Showing posts with label ಎಜ್ರ ಪೌಂಡ್. Show all posts
Showing posts with label ಎಜ್ರ ಪೌಂಡ್. Show all posts

Jan 12, 2009

ಬೆಕ್ಕಿನ ನಿಯಂತ್ರಣ

ಸುಂದರ ಮಹಿಳೆಯರ ಜೊತೆಗಿರಲು ಬಯಸುತ್ತೇನೆ,
ಯಾವಾಗಲೂ ಹೀಗೇಕೆ, ನಾವು ಇಂತಹ ವಿಷಯಗಳಲ್ಲಿ ಸುಳ್ಳು ಹೇಳುತ್ತೇವೆ?
ಮತ್ತೆ ಮತ್ತೆ ಅದನ್ನೇ ಹೇಳ ಬಯಸುತ್ತೇನೆ:
ಸುಂದರ ಮಹಿಳೆಯರ ಜೊತೆ ಮಾತನಾಡಲು ನಾನು ಸದಾ ಹಾತೊರೆಯುತ್ತೇನೆ,
ನಮ್ಮ ಮಾತುಗಳು nonsense ಆದರೂ ಅಡ್ಡಿಯಿಲ್ಲ.
ಯಾವುದೋ ಕಾಣದ ಆಕರ್ಷಣೆಯೊಂದು ನಮ್ಮನ್ನು ಸೆಳೆಯುತ್ತಿರುತ್ತದೆ,
ಅದನ್ನು ಅನುಭವಿಸಲು ಅಮೋಘ ಹಾಗು ಅಹ್ಲಾದಕರವಾಗಿರುತ್ತದೆ.

( ಮೂಲಕವಿ: ಎಜ್ರ ಪೌಂಡ್ )

ಘಟನೆ

ಅವರೆಲ್ಲರೂ ಯಾವುದೋ ಹೊಸ ನೈತಿಕತೆಯ ವಿಷಯದ
ಬಗ್ಗೆ ಸುದೀರ್ಘವಾಗಿ ಮಾತನಾಡುತ್ತಿದ್ದಾರೆ,
ಅವಳ ಮಾದಕ ಕಣ್ಣುಗಳು ನನ್ನನ್ನು ತೀವ್ರವಾಗಿ ಕೆಣಕುತ್ತಿವೆ,
ಮತ್ತೆ ನಾನು ಎದ್ದು ಹೊರಡುವಾಗ,
ಅವಳ ಬೆರಳುಗಳು ಜಾಪನೀಸ್ ನ್ಯಾಪ್ಕಿನ್ ಟಿಸ್ಸ್ಯೂ
ಪೇಪರಿನಷ್ಟು ಮೃದುವಾಗಿದ್ದವು.

( ಮೂಲ ಕವಿ: ಎಜ್ರ ಪೌಂಡ್ )

ದಿಗ್ಭ್ರಮೆ

ನಾನು ಎಚ್ಚರಿಕೆಯಿಂದ ನಾಯಿಗಳ,
ಕುತೂಹಲಕರ ಹವ್ಯಾಸಗಳನ್ನು ಗಮನಿಸಿದಾಗ,
ನಾನು ಒತ್ತಾಯಪೂರ್ವಕವಾಗಿ ಮಾನವ ಪ್ರಬಲ ಹಾಗು
ಪ್ರಬುದ್ಧ ಪ್ರಾಣಿಯೆಂದು ತೀರ್ಮಾನಿಸಿದ್ದೇನೆ.

ಆದರೆ,
ನಾನು ಮಾನವನ,
ಕುತೂಹಲಕರ ಹವ್ಯಾಸಗಳನ್ನು ಗಮನಿಸಿದಾಗ,
ಸ್ನೇಹಿತರೆ,
ನಾನು ದಿಗ್ಭ್ರಮೆಗೊಂಡಿದ್ದನ್ನು ನಿಸ್ಸಂಕೋಚವಾಗಿ
ಒಪ್ಪಿಕೊಳ್ಳುತ್ತೇನೆ.

( ಮೂಲಕವಿ: ಎಜ್ರ ಪೌಂಡ್ )

ಮತ್ತಷ್ಟು ಸೂಚನೆಗಳು

ಬನ್ನಿ ನನ್ನ ಹಾಡುಗಳೇ, ನಮ್ಮ ಭಾವಗಳ, ಉತ್ಕಟಾಕಾಂಕ್ಷೆಗಳ
ವ್ಯಕ್ತಪಡಿಸೋಣ.
ಭವಿಷ್ಯತ್ತಿನ ಪರಿವಿರದೆ, ಸ್ಥಿರ ಹಾಗು ನಿಧಾನಗತಿಯ ಕಾಯಕದಲ್ಲಿ
ಮಗ್ನನಾಗಿರುವ ಆ ವ್ಯಕ್ತಿಯ ಮೇಲೆ ನಮಗಿರುವ ದ್ವೇಷ, ಅಸೂಹೆಗಳ ತಿಳಿಸೋಣ.
ನೀವೇಕೆ ಸುಮ್ಮನಿರುವಿರಿ ನನ್ನ ಹಾಡುಗಳೇ,
ನೀವು ಭಯಾನಕವಾಗಿ ಅಂತ್ಯಗೊಳ್ಳುವಿರೆಂದು ನನಗೆ ಭಯವಾಗುತ್ತಿದೆ.
ನೀವು ನಡುರಸ್ತೆಗಳಲ್ಲಿ, ಸಂದು-ಗೊಂದುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಪರದಾಡುವಿರಿ,
ನೀವು ಸಂಪೂರ್ಣವಾಗಿ ನಿಷ್ಪ್ರಯೋಜಕರಾಗುವಿರಿ.

ನೀವು ನಮ್ಮಲ್ಲಡಗಿರುವ ಸಹಜ ಒಳಭಾವಗಳ ತಿಳಿಸಲು ಹಿಂಜರಿಯುವಿರಿ,
ನೀವು ಖಂಡಿತ ಭಯಾನಕ ಅಂತ್ಯ ಕಾಣುವಿರಿ.

ಮತ್ತೆ ನಾನು, ನಾನಾಗಲೇ ಅರ್ಧ ಹುಚ್ಚನಾಗಿದ್ದೇನೆ.
ನಾನು ನಿಮ್ಮೊಂದಿಗೆ, ನಿಮ್ಮಂತಾಗುವಷ್ಟು ಮಾತಾಡಿದ್ದೇನೆ,
ನೀವು ಕೆಟ್ಟ ಹುಳಗಳು, ನಾಚಿಕೆಯಿಲ್ಲದ ನಗ್ನ ಮೂರ್ತಿಗಳು.

ಅದರೆ ನೀನು, ಈಗಷ್ಟೇ ಜನ್ಮಪಡೆದ ಹೊಸ ಹಾಡು,
ನಿನಗಿನ್ನೂ ಚೇಷ್ಟೆ ಮಾಡುವಷ್ಟು ವಯಸ್ಸಾಗಿಲ್ಲ ಬಿಡು.
ನಾನು ನಿನಗೆ ಡ್ರಾಗನ್ ಚಿತ್ರ ಬಿಡಿಸಿರುವ,
ಹಸಿರು ಕೋಟು ಚೈನಾದಿಂದ ತರಿಸುತ್ತೇನೆ.
ಸಂತ ಮಾರಿಯ ನೊವೆಲ್ಲಾದ, ಬಾಲವಿಗ್ರಹ ಕ್ರೈಸ್ತನಿಂದ;
ನಿನಗೆ ಹೊಳೆವ ರೇಷ್ಮೆ ಪ್ಯಾಂಟನ್ನು ತರಿಸುತ್ತೇನೆ.
ನಮಗೆ ಸದಭಿರುಚಿಯಿಲ್ಲವೆಂದು ಅವರು ದೂರಬಹುದಷ್ಟೇ,
ಅಥವಾ ನಮ್ಮ ಕುಟುಂಬದಲ್ಲಿ ಜಾತಿಗಳೇ ಇಲ್ಲವೆನ್ನಬಹುದು.

( ಮೂಲ ಕವಿ: ಎಜ್ರ ಪೌಂಡ್ )

ಗೆಳತಿ

ನೀನು ಕಗ್ಗತ್ತಲಿಂದ ಹೊರಬಂದವಳು,
ಕೈಯಲ್ಲಿ ಕಂಗೊಳಿಸುವ ಪರಿಮಳ ಭರಿತ ಹೂಗಳೊಂದಿಗೆ,
ಈಗ ನಿನ್ನ ಬಗ್ಗೆ ತೀವ್ರ ಕಹಿ ಮಾತುಗಳಾಡುವವರಿಂದ,
ಗೊಂದಲಗಳಲ್ಲಿ ಸಿಕ್ಕಿ ನರಳುವವರಿಂದ ಖಂಡಿತ ಹೊರಬರುವೆ.

ಏಕೆಂದರೆ, ನಾನು ನಿನ್ನ ಅತ್ಯಂತ ಶ್ರೇಷ್ಠ,
ಹಾಗು ಸಂತೃಪ್ತಿಯ ಕ್ಷಣಗಳನ್ನು ಕಂಡಿದ್ದೇನೆ.
ನಿನ್ನ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವರ ಕಂಡು ಕೋಪಗೊಂಡಿದ್ದೇನೆ.
ನನ್ನ ಮನಸು ಸ್ಥಿರ ಹಾಗು ಶಾಂತವಾಗಿರಲೆಂದು ಸದಾ ಪ್ರಾರ್ಥಿಸುತ್ತೇನೆ, ಆದರೂ
ಈ ಜಗತ್ತು ಸತ್ತು ಒಣಗಿದ ಎಲೆಗಳಂತಾಗಬೇಕು, ಅಥವಾ
ಹೊಳೆಯಲ್ಲಿ ಕೊಚ್ಚಿಕೊಂಡೋಗುವ ಕಸ - ಕಡ್ಡಿಯಂತಾಬೇಕೆಂದು ಬಯಸುತ್ತೇನೆ.
ಆಗಲೇ ನಿನ್ನ ಒಬ್ಬಂಟಿಯಾಗಿ ಮತ್ತೆ ಕಾಣುವ ಸದಾವಕಾಶ
ನನ್ನದಾಗುತ್ತದೆ.

(ಮೂಲ ಕವಿ: ಎಜ್ರ ಪೌಂಡ್ )

Jan 11, 2009

ಪರಿಪೂರ್ಣವಲ್ಲ

ಮತ್ತೆ ದಿನಗಳು ಪರಿಪೂರ್ಣವಲ್ಲ
ಮತ್ತೆ ರಾತ್ರಿಗಳೂ ಪರಿಪೂರ್ಣವಲ್ಲ
ಮತ್ತೆ ಬದುಕು ಮಾತ್ರ ಉರುಳುತ್ತಿದೆ,
ಬಯಲ ಇಲಿಯೊಂದು ಹುಲ್ಲನ್ನೂ ಸಹ
ಅಲುಗಾಡಿಸದೆ ಮುನ್ನುಗ್ಗುವ ಹಾಗೆ.

( ಮೂಲ ಕವಿ: ಎಜ್ರ ಪೌಂಡ್ )