತಿ, ನಡೆ-ನುಡಿಗಳನ್ನು ಶಪಿಸಿ, ಹಿಂಸಿಸುತ್ತಾರೆ;
ಬೇರೆಯೇ ವ್ಯಕ್ತಿಯನ್ನಾಗಿ ನಿನ್ನನ್ನು ಪರಿವರ್ತಿಸುತ್ತಾರೆ.
ನಿನಿಗಿಷ್ಟ ಬಂದಂತೆ ಮಾಡಲು ಅವಕಾಶ ನೀಡದೆ;
ಅವರ ಪ್ರಭಾವ ಬಳಸಿ ತಿಳಿ ಹೇಳುತ್ತಾರೆ.
ಮೊದಲು ಇಷ್ಟಪಟ್ಟು ಹೊಗಳಿದ ಎಲ್ಲವನ್ನೂ ನಕಾರಾತ್ಮಕವಾಗಿ ತಿರುಚುತ್ತಾರೆ
ನಿಶಕ್ತಳನ್ನಾಗಿಸಿ, ನನ್ನ ನರಳುವ ರೋಗಿಯನ್ನಾಗಿಸುತ್ತಾರೆ.

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಒಂದು ವರದಿ

ಈ ನಾಲ್ಕೂ ವಿಷಯಗಳನ್ನು ಅರಿಯುವಷ್ಟು, ನನ್ನ ಬುದ್ದಿ ಎಚ್ಚರವಹಿಸಬೇಕು:
ಸುಮ್ಮನಿರುವುದು, ದುಃಖ, ಸ್ನೇಹಿತ ಹಾಗು ಶತ್ರು.

ಈ ನಾಲ್ಕು ಅಂಶಗಳು ಇಲ್ಲವಾದಲ್ಲಿ ನಾನು ಚೆನ್ನಾಗಿರಬಹುದಿತ್ತು:
ಪ್ರೀತಿ, ಕುತೂಹಲ, ಮೊಡವೆ ಮತ್ತು ಸಂಶಯ.

ಈ ಮೂರು ಅಂಶಗಳನ್ನು ನಾನೆಂದಿಗೂ ಪಡೆಯಬಾರದು:
ಅಸೂಹೆ, ಸಂತೃಪ್ತಿ ಮತ್ತು ಸಾಕಾಗುವಷ್ಟು ವೈನ್.

ಈ ಮೂರು ಅಂಶಗಳು ಸಾಯುವವರೆಗೂ ನನ್ನೊಂದಿಗಿರಬೇಕು:
ನಗು, ನಂಬಿಕೆ ಮತ್ತು ಕಣ್ಣೊಳಗಿನ ಪೊರೆ

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಮಲಗುವ ಕೋಣೆಯ ಮಾಳಿಗೆ ಕೆತ್ತನೆಗಾಗಿ

ಪ್ರತಿ ಮುಸ್ಸಂಜೆಗೂ ಮತ್ತೊಂದು ದಿನದ ಅಂತ್ಯ;
ನಾನು ಎದ್ದೇಳಲೇ ಬೇಕು, ಜವಾಬ್ದಾರಿಗಳ ನಿಭಾಯಿಸಲು.
ಒಳ್ಳೆಯ ಉಡುಪು ಧರಿಸಿ, ಕುಡಿದು, ತಿನ್ನುವುದು ಮಾಡಿದರೂ,
ಬೆರಳು, ಕಾಲುಗಳನ್ನು ಕ್ರೀಯಾಶೀಲವಾಗಿಸಿ,
ಹೀಗೇ ಅಲ್ಲಿ-ಇಲ್ಲಿ, ಅಲ್ಪ- ಸ್ವಲ್ಪ ಕಲಿತು
ಅಳುವುದು, ನಗುವುದು ಹಾಗೇ ಬೆವರು ಸುರಿಸುವುದು, ಶಪಥ ಮಾಡುವುದು
ಹಾಡಗಳ ಕೇಳುವುದು, ಇಲ್ಲಾ ಒಳ್ಳೆಯ ನಾಟಕ ನೋಡುವುದು
ಸಾಧ್ಯವಾದರೆ ಹಾಳೆಯಲ್ಲಿ ಪದಗಳ ತುಂಬಿಸುವುದು
ಶತ್ರುಗಳನ್ನು ಶಪಿಸಿ, ಸ್ನೇಹಿತನ ಹೊಗಳುವುದಾದರೂ-
ಕೊನೆಯಲ್ಲಿ, ಹಾಸಿಗೆ ನನಗಾಗಿ ಕಾದಿರುತ್ತದೆ.

ಹೆಮ್ಮೆ ಹಾಗು ಸಾಮರ್ಥ್ಯದಿಂದ ಮುನ್ನಡೆದರೂ
ದೀರ್ಘ ವಿಶ್ರಾಂತಿಗಾಗಿ ಹಾಸಿಗೆಗೆ ಮರಳುತ್ತೇನೆ.
ಅತೀವ ಕುರುಡು ನೋವಿನಿಂದ ನಡೆಯುತ್ತೇನಾದರೂ,
ಹಾಸಿಗೆಗೆ ಮತ್ತೆ ಖಂಡಿತ ಬಂದೇ ಬರುತ್ತೇನೆ.
ಎಷ್ಟೇ ಸಂತೋಷವಾಗಿದ್ದರೂ, ಇಲ್ಲಾ ತಲೆ ತಗ್ಗಿಸುವಂತಾದರೂ,
ನನ್ನ ಎಲ್ಲಾ ದಿನಗಳೂ ಹಾಸಿಗೆಯತ್ತಲೇ ಸೆಳೆಯುತ್ತವೆ.
ಎದ್ದು ಹೊರಡುವುದು ಮಾಡುತ್ತಲೇ ಇದ್ದರೂ; ಮತ್ತೆ
ಎಂದಿನಂತೆ ಹಾಸಿಗೆಗೆ ವಾಪಸ್ಸಾಗಿರುತ್ತೇನೆ,
ಬೇಸಿಗೆ, ಚಳಿ, ಮಳೆ, ವಸಂತ, ವೈಶಾಕ ಎಲ್ಲ ಕಾಲದಲ್ಲೂ-
ಮತ್ತೆ ಏಕಾದರೂ ಎದ್ದೇಳುವೆ; ನಿಜವಾಗಲೂ ನಾನು ಶತದಡ್ಡಿ!

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಸುಡು ಬಿಸಿಲು

ಯೌವನದಲ್ಲಿ, ನಾನು ಹಾಗೇ ಇರುತ್ತಿದ್ದೆ
ಅವರನ್ನು ಖುಷಿ ಪಡಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಾ,
ಹಾಗೇ ನಾನೂ ಬದಲಾಗುತ್ತಿದ್ದೆ, ಹೋಡಾಡುವ ಪ್ರತಿ ಯುವಕನ ಆಶಯಗಳಿಗೆ,
ನಿರೀಕ್ಷೆಗಳಿಗೆ ಮತ್ತು ಅವನ ವ್ಯಾಕ್ಯಾನಕ್ಕೆ ಹೊಂದಿಕೊಳ್ಳುವಂತೆ.

ಆದರೆ, ಈಗ ನನಗೆ ತಿಳಿದಿರುವಷ್ಟೇ ತಿಳಿದಿರುವುದು,
ನನಗೆ ಇಷ್ಟವಾಗಿದನ್ನೇ ನಾನು ಮಾಡುವುದು;
ಒಂದುವೇಳೆ ನಾನು ಹಾಗಿರುವುದು ನಿನಗೆ ಇಷ್ಟವಾಗದಿದ್ದಲ್ಲಿ,
ನೀನು ಮತ್ತು ನಿನ್ನ ಪ್ರೀತಿ ಹಾಳಾಗಿ ಹೋಗಲಿ!

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಸಂಭೋಗ ಸ್ಥಿತಿ-ಗತಿಯ ಅವಲೋಕನ

ಯಾವುದೇ ಸಮಯದಲ್ಲಿ ಹೆಂಗಸು ಒಬ್ಬರೊಂದಿಗೆ ಮಾತ್ರ ಸಂಬಂಧವಿಟ್ಟುಕೊಳ್ಳಲು ಬಹಯಸುತ್ತಾಳೆ;
ಗಂಡಸು ಸದಾ ಹೊಸತನ್ನು ಅನುಭವಿಸುವುದರಲ್ಲಿ ಅತೀವ ಸಂತಸಪಡುತ್ತಾನೆ.
ಪ್ರೀತಿಯೆಂಬುದು ಮಹಿಳೆಯ ಸೂರ್ಯ, ಚಂದ್ರಮರಂತೆ;
ಗಂಡಸಿಗೆ ಖುಷಿಯಾಗಿರಲು ಹಲವು ಪ್ರಕಾರಗಳಿವೆ.
ಮಹಿಳೆ ಬದುಕುತ್ತಾಳೆ, ಆದರೆ ಅವಳ ಭಂಗವಂತನಲ್ಲಿ;
ಹತ್ತರವರೆಗೆ ಎಣಿಸಿನೋಡಿ, ಅಷ್ಟರೊಳಗೇ ಗಂಡಸಿಗೆ ಬೋರೆನಿಸಿಬಿಟ್ಟಿರುತ್ತದೆ.
ಒಟ್ಟಾರೆ ಇದರ ಸಾರಾಂಶ ಮತ್ತು ಇದರ ಅಂತರಾಳದ ಸತ್ವ, ಸತ್ಯ ಇಷ್ಟೇ,
ಇದರಿಂದ ಇನ್ನೇನು ಮಹಾ ಅದ್ಭುತಗಳು ಉದ್ಭವಿಸಲು ಸಾಧ್ಯ?

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

May 23, 2009

ಬಡಾಯಿಕೊಚ್ಚುಕೊಳ್ಳುವವ

ದಿನಗಳು ಉರುಳುತ್ತಿರುತ್ತವೆ ಸುತ್ತಿಕೊಂಡು
ಅವುಗಳ ಹುಚ್ಚು ಕುಣಿತದೊಂದಿಗೆ;
ಮತ್ತೆ ನೀನು ಉಸಿರಾಡುತ್ತಲೇ ಇರಬೇಕು,
ಆದರೆ, ನಾನು ಸುರಕ್ಷಿತವಾಗಿರುತ್ತೇನೆ ನರಕದಲ್ಲಿ.

ಜನವರಿಯ ಹವಾಮಾನದಂತೆ,
ವರ್ಷಗಳು ಚುರುಕಾಗಿ ಕಚ್ಚುತ್ತವೆ,
ಮತ್ತೆ ನಿನ್ನ ಎಲುಬುಗಳನ್ನು ಒಟ್ಟಿಗೆ ಎಳೆಯುತ್ತವೆ,
ನಿರಂತರ ಒಟಗುಟ್ಟುವ ಹೃದಯ ಸುತ್ತಿಕೊಂಡು.

ನೀನು ಸೊಗಸಾಗಿರುವವುಗಳಿಂದ ರೂಪುಗೊಂಡಿರುವೆ
ಅವುಗಳು ಒಣಗಿ, ಮುದುಡಿ, ಬಿರುಕು ಬಿಡುತ್ತವೆ.
ಯಾವುದು ಕಂಡರೆ ನಿನಗೆ ತುಂಬಾ ಭಯವಾಗತ್ತದೆಯೋ,
ಅದೇ ನಿನಗೆ ಎಲ್ಲರ ಕಣ್ಣುಗಳಿಂದ ಕಾಣಿಸುತ್ತಿರುತ್ತದೆ.

ನಂತರ ನೀನು ತಪ್ಪು ಮಾಡುತ್ತಲೇ ಮುಂದುವರೆಯುವೆ
ತೀವ್ರ ದರ್ಪದ ಬಿರುಸು ನುಡಿಗಳ ಸಾಲು
ಕುಹಕ ನಗೆಯಿಂದ ನಿನ್ನ ಗಂಟಲು ಸೀಳುತ್ತದೆ
ಮತ್ತು ನಿನ್ನ ಕಣ್ಣುಗಳನ್ನು ಉಪ್ಪುನೀರಿಂದ ಸುಡುತ್ತದೆ.

ನೀನು ತೀರಾ ನಿಶಕ್ತನಾಗಿ, ಅಪ್ರಸ್ತುತನಾಗಿಬಿಡುವೆ
ಮಂದನೋಟದಿಂದ, ಎಲ್ಲವನ್ನೂ ಅಡಗಿಸಿಟ್ಟ ತಲೆಯೊಂದಿಗೆ,
ನಾನು ಮಾತ್ರ ಚಿರಯೌವನದೊಂದಿಗೆ, ಖುಷಿಯಾಗಿದ್ದೇನೆ
ಸತ್ತು ಗರ್ಜಿಸುತ್ತಿರುವವರ ಜೊತೆಯಲ್ಲಿ.

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಸೃಜನಶೀಲರ ಒಕ್ಕೂಟ

ಸಾಹಿತಿಗಳು, ನಟರು, ಕಲಾವಿದರು ಹಾಗು ಅಂಥಹವರು
ಇತ್ತ ಏನೂ ಗೊತ್ತಿಲ್ಲದವರೂ ಅಲ್ಲ, ಅತ್ತ ಪ್ರಖರ ಪಂಡಿತರೂ ಅಲ್ಲ.
ಶಿಲ್ಪಕಲೆಗಾರರು, ಹಾಡುಗಾರರು ಹಾಗು ಅಂಥಹ ವರ್ಗದವರು
ಅವರವರ ವೈಯುಕ್ತಿಕ ವಿಷಯಗಳನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೇಳುತ್ತಾರೆ.
ನಾಟಕಕಾರರು, ಕವಿಗಳು ಹಾಗೇ ಅಂಥಹ ಕುದುರೆಗಳ ಕತ್ತುಗಳುಳ್ಳವರು
ಆರಂಭ ಎಲ್ಲಿಂದಾದರೂ ಮಾಡಲಿ, ಮುಗಿಸುವುದು ಮಾತ್ರ ಸಂಭೋಗದಲ್ಲಿ.
ಪತ್ರಕರ್ತರು, ವಿಮರ್ಶಕರು ಹಾಗೇ ಅವರ ಗುಂಪಿನವರು
ಹೇಳುವುದೇನೂ ಇರುವುದಿಲ್ಲ, ಮತ್ತೆ ಏನೂ ಇಲ್ಲವೆಂದು ಹೇಳುವುದೂ ಇಲ್ಲ
ನನ್ನ ಈ ಕ್ಲಿಷ್ಟ ಪರೀಕ್ಷೆಗಳನ್ನೂ ಮೀರಿದವರು ಏನಾದರೂ ಮಾಡಬಲ್ಲವರು
ದೇವರೇ, ಅಂಥಹ ವ್ಯಕ್ತಿಗಳಿಗೆ ಖಚಿತವಾಗಲೂ ಜೀವವಿಮೆ ಅತ್ಯಗತ್ಯ!

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ