Jan 15, 2009

ಸಾವು

ನೀನು ಬಾ, ನೀನೇ ಕೊನೆಯವನು, ನಾನು ಗುರುತಿಸುವಂತವನು,
ತಡೆಯಲಾರದ ನೋವು ಈ ಶರೀರದ ಎಲ್ಲಾ ನರ-ನಾಡಿಗಳಲ್ಲಿ:
ನಾನು ನನ್ನ ಸ್ಪೂರ್ತಿಯೊಂದಿಗೆ ಉರಿಯುತ್ತೇನೆ, ನೋಡುತ್ತಿರು,
ಈಗ ನಾನು ನಿನ್ನಲ್ಲಿ ಉರಿಯುತ್ತೇನೆ: ಹತ್ತಿರ ಬರುವ ಬೆಂಕಿಯ
ಜ್ವಾಲೆಗಳಿಂದ ಈ ಕಟ್ಟಿಗೆ ಸಾಕಷ್ಟು ಸಮಯದಿಂದ ತಡೆದಿಟ್ಟಿತ್ತು,
ಆದರೆ ನೀನು ಅದನ್ನು ಹಾಗೇ ಉರಿಸುತ್ತಿದ್ದೆ,
ಈಗ ಅದನ್ನು ನನ್ನದಾಗಿಸಿಕೊಂಡು, ನಿನ್ನಲ್ಲಿ ಉರಿಯುತ್ತೇನೆ.

ನನ್ನ ಸದ್ಗುಣ, ಸರಳತೆಗಳನ್ನು ನಿನ್ನ ಕನಿಕರವಿಲ್ಲದ ಜ್ವಾಲೆ
ನರಕಸದೃಶವನ್ನಾಗಿಸಿದೆ, ಅದು ಇಲ್ಲಿರುವಂತಹುದ್ದಲ್ಲ.
ಪರಿಶುದ್ಧವಾಗಿತ್ತು, ಭವಿಷ್ಯತ್ತಿನ ಯೋಚನೆಗಳಿಂದ ಮುಕ್ತವಾಗಿತ್ತು,
ನನ್ನ ಹೆಣಸುಡಲು ಜೋಡಿಸಿರುವ ಕಟ್ಟಿಗೆಯಲ್ಲಿ, ಅಂತಿಮ ನೋವಿಗಾಗಿ
ತಯಾರಿಸಿಟ್ಟ ಜಾಗದಲ್ಲಿ ನನ್ನನ್ನು ಬಂಧಿಸಿದ್ದೇನೆ,
ಭವಿಷ್ಯತ್ತಿಗೆ ಖಂಡಿತವಾಗಿ ಏನೂ ಖರೀದಿಸಬೇಕಾಗಿಲ್ಲ ನನಗೆ,
ಆದರೆ ನನ್ನ ಹೃದಯದಲ್ಲಿ ತುಂಬಿರುವುದೆಲ್ಲಾ ಈಗ ಮೌನವಾಗಿದೆ.

ಇದು ನಾನೇನಾ, ಭೂತಕಾಲವೆಲ್ಲ ಗುರುತಿಸಲಾಗದಷ್ಟು ಸುಟ್ಟಿದೆ?
ನನಗೆ ನೆನಪುಗಳ ಹಿಡಿದಿಟ್ಟು ಹೊತ್ತು ಬರಲಾಗಲಿಲ್ಲ ಒಳಗೆ.
ಓ ಜೀವವೇ! ಓ ಬದುಕೇ! ಓ ನೀನು ಹೊರಗೇ ಇರುವೆ!
ಮತ್ತೆ ನಾನು ಈ ಜ್ವಾಲೆಗಳಲ್ಲಿದ್ದೇನೆ.
ಮತ್ತೆ ನನ್ನ ಬಲ್ಲವರು ಯಾರೂ ಇಲ್ಲಿ ಇಲ್ಲ.

( ಮೂಲಕವಿ: ರೈನರ್ ಮಾರಿಯ ರಿಲ್ಕ್ )

No comments: