Jan 1, 2009

ಮತ್ತೆ ಬರುವನು ಚಂದಿರ - 10

ಬೆತ್ತಲ ಮೈಯೊಡ್ಡಿ ರವಿಕಿರಣ ಸ್ಪರ್ಶಕೆ
ಶಿಶಿರದಲಿ ಉದುರಿ ಚೈತ್ರದಲಿ ಚಿಗುರಿ
ಹಸಿರ ಮೈತುಂಬಿ ಚಿರಯೌವನ ಸೆಳೆತಕೆ
ಮೆರುಗು ನೀಡುವನೊ ಚಂದಿರ

ಅಭದ್ರತೆಯ ಭಯ ಕಾಡುತಿದೆ ಸತತ
ಒಂಟಿ ಬದುಕಿನ ಬೇನೆ ಬಿಡಲೊಪ್ಪದು
ಮುಚ್ಚಿದಷ್ಟೂ ಸೂರು ಸೋರುತಿದೆ ನಿರತ
ದಣಿದಿರುವೆ ದಾಹನೀಗೊ ಚಂದಿರ

ತೂಗುಯ್ಯಾಲೆಯಲಿ ತೇಲಿಹೋದ ಹಾಗೆ
ಜೀವ ಮಿಡುಕುತಿದೆ ಸಖಿಯ ಬರುವಿಕೆಗೆ
ಹಾತೊರೆವ ಮನಕೆ ಮೌನವೇ ಮಾತು
ತವಕ ತಣಿಸುವ ಬಯಕೆ ಚಂದಿರ

ನಿಗೂಢ ಮೌನ ಆ ದಿವ್ಯ ಸಮ್ಮಿಲನ
ಗಂಭೀರ ಸಂವಾದಕೆ ಇಲ್ಲ ಜನನ
ಅಲೆಯುವ ಮನ ಸೆರೆಸಿಕ್ಕ ಕ್ಷಣವೆ
ಇಹವ ಮರೆಯುವೆನಾಗ ಚಂದಿರ

ಬರಡುಬಾಳಿಗೆ ಚಿಗುರುವ ಬೇಡಿಕೆ
ಸಾಮರಸ್ಯದ ಸರಸ ಪಡೆವ ಬಯಕೆ
ನಿತ್ಯ ನಿರಾಸೆಯಾದರೂ ಇದೆ ನಂಬಿಕೆ
ನವಿಲಗರಿಯ ತರುವನಾ ಚಂದಿರ

ಕಾಮನಬಿಲ್ಲಲ್ಲಿ ತೂಗಾಡುವಾಸೆ
ಜಲಪಾತದಲ್ಲಿ ಜಾರಿಬಿಡುವಾಸೆ
ಸೋನೆಮಳೆಗೆ ತೋಯುವಾಸೆ
ಕಡೆಗೆ ನಿನ್ನ ಸೇರುವಾಸೆ ಚಂದಿರ

ಕ್ಷಣ ದಿನವಾಗಲಿ ದಿನ ಋತುವಾಗಲಿ
ಋತು ದಶಕವಾಗಿ, ದಶಕ ಶತಮಾನ
ಯಾಂತ್ರಿಕತೆಯ ಯಾತನೆ ಕೊನೆಯಾಗಿ
ಚಿರಾಯುವಾಗಿರಲಿ ಶಾಂತಿ ಚಂದಿರ

ಬದುಕಿನ ಇತಿಮಿತಿಗಳನು ಅರಿತು
ಪ್ರೀತಿ ಸ್ನೇಹಗಳು ಸಿಕ್ಕಷ್ಟು ಸವಿದು
ಮಧುರ ಅನುಭೂತಿ ಪಡೆದ
ಹಿತವಾದ ನೆನಪಿರಲಿ ಚಂದಿರ

ಮತ್ತೆ ಮತ್ತೆ ಕಾಡುತಿದೆ ಬಾಳ ಗೆಳತಿ ನೆನಪು
ಕಳೆದ ಮಧುರ ಕ್ಷಣದಲಿ ಬಿಡಿಸಿಟ್ಟ ಅವಳ ಒಲವು
ಮಿಡಿದ ಹೃದಯದಿ ಬೆಸೆದಾಗ ಚೆಲುವು
ಕಣ್ಣಲ್ಲೇ ಕವನ ಬರೆದೆ ನಾನಾಗ ಚಂದಿರ

ಮನಸು ತುಡಿಯುತಿದೆ ಮರಳಿ ನಿನ್ನಲ್ಲಿಗೆ
ಮೌನ ಮಾತಾಗಿದೆ ನಮ್ಮ ಎದೆಯೊಳಗೆ
ಎಲ್ಲ ತಳಮಳಗಳೋಡಿಸುವ ಹಂಬಲಕೆ
ಬಚ್ಚಿಟ್ಟ ಭಾವಗಳ ಬಿಡಿಸಿಡುವನಾ ಚಂದಿರ

No comments: