Nov 17, 2011

ಅಭಿವೃದ್ಧಿ ಮಂತ್ರ ಜಪಿಸಿ

ಜಾಗತೀಕರಣ, ಉದಾರೀಕರಣ,
ಖಾಸಗೀಕರಣ, ಗ್ರಾಹಗೀಕರಣಗಳೆಂಬ
ವಿಷದ ಶೂಲಗಳೆಸೆದು ಕರಣಗಳ ಕಡಿದು,
ಅಂತಃಕರಣದ ಹರಣಗೈದು,
ಪ್ರಕ್ಷುಬ್ಧ ಆತ್ಮಗಳ ಸೃಷ್ಟಿಸಿಹರು,
ಗೆದ್ದಿಲು ಹಿಡಿದ ಬೇರುಗಳಿಗೆ
ಕೃತಕ ಗೊಬ್ಬರ ಎರಚಿ,
ಮುಂಗಾರಿನತ್ತ ಉಬ್ಬೇರಿಸಿ,
ಸಾಧಕರಂತೆ ಬೀಗುವರು.

ಹಣದುಬ್ಬರಕ್ಕೆ ತತ್ತರಿಸಿದ
ಪೋಷಕರ ಪರದಾಟ,
ಹುಟ್ಟುವ ಮಗುವಿಗೆ ಮುಂಗಡ
ಶಾಲೆ ಪ್ರವೇಶ ಕಾದಿರಿಸಲು.
ಮನ, ಮತಿಗಳ ಗೇಣಿಗಿಟ್ಟು
ನೆಲೆ, ನಲಿವಿಗಾಗಿ ನೊಗವೊತ್ತಿದ್ದಾರೆ.
ಅಮ್ಮನ ಹಿಡಿಶಾಪ,
ಪಾಪ ಕೊಳೆತ ತರಕಾರಿ ಕೊಟ್ಟವನಿಗೆ,
ಕಸದ ಬುಟ್ಟಿಗೆ ಎಸೆಯುವವರೆಗೂ.

ಇನ್ನೂ ಅಲ್ಲಲ್ಲಿ
ಹೂಗಳು ಪರಮಳ ಸೂಸಿ
ದುಂಬಿಗಳ ಸೆಳೆಯುತ್ತಿವೆ,
ಕೇರಿ ಕೆರೆಯೊಳಗೆ ಕಪ್ಪೆಗಳ ಕೂಟ,
ಹಕ್ಕಿಗಳ ಹಿಂಡು ದೂರದಲ್ಲಿ
ಕಲರವವಿಟ್ಟು ಅಣಕಿಸುತ್ತಿವೆ,
ಆಲಿಸಿದವರ ಹಾಡನ್ನು
ಕೇಳುವ ಪುರಸೊತ್ತಿಲ್ಲ.

Oct 17, 2011

ಗುಲಾಬಿ



ಗುಲಾಬಿ,
ಆ ಅಪ್ಪಟ ದ್ವಂದ್ವತೆ,
ಯಾರ ನಿದ್ದೆಗೂ ದಕ್ಕದ ಖುಷಿ,
ಎಷ್ಟೋ ರೆಪ್ಪೆಗಳಡಿಯಲ್ಲಿ.

***

Rose,
oh pure contradiction, joy
of being No-one's sleep, under so
many lids.

ಮೂಲ :ರೈನರ್ ಮಾರೀಯಾ ರಿಲ್ಕ್
ಕನ್ನಡಕ್ಕೆ :ಚಂದಿನ

Sep 29, 2011

ಬಿಂಬ: 71 - 75


ಬಿಂಬ - 71
ಮಾರಕವನ್ನು ಪೂರಕವೆಂದು ಬಿಂಬಿಸುವ ಕಲೆ ರಾಜಕೀಯ.

ಬಿಂಬ – 72
ಬಡವರ ಹಸಿವಿಗೆ ಬಲ್ಲಿದ ಬಲಿಯಾಗುವ ದಿನ ಮುಂದೆ ಬರಬಹುದು.

ಬಿಂಬ - 73
ಪರಿಮಳ ಹೊಮ್ಮಿಸಿ ಸೆಳೆವ ಹೂವೆ, ಹಾದರವೆಂದಾರು ಜೋಕೆ?

ಬಿಂಬ - 74
ಪೊರೆ ಕಳಚಿ ಕೊಳೆ ಕಳೆವ ಹಾವೇ, ವಿಷವ ತೊರೆಯಲು ಸಾಧ್ಯವೆ?

ಬಿಂಬ - 75
ಬೆಲ್ಲಕ್ಕೆ ಮುತ್ತುವ ಇರುವೆ, ಹೆಣಕ್ಕೂ ದಾಂಗುಡಿ ಇಡಲು ಹೇಸುವುದಿಲ್ಲ.

Sep 28, 2011

ಬಿಂಬ : 66 - 70




ಬಿಂಬ - 66
ಆ ಕಾಡ್ಗಿಚ್ಚಿಗೆ ಕರಗಿ ಹೋಗಿದ್ದು ಕೇವಲ ಕಾಡಲ್ಲ..?

ಬಿಂಬ – 67
ಅವಳು ಕಾರ್ಮೋಡ, ಅವನು ಕಗ್ಗಾಡು
ಅವರ ಕಾಳಗಕ್ಕೆ ಗುಡುಗು, ಮಿಂಚು, ಮಳೆ.

ಬಿಂಬ - 68
ಪಕ್ವವಾದ ಹಣ್ಣು ಬಯಸೀತಾದರೂ ಏನನ್ನು..?

ಬಿಂಬ - 69
ಬಾಟಮ್ ಜೀನ್ಸ್ ತುಂಬಿಕೊಂಡ ಪೋರಿ,
ಪಡ್ಡೆ ಹೋರಿಗಳೆಲ್ಲಾ ಚೆಲ್ಲಾಪಿಲ್ಲಿ...

ಬಿಂಬ - 70
ಮೋಹಕ ಕಂಗಳ ಮಾದಕ ನಗೆಯ ಪ್ರವಾಹಕ್ಕೆ
ಸಿಲುಕದ ಮಹನೀಯರು ಇದ್ದರೆ, ಅದು ಖಂಡಿತ ಸುಳ್ಳು.

Sep 27, 2011

ಹಾಯ್ಕು - 16



ಸೂರ್ಯನ ಸೆರೆಯಿಡಿದೆ
ಎಂದು ಬೊಬ್ಬಿಡುವ ಅವಳ ಅಂಗೈಯಲ್ಲಿ ಸೇವಂತಿ ಕಂಡು
ತುಸು ಬೆಚ್ಚಿದ್ದು ಸುಳ್ಳಲ್ಲ...

Sep 26, 2011

ಮತ್ತದೇ...


ಒಲ್ಲದ ವಿಷಯಗಳು?
ಒಂದೇ ಸಮ ದಾಡಿಯಿಟ್ಟಿವೆ,
ಯಾರದೋ ಸಾವು ನೋವಿಗೆ
ಕದಡುವ ಮನಸಿಗೆ ಕೊಟ್ಟವರಾರು ಅಪ್ಪಣೆ?
ರಾಡಿಯೆಬ್ಬಿಸಿ, ಉಬ್ಬೇರಿಸುವವರಿಗೆ
ನೀಡಬೇಕೆ ಉತ್ತರ!

ಛೆ,
ದಿನ ಬೆಳಗಾದರೆ ಇದೇ ಗೋಳು.
ಯಾರಿಗೋ ಆಘಾತ, ಅಪಘಾತ,
ಅಪಹರಣ, ಹರಣ,
ಕೊಲೆ, ಕೇಸು, ಕೋರ್ಟು.
ಇದನ್ನೇ ನೋಡುತ್ತಾ,
ಸಂಖ್ಯೆಗಳ ಕೂಡುತ್ತಾ,
ಕಣ್ಮನ ತುಂಬಿಸಿಕೊಳ್ಳುವ
ಕೆಟ್ಟ ಧಾವಂತ.

ಹಸಿವು,
ತಿಂದಷ್ಟೂ ತೀರದ,
ಅಜೀರ್ಣದಿಂದ ವಾಕರಿಕೆಯಾಗಿ,
ಆರೋಗ್ಯ ಹಾಳಾಗಿ ಸತ್ತರೂ ಸೈ,
ಬೇಕು, ಬೇಕು, ಇನ್ನೂ ಬೇಕು.

ಅಬ್ಬಬ್ಬಾ...
ದೋಚಿದ್ದೋ, ದೋಚಿದ್ದು
ಈಗ ಎಚ್ಚೆತ್ತವರು ಜನರೋ,
ಸರಕಾರವೋ, ಇಲ್ಲಾ ನ್ಯಾಯಾಂಗವೋ,
ಇಲ್ಲಾ ಇವರೆಲ್ಲರ ತಲೆಗೆ ಹುಳಬಿಟ್ಟು
ಮಗುಮ್ಮನೆ ನಗುವ ಮಾಧ್ಯಮವೋ?
ಭ್ರಷ್ಟರಿಗೇಕೋ ಕಾಲ ಕೆಟ್ಟಿದೆ,
ಕಂಬಿ ಎಣಿಸುವ ಭಯ,
ಹಾವು-ಏಣಿ ಆಟದ ನಡುವೆ,
ಸಾಮಾನ್ಯನಿಗೊಂದಿಷ್ಟು ನಿಟ್ಟುಸಿರು.
ದಿನ - ರಾತ್ರಿ ಮತ್ತಿವೇ
ಗೋಜು-ಗೊಂದಲಗಳು...

ಈಗಷ್ಟೇ ಕರೆ ಮಾಡಿದ ಗೆಳತಿಗೆ
ಬೇಕಂತೆ ಪೀಝಾ, ಬರ್ಗರ್.
ಅಮ್ಮ ಮಾಡಿದ ಮುದ್ದೆ ಬಸ್ಸಾರಿಗೆ,
ಮತ್ತೆ ಹಳೆಯ ಹಾಡಿಗೆ,
ನನಗಿಲ್ಲ ಯಾವ ತಕರಾರು.

May 20, 2011

ಬಿಂಬ 61 - 65

ಬಿಂಬ - 61
ಅಮೂರ್ತ ಬಿಂದುಗಳ ಬಂಧನ ಬದುಕು

ಬಿಂಬ - 62
ಬಾನ ಕನಸಿಗೆ, ಬಯಲೆ ಬದುಕು

ಬಿಂಬ – 63
ಕಾಂಕ್ರೀಟ್ ಕಾಡಲ್ಲೂ ಜೇನುಗೂಡು,
ಕೋಗಿಲೆ ಹಾಡು...

ಬಿಂಬ - 64
ಮಡಿಕೆಯೊಳಗೂ ಚಿಮ್ಮುವ ಹೊಂಗಿರಣ

ಬಿಂಬ - 65
ನಾನು ಬಯಲು, ಬಾನು ಅವಳು

May 10, 2011

ಕಾಲ

ಕಾಲ
ಕಟ್ಟಿ, ಕೂಡಿಡಲು
ಕಪ್ಪು ಹಣವಲ್ಲ

ದೇಶ
ದೋಚಿಕೊಳ್ಳಲು
ಯಾರಪ್ಪನ ಸ್ವತ್ತಲ್ಲ

ಕಿಂಚಿತ್
ಇತಿಹಾಸ ಬಲ್ಲ
ಬಲ್ಲಿದನೂ ಊಹಿಸಬಲ್ಲ
ನಾಳೆಗಳ ನಾದ-ವಿನೋದ

ಸಾಗಲಿ, ಸಾಗಲಿ
ಸಡಗರದ ಗರಡಿ
ಸಾಗರವ ದಾಟಿ, ಶಿಖರಗಳ ಮೆಟ್ಟಿ
ಕೊರೆದು, ಜಿಗಿದು, ತೇಲಿ, ಹಾರಿ
ಎಗ್ಗಿಲ್ಲದೆ ಮಬ್ಬುಗತ್ತಲಿನಲ್ಲೂ
ಅಲ್ಲಲ್ಲಿ ಇರುವೆಗಳ ಹಿಂಡು, ಹೆಗ್ಗಣಗಳ ದಂಡು

ಖಂಡಿತ
ಮತ್ತೆ ಬರುವುದು ವಸಂತ
ಮೂಡಣದ ರವಿಯೂ
ಮುಗುಚಿ, ಮುಗ್ಗರಿಸುವಂತೆ...

Apr 15, 2011

ಬಿಂಬ : 56 – 60

ಬಿಂಬ - 56
ಸಾಗರ ದಿಕ್ಕರಿಸಿ
ನಿತ್ಯ ಹರಿವ ನದಿ
ನಾಗರೀಕತೆ

ಬಿಂಬ - 57
ಬಿಡಿಸಲಾಗದ ಕಗ್ಗಂಟು
ಬಿಚ್ಚಿಟ್ಟ ನಂತರ ಬಾಳೆ ಸಿಪ್ಪೆ

ಬಿಂಬ - 58
ಕಣ್ ರೆಪ್ಪೆಗಳಲ್ಲಿ ಕಳೆದುಕೊಂಡದ್ದು
ಮೊಗೆದಷ್ಟೂ ಎಟುಕದ ವಿವರಗಳು

ಬಿಂಬ - 59
ಸುಡುಸುಡು ಬಿಸಿಲಿಗೆ ದಾಹ
ಬತ್ತಿದ ಬಾವಿಗೆ ಬೀಗ

ಬಿಂಬ - 60
ಕಾವ ಕರಗಿಸಿದ ಕಡಲು
ಸುನಾಮಿ ಅದರ ಸಿಡಿಲು

Mar 25, 2011

ಆ ದಿನ

ಬೆತ್ತಲೆ ಮರಕ್ಕೆ
ಮೈದುಂಬಿಸಿಕೊಳ್ಳುವ
ಧಾವಂತ.

ಅಡಿಯಲ್ಲಿ
ರೆಕ್ಕೆ ಮುರಿದ ಹಕ್ಕಿಗೆ
ಕುಂಟ ಬೆಕ್ಕಿನ ಸಾಂತ್ವನ.

ನಲುಗಿದ
ಜಿರಲೆಗೆ ಮುತ್ತಿದ
ಇರುವೆಗಳ ಹಿಂಡು.

ಕಸದ ತೊಟ್ಟಿಗೆ ಎಸೆದ
ಮೂಳೆ, ಮಾಂಸಕ್ಕೆ
ಬೀದಿ ನಾಯಿಗಳ ಕಚ್ಚಾಟ.

ಪಕ್ಕದಲ್ಲಿ
ಕುಡಿದು ಕುಸಿದ
ಆಸಾಮಿಯ ನಿಲ್ಲಿಸಲು
ನೆಂಟರ ಅರೆಸಾಹಸ.

Feb 5, 2011

ಕಾವ್ಯ

ಸುಂದರ ಸಾಲಿನ ಶೇಖರಣೆ;
ಕದ್ದ ಮಾಲಿಗೆ ಒಗ್ಗರಣೆ.
ಪ್ರಭಾವಕ್ಕೆ ಉಕ್ಕಿದ,
ಪ್ರೇರಣೆಯಿಂದ ಹಿಗ್ಗಿದ,
ಭಾರಕ್ಕೆ ಬಾಗಿದ
ಬಾಳೆಗೊನೆ.

ಇಲ್ಲಾ,
ಭಾವದ ಬೆಸುಗೆ,
ಅರೆ ಬೆಂದ ಅನ್ನ,
ಋತು, ಮದ್ಯ, ಮಹಿಳೆ
ಕಾಡು, ಕಡಲು, ಕಿನಾರೆ
ಎಲ್ಲವೂ ಕ್ಲೀಷೆ.

ಅಥವಾ,
ಆತ್ಮವಿಲ್ಲದ
ರಾಮ, ಯೇಸು, ಅಲ್ಲ
ಅಲ್ಲವೇ ಅಲ್ಲ.

ಅದೊಂದು,
ಕಾಲ, ದೇಶವ ದಾಟಿ
ಕದಡಿ, ಕಾಡುವ
ಅಸಹಜ ಸಾವು, ಅಥವಾ...