Dec 7, 2007

ಜೇಡರ ಬಲೆ*

ಏಕತಾನತೆಯ ಭೂತ
ಕಾಡುತ್ತಿದೆ ಸತತ
ಬೆನ್ನಟ್ಟಿ ಬರುತ್ತಿದೆ
ನೊಂದ ನನ್ನ ಬಿಡದೆ.

ಎಲ್ಲೆಲ್ಲು ಕಗ್ಗತ್ತಲು
ದ್ವೇಷ ರಾಗದ ತಂತಿ
ಮೀಟಿದ ಹಾಡನ್ನು ಕೇಳುವವರಾರು?

ನಾ ಹೆಣೆದ ಜೇಡರ ಬಲೆ
ನನ್ನನ್ನೇ ಮುತ್ತಿದೆ ಇಂದು
ತಿಳಿಯದೆ ಸೇರಿದ ನೆಲೆಯಿಂದ
ಹೊರಬರುವೆನು ನಾ ಎಂದು?

ಬಿಡುಗಡೆಯ ಕೋರಿ
ಕೂಗುವೆನು ಪ್ರತಿಸಾರಿ
ಬಿಟ್ಟು ಬಂದವರನ್ನು
ನಾ ಎಂದು ಸೇರುವೆನು?

ಕಡಲ ಕಿನಾರೆ*

ಈ ಕಡಲ ಕಿನಾರೆ
ಕಣ್ತಣಿಸುವ ಜಲಧಾರೆ
ಹೊಮ್ಮುವ ಹಾಲಿನ ನೊರೆ
ಅನಂತ ಅಮೃತಧಾರೆ.

ಸನಿದಪ ಅಲೆಗಳ ಚಲನ
ಜುಮ್ಮನೆರಗುವಾಲಿಂಗನ
ಮತ್ತದೇ ಸಿಹಿ ಚುಂಬನ
ತೇಲಾಡುತಿದೆ ನನ್ನ ಮನ.

ಸುಯ್ಯನೆ ನುಸುಳುವ ತಂಗಾಳಿ
ಹಾರುವ ಹಕ್ಕಿಯ ರಂಗೋಲಿ
ಒಡಲು ತೂಗುವ ಉಯ್ಯಾಲೆ
ಮನದಲ್ಲಿ ಹಾಡಿನ ಸರಮಾಲೆ.

Dec 4, 2007

ಕತ್ತಲೆಯೆಡೆಗೆ...*

ಸಕಲ ಬಲ್ಲವನೆಂಬವರ
ಅರಿವಿಲ್ಲದೆ ನುಡಿವವರ
ಇವರೆಲ್ಲರ ನಡಿಗೆ
ಕತ್ತಲೆಯೆಡೆಗೆ ...

ಭಾವಗಳ ಬೆಸೆಯದೆ
ಕನಸುಗಳ ಬೆನ್ನತ್ತದೆ
ನಡೆಯುವ ನಡಿಗೆ
ಕತ್ತಲೆಯೆಡೆಗೆ ...

ಆಸೆಯ ಕುದುರೆಯನೇರಿ
ಮದ-ಮತ್ಸರಗಳ ತೋರಿ
ಮುನ್ನಡೆವವರ ನಡಿಗೆ
ಕತ್ತಲೆಯೆಡೆಗೆ ...

ನೆರೆಹೊರೆಯ ಪರಿವಿರದೆ
ಜೊತೆಗಾಗಿ ಯಾರಿರದೆ
ಸಾಗುವ ನಡಿಗೆ
ಕತ್ತಲೆಯೆಡೆಗೆ ...

Dec 2, 2007

ಹನಿಗವನ*

ಬರಿಬೇಕಂತ
ಹನಿಗವನ
ಸಂಜೆ ಬಾರಿಗೆ
ಹೊಂಟೆ.

ಈ ಸುಂದರ ತಾಣ
ಆ ಜಾಣರ ಮೌನ
ಮದಿರೆಯ ಪಾನ
ಮಂಜುಳ ಗಾನ.

ಮೆಲ್ಲನೆ ಮತ್ತೇರಿಸಿತ್ತು
ನಡೆದಿತ್ತೇನೋ ಗಮ್ಮತ್ತು
ಮನಸ್ಸು ಬಿಸಿಯಾಗಿತ್ತು
ಆಗ ಗಂಟೆ ಹನ್ನೊಂದಾಗಿತ್ತು.

ಕಿಸೆಗೆ ಕತ್ತರಿ
ಮನಕೆ ಕಿರಿಕಿರಿ
ಬರೆಯಲಿ ಹ್ಯಾಂಗ ಹನಿಗವನ
ಮರೆಯಲಿ ಹ್ಯಾಂಗ ಮಧುಪಾನ?

Dec 1, 2007

ಇವನ ಕವನ

ಬರಿಬೇಕಂತ
ಹನಿಗವನ
ಬಾರಲಿ ಕುಂತ
ವನಾ

ಮದಿರೆಯ ಪಾನ
ಕೊಳಲಿನ ಗಾನ
ಮತ್ತಿನ ಗಮ್ಮತ್ತು
ಮನ ಬಿಸಿಯಾಗಿತ್ತು

ಜೋಬಿಗೆ ಕತ್ತರಿ
ಮನೆಯಲಿ ಕಿರಿಕಿರಿ
ಮರೆಯಲಿ ಹ್ಯಾಂಗ ಇವನ
ಬರೆಯಲಿ ಹ್ಯಾಂಗ ಕವನ

ನಿನ್ನ ಜೊತೆಗೆ

ಒಪ್ಪಿ ಅಪ್ಪಿಕೊ ಗೆಳತಿ
ಹಳೆಯ ನೆನಪುಗಳ ದೂಡಿ
ಒಲವಿನ ಆಸರೆ ನೀಡಿ
ಬೆಳಕು ಕರಗುವ ಮುನ್ನ

ನೊಂದ ಮನವನು ತೊಳೆದು
ಬಿಂಕ-ಬಿನ್ನಾಣಗಳ ತೊರೆದು
ಚಂದ ಚಿತ್ತದಿಂದ ಚೆಲುವೆ
ಕಿರು ನಗೆಯ ನೋಟ ನನಗಾಗಿ

ಜೊತೆ ಜೊತೆಗೆ ನಡೆವೆ
ಭಾವ ಬೆಸುಗೆಯ ಬೀಸಿ
ಕಲ್ಲು ಮಣ್ಣುಗಳ ನಡುವೆ
ಕೈ ಹಿಡಿದು ಮುನ್ನಡೆಸುವೆ