Showing posts with label ಸಾಲು. Show all posts
Showing posts with label ಸಾಲು. Show all posts

Oct 9, 2009

ಸಾಲು - 8

- 1 -
ತೆರಿಗೆ ಕಟ್ಟಿ, ಓಟೂ ಒತ್ತಿ
ಸುತ್ತಿ ಸುತ್ತಿ ಸಲಾಂ ಹೊಡೆದೂ
ಲಂಚ ಕೊಡೊ ಗುಗ್ಗೂಸ್ ಎಂದು ಗುದ್ದಿಸಿಕೊಂಡ್ರೂ...
ತೆಪ್ಪಗಿರೊ ಅಸಹಾಯಕ ಪ್ರಜೆಗಳ ದುಸ್ಥಿತಿ,
ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಮಾನ!

- 2 -
ಜನಸೇವೆಯ ಹೆಸರಲ್ಲಿ
ನಲವತ್ತೆಂಟು ಕೋಟಿ ರೂಗಳ
ಸುಂದರ ವಜ್ರದ ಸುವರ್ಣ ಕಿರೀಟ
ದೂರದ ತಿರುಪತಿ ತಿಮ್ಮಪ್ಪನಿಗೆ!
ಊರಲ್ಲೇ ಭೀಕರ ನೆರೆಯಿಂದ ತತ್ತರಿಸಿ,
ಕೂಳಿಗೂ, ಸೂರಿಗೂ ಪರದಾಡುವ ಜನರ
ಧಾರುಣ ಪರಿಸ್ಥಿತಿಯಲ್ಲೂ ಮನಕರಗದ
ಅಮಾನವೀಯ ಗಣ್ಯ ನಾಯಕರ ನಡೆ
ಬಹಳ ಅಸಹನೀಯವಾದುದು.

- 3 -
ಪ್ರಜಾಸೇವೆ ಪರಮಾತ್ಮನ ಸೇವೆಯೆಂದು
ಪಢಪಢಿಸಿ ತೊದಲುತ್ತಾ...ಬೊಗಳುತ್ತಾ...
ಅಸಹಾಯಕ ಪ್ರಜೆಗಳ ಪೀಡಿಸಿ, ಹಿಂಸಿಸಿ
ಪ್ರಭುಗಳಾಗುವ ವಿಕೃತ ಸಾಧನೆಯಿಂದ...
ಸಂತೃಪ್ತಿ ಸಿದ್ಧಿಸಿಕೊಳ್ಳಲು ಸಾಧ್ಯವೆ?

- 4 -
ಜಾತಿ, ಮತ, ನಾಡು, ನುಡಿ, ದೇಶ
ಇವೆಲ್ಲವನ್ನೂ ಮೀರಿದ ಪಯಣ...
ಪ್ರಕೃತಿಯೊಂದಿಗೆ ಸಕಲ ಜೀವರಾಶಿಗಳ ಸಂರಕ್ಷಣೆ,
ಸಂಕಷ್ಟದಲ್ಲಿ ಸಿಲುಕಿದ ಸಹಪಯಣಿಗರಿಗೆ
ಸೂಕ್ತ ಸ್ಪಂದನೆ, ಸಾಧ್ಯವಾದ ನೆರವಿಂದ
ಮಾನವತ್ವ ಮೆರೆಯುವುದೆ ಮಾನವನ
ಧ್ಯೇಯೋದ್ಧೇಶ, ಸಾಧನೆ, ಸಾರ್ಥಕ.

Jun 8, 2009

ಸಾಲು – 7

- 1 -
ಜೀವಸೃಷ್ಟಿಯು ಆರೋಗ್ಯಕರವಾಗಿ,
ನಿರಂತರವಾಗಿ ಮುನ್ನಡೆಯಲು ಸಾಧ್ಯವಾಗುವುದು,
ಋತುಮಾನಗಳು ಸಹಜವಾಗಿ, ಸ್ವಾಭಾವಿಕವಾಗಿ
ಸಂಭವಿಸುವಾಗ ಮಾತ್ರ.
ಎಂದು ಹೇಳುತ್ತಿದ್ದ ಅದ್ಯಾಪಕ
ದಿಢೀರನೆ ಭಾವುಕನಾಗಿ, ಮೌನವಾಗಿ ಕುಸಿದಿದ್ದೇಕೆಂದು
ಇದುವರೆಗೂ ತಿಳಿಯಲಿಲ್ಲ.


- 2 -
ಸರ್ವಸ್ವವೂ ನಿನ್ನದೇ ಎಂದು ಆರ್ದವಾಗಿ
ಪದೇ ಪದೇ ಹೇಳುತ್ತಿದ್ದ ಚಂಚಲ ಗೆಳತಿ
ಸರ್ವಸ್ವವನ್ನೂ ದೋಚಿ ಪರಾರಿಯಾದ
ನಂತರವೇ ಅದರ ನಿಗೂಢ ಹಿನ್ನಲೆಯ ಪರಿಚಯ
ನನಗೆ ನಿಧಾನವಾಗಿ ಅರ್ಥವಾಗಲಾರಂಬಿಸಿದ್ದು
ಇನ್ನೂ ಅಚ್ಚರಿಯಾಗೇನೂ ಉಳಿದಿಲ್ಲ.

- 3 -
ಪೆಕರು ಪೇದೆಯೊಬ್ಬ,
ಬಡಪಾಯಿ ತರಕಾರಿ ಗಾಡಿಯವನ ಬಳಿ
ಹತ್ತು ರುಪಾಯಿ ಲಂಚ, ಬಿಟ್ಟಿ ತರಕಾರಿಗಾಗಿ
ಜೋರುಮಾಡುತ್ತಾ, ಪೀಡಿಸುತ್ತಾ, ತಾಜಾ ಬಿಕ್ಷುಕನಂತೆ
ಗೋಗರೆಯುತ್ತಿದ್ದದ್ದು ಅವನ ಅನುಭವದ ಕೊರೆತೆಯಿಂದಲೊ,
ಇಲ್ಲಾ ಯಾರಾದರೂ ನೋಡುತ್ತಾರೆಂಬ ಭಯದಿಂದಲೊ?

ಹಾಗೇ,
ಇನ್ನೊಬ್ಬ ಪುಡಾರಿ ಪೇದೆ ಅದೃಷ್ಟ ಕೆಟ್ಟು
ಸಬಲ ಮಹಿಳೆಯ ಮಾಂಗಲ್ಯ ದೋಚಲೆತ್ನಿಸಿದಾಗ,
ಸಿಕ್ಕಿಹಾಕಿಕೊಂಡು, ಧರ್ಮದೇಟಿನ ಪ್ರಸಾದ ಸವಿದ ನಂತರ
ಅಸಹಾಯಕನಂತೆ ನಾನೊಬ್ಬ ಬಡಪೇದೆಯೆಂದು ಮೂದಲಿಸಿದ್ದು
ಅವನ ದಡ್ಡತನವೊ, ಇಲ್ಲಾ ಭಂಡತನವೊ?

- 4 –
ವಿನಾಃಕಾರಣ ಕೋಪಗೊಂಡು,
ಪದೇ ಪದೇ ಮಾತು ಬಿಡುವ ಗೆಳತಿಯೊಬ್ಬಳು
ಯಾವುದಕ್ಕೂ ಪ್ರತಿಕ್ರಿಯಿಸದೆ ನಿರ್ಭಾವುಕನಾಗಿದ್ದಾಗ,
ಒಮ್ಮೆಗೇ ಮೇಲೆರಗಿ ಎದೆಗೆ ಬಲವಾಗಿ ಮುಷ್ಟಿಯಿಂದಾ ಹೊಡೆದೊಡೆದು,
ಗಟ್ಟಿಯಾಗಿ ಅಪ್ಪಿಕೊಂಡು ಗಳಗಳ ಕಣ್ಣೀರಿಟ್ಟಾಗ,
ನನಗೀಗಾಗಲೇ ಮದುವೆಯಾಗಿದೆ ಎಂದು ಹೇಳಲು
ನನ್ನ ಮನಸೇಕೊ ತಡವರಿಸಿದ್ದು ಸುಳ್ಳಲ್ಲ.

Jun 3, 2009

ಸಾಲು – 6

- 1 -
ಆ ರಸ್ತೆ ಬದಿಯಲ್ಲಿ,
ಹೋಡಾಡುತ್ತಿರುವ ಜನರ ಸಮಕ್ಷಮದಲ್ಲೇ,
ಎಂಬತ್ತರ ಹರಯದ ಮುದುಕಿಯೊಬ್ಬಳು
ದುಷ್ಟ ಮಂತ್ರಿಯ ಪೋಸ್ಟರಿಗೆ
ಕ್ಯಾಕರಿಸಿ ಉಗಿದು ಗೊಣಗುತ್ತಿರುವುದನ್ನು
ಪ್ರಾಜಾಪ್ರಭುತ್ವದ ಸಾಧನೆಯೆನ್ನುವಿರೊ,
ಅಥವಾ ಅದರ ಅಣಕವೊ?

- 2 -
ಮಡದಿಯನ್ನು ಗಾಢವಾಗಿ ಮೋಹಿಸುವ
ಉನ್ಮತ್ತತೆಯಲ್ಲಿ, ಹಠಾತ್ತನೆ ಅವಳ ಕಿವಿಗೆ
ಗೆಳತಿಯ ಹೆಸರನ್ನು ಪಿಸುಗೊಟ್ಟಿದ್ದು,
ಅಂಧ ಪ್ರೇಮದ ಪ್ರತೀಕವೊ,
ಇಲ್ಲಾ ಅವನ ಅಂಧಕಾರವೊ?

- 3 -
ಎಲ್ಲ ಪಕ್ಷದ ನಾಯಕರು ಹೇರಳವಾಗಿ
ಹಂಚಿದ ಹೆಂಡ, ಹಣ, ಬಳುವಳಿಗಳನ್ನು
ವಿನಮ್ರವಾಗಿ, ಖುಷಿಯಾಗಿ ಸ್ವೀಕರಿಸಿದ ಮತದಾರ,
ನಂತರ ಎಲ್ಲರನ್ನೂ, ಎಲ್ಲವನ್ನೂ ಧಿಕ್ಕರಿಸಿ,
ತನ್ನಿಚ್ಛೆಯಂತೆ ಮತ ಚಾಲಾಯಿಸಿದ್ದು
ಅವನ ಧೀಮಂತಿಕೆಯ ಪ್ರತೀಕ ಅಲ್ಲವೆ?

- 4 -
ಅಲ್ಲಿ, ಕಳ್ಳಬಟ್ಟಿ ಸೆರೆಯೇರಿಸಿದ ಕಡು ಬಡವ
ಹಾದಿಯಲ್ಲೆಲ್ಲಾ ಸ್ವಚ್ಛಂದ ಹಾಡಿ ಕುಣಿದು
ಪಡೆಯುವ ಪರಮ ಸುಖ.
ಇಲ್ಲಿ, ಉತ್ಕೃಷ್ಟ ವಿದೇಶೀ ಮದ್ಯ ಸೇವಿಸಿದ
ಶ್ರೀಮಂತ ಏರಿದ ಅಮಲನ್ನು
ನಿಯಂತ್ರಿಸಲು ಪರದಾಡುವ ಸನ್ನಿವೇಶ
ವಿಪರ್ಯಾಸ ಅಲ್ಲವೆ?

Jun 1, 2009

ಸಾಲು - 5

- 1 -
ಮದ, ಮತ್ಸರ, ಕಾಮ, ಕ್ರೋಧ,
ಲೋಭ, ವ್ಯಾಮೋಹ ಮತ್ತು ಛಲ
ಇವುಗಳನೆಲ್ಲಾ ತೊರೆಯಬೇಕು
ಎನ್ನುವುದು ಶಿಷ್ಟರ ಸಲಹೆ.
ಆದರೆ, ಇವೆಲ್ಲವನ್ನು ತೊರೆದ ಮೇಲೆ
ಮನುಷ್ಯನಾಗಿ ಉಳಿಯುವ
ಸ್ಪಷ್ಟ ಸಾಧ್ಯತೆ ಅಥವಾ ಅರ್ಹತೆ ಇದೆಯೆ?

- 2 -
ಮದುವೆಯಾದ ಮೇಲೆ ಬೇರೆಯವರನ್ನು
ಬಯಸಬಾರದೆನ್ನುವುದು ಸಾಪೇಕ್ಷವಾದರೂ.
ಇಲ್ಲವೆಂದು ಯಾರಾದರೂ ದಿಟ್ಟ ಉತ್ತರ ಕೊಟ್ಟರೆ
ಸೋಗುಹಾಕುತ್ತಿದ್ದಾರೆಂಬುದು ಶೇಕಡಾ ನೂರರಷ್ಟು
ನಿಸ್ಸಂಶಯ ಅಲ್ಲವೆ?

- 3 -
ಪರಿಮಳ ಭರಿತ ಗುಲಾಬಿಯೊಂದು
ಚಿರಯೌವನದಲ್ಲಿ ತೇಲಾಡುತ್ತಾ
ಸಂದಿಗ್ಧ ಸನ್ನಿವೇಶದಲ್ಲಿ ಸಿಲುಕಿದೆ.
ಮೊದಲು ಅವಳ ಮುಡಿಗೆ ಮುತ್ತಿಡಲೊ,
ಅಥವಾ ಅವನ ಹೃದಯವನ್ನಪ್ಪಿಕೊಳ್ಳಲೊ
ಎಂಬುದರ ತೀವ್ರ ಗೊಂದಲದಲ್ಲಿ.
ಇದು ಸಮಯಾಭಾವದ ಸೃಷ್ಟಿ ಇರಬಹುದೆ?

- 4 -
ತುಂಟ ಬೇಟೆಗಾರನ ಬಂದೂಕಿನ ಗುಂಡಿಗೆ
ಉರುಳಿ ಬಿದ್ದಿದೆ ಒಂದು ಸಾಧು ಜಿಂಕೆ
ಕಾನೂನಿನ ಕಣ್ಣಿಗೆ ಸಿಕ್ಕಿಬಿದ್ದ ನಂತರ
ಅವನು ಆತ್ಮಸಂರಕ್ಷಣೆಗೆ ಎಂದು ಬೊಬ್ಬೆಯಿಟ್ಟದ್ದು
ದೊಡ್ಡ ವಿಪರ್ಯಾಸ ಅಲ್ಲವೆ?

Nov 10, 2008

ಸಾಲು - 4

- 1 -
ವಸಂತದಲ್ಲಿ ಚಿಗುರಿದ
ಮರಗಳ ತೋರಿಸಿ,
ಇದೂ ಸಹ ನನ್ನ ಸಾಧನೆಯೆ
ಅಂತಂದನೊಬ್ಬ ಹಿರಿಯ ನಾಯಕ

- 2 -
ವ್ಯಭಿಚಾರಿಯೊಬ್ಬಳನ್ನು
ಬಲವಂತವಾಗಿ ಕೂಡಿದ ನಂತರ,
ಇದು ನಿನ್ನ ಅದೃಷ್ಟವೆಂದ,
ಆ ಧೀಮಂತ ನಾಯಕ

- 3 -
ಅಸಹಾಯಕ ಹೆಣ್ಣೊಬ್ಬಳು
ವೇಶ್ಯಾವೃತ್ತಿಯಲ್ಲಿ ತೊಡಗಿದಾಗ,
ಅವಳಿಗೆ ಅಂಜಿಕೆ, ಕೀಳರಿಮೆ ಕಾಡದೆ,
ಸಮಾಜದಲ್ಲಿ ಸಮಾನತೆ ದೊರಕುವಂತಾದಾಗಲೇ
ಅವಳಿಗೆ ನಿಜವಾದ ಸ್ವಾತಂತ್ರ್ಯ

- 4 -
ಗುಲ್ಮೊಹರ್ ಮರಗಳು,
ಹೂಗಳಿಂದ ಮೈ ತುಂಬಿಕೊಂಡಾಗ,
ಆ ಸುಂದರ ಚಿತ್ತಾರವ ಸವಿಯುತ್ತಾ,
ತಂದೆ ಮಕ್ಕಳಿಗೆ ಅದನ್ನು ಬಣ್ಣಿಸುವುದೇ
ನಿಜವಾದ ಶಿಕ್ಷಣ

Oct 30, 2008

ಸಾಲು – 3

ಸಾಲು ಸಾಲು ಸಾವಿರ ಸಾವಿರ
ಸಾಲು ಮರ ಬೆವರ ಹರಿಸಿ ನೆಟ್ಟವರು ,
ನೆರಳಿಗೆ ಹಾತೊರೆಯದೇ ,
ಪ್ರತಿಫಲಕ್ಕೆ ಕೈಯೊಡ್ಡದೇ ,
ಕಳೆದು ಹೋದವರ ನೆನಪು
ಬಾರದಿರುವುದು ಸೋಜಿಗ !

ದಣಿವು ಇಂಗಿಸುವ ಸಲುವಾಗಿ
ನೂರಾರು ಪದಗಳ ಹಾಡಿ ,
ತಮ್ಮ ಪರಂಪರೆಯ ಮೆರೆದವರು ,
ಇಂದಿಗೂ ಜೀವಂತವಾಗಿರಿಸಿ ,
ಜನಪದವಾಗಿಸಿ ಮರೆಯಾದವರ ,
ಇಂದು ನಕಲು ಮಾಡಿ ಮೆರೆಯುವುದೇ
ದೊಡ್ಡ ಅಚ್ಚರಿ !

ತಲತಲಾಂತರದಿಂದ ತಮ್ಮ ಪೌರುಷ ,
ಅಟ್ಟಹಾಸ, ಅಧಿಕಾರದಿಂದ ಭೇದಭಾವ
ಸೃಷ್ಟಿಸಿ ದರ್ಪದಿಂದ ಮೆರೆದವರು
ಆಳಿದ ಅರಸರ ಪಟ್ಟಿ ಮರೆಯದೆ ಉಳಿಸಿ ,
ಆಳಿಸಿಕೊಂಡವರ ಸುಖದುಃಖ ಗೌಣವಾಗಿಸಿ ,
ಇಂದು
ಸಾಮಾನ್ಯರಾಗಿರುವುದೊಂದು ವಿಪರ್ಯಾಸ ,
ವಿಸ್ಮಯ !

Oct 29, 2008

ಸಾಲು - 2

- 1 -

ಅದೃಷ್ಟವಂತರು, ಸಮರ್ಥರು, ಭ್ರಷ್ಟರು
ತಮ್ಮ ಸಾಧನೆಯ ಪ್ರದರ್ಶನಕ್ಕಿಡುವಾಗ ,
ವಿದ್ಯಾವಂತ ನಿರುದ್ಯೋಗಿಗಳು
ತಮ್ಮ ಅಸಹಾಯಕತೆ ಮರೆಯಲು
ಹಗಲುಗನಸು ಕಾಣುವುದು
ಅಪರಾಧವೆನ್ನಬೇಡಿ ?

- 2 –

ಎತ್ತರದಿಂದ ಒಮ್ಮೆಗೇ ಕುಸಿದವನಿಗೆ ,
ಮತ್ತೆ ಏರಲಾರನೆಂಬ ಅನುಮಾನ
ಸಹಜವಾದರೂ ಅಸಾಧ್ಯವಲ್ಲವೆಂಬುದ ಬಲ್ಲ .
ಎಡವಿ ಬಿದ್ದವನು ತಡಕಾಡುತ್ತಲೇ ಇದ್ದ ,
ಪ್ರತಿ ಹೆಜ್ಜೆ ಅನುಮಾನದಿಂದಲೇ
ಇಡುತ್ತಿದ್ದ .

-3 –
ಅದ್ಭುತ ಸೌಂದರ್ಯವತಿಯೊಬ್ಬಳು
ಯೌವನದಲಿದ್ದಾಗ ತಾನೇ ಶ್ರೇಷ್ಠಳೆಂದು ಬೀಗಿ
ಏಕಾಂಗಿಯಾಗಿಯೇ ಪಶ್ಚಾತಾಪದೊಂದಿಗೆ
ಮುದುಕಿಯಾದಳು .
ಸಾಧಾರಣ ಚೆಲುವೆಯೊಬ್ಬಳು ತನ್ನ ಯೌವನ ,
ಕ್ಷಣಿಕವೆಂದರಿತು ಸುಖದ ಶಿಖರವನ್ನೇರಿ ,
ನೆಮ್ಮದಿಯ ನಿಟ್ಟುಸಿರಿಟ್ಟಳು .

Oct 23, 2008

ವಿಸ್ಮಯ*

- 1 -
ಕ್ಲಾಸ್ ರೂಮಿನಲ್ಲಿ ಅಧ್ಯಾಪಕ
ಅಧ್ಯಾತ್ಮ ಅತ್ಯುತ್ತಮ
ಎಂದು ಪದೇ ಪದೇ ಸಾರಿ ಹೇಳುತ್ತಿದ್ದ.
ಗೆಳತಿ
ಅವನನ್ನೇ ದಿಟ್ಟಿಸಿ,
ತುಂಟ ನಗೆ ಬೀಸಿದ ನಂತರ
ರಸಭಂಗವಾದಂತಿದ್ದ.

- 2 -

ನೀನೆ ಸಕ್ಕರೆ, ಬೆಲ್ಲ ಎಂದು
ನಿನ್ನೆಯವರೆಗೆ
ಪುಳಕಿತಗೊಂಡಿದ್ದ
ನಲ್ಲ
ಇಂದೇಕೆ
ಅಪರಿಚಿತ ನೋಟ
ನನ್ನತ್ತ ಬೀರುವನಲ್ಲ?

- 3 -
ನೀನೆ ಎಲ್ಲಾ ಎಂದು,
ಚುಮು ಚುಮು ಚಳಿಯಲ್ಲಿ
ತಬ್ಬಿ ಮುದ್ದಾಡಿದ
ನಲ್ಲ
ಈಗ ಪ್ರತಿ ಮುಂಜಾನೆ
ಬಿಸಿ ಬಿಸಿ ಫಿಲ್ಟರ್ ಕಾಫಿ
ಬೇಕೆಬೇಕೆನ್ನುವನಲ್ಲ!