Showing posts with label ಮುಸ್ಸಂಜೆ. Show all posts
Showing posts with label ಮುಸ್ಸಂಜೆ. Show all posts

Apr 29, 2009

"ಮುಸ್ಸಂಜೆ ಮುಖಾಮುಖಿ" ಬಿಡುಗಡೆಗೆ - ನಿಮ್ಮ ಆಗಮನದ ನಿರೀಕ್ಷೆ..


ಆತ್ಮೀಯರೇ,
ಹೈದರಾಬಾದಿನಲ್ಲಿರುವ ಕಾರಣ ನಿಮ್ಮನ್ನು ಇದುವರೆಗೂ ಪ್ರತ್ಯಕ್ಷವಾಗಿ ಭೇಟಿಯಾಗುವ
ಅವಕಾಶ ಕೂಡಿ ಬರಲಿಲ್ಲ.
ಆದರೆ, ಇದೇ ಸೋಮವಾರ ಮೇ 04, 2009 ರ ಸಂಜೆ 5.30 ರಿಂದ 7.30 ರವರೆಗೆ ಯವನಿಕಾ, II ಮಹಡಿ, ಕಾನ್ಪರೆನ್ಸ್ ಹಾಲ್,
ನೃಪತುಂಗ ರಸ್ತೆ, ಬೆಂಗಳೂರು ಇಲ್ಲಿ ಒಂದು ಸಣ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಿಮ್ಮನ್ನು ಭೇಟಿಯಾಗಲು ಇದೊಂದು
ಉತ್ತಮ ಅವಕಾಶವೆಂದು ಭಾವಿಸುತ್ತೇನೆ.
ಯಾವುದೇ ಕೆಲಸವಿದ್ದರೂ ದಯವಿಟ್ಟು ಈ ಕಾರ್ಯಕ್ರಮಕ್ಕೆ ಆಗಮಿಸಿ, ನಿಮ್ಮನ್ನು ಭೇಟಿಯಾಗುವ
ಅವಕಾಶವನ್ನು ತಪ್ಪದೇ ಕಲ್ಪಿಸಿಕೊಡುವಿರೆಂಬ ಒತ್ತಾಸೆಯೊಂದಿಗೆ ನಿಮಗಾಗಿ ಕಾತುರ ಹಾಗು ಕೂತೂಹಲದಿಂದ ಕಾದಿರುತ್ತೇನೆ.
ಅದೇ ಸಮಯದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಮುಸ್ಸಂಜೆಯ ಮುಖಾಮುಖಿ” ಯನ್ನು
ಖ್ಯಾತ ಸಾಹಿತಿ ಹಾಗು ನಾಟಕಕಾರರಾದ ಡಾ.ಎಚ್. ಎಸ್.ವೆಂಕಟೇಶಮೂರ್ತಿಯವರು
ಬಿಡುಗಡೆ ಮಾಡಲಿದ್ದಾರೆ
ಹಾಗು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ.ಬರಗೂರು ರಾಮಚಂದ್ರಪ್ಪ, ಖ್ಯಾತ ಚಿಂತಕರು ಹಾಗು ಚಲನಚಿತ್ರ
ನಿರ್ದೇಶಕರು, ವಿಶೇಷ ಅತಿಥಿಗಳಾಗಿ ಡಾ.ನಟರಾಜ್ ಹುಳಿಯಾರ್, ಹೆಸರಾಂತ ವಿಮರ್ಶಕರು ಹಾಗು ಲೇಖಕರು ಬರಲಿದ್ದಾರೆ.
ಅಧ್ಯಕ್ಷತೆಯನ್ನು ಡಾ.ನಲ್ಲೂರು ಪ್ರಸಾದ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಅವರು ವಹಿಸಿಕೊಳ್ಳಲಿದ್ದಾರೆ.
ಈ ಸಮಯದಲ್ಲಿ ನೀವು ಜೊತೆಯಾದರೆ ನನಗೆ ಬಹಳ ಸಂತೋಷವಾಗುತ್ತದೆ
ನಿಮ್ಮ ಆಗಮನದ ನಿರೀಕ್ಷೆಯಲ್ಲಿ,
ಧನ್ಯವಾದಗಳೊಂದಿಗೆ,
- ಚಂದಿನ
( ಚಂದ್ರಶೇಖರ್, ಈಟೀವಿ ಕನ್ನಡ, ಹೈದರಾಬಾದ್ )
09391041932
email:chandinais@gmail.com

Jul 23, 2008

ಅನಂತ ಮೌನ

ಈ ಅನಂತ
ಮೌನ
ಚಿಂತನ, ಮಂಥನ
ಚಿರಯೌವನ.

ಬಿರುಗಾಳಿಗೆ ಮೈಯೊಡ್ಡಿ
ಭೋರ್ಗರೆವ ಅಲೆಗಳ
ಮೇಲೆ ರುದ್ರನರ್ತನ.

ಕಾಲಗರ್ಭದ ಮಿತಿ
ಭಾವ, ಬಂಧು
ಸಿಂಧೂರ ಸೌಂಧರ್ಯ
ನಿಸರ್ಗ ಚಿತ್ತದ ಜೊತೆ ಸರಸ.

ಈ ಹಾದಿಯಲ್ಲೆಲ್ಲಾ
ಕಲ್ಲು, ಮುಳ್ಳು
ಸಾಲು ಮರಗಳ
ನೆರಳು.

ಪಾಪಿಷ್ಟ, ಕೋಪಿಷ್ಟ
ಸಾಧು, ಸಂತ
ಇಳೆಗೆ ಎಲ್ಲವೂ
ಮೀಸಲು.

ನೀರವ ಮೌನ
ಒಮ್ಮೆಗೇ
ಬಿರುಗಾಳಿಯ
ಆಕ್ರಂದನ
ಮತ್ತದೇ ಮೌನ.

ಇಲ್ಲಿ ಕವಿಗೂ ಉಂಟು ಸ್ಧಾನ

ಮೋಡ ತಡೆದು
ಮಳೆ ಸುರಿಸಿದ
ಬೆಟ್ಟಕ್ಕೆ
ನೀರಿನ ಅಭಾವ.

ಬೆಟ್ಟದಿಳಿಜಾರಿನಲಿ
ನೀರು ನಿಲ್ಲಲು
ಸಾಧ್ಯವೆ?
ತಡೆಗೋಡೆ ವಿರಳ.

ಕೆಳಗೆಲ್ಲೋ
ಕಟ್ಚಲೂ ಬಹುದೊಂದು
ಅಣೆಕಟ್ಟು
ಅದಕ್ಕೇನು ಲಾಭ?

ಆದರೂ ಅದಕ್ಕೆ
ನಿಶ್ಚಿಂತೆ
ಇಲ್ಲ ಕಿಂಚಿತ್ತು
ಹಸಿರಿನ ಕೊರತೆ.

ಕುಡಿಯಲು ನೀರು
ಉರಿಬಿಸಿಲಿಗೆ ನೆರಳು
ಕಲ್ಲುಗುಂಡುಗಳಡಿ
ಬೀಸುವ ತಂಗಾಳಿ.

ಇಲ್ಲಿ ಜಾರುವ ಕವಿಗೂ
ಉಂಟು ಒಂದು ಸ್ಧಾನ.

Jul 9, 2008

ಆಸ್ತಿ

ಆಳದಲಿ ಅಡಗಿಸಿಟ್ಟ
ಅಮೂಲ್ಯ ಆಸ್ತಿ
ಸುತ್ತಲೂ ಸುತ್ತಿ ಸುತ್ತಿ
ಬ್ಯಾಂಡ್ಯೇಜು ಸುತ್ತುವಂತೆ
ಒಂದರ ಮೇಲೊಂದು ಪೇರಿಸಿ
ಎಷ್ಟೋ ಲೆಕ್ಕವಿಲ್ಲದಷ್ಟು ಸಲ
ಭಾರೀ ಮಜಬೂತು
ಆಗ ಒಂದಷ್ಟು ತೃಪ್ತಿ.

ಬಿಡಿಸಲು ಅಸಾಧ್ಯ
ನೂರೆಂಟು ಬ್ರಹ್ಮಗಂಟು
ಆದಿ, ಅಂತ್ಯದ
ಸುಳಿವಿಲ್ಲ
ಕೈ ಕಾಲು ನೆಟ್ಟಗಿದ್ದರು
ಪ್ರಯತ್ನ ಫಲಕಾರಿಯಾಗುವ
ಭರವಸೆಯಿಲ್ಲ
ಪೆಟ್ಟು ಹೆಚ್ಚಾದಂತೆ
ನೆನಪುಳಿಸಿ ,
ಉಮ್ಮಸ್ಸು ಕರಗುವುದು ನಿಜ.

ಎಲ್ಲರ ಕಣ್ತಪ್ಪಿಸಿ
ತೀವ್ರ ನಿಗಾವಹಿಸಿ
ನಿಶಬ್ಧ ವಾತಾವರಣದೆಡೆಗೆ
ಸುಳಿವು ಸಿಗದ
ನಿಗೂಢ ಸ್ಥಳದಲ್ಲಿ
ಸುಲಭ ಕಾರ್ಯದಲ್ಲಿ
ಕೃತಕ ವಿಶ್ರಾಂತಿ
ನೆನಪುಗಳು ಮಾಗಿದಷ್ಟೂ
ಭರಿಸಲಾಗದೆ ಬೆನ್ನು ಹತ್ತುವ ರುಚಿ.

ಕದಲಿಸುವ ಮುನ್ನ
ಕರುಣೆಯಿರಲಿ
ಉರಿವ ಉಲ್ಕೆಗಳು
ಬೀಳುವವು ಮೈ ಮೇಲೆ
ಭಯ ಸಹಜ
ಭಾರವಿಳಿಸುವ ಬಯಕೆ
ಸ್ವಾಭಾವಿಕ
ನೀತಿ, ನಿಯಮ ಪಾಲನೆ
ಇಲ್ಲಿ ಕಡ್ಡಾಯವೇನಲ್ಲ.

Jul 7, 2008

ಸೆರೆ ಸಿಕ್ಕ ಹಕ್ಕಿ

ಹಕ್ಕಿಯೊಡಳೊಳಗೆ ಅಡಗಿ
ಪಿಸುಗುಡುವ ಹತ್ತಾರು ಚುಕ್ಕಿ
ಗರ್ಭದೊಳಗಿನ ಬ್ರಹ್ಮಾಂಡ ಹೊಕ್ಕಂತೆ
ಬಿಗುವಾದ ಮುಖ ಸಡಿಲಿಸುವ ಹಂಬಲ

ಕೃತಕ ನಗುವಿಂದ ಕರೆವ
ಲಲನೆಯರ ಪ್ರತ್ಯಕ್ಷ ,
ಕಿರುನಗು, ಪಿಸು ಮಾತು, ಇಲ್ಲಿ
ಕಿರಿಕಿರಿಗಿಲ್ಲ ಅವಕಾಶ

ವಿಶೇಷ ಸೂಚನೆಗಳ ಜೊತೆ
ಸೂಕ್ತ ಸವಲತ್ತು ಲಭ್ಯ
ಸೆರೆಸಿಕ್ಕ ಹಕ್ಕಿಗಳ ಭಯಮಿಶ್ರಿತ ಮುಖಭಾವ
ನಿಟ್ಟುಸಿರಿಡುವ ತವಕ ನಿಮಿಷದ ಲೆಕ್ಕ

ಚಲನೆ ಶುರುವಿಟ್ಟ ಕ್ಷಣ
ರಭಸದೆದೆಬಡಿತ,
ಆಗಸದೆಡೆಗೆ ಒಮ್ಮೆಗೆ ಹಾರಿ ಮೋಡಗಳಲಿ
ತೂರುವ ತವಕ.

ಅಲ್ಲಲ್ಲಿ ಹಸಿರ ತೇಪೆ, ಕೆರೆಗಳ ತಿಲಕ ,
ಬೆಟ್ಟ, ಗುಡ್ಡದ ಮೊಡವೆ, ರಸ್ತೆ ಓಡಾಡುವ ಹಾವು
ಮನೆಗಳು ಬೆಂಕಿಪೊಟ್ಟಣ ಜೋಡಿಸಿಟ್ಟಂತೆ
ಬಿಳಿ, ಹಳದಿ, ಕೆಂಪು ಕಂಡು ಮರೆಯಾದವು

ಮೋಡಗಳ ನುಸುಳಿ ಹೊಕ್ಕಂತೆ
ಎತ್ತಿನಗಾಡಿ ಸವಾರಿ ನೆನಪು
ದಾಟಿ ಹಾರಲು ಹೊರಗೆ
ಆಗಸದಲ್ಲಿ ಅಲೆವ ನಾರದನ ನೆನಪು.

ಹಗಲು ಕರಗಿದಂತೆಲ್ಲಾ ಮಿಂಚುವ ಹಣತೆಗಳ ಸಾಲು
ಅಲ್ಲಲ್ಲಿ ಬೆಳಗುವ ತಾರೆಗಳ ಹಿಂಡು, ಹಿಂಡು
ಉಯ್ಯಾಲೆ ತೂಗಿ ಆರತಿಯ ಬೆಳಗಿ
ಅತ್ತಿತ್ತ ಕಣ್ಣಾಡಿಸಿ ದಾರಿ ಹುಡುಕುವ ದೀಪ

ಜಾರಿ ಬಿದ್ದಂತೆ, ತಡೆದು ನಿಂತಂತೆ
ಧರೆಗೆ ಮುತ್ತಿಡುವ ಆತುರ
ಭೂಕಂಪವಾದಂತೆ ಕ್ಷಣ ಉಸಿರು ನಿಂತು
ನಿಟ್ಟುಸಿರಿಡುವ ಸಮಯ, ಅಂತೂ ಗೆದ್ದ ಭಾವ.

Jun 27, 2008

ಹಾದಿಯಿರದವನ ಹಾದಿ

ಹಾದಿ ಇರದವನಿಗೆ
ನಡೆದದ್ದೇ ಹಾದಿ
ನಿರೀಕ್ಷೆ ಇರದವನಿಗೆ ಇದ್ದೇ ಇದೆ
ಹಾದಿಯ ಎರಡೂ ಬದಿ

ನಡೆದ ಹಾದಿಯಲಿ ಉಳಿದಿಲ್ಲ
ಯಾವ ಹೆಜ್ಜೆ ಗುರುತು
ಅಲ್ಲಿ ಹುಲಿ, ಸಿಂಹ, ನರಿ ,
ತೋಳಗಳ ಸಾಥ್.

ಹುಡುಕಾಟವೇನೋ ,
ಏಕೋ, ಹೇಗೋ,ಎಲ್ಲೋ ?

ಇರದುದೇನೆಂಬುದರ ಕಲ್ಪನೆ ,
ಗಾಳಿ ಗಂಧವಿಲ್ಲ
ಇರುವುದೆಲ್ಲವ ತೊರೆದು ನಿಂತರೆ
ಕ್ಯಾರೆ ಎಂಬುವವರಿಲ್ಲ

ಲಗೇಜು ಲೈಟಾಗಿರಲು
ಪಯಣ ಸುಗಮವೆಂಬುದು ನಿಜ
ಹಾದೀಲಿ ಸಿಕ್ಕವರ
ಬೇಕು ಬೇಡಗಳು ಭಾರ, ಸಹಜ.

ಬಯಕೆ ಹೆಚ್ಚಾದಾಗ
ಮೂಡಿದ ಮಾತುಗಳೀಗ
ನಿಜಕ್ಕೂ ಮುಕ್ತಿ ಮಾರ್ಗ.

ಉರಿವ ಉಲ್ಕೆಯ ಹಾಗೆ

ಕೈ ಹಿಡಿದ ಕಾಯಕ
ಆಯ್ಕೆಯಲ್ಲ
ಅನಿವಾರ್ಯತೆ ಹಾಗೂ
ಬೀಸಿದ ಬಲೆ

ದಟ್ಟಡವಿಯಲಿ ಕಳೆದು
ಹೋಗುವುದು ಸುಲಭ
ಎಲ್ಲಿರುವ ಸುಳಿವಿರದ
ಸನ್ನಿವೇಶ.

ಬೇಡುವುದರ ಬೆನ್ನತ್ತಿ
ಬೆತ್ತಲೆ ಬೆವರು
ಕತ್ತಲಲಿ ತಡಕಾಡಿ
ಕಣ್ಣಲ್ಲಿ ಧೂಳು

ಅವಕಾಶಗಳ ಕೊರತೆ
ದೂರುವುದು ಸರಿಯೆ
ಅದೃಷ್ಟ ಪರೀಕ್ಷೆ
ಕೈಕೊಟ್ಟರೂ ಸರಿಯೆ

ಉರಿವ ಉಲ್ಕೆಗಳಂತೆ
ಉರಿಯುವ ಹಂಬಲ.

Jun 25, 2008

ಮುಸ್ಸಂಜೆಯ ಮುಖಾಮುಖಿ

ನೆಪಕೊಂದು ಪುಸ್ತಕ ಕೈಯೊಳಗೆ
ಹಾಳೆಗಳ ತಿರುವಿ
ಭಾವಗಳ ಮುಚ್ಚಿಡುವ ಯತ್ನ.

ಕಿಟಕಿಯಿಂದಾಚೆಗಿರುವ
ಬೆತ್ತಲೆ ಮರದಲ್ಲಿ
ಎಲೆಗಳ ಹುಡುಕುವ
ತವಕ.

ಬೇಸಿಗೆಯ ಮಧ್ಯಾಹ್ನ
ಆಗಸಕೆ ನೀರವ ಮೌನ
ಅಲ್ಲಿ ಬೆಳ್ಳಕ್ಕಿಗಳ ಸಾಲುಗಳ
ಕಾಣುವ ಹಂಬಲ.

ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ
ಗುಡ್ಡೆಹಾಕಿ, ರಭಸದಿಂದ
ಮುಕ್ಕಿ,ಏನೋ ಸಾಧಿಸಿದ ನಿಟ್ಟುಸಿರು.

ಮಲಗಿದ್ದ ದಿನಪತ್ರಿಕೆಯೆತ್ತಿ
ಅತ್ತಿತ್ತ ನೋಡಿ, ಪರ ಪರ ಹರಿದು
ಹಿಡಿ ಹಿಡಿ ಉಂಡೆಗಳನ್ನೆಸೆದಾಗ
ಕಸದ ಬುಟ್ಟಿಗೆ ಸಮಾಧಾನ.

ಬಿಗಿಯಾಗಿ ಕಟ್ಟಿಟ್ಟ ಭಾರದ
ಮುನಿಸಿನ ಗಂಟು ಸಡಿಲಾದಂತೆ
ಬಿಗುವಾದ ಮೊಗವು ಸಹ
ಬಿಂಕ ಬಿಡಲೊಪ್ಪದು.

ಮುಸ್ಸಂಜೆಯಾದಂತೆ ಮತ್ತೆ
ಮುಖಾಮುಖಿಯ ಸಮಯ.
ಹಗುರಾದ ಮನಸ್ಸಿಗೆ
ಯಾಕೋ ಕೃತಕ ಕೋಪ.