Jan 10, 2009

ಪ್ರಶ್ನೆ

ಪ್ರೀತಿ, ಒಂದು ಪ್ರಶ್ನೆ ನನ್ನ
ಸಂಪೂರ್ಣ ನಾಶಮಾಡಿತು.

ನಿನ್ನಲ್ಲಿಗೆ ಮತ್ತೆ ಮರಳಿದ್ದೇನೆ,
ಅನಿಶ್ಚಿತತೆಯಿಂದ ಪಾರಾಗಿ.

ನನಗೆ ನೀನು ಬೇಕೇಬೇಕು,
ಆ ಖಡ್ಗ, ಅಥವಾ ಆ ದಾರಿಯಂತೆ.

ಆದರೆ ನೀನು,
ಆ ಕಹಿ ನೆರಳನ್ನು ಒತ್ತಾಯವಾಗಿ
ಬೇಕೆನ್ನುವೆ, ನನಗೆ ಇಷ್ಟವಿಲ್ಲದಿದ್ದರೂ.

ಓ ಪ್ರಿಯೆ,
ಅರ್ಥ ಮಾಡಿಕೊ,
ನಿನ್ನ ಸಂಪೂರ್ಣವಾಗಿ ಪ್ರೀತಿಸುವೆ,
ಕಣ್ಣಿಂದ ಕಾಲಿನವರೆಗೂ, ತುದಿ ಬೆರಳಿನವರೆಗೂ,
ಒಳಗೂ,
ನಿನ್ನಲ್ಲಡಗಿರುವ ಎಲ್ಲ ಹೊಳಪನ್ನೂ.

ಸಖಿ,
ನಾನೇ ನಿನ್ನ ಬಾಗಿಲನ್ನು ಬಡಿಯುವವನು,
ಮತ್ತೊಂದು ಸಲ ಕಿಟಕಿಯಾಚೆಗೆ ನಿಂತವನು,
ಅದು ಖಂಡಿತ ಭೂತವಲ್ಲ.
ನಿನ್ನ ಬಾಗಿಲು ತಟ್ಟಿ,
ನಿನ್ನ ಬಾಳ ಪ್ರವೇಶ ಮಾಡಿ,
ನಿನ್ನ ಹೃದಯದಲ್ಲಿ ನೆಲೆಸುವೆ,
ನಿನಗೆ ಸಹಿಸಲಾಗದಷ್ಟು.

ನೀನು ಒಂದೊಂದೇ ಬಾಗಿಲನ್ನು ತೆರೆಯುತ್ತಿರಬೇಕು,
ನನ್ನ ಸೂಚನೆಗಳ, ಯಥಾವತ್ ಪಾಲಿಸಬೇಕು,
ನಿನ್ನ ಕಣ್ಣುಗಳನ್ನು ತೆರೆದಿಡಬೇಕು, ಏಕೆಂದರೆ
ಅಲ್ಲಿಯೂ ಸಹ ನಾನು ಹುಡುಕಾಡಬೇಕು,
ನೀನು ನನ್ನ ಬಾರದ ನಡೆಯನ್ನು,
ನನಗಾಗಿ ಕಾದಿದ್ದ ಎಲ್ಲ ಮುಚ್ಚಿದ ದಾರಿಗಳು,
ತೆರೆದುಕೊಳ್ಳುವುದನ್ನು ನೋಡಲೇ ಬೇಕು.

ಭಯಪಡಬೇಡ,
ನಾನು ನಿನ್ನವನು,
ಆದರೆ,
ನಾನು ಪಯಣಿಗ ಅಥವಾ ಬಿಕ್ಷುಕನಲ್ಲ,
ನಾನು ನಿನ್ನ ಮಾರ್ಗದರ್ಶಕ,
ನೀನು ಕಾಯುತ್ತಿದ್ದೆಯಲ್ಲಾ ಅವನು.
ನಾನು ಈಗ ನಿನ್ನ ಬಾಳ ಪ್ರವೇಶಿಸುವೆ,
ಮತ್ತೆಂದೂ ಬಿಟ್ಟು ಹೋಗದಂತೆ,
ಪ್ರೀತಿ, ಪ್ರೀತಿ, ಪ್ರೀತಿಯಿಂದ
ಅಲ್ಲೇ ನೆಲೆಸಲು.

(ಮೂಲ ಕವಿ:ಪ್ಯಾಬ್ಲೊ ನೆರುದ)

No comments: