Mar 31, 2008

ಕೂಡಲ ಸಂಗಮ ದೇವ

ಇದ್ದವರು ದೇಶ ವಿದೇಶಗಳ ಸುತ್ತುವರು
ಸುಂದರ ಪ್ರವಾಸಿ ತಾಣಗಳ ಮುತ್ತುವರು
ವಿಶ್ವ ಪ್ರಸಿದ್ಧ ಅದ್ಭುತಗಳ ಕಂಡು ಬರುವರು
ನಾನೇನು ಮಾಡಲಿ ಕೂಡಲ ಸಂಗಮ ದೇವ

ಐಶಾರಾಮಿ ಕಾರುಗಳೇ ಬೇಕು ಸುತ್ತಿ ಬರಲು
ರುಚಿಗೆ ಬಗೆ ಬಗೆ ತಿಂಡಿಗಳು ಸಾಕು ಮುಕ್ಕಲು
ಬೇಡವೆಂದರೂ ಬರುವ ಬೊಜ್ಜಿಗೆ ಕುಗ್ಗುವರು
ನಾನೇನು ಮಾಡಲಿ ಕೂಡಲ ಸಂಗಮ ದೇವ

ಎಲ್ಲಾ ಮಾದರಿಯ ವಸ್ತುಗಳ ಖರೀದಿಸುವರು
ವಸ್ತ್ರ ವಿನ್ಯಾಸಗಳ ಮೋಡಿಗೆ ಲಗ್ಗೆಯಿಡುವರು
ಕೊಳ್ಳುಬಾಕುತನ ಧಾಳಿಗೆ ಕಳೆದು ಹೋಗುವರು
ನಾನೇನು ಮಾಡಲಿ ಕೂಡಲ ಸಂಗಮ ದೇವ

ಎಲ್ಲೆಲ್ಲೋ ಹುಡುಕುವರು ಗುಡಿ ಗೋಪುರಗಳ,
ಭವ್ಯ ಅರಮನೆಗಳ, ವಾಣಿಜ್ಯ ಮಳಿಗೆಗಳ,
ಕಟ್ಟಿಸುವರು ಮಸೀದಿ, ಮಂದಿರಗಳು ಬಹಳ
ನಾನೇನು ಮಾಡಲಿ ಕೂಡಲ ಸಂಗಮ ದೇವ

ಒಮ್ಮೆ ಬಳಿ ಬಾರಯ್ಯ ನನ್ನಸ್ಥಿತಿ ನೋಡಯ್ಯ
ಪ್ರತಿದಿನವು ಹೊಲ ಗದ್ದೆಗಳಲಿ ದುಡಿವೆನಯ್ಯ
ಬರುವ ಹಣವೆಲ್ಲ ಸಂಜೆಗೆ ಮುಗಿಸುವವನಯ್ಯ
ನಾನೇನು ಮಾಡಲಿ ಕೂಡಲ ಸಂಗಮ ದೇವ

ದುಡಿಮೆಯ ಫಲವಷ್ಟೇ ದೂರುವವನು ನಾನಲ್ಲ
ಕೂಡಿಟ್ಟು ಕಳೆಯಲೆಂದೂ ನಾನು ಕೂಡಿಡಲಿಲ್ಲ
ಆಸೆಗಳ ಬಿಗಿದಿಟ್ಟು, ಕನಸುಗಳ ನಾ ಕೊಲೆಗೈದು
ಹುಸಿ ನುಡಿಯ ಮೆಚ್ಚನೇ ಕೂಡಲ ಸಂಗಮ ದೇವ

ನಾ ಕಂಡ ಅದ್ಭುತಗಳು

ದೇಹವೇ ನಾ ಕಂಡ ಅತಿದೊಡ್ಡ ಅದ್ಭುತ
ನಾನುಸಿರಾಡುವ ಪರಿಯೇ ನನಗದ್ಭುತ
ಕಣ್ಣೋಟ, ಮೈಮಾಟ, ಮನದ ಹಾರಾಟ,
ಕಲ್ಪನೆ, ಕನಸುಗಳಲಿ ಕಂಡೆನಾ ಅದ್ಭುತ

ಹಾರುವ ಹಕ್ಕಿ, ಕೋಗಿಲೆ ಹಾಡಿನ ಮೋಡಿ,
ಕುಣಿವ ನವಿಲಿನ ಪರಿ, ಕಾನನಗಳ ಕಲರವ
ಬೆಳದಿಂಗಳ ಚಂದಿರ, ತಂಗಾಳಿಯ ಸಡಗರ
ತಾರೆಗಳು ಬಿಡಿಸಿಡುವ ರಂಗೋಲಿ ಅದ್ಭುತ

ಗೋಸುಂಬೆ ಬದಲಿಸುವ ಬಣ್ಣಗಳಲಿ
ವನ್ಯಜೀವಿಗಳ ಜೀವನ ವಿಧಾನದಲಿ
ಸಾಕು ಪ್ರಾಣಿಗಳ ಮುಗ್ದ ಮನಸಿನಲಿ
ಮಗುವ ನಗುವಲ್ಲಿ ಕಂಡೆ ನಾನದ್ಭುತ

ಹರಿವ ನದಿ, ಸುರಿವ ಮಳೆ, ಹಸಿರು ಬೆಳೆ
ಸಖಿಯ ಬಳೆ, ಕಿರುನಗೆಯ ಹೊಳೆ, ತುಟಿ
ಅಂಚಿನ ಸೆಳೆ, ಮಾದಕ ಕಣ್ಣಿನ ಕಲೆ, ಒಲವು
ಸವಿಯುತಾ ನನ್ನ ನಾ ಮರೆವುದೇನದ್ಭುತ

Mar 28, 2008

ಸೂರ್ಯ ಚಂದ್ರ

ಸೂರ್ಯ ಚಂದ್ರ ಆಗಸಕೆ
ನಾನು ನೀನು ಭೂರಮೆಗೆ
ನಾವು ಅವರಿಬ್ಬರ ಒಟ್ಟಿಗೆ
ಇದ್ದರೂ ಇರದ ಹಾಗೆ

ರವಿ ಮೂಡಿ ಬರಲು ಕರಗುವ
ಚಂದಿರನ ಒಡಲು ಹಗಲಿನಲಿ
ಬೆಳದಿಂಗಳ ತಂಪಿನಲಿ ನಲಿವ
ಸುಖನಿದ್ರೆಗೆ ಅವನು ಜಾರುವ

ಹೊಂದಾಣಿಕೆಯ ಸೂತ್ರದಿಂದ
ಮುರಿವ ಮಾತೇಕೆ ಅನವರತ
ವರುಷ ನಿಮಿಷಗಳಷ್ಟೇ ಇವಕೆ
ಭಿನ್ನತೆಗಳಿಗೆ ಗೌರವದ ಒಪ್ಪಿಗೆ

ಹೆಜ್ಜೆ ಹೆಜ್ಜೆಗೂ ನಡೆದು ಜೊತೆಗೆ
ಮುಂಚೂಣಿ ಮಾತ್ರ ಒಬ್ಬರಿಗೇ
ಅವರವರ ಕ್ಷೇತ್ರಗಳ ಅರಿವಿರಲು
ಒಬ್ಬರು ಹಿಂದೆ ಒಬ್ಬರು ಮುಂದೆ

Mar 27, 2008

ನಲ್ದಾಣಗಳ ಸುತ್ತೋಣ

ಪದಗಳ ಜಗದಲಿ ಗಾಳಿ ಬೆಳಕು
ನವಿಲುಗರಿಯ ಕಣ್ಣಿನ ನೆನಪು
ಭಾಮಿನಿ ಷಟ್ಪದಿಯ ದೇಶ ಕೋಶ
ಬಾ ಕವಿತಾ ಬ್ಲಾಗಮಂಡಲಕೆ
ಚಿನ್ನದ ಪುಟಗಳ ಬುಕ್ ಬಝಾರಿಗೆ
ಟೈಂಪಾಸ್ ಕಡ್ಲೆಕಾಯ್ ಜೊತೆ
ಮಹಮ್ಮದ್ ಮ್ಯಾಜಿಕ್ ನೋಡೋಕೆ
ರಾಗಿ ರೊಟ್ಟಿ ವೆಂಕಿ ಬರ್ಗರ್ ರುಚಿಗೆ

ಕನ್ನಡ ಟೈಮ್ಸ್ ಜೋನ್ ಕ್ಯಾನ್ವಾಸ್
ಹಾಯ್ ರೇಖಾ ಕಾಮೆಂಟ್ಸ್ ಪ್ಲೀಸ್
ಅಲ್ಲಿದೆ ನಮ್ಮಮನೆ ಸುಮ್ಮನೆ ಜೋಗಿ ಮನೆ
ಹೈವೇ 7, ಡೋರ್ ನಂ.142
ಫ್ರೆಂಡ್ಸ್ ಕಾಲೋನಿಯಲ್ಲಿ ಅವಲೋಕನ
ಆಲದಮರದಡಿ ನವಿಲಗರಿಯ ಝೂಮ್
ಅಗಸೆಯ ಅಂಗಳ ಅಮೃತ ಸಿಂಚನ
ಅಲೆಮಾರಿಯ ಅನುಭವ ಅಪಾರ ಕಣಾ

ಒಂಟಿ ಹಕ್ಕಿಯ ಹಾಡು ಕಲರವ ಕೂಗು
ಓ ನನ್ನ ಚೇತನಾ ಒಳಗೂ ಹೊರಗೂ
ಕವನ ರಸಾಯನ ಕಾಲಹರಣ
ಕಾವ್ಯಸುಧೆಗೆ ಕುಂಚ ಪ್ರಪಂಚ
ಕುಂಟಿನಿ ಕಾವ್ಯಕೃಷಿ ಚಂದನ
ಚಂಡೆಮದ್ದಳೆ ಚಂಪಕಾವತಿ ಚಿತ್ರಕವನ
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ

ತಿರುಕನೋರ್ವನ ದೃಷ್ಟಿಯಲ್ಲಿ
ತುಂತುರ ಹನಿಗಳ ತುಳಸೀವನ
ಜೀವ ಸಂಶಯದ ತೊದಲ ಮಾತು
ನೂರಾರು ಮಾತು ನನ್ನ ಮಾತು
ನೂರಾರು ಕನಸು ನನ್ನ ಹಾಡು
ನೆನಪು ಕನಸುಗಳ ನಡುವೆ ನೆಟ್ಟ ನೋಟ
ನೆನಪಿನಂಗಳದಿಂದ ಒಂದಿಷ್ಟು ಬಯಲು
ಮಂಜು ಮುಸುಕಿದ ದಾರಿಯಲ್ಲಿ ಮನದ ಮಾತು
ಮನದ ಪುಟಗಳ ನಡುವೆ ಮನದಾಳದ ಮಾತು

ಗಂಡಭೇರುಂಡ ಉವಾಚ ಕ್ಷಿತಿಜದೆಡೆಗೆ
ಬದಲಾವಣೆಯೇ ಜಗದ ನಿಯಮ
ಬ್ಲಾಗಾವತಾರ ಭಾವತೀರ ಯಾನ
ಹುಚ್ಚು ಮನಸಿನ ಹತ್ತು ಮುಖಗಳು
ನನ್ನರಿವಿನಲಿ ಮಾವಿನ ಸರ ಮೌನಗಾಳ
ಅಂತರಂಗದ ಕಗ್ಗ ಪಾತರಗಿತ್ತಿಯ ಪಕ್ಕ
ಅದು ಇದು ಕಾಲಚಕ್ರದ ಗಹನ ತತ್ವ
ಹರಿವ ಲಹರಿಯ ಸೃಜನ ಹರಿಣಿ
ವಿಸ್ಮಯನಗರಿಯ ಋಜುವಾತು ಸಂಪದ
ಕೆಂಡಸಂಪಿಗೆಗೆ ಕನ್ನಡವೇ ನಿತ್ಯ ಉಸಿರು
ಕನ್ನಡ ಕಸ್ತೂರಿ ಪ್ಲಾನೆಟ್ ಕನ್ನಡ
ಕನ್ನಡ ಸಾರಥಿ ಅವಧಿ ಪದಗತಿ

Mar 26, 2008

ಸಂಗೀತ

ಜಡ ಜಗದ ಹಿಡಿತಕೆ ತತ್ತರಿಸಲೇಕೆ
ಸಂಸಾರ ಸಾಗರದ ಅಲೆಗಳ ಕೇಕೆ
ಬಂಧು ಮಿತ್ರರು ಬೇಡದ ಸಮಯಕೆ
ಮನದ ಚಿಂತೆಯ ಓಡಿಸುವ ಬಯಕೆ

ಸಂಗೀತವೇ ಈ ಬದುಕಿಗೆ ದೊಡ್ಡ ವರ
ಆರೋಹಣ, ಅವರೋಹಣದ ಸಡಗರ
ಸಪ್ತ ಸ್ವರಗಳೇ ದಿನನಿತ್ಯದ ಆಹಾರ
ಇಹದ ಪರಿವು ಏಕೆ ಜೊತೆಗಿದರ

ಸಕಲ ಕಲಹಗಳಿಗೆ ಇದೇ ಸುಮಬಾಣ
ಸರಳ ಮಾರ್ಗವಿದೇ ತಿಳಿಯೋ ಜಾಣ
ಆರೋಗ್ಯ ಐಶ್ವರ್ಯಕೆ ಬೇಕೆ ಕಾಂಚಾಣ
ಸಂಗೀತದ ಸರಸ ನಮಗಲ್ಲ ಕಾಲಹರಣ

ಸುಮತಿಯ ಕರುಣಿಸೋ ಕರುಣಾಕರ
ಸುಮನದಿಂದ ಪೂಜಿಸುವೇ ಶುಭಕರ
ಸುಮನೋಹರ ಸುಮಧುರವೀ ಚಂದಿರ
ಸರಾಗ ರಾಗಲಹರಿಯೇ ದಿವ್ಯ ಮಂದಿರ

Mar 25, 2008

ನಗುವ ಚೆಲ್ಲಿ

ಅಂದು ಬೆಳದಿಂಗಳಿನ ಇರುಳಿನಲಿ
ತಾರೆಗಳು ಹೊಳಪಿನ ನಗುವ ಚೆಲ್ಲಿ
ಇತ್ತ ಮಂದ ಬೆಳಕಿನ ಕೋಣೆಯಲಿ
ಪರಿಮಳ ಭರಿತ ಹೂಗಳನು ಹರಡಿ

ತರುಲತೆಗಳು ಮೌನದಲೇ ಇಣುಕಿ
ಕುತೂಹಲಕೆ ಕಾತುರದಿ ಕಾದಿರುವವು
ಸುಪ್ತ ಸುಗಂಧ ಭರಿತ ಸುಮಬಾಲೆ
ಮಂದಹಾಸದಲಿ ಇಹವ ಮರೆತಿಹಳು

ಮುಡಿದ ಮಲ್ಲಿಗೆ ಮುಂಗೋಪ ತೋರಿ
ಗುಲಾಬಿ ಜೊತೆಗೆ ಜೋರು ಜರಿದಿತ್ತು
ಕ್ಷಣಕೆ ಮೀಸಲು ಯೌವನದಿರುಳು ಬಾಡಿ
ಬಾಗುವ ಮುನ್ನ ಅದಕೆ ನೋಡಬೇಕಿತ್ತು

ಸುಯ್ಯನೇ ಸುಳಿಗಾಳಿ ಸುಸ್ವರ ಸುವ್ವಾಲೆ
ಹಾಡುತಾ ಮೆಲ್ಲಗೆ ಸುವಾಸನೆ ಹೀರುತಿತ್ತು
ಸುಹಾಸಿನಿಯ ಸುಸ್ಥಿತಿ, ಸುವ್ಯವಸ್ಥೆ ಪರಿಯ
ಸುತ್ತಮುತ್ತಲೂ ಸುತ್ತೋಲೆ ಹೊರಡಿಸಿತ್ತು

ರಸ ಭರಿತ ಫಲಗಳ ಒಳಗೊಳಗೆ ಜಗಳ
ಮೊದಲ್ಯಾರು ಅವಳ ತುಟಿಯ ತಾಗುವರು
ನಾಲಿಗೆಯಲಿ ನಾಟ್ಯವಾಡುತಾ ಕರಗಿ
ಅವಳ ಅಂತರಂಗದ ಹಸಿವನೀಗುವವರು

ಬಿದ್ದ ಕೂಸು

ಎಡವಿ ಬಿದ್ದ ಕೂಸು ಕಿರುಚುತಾ
ಪರಚಿದ ನೋವಿಗೆ, ರಕ್ತ ತಿಲಕ
ವಿಟ್ಟಿದೆ ಮಗುವ ಮೊಣಕಾಲಿಗೆ
ಸಂತೈಸುವ ಕ್ಷಣದಲಿ ಅಮ್ಮನಿಲ್ಲ

ಕರುಳು ಕಿತ್ತಂತೆ ಅವಳಿಗೆ, ಓಡಿ
ಬರುವಳು ಎತ್ತಿ ಮುದ್ದಾಡುವಳು
ಹರಿಷಿಣ, ಕಾಫಿ ಪುಡಿ ಹಚ್ಚುವಳು
ನೋವಿನಲೇ ನಗಿಸಲೆತ್ನಿಸುವಳು

ನಿರ್ಲಿಪ್ತತೆಯೋ ಇಲ್ಲ, ನಿರೀಕ್ಷೆ
ಇಲ್ಲದರ ಸ್ಥಿತಿಯೋ ಊಹೆಗಷ್ಟೇ
ಅದರ ಅನುಭವಿಸುವ ಭಾಗ್ಯವಿಲ್ಲ
ನೆನಪಿನ ನೆರಳಿಗೆ ಅಮ್ಮನಿರಲಿಲ್ಲ

ಅವಳಿದ್ದರೇ ತಾನೆ ಎಲ್ಲ ದೌಲತ್ತು,
ಸಿಹಿ ಮುತ್ತು, ಹೊತ್ತೊತ್ತಿಗೇ ತುತ್ತು
ಎದೆಯಮೇಲೆ ನಿದ್ರಿಸುವ ಸಂಪತ್ತು
ತೊದಲ ಮಾತನಾಡಿಸುವ ಗಮ್ಮತ್ತು

ಅದಕೆ ಎಲ್ಲದರ ಅರಿಯುವ ಸವಲತ್ತು
ಹಾಡುತ, ನಲಿಯುತಲೇ, ಪದಗಳ,
ಬಣ್ಣಗಳ, ದಿನಗಳ, ಪ್ರಾಣಿ ಪಕ್ಷಿಗಳ
ಜಗದಲಿ ಸುತ್ತಿ ಬರುವ ತಾಕತ್ತು

ಊರಿಲ್ಲ, ಹೆಸರಿಲ್ಲ, ಅಪ್ಪ ಅಮ್ಮನ
ಸುಳಿವಿಲ್ಲ, ಇದ್ದರೂ ಅದಕೆ ಗೊತ್ತಿಲ್ಲ
ಯಾರೋ ಮಾಡಿದ ಪಾಪ ಕರ್ಮಕೆ
ಯಾವ ತಪ್ಪಿಗೆ ಎಡವಿ ಬಿದ್ದಿದೆ ಕೂಸು

Mar 24, 2008

ಸರಿಯ ಬೇಡ

ಸರಿ ಸರಿ ಸರಿ ಎಂದು ಸರಿಯ ಬೇಡ ಚೆಲುವೇ
ರಸಭಂಗವೇಕೆ ಚದುರಂಗಕೆ ತರವಲ್ಲ ಹೂವೇ

ಮೌನದಲೇ ಮುಂದಿಡುವೆ ಹಲವು ಚಮತ್ಕಾರ
ಕಿರುನಗೆಯಿಂದ ಸೋಲಿಸಿದೇ ನೆಪಕೆ ಛಲಗಾರ

ಅವತರಿಪ ಅಡೆತಡೆಗಳಿಗೆ ನೇರ ಮುಖಾಮುಖಿ
ಭಿನ್ನ ಉತ್ತರ ಹುಡುಕಿ ಸರಿದೂಗುವ ಚಂದ್ರಮುಖಿ

ಹದ ಮಾಡಿ ಮನ ಮನೆಗೆ ಮಕರಂದವ ಹರಡಿ
ಝಗಮಗದ ಜಗದಲಿ ನೀ ನೆಲೆಯೂರಿ ನಲಿದಾಡಿ

ಹಣೆಬರಹ ಹಸನಾಗಿಸುವ ದಿನಚರಿಗೆ ಮರಳಿ
ಹುಸಿ ಭಾವವೆಸೆದಾಗ ಹಲುಬುವಳು ಮರುಗಿ

ಹಳಹಳಿಸುವಳಿವಳು ತವರಿನ ನೆನಪು ಬರಲು
ಹಂಬಲಿಸಿ ಹುರುಪಿನಿಂದ ಹಬ್ಬಕೆ ಹೊರಡುವಳು

ಕೃತಕ ಜಗವಿದು

ಕೃತಕ ಜಗವಿದು ಜರಿದರೇನು ಸುಖ
ಕಂಡದ್ದು ಕಾಣದ್ದರ ಕಲ್ಪನೆಯ ಮುಖ
ಜಾರದಿರು ಬೇಗನೇ ಕತ್ತಲಿಗೆ ಹೆದರಿ
ಹಣತೆಗಿರುವ ಅನಿವಾರ್ಯ ಬಲ್ಲೆ ಏನು?

ಹರಿಯುತಿಹ ನದಿಗೆ ಅವಸರದ ಅರಿವು
ಕ್ರಿಯೆ ಪ್ರತಿಕ್ರಿಯೆಗಳ ಹಸಿವಿರುವುದೇ?
ಹಸಿರೊತ್ತ ಭೂರಮೆಗೆ ಬರಡಾಗುವ ಭಯವೇ?
ನಿರ್ಲಿಪ್ತ ಮನಕೇಕೆ ನೋವು ನಲಿವುಗಳ ಗ್ರಹಣ.

ಮೌನದಲೇ ಉತ್ತರ ಅದಕ್ಕಿಲ್ಲ ಯಾವ ಕಾತುರ
ಇಹದ ಪರಿಯ ಜೊತೆಗೆ ಪಿರಿಪಿರಿ ನಿನ್ನದೇ ಜ್ವರ
ತಟಸ್ಥ ಮುಖಭಾವ ಚಂಚಲತೆಯ ಅಂತರಾಳ
ಹಿಡಿದಿಡುವ ಯತ್ನ ಕ್ಷಣಕೆ ಮೀಸಲು ತಿಳಿಯದೇ?

ಮತ್ತೆ ತೃಪ್ತಿಗೆ ಕ್ರಿಯೆ ಯಾವುದಾದರೇನು?
ಅದರ ಹಿಂದೆ, ಮುಂದೆ, ಮೇಲೆ, ಕೆಳಗೆ, ಒಳಗೆ,
ಹೊರಗೆ, ಅಳತೆ, ಭಾರ, ಎತ್ತರ, ಆಳ, ಅಗಲದ
ಊಹೆಗಳು, ಪ್ರಶ್ನೆಗಳು ನಿಮಗೆ ಸೀಮಿತವಷ್ಟೇ?

ಪುಡಿ ಪುಡಿಯಾಗಿ ಹೊಡೆದು ಹಿಡಿಯಲೆತ್ನಿಸುವೆ
ಜಾಣನೇ ಹಲವಾರು ವರಷ ಕೆಳೆದಿರಲಾಗಲೇ?
ಹಿಡಿ ಹಿಡಿಯಾಗಿ ಒಮ್ಮೆಗೆ ಕಾಣುವ ಬಯಕೆ ಹೊತ್ತು
ಉತ್ತರ ಹುಡುಕುತಾ ಕರಗುವ ನಿನ್ನ ಕರ್ಮಕೆ?

ಕಲಿತವ ನಾನೆಂದು ಬೀಗುವ ಅಂಟು ರೋಗಕೆ
ಸಾಧಿಸಿದೆ ಅಪಾರ ಹಾರುತಾ ಚಪ್ಪಾಳೆ ಸದ್ದಿಗೆ
ನೆಮ್ಮದಿ, ಆರೋಗ್ಯ, ಸರಳ ಜೀವನ ಕ್ರಮಗಳ
ನೆರವು ಸಿಗುವುದು ಮತ್ತೆ ಅದೇ ವನ್ಯ ಮೃಗಗಳ

ಹಸಿರ ಪರಿಸರದಲ್ಲಿ, ಸುರಿವ ಮಳೆಯಲ್ಲಿ,
ಋತುಮಾನ ಕರುಣಿಸುವ ಕೃಪೆಯಲ್ಲಿ.
ನೀ ನುಡಿದ, ನಡೆದ ದಾರಿ ಯಾರಿಗೆ, ಹೇಗೆ
ನೆರವಾಯಿತೋ ಕಾಣೆ ಈ ಜಗಕೆ?

Mar 22, 2008

ಚೆಲುವಿನಾ ಸಿರಿ

ಸಿರಿಯೇನೆಂದರಿಯಲು ಸರಿ ದಾರಿಯ ನೆರಳು
ಕಹಿ ಬೇವಿನ ಚಿಗುರ ಸವಿಯುಂಡವನನೇ ಕೇಳು

ಚೆಲುವಿನಾ ಸಿರಿ ಹೊತ್ತು ನಲಿದಾಡುವ ತೇರು
ಬೆಳದಿಂಗಳ ಕಣ್ಣಲ್ಲೇ ಕಲೆ ಹಾಕುವೇ ಜೋರು

ನನ್ನ ಅಂದದ ಗಂಧ ತಿಳಿಸುವೇ ನಿನ್ನ ಕಣ್ಣಿಂದ
ಜಾರುತಿಹ ಮನವ ಸೆರೆಹಿಡಿವೆ ನೀ ಅದರಿಂದ

ಮರಳ ಮೇಲ್ದಂಡೆಯ ಹೊಂಗೆ ಮರದಡಿಯಲ್ಲಿ
ಉರಿಬಿಸಿಲನಟ್ಟಿ ಕರಿನೆರಳು ಕೊಡುವ ಸುಖದಲ್ಲಿ

ಸಂಜೆ ಕಾರ್ಮೋಡ ಸುರಿವ ಮಳೆಯಲಿ ತೋಯುತ
ಕೈ ಹಿಡಿದು ಜೊತೆ ನಡೆದು ಬಿಸಿಯುಸಿರನು ಹೀರುತ

ಮಂದ ಬೆಳಕಿನಲಿ ಮೆಲ್ಲ ಮಲ್ಲನೆ ಮಲ್ಲಿಗೆ ಮಳ್ಳಿ
ಇಡುವ ಕಚಗುಳಿಗೆ ಓಡಿತು ಚಳಿ ಸುತ್ತಿ ಹೂಬಳ್ಳಿ

ನೆನೆಯುತಾ ನನ್ನನೇ

ನೆನೆಯುತಾ ನನ್ನನೇ ನಿನ್ನ ನೆನಪೇಕೆ ತರುವೆ
ತೆರಳಿರುವ ಜಾಗದ ಸುಳಿವನೀಡುತಲೇ ನಗುವೆ

ನಿದಿರಿಸುವ ನಟನೆ ನನಗೆ ಹೊಸತಲ್ಲಾ ಚಂಚಲೆ
ನೆಪ ಮಾತ್ರಕೇ ಕೋಪ ತಿಳಿದಿರುವೆ ನಾ ನವಿಲೆ

ಅಂದು ಮುಂಜಾವಿನಲಿ ನೀ ಬಿಡಿಸಿದ ರಂಗೋಲಿ
ತಿಳಿಯಿತೆನಗೆ ಅದು ನೀ ಬರೆದ ಒಲವಿನಾ ಓಲೆ

ಮುಸ್ಸಂಜೆಯಲಿ ಮುಂಗೋಪ ಕರಗಿದಂತಿರಲಿಲ್ಲ
ಚೆಲುವಿನಲೇ ಸೆರೆಯಿಡಿದೆನ್ನ ಮೈ ಮನವನೆಲ್ಲಾ

ನೆನಪುಗಳ ಸವಿಯುಂಡು ದಿನವ ದೂಡುವೆನು
ನೆಪಗಳನು ನೀಡುತಲೇ ಮತ್ತೆ ಸೋತಿರುವೆನು

ಭಾರವಾಗಿದೆ ಮನವು ಬರಲಾಗದೇ ನೊಂದಿಹೆನು
ಕನಸಿನಲಿ ಕಾಣುವ ಬಯಕೆಗೆ ಬೇಗ ಮಲಗುವೆನು

Mar 21, 2008

ಬದುಕಲು ಬಿಡಿ

ಬದುಕಲು ಬಿಡಿ ರಾಯರೇ ಬಡಿದಾಡುವಿರೇಕೆ
ದೇಶ ಯಾವುದಾದರೇನು ನೆಲದ ಸೆಳೆಗೆ
ನೆಲೆಸುವೆ, ಭಾಷೆ ಯಾವುದಾದರೇನು
ಭಾವನೆಗಳ ಹರಿಸಿ ಬೆಳಕ ಕಾಣುವೆ

ಹೆಸರು ಯಾವುದಾದರೇನು ಮನ
ಮಾನವೀಯತೆ ಸದಾ ಪಲುಕಲು
ನೆಪಕೆ ಮಾತ್ರ ಕಾರ್ಯಸಿದ್ಧಿ ಹಸಿವಿಗೆ
ಮನುಜನಾಗಿ ಬರುವೆ ಈ ಬದುಕಿಗೆ

ನನ್ನ ಪಯಣ ನನಗೆ ಬಿಡಿ ದಾರಿ ನಾನೇ
ಹುಡುಕುವೆ, ನೂರು ತಡೆಗಳೊಡ್ಡಿ ನನಗೆ
ದ್ವಂದ್ವ ಬೀಜ ಬಿತ್ತಿ ಕೊನೆಗೆ ನಗುವಿರೇಕೆ
ಹೇಸಿಗೆ, ನಾನು ನಾನಾಗುವ ಬಯಕೆಗೆ

ಮೊದಲಿಗೊಂದು ಹೆಸರನಿತ್ತು ಜೊತೆಗೆ
ಕುಲದ ಕುತ್ತು, ಬೇಕೇ ಬೇಕು ಧರ್ಮದ
ಹಣೆಯ ಪಟ್ಟಿ, ಸಾಲದಕೆ ಭಾಷೆ ಕಟ್ಟಿ
ಗೆರೆಗಳೆಳೆದು ದೇಶ ಹಲವು ಸಹಜವೇ

ಜನನವಿತ್ತ ಮಾತೆ ಮುಂದೆ ರಕ್ತ ಹರಿಸಿ
ದಿಕ್ಕು ತಪ್ಪಿಸಿ, ಗೊಂದಲಗಳು ಬಹಳಿವೇ
ರಕ್ತ ಸಿಕ್ತ ಮನಕೆ ಪಿತ್ತ ಎತ್ತಕಡೆ ಹೊರಳುವೆ
ಮನುಕುಲ ಮಲಿನಕೆ ಯಾರ ಬೇಹುಗಾರಿಕೆ

ನೆವವನಿತ್ತು ಹಲವು ಸರಳ, ಮುಗ್ಧ ಮಗುವ
ಕಡಿದು ಕೊರಳ, ಮಮತೆ ಮಾಯ ಮರುಗಿದೆ
ಹಿಡಿತ ತಪ್ಪಿ ನಡೆವುದಕೆ ಜೀವಹರಣ ನಿಲ್ಲದೆ
ತೊರೆದು ಮನುಜರಾಗಲೆತ್ನಿಸೋಣ ಒಮ್ಮೆಗೆ

Mar 20, 2008

ಅಮ್ಮ

ಹಸಿದಿರುವೆನೇ ಅಮ್ಮ ಕೇಳೇ
ಅನ್ನ ಕೊಡು ಬೇಗನೆ
ಕುಸಿದೆನೊಮ್ಮೆಗೆ
ಅಮ್ಮನಿಲ್ಲ

ಅಮ್ಮನಿಗೆ ಎಂದೂ ಕೇಳಿದವ ನಾನಲ್ಲ
ಅದಕೆ ಅವಕಾಶವೇ ಕೊಡಲಿಲ್ಲ
ಹಸಿದಿರುವೆ ಬಹಳವೇ
ಈಗ ಅವಳಿಲ್ಲ

ಹಸಿವಿನ ಅನುಭವ ಇಷ್ಟಾಗಿ ಕಾಡಿರಲಿಲ್ಲ
ಅನ್ನದ ಹಸಿವೋ, ಅಮ್ಮನ
ಕಾಣುವ ಹಸಿವೋ
ಗೊತ್ತಿಲ್ಲ

ಅನಾಥಭಾವ ಆವರಿಸಿದೆ ನನಗೆ
ಎಲ್ಲಿರುವಳವಳೆಂದು ನಿಲ್ಲದೇ
ಕೇಳುತಿದೆ ಮತ್ತೆ ಮತ್ತೆ
ಉಸಿರಿಲ್ಲ

ನನ್ನರಿತಂತವರು ಮತ್ಯಾರಿಹರು ಹೇಳೇ
ಅವರನು ಹುಡುಕುವೇ ನಾನೀಗಲೇ
ಒಮ್ಮ ಕಂಡೆ ಕನಸಿನಲಿ
ನನ್ನ ಹಸಿವಿನಲಿ

ಅಬ್ಬಾ! ಎಂಥಾ ಘೋರ ಪರಿಸ್ಥಿತಿಯೆನಗೆ ತಂದಿರುವೆ ನೀನು
ಎದುರಿಸಲಿಲ್ಲ ಶಕ್ತಿ, ಅಮ್ಮನ ಕೊಡಲಾರದವನು
ಹಸಿವನೇಕೆ ಕೊಟ್ಟನೆಂದರಿಯೆನು
ಮೌನವಾಗಿಹನು

ನಂಬಿಕೆ

ಕಿರುನಗೆ ಬೀಸಿದ ತರು ಮೊಗವ ತೂಗಿ
ಹಸಿರ ಸಿರಿಯಲಿ ಯೌವನದ ಮೈದಾಳಿ
ಕಡೆಗೆ ಹೊದಿಕೆಯ ಸುರುಳಿ ಸಿಡಿದುರುಳಿ
ಹಸಿವಿಗೆ ಬಾಗಿ ಬೆಂಡಾಗಿ ಬೆಂಕಿಗಾಹುತಿ

ಗುಡಿಗಳು ಹಲವು ಗೊಂದಲಗಳ ಓಡಿಸುವವು
ಆಕರ್ಷಕ ಕೆತ್ತನೆಗಳನೊತ್ತಿಹ ಶಿಲ್ಪಕಲೆಯ
ಶಿಖರ ಸೆಳೆಯುವುದು ಹಲವರನದರೆಡೆಗೆ
ಕತ್ತಲಲಿ ಹುಡುಕುವ ಹುರುಪಿರದೆ ಬೆಳಕಿಗೆ

ಬಗೆ ಬಗೆ ಬಣ್ಣದ ಚಿತ್ತಾರ ಚಂದದ ಆಕಾರ
ಆಕಳಿಸುವ ಆಕಳ ಕರುವು ಕೂಡ ಪರಿಕರ
ನಡೆದಾಡುವ ನರರಿಗೂ ಸುತ್ತುವರೆದವರ
ಸರ್ರನೆ ಸರವ ತೆಗೆದು ಕೊಡುವವರಿವರ

ಪರಕಾಯ ಪ್ರವೇಶದೊಂದಿಗಿವರ ಆವೇಶ
ಹಲವಾರು ವೇಷ ಆನಂದಿಸುವವರ ಭಾಗ್ಯ
ಸೃಜನಶೀಲತೆಗೆ ಶೀಲವಿದೆ ಅದೃಷ್ಟದ ದೇಶ
ಧಿಗ್ಗನೆರಗುವವರಿವರು ಅನೇಕ ಭಾವಾವೇಶ

ಶಕ್ತಿ, ಸಾಮರ್ಥ್ಯವು ಸಹಜವಲ್ಲವೇ ಪ್ರದರ್ಶನ
ಹೆಸರಿಗೆ ಹಲವರು ಹುಂಬರು, ಮುಗ್ಧರು ಮುಂದೆ
ಊಟದ ಜೊತೆಗೆ ನೂರು ರೂ ಕೊಟ್ಟು ಸಂಜೆ
ಬದುಕುಳಿದರೆ ಆ ದೇವರ ಹೆಸರೇ ನಂಬಿಕೆಗೆ

ಪಾಪ ಪುಣ್ಯ

ಪಾಪ ಪುಣ್ಯ ಪುಸ್ತಕದ ಮೇಲೆ
ದುಡ್ಡಿದರೆ ದುನಿಯಾ ಮೇಲೆ
ಕಂಡೆನು ಆಟೋ ಹೆಗಲ ಮೇಲೆ
ಮನ ನೆಟ್ಟಿತು ಗಟ್ಟಿ ಅದರ ಮೇಲೆ

ಸರಳ ಅಭಿವ್ಯಕ್ತಿ ಬಲು ಸುಂದರ
ನಿಜವ ಒಪ್ಪಲು ಬಹಳ ಕಷ್ಟಕರ
ಪರದೆಗಳರಿಯದ ಮನಸುಳ್ಳವರ
ವಲಸಿಗರಿಟ್ಟ ಧಾಳಿಗೆ ಸೋತವರ

ಹಣವಿದ್ದವರದೇ ಅಂತಃಪುರ
ಮಾನದಂಡವೊಂದೇ ಇವರ
ಸುತ್ತುವರೆಲ್ಲರು ಇವರ ಹತ್ತಿರ
ತಿಳಿಯದು ಯಾರಿಗಿದರ ಖದರ

ನೀತಿಪಾಠ ನುಡಿಯಲು ಸೀಮಿತ
ಮೌಲ್ಯಗಳಿರಲು ಮಲಗಿ ಅಂಗಾತ
ಮಾನವೀಯತೆ ಮಾಯವಾಗುತ
ನೈತಿಕತೆಯಿಂದು ಅಂಬೆಗಾಲಿಡುತ

ಹಣವೊಂದಿದ್ದರೆ ದಕ್ಕುವುದೆಲ್ಲವು
ಖಾದಿ, ಕಾವಿ, ಖಾಕಿಯ ಕಾವು
ಅಂಗನೆ ಚಂಗನೆ ಕುಣಿವ ತರವು
ಇರದವರೆಲ್ಲರೂ ಹೆಣವಾಗುವೆವು

ಕಾಮ, ಕ್ರೌರ್ಯ ತುಂಬಿದ ಜಗವು
ಅಧಿಕಾರ, ಹಣಕೆ ಇಂಗದ ದಾಹವು
ಬಡವರ ಬಾಳಿಗೆ ಮೂರು ತುತ್ತಿರಿಸಿ
ಅಸಹಾಯಕರನು ಅಸ್ತ್ರವಾಗಿ ಬಳಸಿ

ಮೊಳಕೆಯಿಂದಲೇ ಮಲಿನವಾಗಿದೆ
ಆಂತರ್ಯದಾಳಕೇ ಬೇರು ಬಿಟ್ಟಿದೆ
ದೇವನೆ ದಯಪಾಲಿಸು ವರವೊಂದ
ದೊರಕಿಸೋ ಮುಕ್ತಿ ನಮಗಿದರಿಂದ

Mar 19, 2008

ಕಾಳಿಂಗ ಸರ್ಪ

ಗ್ರಹಗತಿಯ ಗ್ರಹಚಾರ ಗ್ರಹಿಸುವವ
ಕ್ರಿಯೆಗಳನು ಕಡೆಗೆಣಿಸಿ ಕೂರುವವ
ಸನ್ನಿವೇಶಕೆ ಸೈ ಎಂದ ಗೋಸುಂಬೆ
ಗೋಡಂಬಿ ಬೇಕೆಂದು ಬಯಸುವವ

ಜನುಮದಾತನಿಗೆ ಜಾತಕವ ಕೇಳಿ
ದೇವ ದೇವತೆಯರಿಗೆ ಲಂಚ ನೀಡಿ
ವಿವಿಧ ಭಂಗಿಗಳ ಪ್ರದಕ್ಷಿಣೆ ಮಾಡಿ
ಉಪದೇಶ ನೀಡುವವನ ಮೋಡಿ

ಕಾವಿಯೊಳಡಗಿದ ಕಾಳಿಂಗ ಸರ್ಪ
ವಿಷವನುಗುಳಲು ಹೊಂಚುತಿರುವ
ಕಾರ್ಯವಾಸಿ ಕತ್ತಲಲಿವ ಕಾರಣಿಕ
ಕಾವುಳ್ಳ ಕಾವಲಿಗೆ ಕಾವ ಕರಗಿಸುವ

ಇಲ್ಲ ಸಲ್ಲದ ವಿಷಯಗಳ ಪಠಿಸುತ
ಸಭ್ಯ ಸಜ್ಜನಿಕೆ ಮೊಗವ ತೋರುತ
ಕಿಂದರಿಯ ನುಡಿಸಿ ಕಿಕ್ಕಿರಿದ ಜನರ
ಕಾಳಸಂತೆ ನಡೆಸಿ ಕಾಂಚಾಣ ಗಳಿಸಿ

Mar 18, 2008

ಮಾಯಾಜಿಂಕೆ

ಮಾಯಾಜಿಂಕೆ ಕಾಣ ಬಯಸುವೆ ಎಂದು
ಹೊಳೆವ ಕಣ್ಣಿಂದ ಹೊಳಪಿನ ಬೆಳಕರಿಸಿ
ಮೆತ್ತನೆ ಮೈಯ ಸುರಿವ ಮಳೆಗೆ ನೆನೆಸಿ
ಹನಿಗಳಲಿ ಅಡಗಿದ ನನ್ನನು ಒದರಿಸಿ

ಮರೆಯಲು ಬಿಡದೆ ನನ್ನೇಕೆ ಕಾಡುವೆ
ಮುಗ್ಧ ಮನವ ಭಾರವಾಗಿಸಿದೆ ನೀನು
ಕಲ್ಪನಾ ಕಲ್ಪವೃಕ್ಷ ಬೆಳೆಸಿ ನನ್ನೆದೆಯಲಿ
ಕುತೂಹಲ ಕೆರಳಿಸಿ ಕಾಣೆಯಾದೆ ಎಲ್ಲಿಗೆ

ಪರಿತಪಿಸುವ ಚಪಲವ ಸೃಷ್ಠಿಸಿ ನನ್ನಲಿ
ಕುಶಲವ ಕೇಳುವ ನೆಪವೊಂದೇ ಉಳಿಸಿ
ಆಕಸ್ಮಿಕ ದರ್ಶನದಚ್ಚರಿ ನೀಡುತ ಮತ್ತೆ
ಮರೆಯಾಗುವೆ ನನಗೆ ಕಾಯಲು ತಿಳಿಸಿ

ಹಗಲಿರುಳೆನ್ನದೆ ನಿನ್ನ ಬೆನ್ನಟ್ಟುತ ಬರುವೆ
ನನ್ನ ಕಣ್ತಪ್ಪಿಸಿ ಆಡುತಲೇ ಕಣ್ಣಾಮುಚ್ಚಾಲೆ
ನೀನೋಡುವ ವೇಗಕೆ ನಾ ದಣಿದಿರುವೆ
ನಿನ್ನ ಬರವಿಗಾಗಿ ಸಂಯಮದಿ ಕಾಯುವೆ

Mar 17, 2008

ಸೋಮಾರಿಯಾಗಬೇಕು?

ಸೋಮಾರಿಯಾಗಬೇಕು ನಾನು
ಶುದ್ಧ ಸೋಂಬೇರಿಯಾಗಬೇಕು
ಒಂಬತ್ತರಿಂದ ರಾತ್ರಿ ಎಂಟರ ಕೆಲಸದ
ಕರ್ಮದಿಂದ ನಾ ಪಾರಾಗಬೇಕು

ಇರುವ ಮೂರು ದಿನವ ಹೊಟ್ಟೆ ಬಟ್ಟೆಗೆ
ಕಟ್ಟಿ, ಬರುವ ಆದ್ಯತೆಗಳು ಕೊಡುವ
ಪೆಟ್ಟು, ಗಳಿಗೆ ಗಳಿಗೆಗೂ ನನ್ನ ಎಲ್ಲರ
ಬದಿಗಿಟ್ಟು, ಭರಪೂರ ಮತಿಯಗೆಟ್ಟು

ಇತ್ತ ನೌಕರಿಯ ಕುತ್ತು, ಅತ್ತ ಸಂಸಾರದ
ಬಾಬತ್ತು, ಇವೆರಡರ ನೊಗವನೊತ್ತು
ದಣಿದು ದಾಹಕೆ ಪಾಪ ದರಿದ್ರದ ಎತ್ತು
ಸಾಲದಕೆ ಮಾಲೀಕನ ಛಡಿಯೇಟು ಬಿತ್ತು

ಅಲ್ಲಲ್ಲಿ ತಿವಿತಕೆ ಬಿದ್ದಿತ್ತು ತೂತು
ರಕ್ತ ಹರಿದು ಹೆಪ್ಪುಗಟ್ಟಿತ್ತು ಬಹಳ
ನೋವಿನಿಂದ ಕಣ್ಣಲ್ಲಿ ನೀರು ಹರಿದಿತ್ತು
ನಾಳೆಗೆ ಬದುಕುಳಿಯಲು ಸ್ವಲ್ಪ ಮೇವಿತ್ತು

ದಿನಚರಿಗೆ ದಶಕಗಳು ಕಳೆದಾಯ್ತು
ಉಳಿದೊಂದು ದಿನಕೆ ಮುಖ ಬಾಡಿತ್ತು
ರತ್ನನ ಪದಗಳ ನೆನಪಿನಿಂದ
ಕಳೆದುಕೊಂಡಿರುವುದರ ಅರಿವಾಯ್ತು

ಬೆಟ್ಟ ಕಡಿದೇನೆಂಬ ಬಯಕೆಯಲಿ
ನಾಳೆಯ ನಗುವಿಗೀ ದಿನವ ದೂಡಿ
ಕ್ಷಣದ ಸುಖ ಕಡೆಗೆಣಿಸಿದ ಮೂರ್ಖ ನಾ
ಇರಲಿಲ್ಲ ನಾ ನಾನಾಗಿ, ನನಗಾಗಿ ಎಂದೂ

ಒತ್ತಡದ ಜಗದಲಿ ತರ್ಕಕೆ ನಿಲುಕದೆ
ಬೇಡದ ವಿಷಯಗಳು ಹೆಗಲೇರಿಸಿದೆ
ಕುರಿಯಂತೆ ತಲೆಬಾಗಿ ಮುನ್ನಡೆದೆ
ಕಟುಕನ ಮೊನಚಾದ ಕತ್ತಿಗೆ ಕತ್ತೊಡ್ಡಿದೆ

ಪಡೆದ ಜಗ ಜಾಗ ಜಾರಿ ಹೋದಂತಾಗಿ
ದೂರದ ಬೆಟ್ಟ ದೂರಕೆ ಸರಿದಂತಾಗಿ
ಸ್ಥಿಮಿತ ಸರಿದೂಗಿಸಲಾಗದಿರಲೆನಗೆ
ಸೋಮಾರಿ ಸುಖ ಲೇಸೆಂದೆನಿಸುತಿದೆ

Mar 16, 2008

ಏಕೆ ಉಸಿರೇ

ಬಿಂಕಬಿಡದೆ ಬಿಗುವಿನಿಂದ
ಬಳಲುವೆ ಏಕೆ ಉಸಿರೇ
ಮತ್ತೆ ಮತ್ತೆ ಹೇಳುತಿದೆ
ಮನದಲೇನೋ ಅಡಗಿದೆ

ಸಪ್ತಪದಿಯ ಹೆಸರಿನ ಹಸಿರು
ಕಿರುಬೆರಳಿನಲಿ ಒತ್ತಿ ಉಸಿರು
ಅಂತರಾಳದಲಿ ನುಡಿದ ರಾಗ
ನೆನಪು ತರುವ ಬೆಳಕಿನ ಜಗ

ಮೌನವಾಗಿ ಸಮ್ಮತಿಸುವ
ಬಯಕೆ ನಿನಗೆ ತರವೇ
ಮತಿಯ ಕಟ್ಟಿ ಮರುಗ ಬೇಡ
ಜ್ವಾಲಾಮುಖಿಗೆ ಕಾಯಬೇಡ

ಜೊತೆಗಿರಲು ಒಲವಿನ ವಸಂತ
ಕಾಯಲೇಕೆ ತವಕ ಪಡುತ
ಕೂಡಿ ಬಾಳೋ ಶಪಥ ಸತತ
ನೋವು ನಲಿವು ಸಮಾನ ಹಿತ

ಬಿಗಿದಿಟ್ಟ ವಿಷಯ ಸಡಿಲ ಪಡಿಸಿ
ಬಿಗುಮಾನ ಕ್ಷಣಕೆ ಬದಿಯಲಿರಿಸಿ
ಹಗುರ ಮನಸಿಗಾಗ ನಿರಾಳ
ನಿಟ್ಟುಸಿರಿಡುವೆ ನಾನಾಗ ಸರಳ

Mar 12, 2008

ಮುದ್ದು ಗಿಣಿಯೆ

ಮುನಿಸೇಕೆ ಮುದ್ದು ಗಿಣಿಯೆ
ಕರಗೆನ್ನ ಮುತ್ತಿನ ಮಣಿಯೆ
ಮನವನೇಕೆ ತೂರಿ ಬಿಡುವೆ
ಮತ್ತದರ ಹಿಂದೆ ಓಡುತಿರುವೆ

ಅದರ ಜೊತೆಗೆ ಕದನ ತರವೆ
ಈಸ್ಪರ್ಧೆಯಲಿ ಗೆಲುವ ಛಲವೆ
ನಗುವಿನಿಂದ ಸಿಂಗರಿಸಿ ಚೆಲುವೆ
ದಣಿದ ಮನವ ಮುಚ್ಚಿಬಿಡುವೆ

ಅಂಕು ಡೊಂಕು ಮೈಗೆ ಮೆರಗು
ಸಖಿಯ ಸಿಡುಕಿಗಂದ ಸೆರಗು
ನವಿರಾದ ನವಿಲಗರಿಯೆ ಚಂದ
ಈ ಸಿರಿಯನರಿಸಿ ಬಿಗಿದೆ ಬಂಧ

ದಿನಕೆ ನೂರು ಬಗೆಯ ಒಲವು
ಕ್ಷಣಕೆ ಸುಗಂಧ ಭರಿತ ಜಗವು
ಕಾಲ ಕ್ರಿಯಾಶೀಲ ಕವಿಯಂತೆ
ಇವಳವನು ಬರೆದ ಕವಿತೆಯಂತೆ

Mar 11, 2008

ಮೂಕ ಪ್ರೇಕ್ಷಕರು

ಸಾಮಾಜಿಕ ಜವಾಬ್ದಾರಿ ಮರೆತ ಜನ ನಾಯಕರು
ಉದ್ಯಮವಾಗೆಲ್ಲವನು ರೂಪಾಂತರಗೊಳಿಸಿಹರು
ಶಿಕ್ಷಣ, ಆರೋಗ್ಯ ಸಾಮಾನ್ಯರಿಗೆ ದೂರವಾಗಿ
ಭ್ರಮನಿರಸನಗೊಂಡು ನೇಪಥ್ಯಕೆ ಸರಿದವರು

ಭ್ರಷ್ಟ ರಾಜಕಾರಣಿಗಳು, ಅಮಾನವೀಯತೆ
ಮೆರೆವ ಅಧಿಕಾರಿಗಳು ಮೂಲ ಕಾರಣಕರ್ತರು
ನಿರ್ಲಿಪ್ತತೆ, ಪಾಪ ಪ್ರಜ್ಞೆಯ ಪರಿಚಯವಿರದ
ಸ್ವಾರ್ಥ ಮನೋಭಾವದಿ ಸುಲಿಗೆ ಮಾಡುವರು

ಪ್ರತಿಭಟನೆಯ ಕಿಚ್ಚಿರದ ಜನ ಸಾಮಾನ್ಯರು
ಮೌನವಾಗಿ ಮರುಗುವರು ಬಿಗಿ ನಗುವಿನಲಿ
ಆತ್ಮ ಸ್ಥೈರ್ಯವ ತೊರೆದು ಜೀವಿಸುವರಿವರು
ಯಾರದೋ ಸಹಾಯಾಸ್ತದ ನಿರೀಕ್ಷೆಯನಿಟ್ಟು

ಸರಕಾರಿ ಸಲಕರಣೆಗಳ ಅಗಾಧ ಕೊರತೆಯಿಂದ
ಗುಣಾತ್ಮಕ ಶಿಕ್ಷಣ, ಆರೋಗ್ಯ ಮರೀಚಿಕೆಯು
ಬಡವರ ಕನಸುಗಳ ಸಾಮೂಹಿಕ ಕೊಲೆಗೈದು
ಪ್ರಜಾಸತ್ತೆಗೆ ಮುಖಭಂಗ ಮಾಡಲೆತ್ನಿಸುವರು

ಸರಕಾರಿ ಸವಲತ್ತಿಗೆ ಸೀಮಿತವಾಗಿದೆ ಬದುಕು
ಸಾಮರ್ಥ್ಯವನು ಬೆಳೆಸುವ ಅವಕಾಶವಂಚಿತರು
ಉದ್ಯೋಗಕೆ ಪರದಾಡುತಾ ದಿನ ದೂಡುತಾ
ಭಾರವಾಗಿ ಸಮಾಜಕೆ ನಿರತ್ಸಾಹದ ನಿಟ್ಟುಸಿರು

ಸಕಲ ಸವಲತ್ತುಗಳು ಶ್ರೀಮಂತರ ಸ್ವತ್ತಾಗಿ
ಪ್ರಗತಿಯ ಫಲವು ಇವರಿಗೇ ಮೀಸಲಾಗಿ
ನೆರೆಹೊರೆಯವರಲಿ ಅಸಮಾಧಾನದ ಕಿಡಿ
ಎಂದು ಸಿಡಿಯುವುದೋ ಜ್ವಾಲಾಮುಖಿಯಾಗಿ

ಜಾಣನೇ ಇದನರಿತು ಒಡನೆಯೇ ಜಾಗೃತನಾಗು
ಎಲ್ಲ ಸ್ಥರಗಳ ಬೆಳವಣಿಗೆಯ ಕಾರ್ಯಕೆ ತಲೆದೂಗು
ಪ್ರತಿಭೆಯನು ಬೆಳೆಸುವ ಪರಿಸರವ ರೂಪಿಸುತಾ
ಪ್ರೋತ್ಸಾಹ ನೀಡುವಾ ಮುಕ್ತ ಮನಸಿನೊಂದಿಗೆ

ಉತ್ತಮ ಶಿಕ್ಷಣ, ಆರೋಗ್ಯವೆಲ್ಲರಿಗೆ ಸಿಗುವಂತಾಗಿ
ಮೇಲುಕೀಳು, ಮಲತಾಯಿ ಧೋರಣೆ ಬುಡಮೇಲಾಗಿ
ಈ ಕ್ಷೇತ್ರಗಳ ಉದ್ಯಮೀಕರಣಕಿಂದು ಕಡಿವಾಣವಿಟ್ಟು
ಆರೋಗ್ಯಕರ ಸಮಾಜಕೆಲ್ಲರೂ ಕೂಡಿ ದುಡಿಯೋಣ

Mar 10, 2008

ನಗರದ ಜೀವನ

ತಿಳಿಯೋ ಜಾಣ ನೀ ಮುರಿದು ಮೌನ
ಎಟುಕದ ವೇಗಕೆ ಸಿಕ್ಕಿ ತತ್ತರಿಸಿದವನ
ಕೈಗೆ ಬಂದುದ ಬಾಯಿಗೆ ಬಾರದುದನ
ಚಿಂತೆಯ ಮಾಡುತಾ ಚಿತೆಯೇರಿದವನ

ಬರಮಾಡುವುದು ಎಲ್ಲರನು ಅನವರತ
ಬೆಳೆದ ಹಲವರ ಮಾದರಿಗೆ ತೋರುತ
ಬಗೆಬಗೆಯ ಚಿತ್ತಾರ ಬೆಳಕಿನವತಾರ
ಮಬ್ಬುಗತ್ತಲಲಿ ಕುರುಡಾಗಿ ತಡಕುವರ

ನೀರಿಲ್ಲ, ಬೆಳಕಿಲ್ಲ, ಶುದ್ಧ ಉಸಿರಾಟವಿಲ್ಲ
ಏರಿಳಿತ ಕಿರುಚಾಟ ಅಸಹ್ಯ ಶಬ್ಧ ನಿಲ್ಲಲ್ಲ
ತೊಟ್ಟು ನೆಮ್ಮದಿಯಿಲ್ಲ, ಬಿಟ್ಟು ಬಂದೆಲ್ಲ
ಬಿಸಿತುಪ್ಪ ಭ್ರಾಂತಿಗೆ ಬೆರಗಾಗದವರಿಲ್ಲ

ರಭಸದಿಂದೊರೆಸುತಾ ನುಗ್ಗುವ ಜನರ
ಸಾಗರವೇ ಸುತ್ತ ಮುತ್ತಿದೆ ಮಹಾನಗರ
ಭರದಿಂದ ಭರಿಸಲಾಗದ ಬೆಲೆಯಬ್ಬರ
ಬಕಾಸುರನುಳಿಸುವುದು ಬರೀ ಗೊಬ್ಬರ

ಸ್ಪರ್ಧೆಗೆ ಸಾಮರ್ಥ್ಯವು ಮಾನದಂಡವಲ್ಲ
ನುಸುಳುವ ಗೂಳಿಯ ಪಳಗಿಸ ಬಲ್ಲವರು
ಹಲವು ಹಾದಿ ಬೀದಿಗಳನು ಸುತ್ತುವವರು
ಮೂರು ಬಿಟ್ಟವರು ಈ ಊರಿಗೆ ದೊಡ್ಡವರು

ಎಡಬಿಡಂಗಿ ಸಹವಾಸಕೆ ಎಡವಿ ಬಿದ್ದೆವಲ್ಲ
ಆಸೆಯ ಮಣಿಗಳಿಂದ ಹೆಣೆದ ಹಾರಗಳೆಲ್ಲ
ಹಾದಿ ಅರಿಯುವ ಮನಸು ನಮಗುಳಿದಿಲ್ಲ
ಮುಖವಾಡವಿರದೇ ಹೊರಗೆ ಬಾರಲೊಲ್ಲ

ಮತಿಗೆಟ್ಟು, ಮತಿಯ ಬದಿಗಿಟ್ಟು ಹೊರಟು
ಉರಿವ ಬೆಂಕಿಗೆ ಸುರಿವ ತೈಲದ ತೊಟ್ಟು
ಭುಗಿಲೆದ್ದು ಭುಸುಗುಡುತ ಹಿಡಿದಿಹ ಜುಟ್ಟು
ಪಾಪದ ಪರಿಗೆ ಹೆದರದೇ ಪರಿಸರಕೆ ಪೆಟ್ಟು

ಎಲ್ಲಾ ಮೌಲ್ಯಗಳ ಗಾಳಿಗೆ ತೂರುವವರೆಲ್ಲ
ಹಣಗಳಿಕೆ ಮೌಲ್ಯಮಾಪನವಾಗಿರಲೆಮಗೆ
ಭಾವನೆಗೆ ಬೆಲೆಯಿರದ ಯಾಂತ್ರಿಕ ಬದುಕಿಗೆ
ಆದರೂ ಆತುರದಿ ಬೀಳುವರೆಲ್ಲರಿದರ ಬಲೆಗೆ

Mar 8, 2008

ಕ್ಷಣಮಾತ್ರಕೆ

ಮೂರು ಆರಾಗಲಿ, ಆರು ನೂರಾಗಲಿ
ಕಾಣದ ಗೋಡೆಗಳಲವು ಎದುರಾಗಲಿ
ಇರುವ ಗೂಡಿನಿಂದೆತ್ತಿ ಹೊರಹಾಕಲಿ
ಇರದ ಇರುವೇ ನಮಗೆ ವರವಾಗಲಿ

ಕೊಡುವ ಕಿರುಕುಳಗಳು ಕ್ಷಣಮಾತ್ರಕೆ
ಶಕ್ತಿ, ಸಾಹಸವ ಬಳಸಿ ನೆಪ ಮಾತ್ರಕೆ
ದೂರುತಲೇ ದೂಡುವವನಿವ ದಿನವನು
ಪರರ ಪರಿಮಿತಿಗಳಲಿವ ಸಂತಸವನು

ಜಾರು ಬಂಡೆಯಮೇಲೆ ನಡೆದಾಡುವನು
ಬತ್ತಿದ ಬಾವಿಯಲಿವ ಈಜಲೆತ್ನಿಸುವನು
ತಾನೆ ಹೆಣೆದ ಬಲೆಯಲ್ಲೇ ಬಳಲುವವನು
ಭಾರವನೊತ್ತು ತಿರುಗುವಾ ಪಾಪದವನು

ಸರಳ ತಿರುಳುಗಳನಿವ ತೆಗೆದೊಗೆವನು
ಮಾಸಿದ ಮರ್ಮಗಳ ಮರವಾಗಿಸಿಹನು
ತಿಳಿಗೇಡಿ ತಿರುಕನಿವ ತಿಳಿದಂತಾಡುವ
ತಿರುಗಿ ಮರುಗುವವನು ತಿಳಿಯಲೆತ್ನಿಸದೆ

ಪದದ ಪದಕವ ಪಡೆದ ಪದವೀಧರ
ಸಕಲ ಸಲಕರಣೆಗಳಿದ್ದರೇ ಸುಖಕರ
ಕೃತಕ ಕೊರತೆಗಳನೊತ್ತ ಸರದಾರ
ಎಲ್ಲೆ ಮೀರಿದ ಆಸೆಗಳಿಗಿಲ್ಲ ಉತ್ತರ

ಹಗಲಿರುಳಿನಂದವನುಂಡವನೆ ಜಾಣ
ಪಡೆದಿರುವ ಗೊಂದಲಗಳಾಗ ಗೌಣ
ತಂಗಾಳಿ ಸವಿಯುವಾ ಮನಕೆ ಔತಣ
ಅನುಭವಿಸು ಬದುಕು ನೀ ಪ್ರತೀ ಕ್ಷಣ

Mar 6, 2008

ಮೌನ ಬಂಗಾರ

ಮೌನದೊಳಾಡಿದ ಮಾತು ಮುತ್ತು
ಆಗಲಾರದಾಗ ಯಾರಿಗೂ ಆಪತ್ತು
ಊಹೆಗಳೊಡನೆ ಅವರ ಕಸರತ್ತು
ಬೇಕಾದ ಉತ್ತರವೇ ಆಗ ಸಿಕ್ಕೀತು!

ಮಾತು ಬೆಳ್ಳಿ, ಮೌನ ಬಂಗಾರ
ಆದರೂ ನಮಗೇಕೀತರದ ಆತುರ
ಆಹಾ! ಬಂಗಾರ ಮಡದಿ ಸಿಂಗಾರ
ನಗುವಿನಲೇತಕಿವಳಿಷ್ಟು ಸುಂದರ

ಇವರಂತರಾಳ ಯಾರ್ಯಾರಿಗೆ ಗೊತ್ತು
ನೋವುಂಡ ಮಹನೀಯರಿಗಿದರ ತುತ್ತು
ಅನುಭವದಾರುಂಡ ಚೆಂಡಾಡಿ ಗುಂಡ
ಆದಾನು ಇವ ನಾಳೆ ಗಂಡ ಬೇರುಂಡ

ಸುಮ್ಮನಿರಲಾರದವನಿರುವೆ ಮೇಲೆರೆದಂತೆ
ಮಾತನಾಡುತಲಿವ ಮತಿಗೆಡಸಿಕೊಂಡತೆ
ಸತಿ ನೀನು, ಮತಿ ನೀನು ಅಂದರೇನಂತೆ
ನಿಜ ನುಡಿವೆ ಜಾಣನೇ ನಿನಗಿರದು ಚಿಂತೆ

ಗುಟ್ಟು ಬಿಟ್ಟರೆ ಗೆಳೆಯ ಕಟ್ಟೆ ಹೊಡೆದಂತೆ
ಗಟ್ಟಿಯಾಗಿರು ನೀನು ಜುಟ್ಟು ಹಿಡಿದಂತೆ
ಆದಿ ಕೇಶವರಾಯ ವರ ಕೊಡುವನಂತೆ
ಮುದೆಂದಿಗಿರದು ನಿನಗಾವ ಕೊರತೆ

ಮೌನದಾಮಂತ್ರವನು ಪಠಿಸುತಾ ನೀನು
ಮರಣದಂಡನೆಯನು ನೀ ಗೆಲ್ಲ ಬಹುದು
ಸುಮ್ಮನಿರು ಕಂದ ಜೋ ಜೋ ಮುಕುಂದ
ಇದನರಿತು ನಡೆದರೆ ಚಂದ ನಿತ್ಯಾನಂದ

Mar 5, 2008

ತುಟಿಯ ಚಿಹ್ನೆ

ಸುಮ್ಮನೆ ಸುಮ್ಮಸುಮ್ಮನೇ ನಿನ್ನಾಣೆ
ಸುಳ್ಳು ಹೇಳುವವನಲ್ಲನಾ ನಂಬು ಕಣೆ
ನನ್ನ ಮನದನ್ನೆ ನಿನ್ನೆ ನೋಡಿದೆ ಕೆನ್ನೆ
ಅದಕೊಮ್ಮೆ ಕೊಡಲೇನು ತುಟಿಯ ಚಿಹ್ನೆ

ಹೊತ್ತಿ ಉರಿಯುವುದು ನನ್ನಲ್ಲಿ ಬೆಂಕಿ
ಕಂಡಾಗ ಯಾರೋ ನಿನ್ನನೇ ಅಣುಕಿ
ಅಟ್ಟಹಾಸದಿ ಮೆರೆದವ ನಿನ್ನ ಕೈಕುಲುಕಿ
ಬಿಡಲು ಸಾಧ್ಯವೇ ಅವಗೆ ಕೊಟ್ಟು ಧಮ್ಕಿ

ಒಲವಿನೋಲೆಯನೆಸೆದೆ ಕಸದ ಬುಟ್ಟಿಗೆ
ತುಟಿಕಚ್ಚಿ ಸಹಿಸಿ ತೋರಗೊಡದೆ ನಿನಗೆ
ಮೊನಚಾದ ಚೂರಿಯಂತಿರುವ ಮಾತಿನ
ಕದನ ನಾ ನಗುವಿನಲೇ ಮಾಡಿದೆ ಶಮನ

ಅನಿಸಿತೂ ಎಲ್ಲವೂ ಪ್ರೇಮ ಪರೀಕ್ಷೆಯಂತೆ
ಉತ್ತರಿಸಿರಿವೆನಾದರೂ ಬಿಡದಲ್ಲಾ ಚಿಂತೆ
ದೂರ ದೂರಕೆ ಸರಿವೆ ಬೇಸರವಿರುವಂತೆ
ಅನಿಸುತಿದೆ ನನಗೇಕೋ ಬಳಿ ಬರುವಂತೆ

ಗೆಳತಿ ಬೇಹುಗಾರಿಕೆಯ ಬೆಂಬಲವಿರಲೆನಗೆ
ಆದರೂ ಎಲ್ಲವನು ತಿಳಿಸುವ ಬಯಕೆ ನಿನಗೆ
ಸಂಯಮದಿ ಕಾದಿರುವೆ ತಿಳಿದಿರಲು ನಿನಗೆ
ನಟಿಸುವೆ ಜಾಣೆ ನೀ ಇನ್ನೂ ಎಲ್ಲಿಯವರೆಗೆ

ನಿನಗೆ ತಿಳಿದಿರಲಿ ನಾನಲ್ಲ ಸಂತ, ಶರೀಫ
ಹೊತ್ತು ಮುಳುಗುವ ತನಕ ಮಾತ್ರವೇ ಜಪ
ಕತ್ತಲು ಜಾರುವ ಮುನ್ನವೇ ಕೊಡುವೆ ನೆಪ
ಮತ್ತೆ ಕನಸಿನಲಿ ಮರೆವೆನೆಲ್ಲಾ ಕೋಪ

ಬಯಸುವೆ

ಪ್ರಚಲಿತದಿಂದ ವಿಚಲಿತನಾಗದೆ
ಉತ್ಕಟತನಕೆ ವಿಮುಖನಾಗದೆ
ಕಂಡ ಮಾದರಿಗೆ ಮರುಳಾಗದೆ
ಜಾಹೀರಾತಿಗೆ ಮಾರುಹೋಗದೆ

ವಿಕೇಂದ್ರೀಕೃತ ಪ್ರಕ್ರಿಯೆಗಳನು
ಸ್ಥಿರ ಚಿತ್ತದಿ ಬಡಿದೋಡಿಸುವೆನು
ವಕ್ರ ಕುಣಿತವನಾನಂದಿಸುವರನು
ವಿನಮ್ರತೆಯಿಂದಲೇ ಬೇಡುವೆನು

ಕುಸಿವ ಮಾನವೀಯ ಮೌಲ್ಯಗಳ
ಸೂಕ್ಷ್ಮ ನೈತಿಕ ಪ್ರಶ್ನೆಗಳು ಬಹಳ
ವಿಕಾಸದ ವಿಶಾಲತೆಯನರಿಯಲು
ಪರ್ಯಾಯ ದೃಷ್ಟಿಯಿಂದ ಕಾಣಲು

ಕುಣಿಯುವ ಮನವನು ಪಳಗಿಸಲು
ಆಂತರಿಕ ನೆಲೆಗಳ ಜೊತೆಗೂಡಲು
ಸಾಮಾಜಿಕ ಮಾದರಿಯು ಬೆಳಗಲು
ಭವಿಷ್ಯವು ಉಜ್ವಲದ ಪಥವಿಡಿಯಲು

ಹಿಂಸಾ ಮಾರ್ಗವ ವಿರೋಧಿಸುವೆ
ಗಾಂಧಿಗಿರಿಯನು ಬಲ ಪಡಿಸುವೆ
ಪ್ರಜಾಸತ್ತೆಯಲಿ ನಂಬಿಕೆಯನಿಟ್ಟು
ಸಾಮ್ರಾಜ್ಯಶಾಹಿಯಾ ದ್ವೇಷಿಸುವೆ

ಕೇಳೋ ಶಿವ

ಅನಿಸಿಕೆಗಳ ಬಿಡಿಸಿಡಲು
ಅಪ್ಪಣೆಯು ಅನಿವಾರ್ಯವೇ
ನನ್ನೊಳಗಿರುವ ನನ್ನನು
ಕಾಣಲು ಕಾರಣದಗತ್ಯವೆ

ಆವಿಷ್ಕರಿಸುವ ಆತುರಕೆ
ಪರಿಷ್ಕರಿಸುವ ತಂತ್ರದಿ
ವ್ಯಕ್ತಿ ಸ್ವಾಯತ್ತತೆಯನು
ಕಾಯ್ದುಕೊಳ್ಳುವ ಈ ಬಗೆ

ಸಂದಿಗ್ಧ ಪರಿಸ್ಥಿತಿಯಲಿರೆ
ವಿಕಾಸದ ವಿಸ್ತರಣೆಗೆ ಬಲ
ಆಳ, ಹಂದರ, ಅಗಲವೆಲ್ಲಾ
ಮನಸ್ಥಿತಿಗೆ ನೀಡುವ ಛಲ

ನನ್ನಲ್ಲಿ ನಾ ಹುಡುಕುತಿರುವೆ
ಕಳೆದುಕೊಂಡೇನೆಂದರಿಯದೆ
ಪಡೆದೆನೇನೇನೋ ತಿಳಿಯದೆ
ಸುಮ್ಮನೆ ಕುಳಿತಿರಲಾಗದೆ

ನನಗೆ ನೆಚ್ಚಿದ ಆಪ್ತರೆಲ್ಲರನು
ಜಗವ ತಿಳಿಸುವ ಗುರುವನು
ಒಲವು ನೀಡಿ ಸೆಳೆದವರನು
ಕೇಳೋ ಶಿವನವರ ಬಿಡನು

Mar 4, 2008

ಕ್ಷಮೆಯಾಚನೆ

ಯಾವ ಮಾಯೆಯ ಮೋಡಿಗೆ ಸಿಲುಕಿದೆ
ಆವ ಪರಿಯ ಕ್ರಮಕೆ ನೀ ತಲೆತೂಗಿದೆ
ಕರುಳ ಕುಡಿಗಳ ಕಸಿದು ಕಟುಕ ನೀನಾದೆ
ಮಾತೆಯ ಮಮತೆ ಮಗುವಿಗೆ ಸಿಗದೇ

ನೋವ ಬಣ್ಣಿಸಲು ಸಾಧ್ಯವೇ ಮರುಳೇ
ಮುಗ್ದ ಕಂದಮ್ಮಗಳ ಚೀರಾಟ ತರವೇ
ತಾಯಿ ಚಡಪಡಿಸಿ ಭಯದ ಆಕ್ರಂದನ
ತಂದೆ ಮೌನದಲೇ ಮರುಗಿದಾ ದಿನ

ಹಕ್ಕಿಗೂಡನು ಕಿತ್ತೆಸೆದು, ಚುಕ್ಕಿಗಳ ಚಲ್ಲಾಡಿ
ಗಳಗಳನೆ ಗೋಳಿಟ್ಟವೇ ಗತಿಯ ಅರಿಯದೆ
ಮೂಕವಾಗಿಯೇ ಕೊರಗಿ ಕರುಳು ಕತ್ತರಿಸಿರಲು
ಸರಳವಾಗಿಯೇ ಮುಗಿಸಿ ನೀ ನಿಟ್ಟುಸಿರಿಡಲು

ಈ ಬಗೆಯ ಕ್ರೂರಿಯು ನೀನಾದೆ ಆ ಜನಕೆ
ಕುರುಡಾಗಿ ಕಾಡಿರುವೆ ಸತತ ಬಲವಾಗಿ
ಕಿವುಡಾಗಿ ನಟಿಸಿ ಅಸಹಾಯಕರ ಕರೆಗೆ
ದಶಕಗಳು ಅಮಾನವೀಯತೆಯನೆಸಗಿ

ಹುಚ್ಚು ನಾಗರೀಕತೆಯ ಹೆಸರಿನ ಹಿನ್ನಲೆ
ಕೊಚ್ಚಿ ಹಾಕಿರುವೆ ಅವರ ಅಸ್ತಿತ್ವದ ನೆಲೆ
ಚುಚ್ಚು ಮಾತಿನಿಂದ ಬೆಚ್ಚಿ ಬೀಳಿಸುತಿರುವೆ
ಮುಚ್ಚಿಹಾಕುವ ಯತ್ನಕೆ ಮತ್ತೆ ಸೋತಿರುವೆ

ಅಮಾನುಶವಾಗಿ ಕೊಲೆಗೈದೆ ಮುಗ್ದರನು
ಕೇಡುಗನು ನೀನಾಗಿ ಕಿತ್ತೆಸೆದೆ ಇರುವನು
ಅಣ್ಣನಾ, ಅಕ್ಕನಾ, ತಮ್ಮನಾ, ತಂಗಿಯಾ
ಅಲ್ಲಲ್ಲಿ ಹಂಚಿದೇ ಅಟ್ಟಹಾಸ ಮೆರೆದು ನೀನು

ತೋರಿಕೆಯ ಸಮಾಜದಿ ನೆಮ್ಮದಿ ಸಿಗುವುದೇ
ಬೇಡಿಕೆಗಳ ಜಗಕೆ ಕರೆತಂದು ಕೈಬಿಟ್ಟಿರುವೇ
ಅನಾಗರೀಕತೆಯಲಿ ಜಾಗರೂಕತೆ ಸಾಧ್ಯವೇ
ತನ್ನವರು ಜೊತೆಗಿರದ ಪಯಣವು ಸಂತಸವೇ

ಕೆರೆಯ ಮೀನು ಕ್ಷೀರ ಸಾಗರವ ಬಯಸುವುದೇ
ಹಾರುವ ಹಕ್ಕಿಯು ಪಂಜರದ ಸುಖ ಬೇಡುವುದೇ
ಸರಳ ಚಿತ್ತವನರಿಯಲು ವರುಷಗಳ ಅವಶ್ಯವೇ
ಕ್ಷಮೆಯಾಚನೆಯಿಂದ ನೋವು ಮರೆಯಾಗುವುದೇ

( ಆಸ್ಟ್ರೇಲಿಯಾ ಪ್ರಧಾನಿ ಬುಡಕಟ್ಟಿನ ಜನಾಂಗಕ್ಕೆ
ಕ್ಷಮೆಯಾಚಿಸಿದ ಹಿನ್ನಲೆಯಲ್ಲಿ )

Mar 3, 2008

ಕಾಯುವೆನು

ಕಾಯುವೆನು ಕಾತುರವ ತ್ಯಜಿಸಿ
ಆತಂಕವ ಹಾರಿಹೋಗುವವರೆಗೆ
ಉದ್ರೇಕದ ಊರುಗೋಲನಗಲಿ
ಆವೇಶವು ಅಂತ್ಯವಾಗುವವರೆಗೆ

ವ್ಯಂಗ್ಯದ ನಿಯಂತ್ರಣಕೆ ಬಾಗದೆ
ವಿಮರ್ಶೆಯ ಧಾಳಿಗೆ ಸೋಲದೆ
ಆದರ್ಶದ ಹಾದರಕೆ ನಾ ಹೆದರದೆ
ಆತುರದ ಗರಿಗೆದರಿ ನಾ ಹಾರದೆ

ಅಂಕಿ, ಸಂಖ್ಯೆಗಳ ಸೋಂಕುಗಳಿರದೆ
ಪ್ರಶಂಸೆಗಳ ಸೆಳೆತಕೆ ಸರಿಯೆನ್ನದೆ
ನಿಟ್ಟುಸಿರು ಒತ್ತಾಯಕೆ ಉತ್ತರವಾಗದೆ
ಹಗಲಿರುಳು ಗೊಂದಲದ ಗೂಡಾಗದೆ

ಅನುಭವದ ಅನಂತತೆಯನಾದರಿಸಿ
ಸ್ಪಷ್ಟತೆಯ ಅನುಭಾವಕೆ ತಲೆಬಾಗಿಸಿ
ಸರಳತೆಗೆ, ಮುಗ್ಧತೆಗೆ ಮನದೂಗಿಸಿ
ಪ್ರಾಮಾಣಿಕತೆ ಜೊತೆಗೆ ನಾ ಪಯಣಿಸಿ

ಅಂತರಾಳದ ಆಶಯಗಳಿಗೆ ದನಿಯಾಗಿ
ಹೊರ ಜಗಕೆ ನಾನೆಸೆವ ಸವಾಲಿಗಾಗಿ
ನಾ ನಾನಾಗಲು ಯತ್ನಿಸಿ ದೃಢವಾಗಿ
ಅರಿವನು ಹರಿಸಿ ನೆನಪಿನ ನದಿಯಾಗಿ