Jan 12, 2009

ಮತ್ತಷ್ಟು ಸೂಚನೆಗಳು

ಬನ್ನಿ ನನ್ನ ಹಾಡುಗಳೇ, ನಮ್ಮ ಭಾವಗಳ, ಉತ್ಕಟಾಕಾಂಕ್ಷೆಗಳ
ವ್ಯಕ್ತಪಡಿಸೋಣ.
ಭವಿಷ್ಯತ್ತಿನ ಪರಿವಿರದೆ, ಸ್ಥಿರ ಹಾಗು ನಿಧಾನಗತಿಯ ಕಾಯಕದಲ್ಲಿ
ಮಗ್ನನಾಗಿರುವ ಆ ವ್ಯಕ್ತಿಯ ಮೇಲೆ ನಮಗಿರುವ ದ್ವೇಷ, ಅಸೂಹೆಗಳ ತಿಳಿಸೋಣ.
ನೀವೇಕೆ ಸುಮ್ಮನಿರುವಿರಿ ನನ್ನ ಹಾಡುಗಳೇ,
ನೀವು ಭಯಾನಕವಾಗಿ ಅಂತ್ಯಗೊಳ್ಳುವಿರೆಂದು ನನಗೆ ಭಯವಾಗುತ್ತಿದೆ.
ನೀವು ನಡುರಸ್ತೆಗಳಲ್ಲಿ, ಸಂದು-ಗೊಂದುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಪರದಾಡುವಿರಿ,
ನೀವು ಸಂಪೂರ್ಣವಾಗಿ ನಿಷ್ಪ್ರಯೋಜಕರಾಗುವಿರಿ.

ನೀವು ನಮ್ಮಲ್ಲಡಗಿರುವ ಸಹಜ ಒಳಭಾವಗಳ ತಿಳಿಸಲು ಹಿಂಜರಿಯುವಿರಿ,
ನೀವು ಖಂಡಿತ ಭಯಾನಕ ಅಂತ್ಯ ಕಾಣುವಿರಿ.

ಮತ್ತೆ ನಾನು, ನಾನಾಗಲೇ ಅರ್ಧ ಹುಚ್ಚನಾಗಿದ್ದೇನೆ.
ನಾನು ನಿಮ್ಮೊಂದಿಗೆ, ನಿಮ್ಮಂತಾಗುವಷ್ಟು ಮಾತಾಡಿದ್ದೇನೆ,
ನೀವು ಕೆಟ್ಟ ಹುಳಗಳು, ನಾಚಿಕೆಯಿಲ್ಲದ ನಗ್ನ ಮೂರ್ತಿಗಳು.

ಅದರೆ ನೀನು, ಈಗಷ್ಟೇ ಜನ್ಮಪಡೆದ ಹೊಸ ಹಾಡು,
ನಿನಗಿನ್ನೂ ಚೇಷ್ಟೆ ಮಾಡುವಷ್ಟು ವಯಸ್ಸಾಗಿಲ್ಲ ಬಿಡು.
ನಾನು ನಿನಗೆ ಡ್ರಾಗನ್ ಚಿತ್ರ ಬಿಡಿಸಿರುವ,
ಹಸಿರು ಕೋಟು ಚೈನಾದಿಂದ ತರಿಸುತ್ತೇನೆ.
ಸಂತ ಮಾರಿಯ ನೊವೆಲ್ಲಾದ, ಬಾಲವಿಗ್ರಹ ಕ್ರೈಸ್ತನಿಂದ;
ನಿನಗೆ ಹೊಳೆವ ರೇಷ್ಮೆ ಪ್ಯಾಂಟನ್ನು ತರಿಸುತ್ತೇನೆ.
ನಮಗೆ ಸದಭಿರುಚಿಯಿಲ್ಲವೆಂದು ಅವರು ದೂರಬಹುದಷ್ಟೇ,
ಅಥವಾ ನಮ್ಮ ಕುಟುಂಬದಲ್ಲಿ ಜಾತಿಗಳೇ ಇಲ್ಲವೆನ್ನಬಹುದು.

( ಮೂಲ ಕವಿ: ಎಜ್ರ ಪೌಂಡ್ )

No comments: