Showing posts with label ಚಾರ್ಲ್ಸ್ ಬುಕೋವ್ಸ್ಕಿ. Show all posts
Showing posts with label ಚಾರ್ಲ್ಸ್ ಬುಕೋವ್ಸ್ಕಿ. Show all posts

Jun 10, 2009

ಹೌದು ಹೌದು

ದೇವರು ಪ್ರೀತಿಯನ್ನು ಸೃಷ್ಟಿಸಿದಾಗ, ಅವನು ಎಷ್ಟೋ ಜನಕ್ಕೆ ಉಪಯೋಗವಾಗಲಿಲ್ಲ
ದೇವರು ನಾಯಿಗಳನ್ನು ಸೃಷ್ಟಿಸಿದಾಗ, ಅವನು ನಾಯಿಗಳಿಗೆ ಸಹಾಯ ಮಾಡಲಿಲ್ಲ
ದೇವರು ಸಸಿಗಳನ್ನು ಸೃಷ್ಟಿಸಿದಾಗ, ಅದು ಪರವಾಗಿಲ್ಲ ಎನ್ನಬಹುದು
ದೇವರು ದ್ವೇಷ ಸೃಷ್ಟಿಸಿದಾಗ, ನಮ್ಮೆಲ್ಲರಲ್ಲೂ ಅದು ಸದ್ಬಳಕೆಯಾಯಿತು
ದೇವರು ನನ್ನ ಸೃಷ್ಟಿಸಿದಾಗ, ನನ್ನ ಸೃಷ್ಟಿಸಿದ
ದೇವರು ಕೋತಿ ಸೃಷ್ಟಿಸಿದಾಗ, ಅವನು ಮಲಗಿದ್ದ
ಅವನು ಜಿರಾಫೆ ಸೃಷ್ಟಿಸಿದಾಗ, ಕುಡಿದಿದ್ದ
ಅವನು ಮಾದಕ ವಸ್ತುಗಳನ್ನು ಸೃಷ್ಟಿಸಿದಾಗ ಅಮಲಿನಲ್ಲಿದ್ದ
ಮತ್ತವನು ಆತ್ಮಹತ್ಯೆ ಸೃಷ್ಟಿಸಿದಾಗ ಬಹಳ ಬೇಸರದಲ್ಲಿದ್ದ

ಅವನು ಹಾಸಿಗೆಯಲ್ಲಿ ಮಲಗಿ ನಿನ್ನ ಸೃಷ್ಟಿಸಿದಾಗ
ಅವನಿಗೆ ಗೊತ್ತಿತ್ತು ಅವನೇನು ಮಾಡುತ್ತಿದ್ದಾನೆಂದು
ಅವನು ಕುಡಿದು, ಗಾಢ ಅಮಲಿನಲ್ಲಿದ್ದ
ಮತ್ತೆ ಅವನು ಬೆಟ್ಟ, ಸಾಗರ, ಬೆಂಕಿ ಇವೆಲ್ಲವನ್ನು ಒಂದೇ ಸಮಯದಲ್ಲಿ ಸೃಷ್ಟಿಸಿದ

ಅವನು ಕೆಲವು ತಪ್ಪುಗಳನ್ನು ಮಾಡಿದ
ಆದರೆ ಹಾಸಿಗೆಯಲ್ಲಿ ಮಲಗಿ ನಿನ್ನ ಸೃಷ್ಟಿಸಿದಾಗ
ಅವನು ಮತ್ತೊಮ್ಮೆ ಬಂದು, ಅವನ ವಿಶಾಲ ವಿಶ್ವವನ್ನು ಹರಸಿದ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಹಗ್ಗ ಎಳೆಯಿರಿ, ಬೊಂಬೆ ಆಡುತ್ತದೆ

ಪ್ರತಿಯೊಬ್ಬನೂ ತಿಳಿದುಕೊಳ್ಳಬೇಕು
ಎಲ್ಲವೂ ಮಾಯವಾಗಬಹುದೆಂದೂ
ಅತೀ ಶೀಘ್ರದಲ್ಲೇ:
ಆ ಬೆಕ್ಕು, ಮಹಿಳೆ, ಉದ್ಯೋಗ
ಮುಂದಿನ ಟೈರು,
ಹಾಸಿಗೆ, ಗೋಡೆಗಳು, ಕೋಣೆ;
ಹೀಗೇ ನಮಗೆ ಅಗತ್ಯವಿರುವುದೆಲ್ಲವೂ
ಪ್ರೀತಿಯೂ ಸೇರಿ,
ಮರಳಿನ ತಳಪಾಯದಲ್ಲಿ ವಿಶ್ರಮಿಸಬಹುದು –
ಯಾವುದೇ ಕಾರಣಕ್ಕೆ,
ಎಷ್ಟೇ ಅಪ್ರಸ್ತುತವಾದರೂ ಸರಿ:
ಹಾಂಕಾಂಗ್ ನಲ್ಲಿ ಹುಡುಗನ ಸಾವು
ಅಥವಾ ಹಿಮಗಡ್ಡೆಗಳ ಬಿರಗಾಳಿ ಒಮಹಾದಲ್ಲಿ...
ನೀವೇನನ್ನೂ ಮಾಡದಿರುವುದಕ್ಕೆ ನೆಪವಾಗಬಹುದು.
ನಿಮ್ಮ ಚೈನಾವೇರ್ ಎಲ್ಲವೂ ಅಪ್ಪಳಿಸಬಹುದು
ಅಡಿಗೆ ಮನೆಯಲ್ಲಿ, ನಿಮ್ಮ ಕೆಲಸದವಳು ಬರುತ್ತಾಳೆ
ಮತ್ತೆ ನೀವಲ್ಲಿ ನಿಂತಿದ್ದೀರಿ, ಕುಡಿದು,
ಅದರ ಮಧ್ಯದಲ್ಲಿ, ಅವಳು ಕೇಳುತ್ತಾಳೆ:
ಅಯ್ಯೋ ದೇವರೆ, ನಿಮಗೇನಾಯಿತೆಂದು?
ನೀವು ಹೇಳುತ್ತೀರಿ: ನನಗೇನೂ ಗೊತ್ತಿಲ್ಲ,
ನನಗೇನೂ ಗೊತ್ತಿಲ್ಲ...

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಕಲೆ ತರಗತಿಯಲ್ಲಿ ಹಸುಗಳು

ಸುಂದರ ಹವಾಮಾನ
ಸುಂದರ ಮಹಿಳೆಯಂತೆ---
ಇದು ಯಾವಾಗಲೂ ಉದ್ಭವಿಸುವುದಿಲ್ಲ
ಇದು ಜಾಸ್ತಿ ಹೊತ್ತಿರುವುದೂ ಇಲ್ಲ
ಗಂಡಸರೆ
ಹೆಚ್ಚು ಸ್ಥಿರವಾಗಿರುತ್ತಾರೆ:
ಅವನು ಕೆಟ್ಟವನಾಗಿದ್ದರೆ
ಅವನು ಹಾಗೇ ಮುಂದುವರೆಯುವ
ಸಾಧ್ಯತೆ ಹೆಚ್ಚಾಗಿರುತ್ತದೆ,
ಅವನು ಒಳ್ಳೆಯವನಾಗಿದ್ದರೆ
ಹಾಗೇ ಮುಂದುವರೆಯಬಹುದು
ಅದರೆ, ಹೆಣ್ಣು
ಬದಲಾಗುತ್ತಿರುತ್ತಾಳೆ
ಮಕ್ಕಳಿಂದ,
ವಯಸ್ಸಿಂದ,
ಆಹಾರ ವಿಧಾನದಿಂದ,
ಮಾತುಗಳಿಂದ,
ಸಂಭೋಗದಿಂದ,
ಚಂದ್ರನಿದ್ದಾಗ,
ಅವನಿಲ್ಲದಿದ್ದಾಗ, ಅಥವಾ
ಸೂರ್ಯನಿರುವಾಗ,
ಅಥವಾ ಮಧುರ ಕ್ಷಣಗಳಲ್ಲಿ.
ಹೆಣ್ಣನ್ನು ಚೆನ್ನಾಗಿ ಪೋಷಿಸಬೇಕು
ಜೀವಂತವಾಗಿರಲು
ಪ್ರೀತಿಯಿಂದ.
ಎಲ್ಲಿ ಗಂಡಸು
ಬಲಶಾಲಿಯಾಗಬಹುದೊ
ಅವನನ್ನು
ದ್ವೇಷಿಸುವುದರದಿಂದ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಮಳೆಯಿರಲಿ, ಬಿಸಿಲಿರಲಿ

ದಢೂತಿ ಹಕ್ಕಿಗಳು ಪ್ರಾಣಿ ಸಂಗ್ರಹಾಲಯದಲ್ಲಿ
( ಆ ಮೂರೂ ಹಕ್ಕಿಗಳು )
ಕುಳಿತಿವೆ ಮೌನವಾಗಿ
ಅವುಗಳ ಪಂಜರದ ಮರದಲ್ಲಿ
ಕೆಳಗೆ
ನೆಲದ ಮೇಲೆ
ಕೊಳೆತ ಮಾಂಸದ ತುಂಡುಗಳು
ಹಕ್ಕಿಗಳು ಗಂಟಲವರೆಗೆ ಗಡತ್ತಾಗಿ ಮುಕ್ಕಿವೆ.
ನಮ್ಮ ತೆರಿಗೆಗಳು ಅವುಗಳನ್ನು ಚೆನ್ನಾಗಿ
ಪೋಷಿಸುತ್ತಿವೆ.

ನಾವು ಬಂದಾಗ ಮುಂದಿನ
ಪಂಜರದೆಡೆಗೆ
ಅದರೊಳಗೆ ಒಬ್ಬ ವ್ಯಕ್ತಿಯಿದ್ದ
ನೆಲದಲ್ಲಿ ಕುಳಿತುಕೊಂಡು
ತಿನ್ನುತ್ತಿದ್ದ
ಅವನು ಹಾಕಿದನ್ನೇ.
ನಾನು ಅವನನ್ನು ಗುರುತಿಸಿದೆ
ನಮ್ಮ ಪುರಾತನ ಪೋಸ್ಟ್ಮೆನ್ ಎಂದು.
ಅವನ ನೆಚ್ಚಿನ ಹಾರೈಕೆ
ಮೊದಲಿನಿಂದಲೂ:
“ನಿಮ್ಮ ದಿನ ಶುಭಕರವಾಗಿರಲಿ.”

ಆ ದಿನ ಹಾಗೇ ಇತ್ತು.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಬರವಣಿಗೆ

ಎಷ್ಟೋ ಸಲ ಇದೊಂದೇ
ಒಂದು
ನಿನ್ನ ಹಾಗು ಅಸಾಧ್ಯತೆಯ
ನಡುವೆ ಇರುವುದು.
ಯಾವ ಮದ್ಯ,
ಯಾವ ಮಹಿಳೆಯ ಪ್ರೀತಿ,,
ಯಾವ ಸಂಪತ್ತೂ,
ಇದಕ್ಕೆ ಸರಿಸಮವಲ್ಲ

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ತಪ್ಪೊಪ್ಪಿಗೆ

ಕಾಯುತ್ತಿದ್ದೇನೆ ಸಾವಿಗಾಗಿ
ಆ ಬೆಕ್ಕೆನಂತೆ
ಅದು ಜಿಗಿಯುತ್ತಲ್ಲಾ
ಹಾಸಿಗೆ ಮೇಲೆ

ನಾನು ಬಹಳ ದುಃಖತಪ್ತನಾಗಿದ್ದೇನೆ
ಹೆಂಡತಿಗಾಗಿ

ಅವಳಿದನ್ನು ನೋಡುತ್ತಾಳೆ
ಬಿಗಿಯಾದ
ಬಿಳಿ
ದೇಹ
ಒಮ್ಮೆ ಕದಲಿಸುತ್ತಾಳೆ, ನಂತರ
ಇನ್ನೊಂದು ಸಲ
ಕದಲಿಸಬಹುದು

“ಶೇಖರ್”

ಶೇಖರ್ ಉತ್ತರ
ನೀಡಲಿಲ್ಲ.

ನನ್ನ ಸಾವಿನಿಂದಾಗಿ
ಚಿಂತಿಸುತ್ತಿಲ್ಲ, ನನ್ನ ಹೆಂಡತಿಗಾಗಿ,
ತೊರೆದಿದ್ದಾಳಲ್ಲಾ
ಖಾಲಿಯಿದ್ದ
ಈ ಹೊರೆಯನ್ನು.

ಅವಳಿಗೆ ಗೊತ್ತಾಗಬೇಕೆಂದು
ಬಯಸುವೆ
ಎಲ್ಲಾ ರಾತ್ರಿಗಳಲ್ಲಿ
ಅವಳ ಪಕ್ಕದಲ್ಲೇ
ಮಲಗಿದ್ದರೂ

ಕ್ಷುಲ್ಲಕ
ವಾದ-ವಿವಾದಗಳೂ
ಸಹ ಅಮೋಘವಾದ
ಕ್ಷಣಗಳಾಗಿದ್ದವು

ಆ ಕಠಿಣವಾದ
ಮಾತುಗಳು
ನನಗ್ಯಾವಾಗಲೂ
ಹೇಳಲು
ಭಯವಾಗುತ್ತಿತ್ತಲ್ಲಾ
ಅವುಗಳನ್ನು ಈಗ
ನಿರಾಳವಾಗಿ ಹೇಳಬಹುದು:

ನಾ ನಿನ್ನ ಪ್ರೀತಿಸುವೆ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ನೀಲಿಹಕ್ಕಿ

ನನ್ನ ಹೃದಯದಲ್ಲೊಂದು ನೀಲಿಹಕ್ಕಿಯಿದೆ
ಅದು ಹೊರ ಬಂದು ಸ್ವಚ್ಛಂದ ಹಾರಲು ಬಯಸುತ್ತದೆ
ಆದರೆ ನಾನವನಿಗೆ ಬಹಳ ಕಷ್ಟ ಕೊಡುತ್ತೇನೆ
ಹೇಳುತ್ತನೆ, ನೀನಲ್ಲೇ ಬಿದ್ದಿರು, ನಾನೆಂದಿಗೂ
ನಿನ್ನನ್ನು ಬೇರೆ ಯಾರೂ ನೋಡಲು
ಬಿಡುವುದಿಲ್ಲ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಒಳ್ಳೆಯವರಾಗಿರಿ

ನಮಗ್ಯಾವಾಗಲೂ ಹೇಳುತ್ತಾರೆ
ಬೇರೊಬ್ಬರ ಅಭಿಪ್ರಾಯಗಳನ್ನು
ಅರ್ಥಮಾಡಿ ಕೊಳ್ಳಬೇಕೆಂದು
ಅದು ಎಷ್ಟೇ ಹಳೆಯದಾಗಿ,
ಅಪ್ರಸ್ತುತವಾಗಿ, ತಿಳಿಗೇಡಿತನದ್ದಾಗಿ,
ಅಥವಾ ತೀವ್ರ ವಿರೋಧಿಸುವಂಥದ್ದಾಗಿದ್ದರೂ
ಸರಿಯೆ .

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಕವನಗಳ ಹಾದಿಯಲ್ಲಿ

ಕವನಗಳು ಸಾವಿರಗಳ ಗಡಿ ದಾಟುತ್ತಿರುವಂತೆಯೇ
ನಿಮಗನ್ನಿಸುತ್ತದೆ, ನೀವು ಸೃಷ್ಟಿಸಿದ್ದು
ಅತ್ಯಲ್ಪ ಎಂದು.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

Jun 9, 2009

ಚಂದ್ರ, ತಾರೆಗಳು ಮತ್ತು ಜಗತ್ತು

ದೀರ್ಘವಾಗಿ ನಡೆಯುವುದು ರಾತ್ರಿವೇಳೆಯಲ್ಲಿ---
ಬಹಳ ಒಳ್ಳೆಯದು ಜೀವಕ್ಕೆ:
ಕಿಟಕಿಗಳ ಮೂಲಕ ಅಸ್ಪಷ್ಟವಾಗಿ ಕಾಣುವ
ಆಯಾಸಗೊಂಡ ಗೃಹಿಣಿಯರು
ಜಗಳ ನಿಲ್ಲಿಸುವ ಪ್ರಯತ್ನವನ್ನು
ತಮ್ಮತಮ್ಮ ಪಾನಮತ್ತ ಗಂಡಂದಿರೊಂದಿಗೆ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಎಲ್ಲರೊಂದಿಗೂ ಒಬ್ಬಂಟಿ

ಮಾಂಸಖಂಡಗಳು ಎಲುಬುಗಳನ್ನಾವರಿಸುತ್ತವೆ
ಮೆದುಲನ್ನು
ಅಲ್ಲಿಡುತ್ತಾರೆ ಮತ್ತೆ
ಕೆಲವೊಮ್ಮೆ ಆತ್ಮವನ್ನು,
ಹೆಂಗಸರು
ಗೋಡೆಗಳಿಗೆ ಗಾಜಿನ ಗ್ಲಾಸುಗಳನ್ನೊಡೆಯುತ್ತಾರೆ
ಮತ್ತೆ ಗಂಡಸರು ಕುಡಿಯುತ್ತಾರೆ
ಹೇರಳವಾಗಿ
ಯಾರೂ ಕಾಣುವುದಿಲ್ಲ
ಅವನನ್ನು
ಆದರೂ
ನೋಡಲು ಹಾತೊರೆಯುತ್ತಾರೆ
ಮೇಲೆ, ಆಚೆ, ಅತ್ತಿತ್ತ ಒದ್ದಾಡುತ್ತಾ
ಹಾಸಿಗೆಯಿಂದ.
ಮಾಂಸ ಸುತ್ತುವರೆದಿದೆ
ಎಲುಬುಗಳನ್ನು, ಮಾಂಸವು
ಮಾಂಸಕಿಂತಲೂ ಮಿಗಿಲಾದುದಕ್ಕಾಗಿ
ಹುಡುಕುತ್ತಿರುತ್ತದೆ.

ಅಲ್ಲಿ ಅವಕಾಶವಿಲ್ಲ
ಖಂಡಿತ:
ನಾವೆಲ್ಲರೂ ಸೆರೆಯಾಗಿದ್ದೇವೆ
ಒಂದೇ
ವಿಧಿಯಲ್ಲಿ.

ಯಾರೂ ಎಂದಿಗೂ ಕಾಣಲಾರರು
ಅವನನ್ನು.

ನಗರದ ವ್ಯಸನಗಳು ತುಂಬುತ್ತವೆ
ತ್ಯಾಜ್ಯ ಬಯಲುಗಳು ತುಂಬುತ್ತವೆ
ಹುಚ್ಚಾಸ್ಪತ್ರೆಗಳು ತುಂಬುತ್ತವೆ
ವೈದ್ಯಶಾಲೆಗಳು ತುಂಬುತ್ತವೆ
ಸ್ಮಶಾನಗಳು ತುಂಬುತ್ತವೆ

ಬೇರೆ ಯಾವುದೂ
ತುಂಬುವುದಿಲ್ಲ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ