Showing posts with label ಪ್ಯಾಬ್ಲೊ ನೆರುದ. Show all posts
Showing posts with label ಪ್ಯಾಬ್ಲೊ ನೆರುದ. Show all posts

Mar 6, 2012

ನಿನ್ನ ನಗು



ಊಟ ತೆಗೆದುಕೊ, ನಿನಗಿಷ್ಟವಾದರೆ,
ಗಾಳಿಯೂ ಸಹ, ಆದರೆ ನನ್ನಿಂದ
ನಿನ್ನ ನಗು ಕಸಿದುಕೊಳ್ಳಬೇಡ.

ಗುಲಾಬಿ ತೆಗೆದುಕೊಳ್ಳಬೇಡ
ನೀನು ಕಿತ್ತುಕೊಟ್ಟ ಶೂಲದ ಹೂ
ಥಟ್ಟನೆ ನೀರು ಖುಷಿಗೆ ಸ್ಪೋಟಿಸಿದಾಗ,
ಚಣದಿ ಬೆಳ್ಳಿಯ ಅಲೆ ನಿನ್ನಲ್ಲಿ ಹುಟ್ಟುತ್ತವೆ.

ನನ್ನ ಕಠಿಣ ಹೋರಾಟದಿಂದ ದಣಿದು
ಸೊರಗಿದ ಕಣ್ಣುಗಳೊಂದಿಗೆ ಮರಳಿದಾಗ,
ಒವೊಮ್ಮೆ ಬದಲಾಗದ ಜಗ ಕಂಡಿರುವೆ
ಆದರೆ ನಿನ್ನ ನಗುವಿನ ಆಗಮನವಾದಾಗ,
ಅದು ನನ್ನ ಹುಡುಕುತ್ತಾ ಆಗಸದೆತ್ತರಕ್ಕೆ ಹಾರಿ,
ನನ್ನ ಬದುಕಿಗೆ ಎಲ್ಲಾ ಬಾಗಿಲು ತೆರೆಯುತ್ತದೆ.

ನನ್ನ ಪ್ರಿಯೆ, ಕಠೋರಸ್ಥಿತಿಯಲ್ಲೂ ನಿನ್ನ
ನಗೆ ತೆರೆಯುತ್ತೆ, ಮತ್ತೆ ಕೂಡಲೇ ನೀ ಕಂಡರೆ
ನನ್ನ ರಕ್ತ ರಸ್ತೆ ಕಲ್ಲುಗಳಿಗೆ ರಾಚಿರುವುದನ್ನು,
ನಗು, ನಗುತ್ತಲೇ ಇರು, ಏಕೆಂದರೆ
ನಿನ್ನ ನಗುವೇ ನನ್ನ ಕೈಗಳಿಗೆ
ಆಗ ಸಿಗುವ ಹೊಸ ಖಡ್ಗ.

ಸಾಗರದಂಚಿಗೆ ಶರತ್ಕಾಲಕ್ಕೆ,
ನಿನ್ನ ನಗು ನೊರೆಯುಕ್ಕಿದ ಜಲಪಾತ ಸೃಷ್ಟಿಸಬೇಕು
ಮತ್ತೆ ವಸಂತದಲ್ಲಿ, ಪ್ರಿಯೆ,
ನಿನ್ನ ನಗು ನಾನು ಇಷ್ಟಪಟ್ಟು ಕಾಯುತ್ತಿದ್ದ
ಹೂವಿನ ಹಾಗೆ, ತಿಳಿನೀಲಿ ಹೂ, ನನ್ನ ಮಾರ್ದನಿಸುವ ದೇಶದ ಗುಲಾಬಿ.

ರಾತ್ರಿ ನಗು, ದಿನದಲ್ಲಿ ನಗು,
ಚಂದ್ರನ ನೋಡಿ ನಗು,
ಆ ದ್ವೀಪದ ತಿರುವು ರಸ್ತೆಗಳ ನೋಡಿ ನಗು,
ನಿನ್ನ ಬಹುವಾಗಿ ಪ್ರೀತಿಸುವ,
ಈ ಕೊಳಕು ಹುಡುಗನತ್ತ ನೋಡಿ ನಗು,
ಆದರೆ ನಾನು ಕಣ್ತೆರೆದು ಮುಚ್ಚಿದಾಗ,
ನನ್ನ ಹೆಜ್ಜೆಗಳು ಹೋಗುವಾಗ, ಮರಳಿದಾಗ
ನನಗೆ ಊಟ, ಗಾಳಿ, ಬೆಳಕು, ವಸಂತ ಯಾವುದೂ ಕೊಡಬೇಡ,
ಆದರೆ ನಿನ್ನ ನಗುವಿಂದ ಮಾತ್ರ ದೂರವಿಡಬೇಡ,
ನಿನ್ನ ನಗುವಿಲ್ಲದಿದ್ದರೆ, ನಾನು ಖಂಡಿತ ಬದುಕಿರಲಾರೆ.

ಮೂಲಕವಿ: ಪ್ಯಾಬ್ಲೊ ನೆರುಡ
ದೇಶ:  ಚಿಲಿ
1971 ಸಾಲಿನ ನೋಬೆಲ್ ಪ್ರಶಸ್ತಿ ವಿಜೇತರು


Your Laughter

Take bread away from me, if you wish,
take air away, but
do not take from me your laughter.

Do not take away the rose,
the lance flower that you pluck,
the water that suddenly
bursts forth in joy,
the sudden wave
of silver born in you.

My struggle is harsh and I come back
with eyes tired
at times from having seen
the unchanging earth,
but when your laughter enters
it rises to the sky seeking me
and it opens for me all
the doors of life.

My love, in the darkest
hour your laughter
opens, and if suddenly
you see my blood staining
the stones of the street,
laugh, because your laughter
will be for my hands
like a fresh sword.

Next to the sea in the autumn,
your laughter must raise
its foamy cascade,
and in the spring, love,
I want your laughter like
the flower I was waiting for,
the blue flower, the rose
of my echoing country.

Laugh at the night,
at the day, at the moon,
laugh at the twisted
streets of the island,
laugh at this clumsy
boy who loves you,
but when I open
my eyes and close them,
when my steps go,
when my steps return,
deny me bread, air,
light, spring,
but never your laughter
for I would die.

Pablo Neruda
Chile

May 31, 2009

ನೀ ನನ್ನ ಮರೆತರೆ

ನಿನಗೆ ಗೊತ್ತಿರಲೆಂದು ಬಯಸುವೆ
ಈ ವಿಷಯ.

ನಿನಗೆ ಗೊತ್ತಿದೆ ಅದು ಹೇಗೆಂದು:
ನಾನೇನಾದರು ನೋಡಿದರೆ
ಪಾರದರ್ಶಕ ಗಾಜಿನಂತೆ ಹೊಳೆವ ಚಂದ್ರನನ್ನು, ನನ್ನ ಕಿಟಕಿಯ ಹತ್ತಿರವಿರುವ
ದೀರ್ಘ ಶಿಶಿರದ ಕೊನೆಗೆ ಕೆಂಪಾಗಿರುವ ರೆಂಬೆಯನ್ನು,
ನಾನೇನಾದರು ಮುಟ್ಟಿದರೆ
ಬೆಂಕಿಯ ಹತ್ತಿರ
ಗ್ರಹಿಸಲಾಗದ ಬೂದಿಯನ್ನು
ಅಥವಾ ಬಿರುಕು ಬಿಟ್ಟ ಹೆಮ್ಮರದ ಕಾಂಡವನ್ನು,
ಎಲ್ಲವೂ ನನ್ನನ್ನು ಕೊಂಡೊಯ್ಯುತ್ತವೆ ನಿನ್ನಲ್ಲಿಗೆ,
ಸುಗಂಧ ದ್ರವ್ಯಗಳು, ಬೆಳಕು, ಲೋಹಗಳು,
ಆ ಪುಟ್ಟ ನಾವೆಗಳು
ತೇಲಿ ಬರುತ್ತಿವೆ
ನಿನ್ನ ಸಣ್ಣ ದ್ವೀಪಗಳೆಡೆಗೆ, ಅಲ್ಲಿ ಬಂದು ನನಗಾಗಿ ಕಾಯುತ್ತಿರುತ್ತವೆ.

ಇರಲಿ, ಈಗ,
ನೀನೇನಾದರೂ ಸ್ವಲ್ಪ ಸ್ವಲ್ಪವೇ ನನ್ನ ಪ್ರೀತಿಸುವುದನ್ನು ನಿಲ್ಲಿಸಿದರೆ
ನಾನೂ ಸಹ ಸ್ವಲ್ಪ ಸ್ವಲ್ಪವೇ ನಿನ್ನ ಪ್ರೀತಿಸುವುದನ್ನು ನಿಲ್ಲಿಸುತ್ತೇನೆ.

ಒಮ್ಮೆಗೇ ನೀನೇನಾದರೂ
ನನ್ನ ಮರೆತು ಬಿಟ್ಟರೆ
ಮತ್ತೆ ನನಗಾಗಿ ಹುಡುಕಾಡುವ ಅಗತ್ಯವಿಲ್ಲ
ಏಕೆಂದರೆ ನಾನಾಗಲೇ ನಿನ್ನನ್ನು ಮರೆತು ಬಿಟ್ಟಿರುತ್ತೇನೆ.

ಇದು ಬಹಳ ಅತಿಯಾಯ್ತು ಹಾಗೇ ಹುಚ್ಚೆಂದು ನೀನು ಭಾವಿಸಿದರೆ,
ಗಾಳಿಯಲ್ಲಿ ತೂಗಾಡುತ್ತಿರುವ ಬ್ಯಾನರುಗಳು
ನನ್ನ ಬದುಕಿನ ಮುಖಾಂತರ ನುಸುಳಿ ಮುನ್ನುಗ್ಗುತ್ತಿವೆ,
ಮತ್ತೆ ನೀನೇ ನಿರ್ಧರಿಸು
ನನ್ನ ದಡಕ್ಕೆ ತಂದು ಬಿಡಲು
ಆ ಹೃದಯದಲ್ಲೇ ನಾನು ಬೇರು ಬಿಟ್ಟಿದ್ದೇನೆ,
ನೆನಪಿರಲಿ
ಅಂದು ಆ ದಿನದಂದು,
ಆ ಘಳಿಗೆಯಲ್ಲಿ,
ನನ್ನ ತೋಳುಗಳನ್ನೆತ್ತಿ
ಮತ್ತು ನನ್ನ ಬೇರುಗಳನ್ನು ಮುಕ್ತಗೊಳಿಸಿ
ಮತ್ತೊಂದು ಪ್ರದೇಶಕ್ಕಾಗಿ ಬೇಡಿಕೊಂಡಾಗ.

ಆದರೆ
ಒಂದು ವೇಳೆ ಪ್ರತೀ ದಿನವೂ,
ಪ್ರತೀ ಘಳಿಗೆಯೂ,
ನಿನಗನ್ನಸಿದರೆ ನೀನು ನನಗಾಗಿಯೇ ಹುಟ್ಟಿ ಬಂದಿರುವುದೆಂದು
ಯಥೇಶ್ಚವಾದ ಕೋಮಲ ಸೊಗಸಿನಿಂದ,
ಪ್ರತಿ ದಿನ ಹೂವೊಂದೇನಾದರೂ
ನಿನ್ನ ಕೆಂದುಟಿಯೆಡೆಗೆ ಏರಿ ಬಂದು ನನಗಾಗಿ ಕೇಳಿದರೆ,
ಹಾ.. ನನ್ನ ಪ್ರೀತಿಯೆ, ಹಾ... ನನ್ನ ಸರ್ವಸ್ವವೆ,
ನನ್ನಲ್ಲಿ ಮತ್ತೆ ಆ ಎಲ್ಲಾ ಕಿಚ್ಚು ಮರುಕಳಿಸುತ್ತದೆ,
ನನ್ನೊಳಗೆ ಯಾವುದೂ ನಾಶವಾಗಲಿಲ್ಲ ಅಥವಾ ಮರೆತು ಹೋಗಲಿಲ್ಲ,
ನನ್ನ ಪ್ರೀತಿಯು ನಿನ್ನ ಪ್ರೀತಿಯಿಂದಲೇ ಜೀವಂತವಾಗಿದೆ, ನನ್ನ ಜೀವವೇ, ನನ್ನ ಆತ್ಮವೇ,
ಮತ್ತೆ ನಿನ್ನ ಕೊನೆಯುಸಿರು ಇರುವವರೆಗೂ ಅದು ನಿನ್ನ ತೋಳುಗಳಲ್ಲಿಯೇ ನೆಲೆಸಿರುತ್ತದೆ,
ನನ್ನ ತೋಳುಗಳನ್ನು ಬಿಡದೆ.

ಮೂಲ ಕವಿ: ಪ್ಯಾಬ್ಲೊ ನೆರುದ
ಕನ್ನಡಕ್ಕೆ : ಚಂದಿನ

Jan 10, 2009

ಪ್ರಶ್ನೆ

ಪ್ರೀತಿ, ಒಂದು ಪ್ರಶ್ನೆ ನನ್ನ
ಸಂಪೂರ್ಣ ನಾಶಮಾಡಿತು.

ನಿನ್ನಲ್ಲಿಗೆ ಮತ್ತೆ ಮರಳಿದ್ದೇನೆ,
ಅನಿಶ್ಚಿತತೆಯಿಂದ ಪಾರಾಗಿ.

ನನಗೆ ನೀನು ಬೇಕೇಬೇಕು,
ಆ ಖಡ್ಗ, ಅಥವಾ ಆ ದಾರಿಯಂತೆ.

ಆದರೆ ನೀನು,
ಆ ಕಹಿ ನೆರಳನ್ನು ಒತ್ತಾಯವಾಗಿ
ಬೇಕೆನ್ನುವೆ, ನನಗೆ ಇಷ್ಟವಿಲ್ಲದಿದ್ದರೂ.

ಓ ಪ್ರಿಯೆ,
ಅರ್ಥ ಮಾಡಿಕೊ,
ನಿನ್ನ ಸಂಪೂರ್ಣವಾಗಿ ಪ್ರೀತಿಸುವೆ,
ಕಣ್ಣಿಂದ ಕಾಲಿನವರೆಗೂ, ತುದಿ ಬೆರಳಿನವರೆಗೂ,
ಒಳಗೂ,
ನಿನ್ನಲ್ಲಡಗಿರುವ ಎಲ್ಲ ಹೊಳಪನ್ನೂ.

ಸಖಿ,
ನಾನೇ ನಿನ್ನ ಬಾಗಿಲನ್ನು ಬಡಿಯುವವನು,
ಮತ್ತೊಂದು ಸಲ ಕಿಟಕಿಯಾಚೆಗೆ ನಿಂತವನು,
ಅದು ಖಂಡಿತ ಭೂತವಲ್ಲ.
ನಿನ್ನ ಬಾಗಿಲು ತಟ್ಟಿ,
ನಿನ್ನ ಬಾಳ ಪ್ರವೇಶ ಮಾಡಿ,
ನಿನ್ನ ಹೃದಯದಲ್ಲಿ ನೆಲೆಸುವೆ,
ನಿನಗೆ ಸಹಿಸಲಾಗದಷ್ಟು.

ನೀನು ಒಂದೊಂದೇ ಬಾಗಿಲನ್ನು ತೆರೆಯುತ್ತಿರಬೇಕು,
ನನ್ನ ಸೂಚನೆಗಳ, ಯಥಾವತ್ ಪಾಲಿಸಬೇಕು,
ನಿನ್ನ ಕಣ್ಣುಗಳನ್ನು ತೆರೆದಿಡಬೇಕು, ಏಕೆಂದರೆ
ಅಲ್ಲಿಯೂ ಸಹ ನಾನು ಹುಡುಕಾಡಬೇಕು,
ನೀನು ನನ್ನ ಬಾರದ ನಡೆಯನ್ನು,
ನನಗಾಗಿ ಕಾದಿದ್ದ ಎಲ್ಲ ಮುಚ್ಚಿದ ದಾರಿಗಳು,
ತೆರೆದುಕೊಳ್ಳುವುದನ್ನು ನೋಡಲೇ ಬೇಕು.

ಭಯಪಡಬೇಡ,
ನಾನು ನಿನ್ನವನು,
ಆದರೆ,
ನಾನು ಪಯಣಿಗ ಅಥವಾ ಬಿಕ್ಷುಕನಲ್ಲ,
ನಾನು ನಿನ್ನ ಮಾರ್ಗದರ್ಶಕ,
ನೀನು ಕಾಯುತ್ತಿದ್ದೆಯಲ್ಲಾ ಅವನು.
ನಾನು ಈಗ ನಿನ್ನ ಬಾಳ ಪ್ರವೇಶಿಸುವೆ,
ಮತ್ತೆಂದೂ ಬಿಟ್ಟು ಹೋಗದಂತೆ,
ಪ್ರೀತಿ, ಪ್ರೀತಿ, ಪ್ರೀತಿಯಿಂದ
ಅಲ್ಲೇ ನೆಲೆಸಲು.

(ಮೂಲ ಕವಿ:ಪ್ಯಾಬ್ಲೊ ನೆರುದ)

ನಿನ್ನ ನಗು

ನನಗೆ ಹಸಿವಾದಾಗ ಈ ಊಟದಿಂದ ದೂರವಿಡು, ಅದು ನಿನಗೆ ಇಷ್ಟವಾದರೆ,
ನಾನು ಉಸಿರಾಡುವ ಗಾಳಿಯನ್ನೂ ಸಹ ತೆಗೆದುಕೊಂಡು ಹೋಗು,
ಆದರೆ,
ಆ ನಿನ್ನ ಮಾದಕ ನಗುವನ್ನು ಮಾತ್ರ,
ನನ್ನಿಂದ ದೂರಮಾಡಬೇಡ.

ನನ್ನನು, ಆ ಕೆಂಗುಲಾಬಿಯಿಂದ ದೂರವಿಡಬೇಡ ದಯವಿಟ್ಟು,
ಆ ಸುಂದರ ಹೂವನ್ನು ನೀನೇ ಕಿತ್ತು ಕೊಟ್ಟಿದ್ದೆ ನೆನಪಿರಲಿ,
ಇದ್ದಕಿದ್ದಂತೆ ಆ ನೀರು ಖುಷಿಯಿಂದ ಕುಣಿದಾಡುತ್ತದೆ,
ಸುಂದರ ಪರಿಮಳ ಆಗ ನಿನ್ನಿಂದ ಹೊರ ಹೊಮ್ಮುತ್ತದೆ.

ನಾನು ತಂಬ ಕಷ್ಟದ ಕೆಲಸ ಮುಗಿಸಿ ಮನೆಗೆ ಮರಳಿದಾಗ,
ನನ್ನ ಕಣ್ಣುಗಳು ಸೋತಿರುತ್ತವೆ,
ಕೆಲವು ಸಲ ಏಕತಾನತೆಯಿಂದ ಬೇಸರಗೊಂಡಿರುತ್ತೇನೆ,
ಆದರೆ ನೀನು ನಗುವಾಗ, ಅದು ಆಗಸದೆತ್ತರಕ್ಕೆ ಹಾರಿ,
ನನ್ನನ್ನೇ ಹುಡುಕುತ್ತಾ ಬರುತ್ತದೆ,
ಅದು ನನಗೆ ಸಂತಸದ ಎಲ್ಲಾ ಬಾಗಿಲುಗಳನ್ನು
ತೆರೆಯುತ್ತದೆ.

ನನ್ನ ಪ್ರೀತಿಯೇ, ಕಗ್ಗತ್ತಲಲ್ಲಿ ನೀ
ನಗು ಬೀರಿದಾಗ, ತಕ್ಷಣವೇ ಕಾಣುವೆ
ನನ್ನ ರಕ್ತ ರಸ್ತೆಯ ಕಲ್ಲುಗಳಿಗೆ ರಾಚಿರುವುದನ್ನು,
ನಗು, ನಗುತ್ತಲೇ ಇರು, ಏಕೆಂದರೆ
ನಿನ್ನ ನಗುವೇ, ನನ್ನ ಕೈಗಳಿಗೆ
ಸಿಕ್ಕ ಹೊಸ ಖಡ್ಗ.

ಸಾಗರದಂಚಿಗೆ ಆ ಶ್ರಾವಣದಲ್ಲಿ,
ನಿನ್ನ ನಗು ಮಾದಕತೆಯಿಂದ ಹುರಿದುಂಬಿಸುವುದು,
ಮತ್ತೆ, ವಸಂತದಲ್ಲಿ, ನನ್ನ ಸಖಿ,
ನಿನ್ನ ನಗು ನಾನಿಷ್ಟಪಟ್ಟು ಕಾಯುತ್ತಿದ್ದ
ಆ ಮೋಹಕ ಹೂವಿನಂತಿಹುದು, ತಿಳಿನೀಲಿ ಗುಲಾಬಿ
ತೂಗಾಡಿದಾಗ, ಸಂಗೀತದಂತೆ ಮನ ಸೆಳೆವುದು.

ರಾತ್ರಿಯಲ್ಲಿ ನಗು, ದಿನದಲ್ಲಿ ನಗು,
ಚಂದ್ರನ ಕಾಣುತ್ತಾ ನಗು,
ಸುಳಿದಾಡುವ ರಸ್ತೆಗಳತ್ತ ನೋಡುತ್ತಾ ನಗು,
ನಿನ್ನ ತೀವ್ರವಾಗಿ ಪ್ರೀತಿಸುವ,
ಈ ಕೊಳಕು ಹುಡುಗನತ್ತ ನೋಡಿ ನಗು,
ಆದರೆ ನಾನು ಕಣ್ತೆರೆದು ಮುಚ್ಚಿದಾಗ,
ನಾನು ಎಲ್ಲೋ ನಡೆದು ಹೋದಾಗ,
ಮತ್ತೆ ದಣಿದು ಮರಳಿದಾಗ,
ನನಗೆ ಊಟ, ಗಾಳಿ, ನೀರು,
ಬೆಳಕು, ನೆರಳು ಯಾವುದೂ ಬೇಡ,
ಆದರೆ ನಿನ್ನ ನಗುವಿರದಿದ್ದರೆ,
ನಾನು ಖಂಡಿತ ಬದುಕಿರಲಾರೆ.


(ಮೂಲ ಕವಿ: ಪ್ಯಾಬ್ಲೊ ನೆರುದ)

Jan 9, 2009

ವಿರಹ ಗೀತೆ

ತೀವ್ರ ನೋವಿನ ಸಾಲುಗಳ ನಾ ಬರೆಯಬಲ್ಲೆ ಈ ರಾತ್ರಿ

ಈ ರೀತಿ: ಈ ರಾತ್ರಿ ಬಿರುಕುಬಿಟ್ಟಿದೆ,
ನಡುಗುತ್ತಿದೆ ಆ ನೀಲಾಕಾಶ, ಆ ನಕ್ಷತ್ರಗಳೆಲ್ಲೋ ದೂರದಲ್ಲಿ.

ಈ ರಾತ್ರಿಯ ತಂಗಾಳಿ ಸುತ್ತಿ ಸುತ್ತಿ ಹಾಡುತ್ತಿದೆ ಯಾವುದೋ ರಾಗದಲ್ಲಿ.
ತೀವ್ರ ನೋವಿನ ಸಾಲುಗಳ ನಾ ಬರೆಯಬಲ್ಲೆ ಈ ರಾತ್ರಿ
ನಾ ಅವಳ ಪ್ರೀತಿಸಿದೆ, ಅವಳೂ ಸಹ ಆಗಾಗ ನನ್ನ ಪ್ರೀತಿಸಿದಳು.

ಈ ತಂಪು ರಾತ್ರಿಗಳಲ್ಲಿ ನಾ ಅವಳ ಆಲಂಗಿಸಿ,
ತೃಪ್ತಿಯಾಗುವವರೆಗೂ ಮತ್ತಿನ ಮಳೆ ಸುರಿಸುತ್ತಿದ್ದೆ,
ಆ ವಿಶಾಲ ಆಗಸದಡಿಯಲ್ಲಿ.

ಅವಳು ನನ್ನ ಪ್ರೀತಿಸಿದಳು, ನಾನು ಸಹ ಆಗಾಗ ಅವಳ ಪ್ರೀತಿಸಿದೆ
ಅದ್ಭುತ ವಿಶಾಲಾಕ್ಷಿಯುಳ್ಳವಳ ನಾ ಹೇಗೆತಾನೆ ಪ್ರೀತಿಸದಿರಲು ಸಾಧ್ಯ

ತೀವ್ರ ನೋವಿನ ಸಾಲುಗಳ ನಾ ಬರೆಯಬಲ್ಲೆ ಈ ರಾತ್ರಿ
ಅವಳಿಲ್ಲದಂತೆ, ಅವಳ ಕಳೆದುಕೊಂಡಂತೆ ಯೋಚಿಸುವಾಗ.

ಕೇಳಿಸಿಕೊ, ಈ ದೀರ್ಘ ರಾತ್ರಿ, ಇನ್ನೂ ದೂರವಾಗಿದೆ ಅವಳಿಲ್ಲದೆ
ಅಗಲಿಕೆಯ ಸಾಲುಗಳು ಬೀಳುತ್ತಿವೆ ಹೃದಯದ ಮೇಲೆ,
ಮಂಜು ಸುರಿಯುವಂತೆ ಆ ಹಸಿರು ಹುಲ್ಲಿನ ಮೇಲೆ

ಅವಳು ಜೊತೆಗಿರದಿದ್ದರೇನಂತೆ, ದೊಡ್ಡ ವಿಷಯವೇನಲ್ಲ
ಈ ರಾತ್ರಿ ಬಿರುಕು ಬಿಟ್ಟಿದೆ, ಅವಳು ಜೊತೆಗಿಲ್ಲ

ಅಷ್ಟೆ, ಯಾರೋ ಹಾಡುತ್ತಿದ್ದಾರೆ ದೂರದಲ್ಲಿ, ಬಹಳ ದೂರದಲ್ಲಿ,
ಅವಳ ಕಳೆದುಕೊಂಡ ಅತೃಪ್ತಿ ಕಾಡುತ್ತಿದೆ ಈಗ.

ಅವಳ ಹತ್ತಿರ ಹೋಗಲು, ನನ್ನ ಕಣ್ಣು ಹುಡುಕುತ್ತಿದೆ,
ನನ್ನ ಹೃದಯ ಹುಡುಕುತ್ತಿದೆ: ಅವಳು ನನ್ನ ಜೊತೆಗಿಲ್ಲ.

ಈ ರಾತ್ರಿ, ಆ ಮರದ ರೆಂಬೆಗಳೂ ಸಹ ನೀರಸವಾಗಿವೆ.
ನಾವು ಸಹ ಆ ಸಮಯದಿಂದ, ಮೊದಲಿನಂತಿಲ್ಲ.

ಖಂಡಿತ ನಾನವಳ ಪ್ರೀತಿಸಿಲ್ಲ, ಆದರೂ ಹೇಗೆ ಪ್ರೀತಿಸಿದೆ.
ನನ್ನ ದನಿ ಏಕೋ ತಂಪಾಗಲು ಯತ್ನಿಸುತ್ತಿದೆ, ಅವಳ ಮತ್ತೆ ಸೇರಲು.

ಯಾರದೋ ಮುತ್ತುಗಳು ಅವಳಿಗೆ ಈಗ, ನನ್ನ ಮುತ್ತುಗಳಂತೆ.
ಅವಳ ಮಾತು, ದೇಹ, ಆ ವಿಶಾಲ ಕಣ್ಣುಗಳು.

ನಾನವಳ ಪ್ರೀತಿಸುವುದಿಲ್ಲ, ಖಂಡಿತ, ಆದರೂ ಪ್ರೀತಿಸುತ್ತೇನೆ.
ಈ ಪ್ರೀತಿ ಕ್ಷಣಿಕ: ಮರೆಯಲು ಹೆಚ್ಚು ಸಮಯ ಬೇಕಾಗಬಹುದು.

ಇಂಥಹ ರಾತ್ರಿಗಳಲ್ಲಿ, ನಾ ಅವಳ ಅಪ್ಪಿಕೊಳ್ಳುತ್ತಿದ್ದೆ ಗಟ್ಟಿಯಾಗಿ,
ಈ ಜೀವಕ್ಕೆ ನೋವಾಗಿದೆ ಈಗ, ಅವಳಿಲ್ಲದಾಗಿನಿಂದ.

ಆದರೂ ಇದೇ ಕೊನೆಯ ಸಲ ಅವಳು ನನಗೆ ನೋವು ಕೊಡುಲು ಸಾಧ್ಯ,
ಮತ್ತೆ, ಇದೇ ಕೊನೆಯ ಸಾಲು ನಾನು ಅವಳಿಗಾಗಿ ಬರೆಯುವುದು ಸತ್ಯ.

( ಮೂಲ ಕವಿ: ಪ್ಯಾಬ್ಲೊ ನೆರುದ )