May 14, 2008

ಕವನ ನೀನು

ಕಥೆಯು ನೀನು ಕವನ ನೀನು
ಜೀವ ನೀನು ಜಗವು ನೀನು
ನನ್ನಾಸೆ ನೀನು ಭಾಷೆ ನೀನು
ಕನಸು ನೀನು ಮನಸು ನೀನು

ಗೆಳತಿ ನೀನು ಗೆಳೆಯ ನಾನು
ಜೊತೆ ನೀನಿರೆ ಬೇರೆ ಬೇಕೇನು
ಸುಖನಿದ್ರೆಯನು ಹೆದರಿಸಿರುವೆ
ಮುಗ್ಧ ಮುಖದಿ ಸುಮ್ಮನಿರುವೆ

ನೂರಾರು ಪ್ರಶ್ನೆ ಎಸೆದು ನೀನು
ಮೌನದಲೇ ಉತ್ತರವ ಕೊಡುವೆ
ಬೆಳಕಿದ್ದ ಕಡೆ ಕತ್ತಲು, ಕತ್ತಲಿದ್ದೆಡೆ
ಬೆಳಗೋ ಬಾಳಜ್ಯೋತಿ ನೀನು

ದಿನವು ಜಗಳ ಇರಲು ಬಹಳ
ಸರಳ ನುಡಿಯ ಸರಸ ಗಾಳ
ನಿನ್ನ ನಗುವಲ್ಲೇ ಬೆಳದಿಂಗಳ
ಮನ ಮನೆಯ ಬೆಳಗುವವಳ

ಸಂಸಾರ ಸಾಗರದಿ ತೇಲುತಲೇ
ಬಿರುಗಾಳಿಗೆ ಎದೆಯೊಡ್ಡಿ ನಿಲ್ಲುತ
ತಂಗಾಳಿಯ ಸುಖ ನನಗೆ ನೀಡುತ
ಸದಾ ನಿಲ್ಲದೇ ಸಾಗುವ ನದಿ ನೀನು

ಪರಿಮಳ ಭರಿತ ಪುಷ್ಪಗಳ ರಸವೀರಿ
ಗೂಡಾಗಿಸಿ ಜೇನಾಗಿಸಿ ಅದರಲಿರಿಸಿ
ರಸಭರಿತ ಫಲಗಳ ಕಾದಿರಿಸಿ ವಾರೆ
ನೋಟದಿ ಎಲ್ಲ ತಿಳಿಸೊ ಜಾಣೆ ನೀನು

ಬೆಳಕು ನೀನು ಬದುಕು ನೀನು
ಸುರಿವ ಮಳೆ ಹನಿಯು ನೀನು
ಬಿಸಿಲು ನಾನು ಬೆವರು ನೀನು
ಇರಲು ಜೊತೆಗೆ ನಾನು ನೀನು

ಜಯವಾಗಲಿ

ಜಯವಾಗಲಿ ಜಯವಾಗಲಿ ಜಾಣ ಜಾಣೆಯರಿಗೆ
ತುದಿಗಾಲಲ್ಲಿ ನಿಂತು ನಿಲ್ಲದೇ ಮಾತಾಡುವವರಿಗೆ
ಜಗದ ನಿಯಮದಂತೆ ಜಾರುತಿರಲಿ ಆಗಸದಿಂದ
ಬೆಳಕು ಬೆಳದಿಂಗಳು ಕಗ್ಗತ್ತಲು ಹೊಳೆವ ತಾರೆಗಳು
ಹಾಗೆ ಎಂದಿನಂತೆ ಮುಂಗೋಪ ತರವೇ ಅವರಿಗೆ
ನಿಲ್ಲದಿರಲಿ ಬೆಳ್ಳಿಮೋಡ ಕರಗಿ ಹನಿಯಾಗಿ ಇಳೆಗೆ
ಮುಂಗಾರು ಹಿಂಗಾರು ಸೋನೆ ಮಳೆಯಾಗಿ ಧರೆಗೆ
ಇಟ್ಟವರಾರಿದಕೆ ಮನಬಂದಂತೆ ಹೆಸರುಗಳನೆಷ್ಟೋ
ಅರ್ಥವಾಗದ ನಿಗೂಢ, ಮೂಢ, ಮರ್ಮಗಳೆಷ್ಟೋ
ಬಲ್ಲವರು ಬಲ್ಲಿದರು ಬದುಕಲಿ ಇಲ್ಲಿಯೇ ಕೊನೆವರೆಗೆ
ಎಂದಿನಂತೆ ಚಿಂತೆಮಾಡದೇ ನಾಳೆ ನಾಳಿನ ಕಂತೆ
ದಿನವೂ ದೂಡುವುದು ಹೊಸತಲ್ಲ ತಿಳಿದಿದೆ ನಮಗೆ
ಇದ್ದರೇನಂತೆ, ಬಿದ್ದರೇನಂತೆ, ಎದ್ದರೇನಂತೆ ಚಿಂತೆ
ಜಗವು ನಡೆಯುತಿರೆ ದಿನವು ಅದರ ನಿಯಮದಂತೆ
ಕೂಡುವುದು ಕೂಡಿಡುವುದು ಬಡವನಿಗೆ ಕೊಡದಂತೆ
ಅವರವರ ಕರ್ಮವಷ್ಟೇ ದೇವರ ನಿರ್ಧಾರ ಸೌಜನ್ಯಕೆ
ಅವರವರ ಪಾಲು ಅವರವರ ಹೇಳಿಗೆ ತಕ್ಕ ಪ್ರಯತ್ನಕೆ
ಕೊಡಬಲ್ಲೆ ದೇವರಿಗೆ, ದೇಗುಲಕೆ ನಿತ್ಯ ನೈವೇಧ್ಯಕೆ
ಅವನ ಕೊಳೆ ತೊಳೆದು ನಿತ್ಯ ನಿರ್ಮಲ ಕೋಮಲನ ,
ಕೇಶವನ ಪೂಜಿಸುವವರಿಗೆ, ನಿತ್ಯ ಸುಮಂಗಳಿ
ಮುಂದೊಂದು ಬೇಡಿಕೆಯಿಟ್ಟು ಪಾಪ ಕರ್ಮಗಳ
ತೊಳೆದು ಆರೋಗ್ಯ ಐಶ್ವರ್ಯ ಸಂತಾನ ಪ್ರಾಪ್ತಿಗೆ
ಇರಲಿ ಜಗ ಎಂದಿನಂತೆ ಹಾಗಿದ್ದಲ್ಲಿ ಸುಖ ನಮಗೆ
ತಿಳಿವು ತಿರುವುಗಳು ಎಲ್ಲರ ಸ್ವತ್ತಾಗಲು ಬಿಡದೆ
ಸಕಲ ಯತ್ನವು ಸಹ ಸಾಧ್ಯವಾಗದಿರಲೆಂಬ ಬಯಕೆ
ಜಯವಾಗಲಿ ಜಯವಾಗಲಿ ಜಾಣ ಜಾಣೆಯರಿಗೆ
ತುದಿಗಾಲಲ್ಲಿ ನಿಂತು ನಿಲ್ಲದೇ ಮಾತಾಡುವವರಿಗೆ

May 13, 2008

ನಮಗೆಲ್ಲಿ ನೆಲೆ

ಬರಿ ಬಿಸಿಲಲ್ಲವೋ ಅಣ್ಣ ಇದು ಉರಿವ ಬೆಂಕಿ
ಉಳಿಗಾಲವೆಲ್ಲಿ ಬರಗಾಲವೇ ಮತ್ತೆ ಹುಡುಕಿ
ಉಸಿರುಗಟ್ಟಿರಲು ಉಸಿರಾಡಲಿಲ್ಲ ಶುದ್ಧ ಗಾಳಿ
ನೆಲೆಗೆ ನೆಲೆ ಇಲ್ಲದಿರೆ ಇನ್ನು ನಮಗೆಲ್ಲಿ ನೆಲೆ

ಸ್ಪರ್ಧೆ ಏಕೋ ಮರುಳೆ ಮತಿಗೆಟ್ಟ ಮನಸಿಗೆ
ಹುಸಿ ಬದುಕು ನಡೆಸಿ ಕೃತಕ ನಗುವೆ ಹೊರಗೆ
ಯಾರ ಮೆಚ್ಚಿಸಲು ಈ ಪರಿಯ ಆವೇಶ, ವೇಷ
ಖಾಲಿ ಕೊಡಕೆ ಕಾವು ಕೊಡುವುದೇನು ವಿಶೇಷ

ನೋಟವೆಲ್ಲಾ ಮನೆ ಒಳಗೆ ಮನೆಯ ಮಂದಿಗೆ
ಒಡನಾಟ, ಆ ಆಟ, ಈ ಮಾಟ ಸಹ ಸ್ವಹಿತಕೆ
ಸಹಜವಾದರೂ ಸರಿದಾರಿಯ ಸ್ನೇಹದ ಬಯಕೆ
ಕೈಗೊಂಡ ಕಾರ್ಯದಿಂದ ಪ್ರತಿಕೂಲ ಪ್ರತಿಫಲಕೆ

ಬೆಟ್ಟ ಹೊತ್ತಂತೆ ಮುಖ ಬಾಡಿಹುದು ಗೆಳೆಯ
ಬೇಕಿತ್ತೇ ನಮಗಿದು ನಾವೇ ತಂದ ಪ್ರಳಯ
ಕೃತಕ ಬೆಳಕಿನ ಸರಸ ಸರಿಯಲ್ಲ ಜೀವಭಯ
ಇರುವುದೂಂದೇ ಈಗ ನಮಗಿರುವ ಉಪಾಯ

ಇಂದಿಟ್ಟ ಬೀಜ ನಾಳೆ ಸಸಿಯಾಗಿ, ಗಿಡವಾಗಿ ,
ಮರವಾಗಿ, ಹೆಮ್ಮರವಾಗಿ, ಹಸಿರು ನೀಡುತ
ನೆರಳಾಗಿ, ಹೂವಾಗಿ, ಕಾಯಾಗಿ, ಹಣ್ಣಾಗಿ
ನಾಳೆ ಬರುವ ನಮ್ಮವರ ಬದುಕು ಹಸನಾಗಿ

ಹಣವಲ್ಲವೋ ಹೆಣವೇ ನಮ್ಮ ನಾಳೆಗೆ ನೆರವು
ಹಸಿರೇ ನಮಗೆ ಉಸಿರು ತಡ ಮಾಡಬೇಡವೋ
ಪುಟ್ಟ ಕಂದಮ್ಮನ ನಗು ಹೊಮ್ಮಲಿ ಬೆಳದಿಂಗಳು
ಚಂದದ ಹೆಸರಿಟ್ಟವರಿಗೆ ಜಗವು ಹಸಿರಾಗಿರಲು

ಗೆರೆ ಎಳೆದು

ಗೆರೆ ಎಳೆದು ಆ ಪರಿಧಿಯೊಳಗೆ
ನನ್ನ ನಾ ಹುಡುಕುವುದರೊಳಗೆ
ನಿನ್ನೆ ಸರಿದಾಗಿತ್ತು ಆಗಲೇ
ಈ ದಿನ ಪರಿಚಯವಾಗುವಲ್ಲೇ

ಗೆರೆಯಾಚೆಗೊಮ್ಮೆ ದಿಟ್ಟಿಸುವ
ಹಂಬಲ ಆಗಾಗ ಹೊಮ್ಮಿ
ಹೊರಟಿತ್ತು ನನಗದರ
ಅರಿವು ಮೂಡುವ ಮೊದಲೇ

ನಾನೇನು ಸುಮ್ಮನೆ ನಿಂತವನಲ್ಲ
ಎಲ್ಲರಂತೆ ಗೊಂದಲಗಳಿದ್ದವಲ್ಲಾ
ಅವರ ನೋಡಿಯೇ ನನಗೆ
ಪಾಠ ಕಲಿಯಬೇಕಿರಲಿಲ್ಲ ನಿಜವೇ

ಅವರಂತೆ ನಾನಾಗಲೂ ಸಾಧ್ಯವೆ
ಆದರೂ ಅದು ನ್ಯಾಯವೇ
ನನ್ನ ಹಾದಿಯ ಪರಿ ಹುಡುಕುವ
ಯತ್ನದಲೇ ನಾ ಕಳೆದು ಹೋಗಲೇ

ಇದ್ದ ಕ್ಷಣವನು ಒದ್ದು ಇರದ ನಾಳೆಯ
ಬಗ್ಗೆ ಕುರಿಯ ಮಂದೆಯ ಹಾಗೆ
ಮುಗ್ಗರಿಸಿ ಬಿದ್ದು ಎದ್ದು ಮತ್ತದೇ
ಜಾಗಕ್ಕೆ ಸಂಜೆ ಮರಳಿ ಬರಲೇ

ಎಲ್ಲ ಧಿಕ್ಕರಿಸಿ ಕಣ್ಮುಚ್ಚಿ ಒಮ್ಮೆಗೆ
ಗೆರೆಯ ದಾಟಿ ನಾ ಹೊರಟು ಬಿಡಲೇ
ಇರುವಲ್ಲಿ ಮತ್ತೆ ಮರಳಿ ಬರದ ಹಾಗೆ
ಇನ್ನೆಲ್ಲೋ ನನ್ನ ನಾ ಕಂಡುಕೊಳ್ಳಲೇ

ಇದ್ದಲ್ಲೇ ಇದ್ದು ನರಳಿ ನಾರಾಗುವ ಮುನ್ನ
ಕೊನೆಯ ಪುಟವೂ ಓದಿ ಮುಗಿಸುವ ಮುನ್ನ
ಕತ್ತಲ್ಲಲ್ಲೇ ಬದುಕು ಕಳೆದು ಹೋಗುವ ಮುನ್ನ
ಬೆಳಕು ಇರುವಲ್ಲಿಗೇ ಗೆರೆಯಾಚೆಗೊಮ್ಮೆ ನಾ ಓಡಲೇ

May 12, 2008

ನಿನ್ನ ಮನದಂಗಳದಿ

ನಿನ್ನ ಮನದಂಗಳದಿ ನಲಿಯಬೇಕೆಂದಿರುವೆ
ನಿನ್ನ ಕಣ್ಣಿನಾಳದಿ ಜಗವ ಕಾಣಬೇಕೆಂದಿರುವೆ
ನಿನ್ನ ನಗುವಿನಲೇ ಮಗುವಾಗಬೇಕೆಂದಿರುವೆ
ನಿನ್ನ ನೋವಿಗೆ ನಾ ಕಣ್ಣೀರ ಹರಿಸಬೇಕೆಂದಿರುವೆ

ನನ್ನ ಜಡಮನಕೆ ನೀನು ಚಲನ ತಂದಿರುವೆ
ಭಾವವರಿಯದ ನನಗೆ ಬದುಕು ಕಲಿಸಿರುವೆ
ಕಥೆಯು ಮುಗಿಯುವ ಮುನ್ನ ಜೊತೆಗಿರುವೆ
ನೀನನ್ನ ಕತ್ತಲ ಪಯಣಕೆ ಬೆಳಕ ತಂದಿರುವೆ

ಭರಪೂರ ನಾನಿನ್ನ ನೋಡಬೇಕೆಂದಿರುವೆ
ನಿನ್ನ ಮಾತಿನ ಸಿಹಿ ಸವಿಯಬೇಕೆಂದಿರುವೆ
ಮುಂಜಾವಿಗೆ ಕಾದು ಬೆಳಗಾಗಲು ನಾನೆದ್ದು
ಗಡಿಬಿಡಿಗೆ ಬೆರಗಾಗಿ ಅಮ್ಮ ನೋಡಲು ಕದ್ದು

ನನ್ನ ಬದಲಾದ ನಡತೆಗೆ ಉತ್ತರ ನೀನಲ್ಲವೆ
ಒಮ್ಮೆ ನಿನ್ನ ಅಮ್ಮನಿಗೆ ಪರಿಚಯಿಸಿ ಬಿಡುವೆ
ಆಗಲೇ ನನಗೆ ನೆಮ್ಮದಿ, ನಿಟ್ಟುಸಿರು ಚೆಲುವೆ
ಧೈರ್ಯದಿ ದಿನವು ನಿನ್ನ ನೋಡಲು ಬರುವೆ

ನವಿರಾದ ನೂರು ಕಣ್ಣಿನ ನವಿಲಗರಿಯ ಕಾಣಿಕೆ
ಮೃದು ನುಡಿಯ ಮಲ್ಲಿಗೆಗೊಂದು ಮತ್ತಿನಸರ
ನೆನಪಿಗೆ ನಿನ್ನ ಬೆರಳಿಗೊಂದು ಪ್ರೀತಿಯುಂಗುರ
ಜೋಪಾನ ಜಾಣೆ ನನ್ನ ಹೃದಯ ಬಲು ಹಗುರ

May 2, 2008

ಗಾಜಿನರಮನೆಯಲ್ಲಿ*

ಗಾಜಿನರಮನೆ ಕಟ್ಟಿ
ದೃಷ್ಟಿಬೊಂಬೆ ನೆಟ್ಟು
ಹಾದುಹೋಗುವರ ತಟ್ಟಿ
ನೆರೆಹೊರೆ ಮನ ಮುಟ್ಟಿದೆ.

ಸನಿಹ ಬಂದವರನೆಲ್ಲ
ದೂರ ದೂರಕೆ ಸರಿಸಿ
ಮನೆಮಂದಿ ನಡುವೆ
ಅಡ್ಡ ಗೋಡೆಯನಿರಿಸಿದೆ

ನಿಶ್ಚಿಂತನಾಗಲು ಬಯಸಿ
ನಿಶ್ಚಲ ಮನಸ್ಥಿತಿಯನರಸಿ
ನಿಶಾಚರನಾಗಿ ನಿಶೆಯಲಿ
ನಡೆದೆ.

ನೆಮ್ಮದಿ ಹೊರಗಟ್ಟಿ
ಚಿಂತೆ ಒಳಗೇ ಕಟ್ಟಿ
ಸಂತಸವ ಕೊಂಡು
ಕೃತಕ ನಗುವುಂಡೆನು.

ಲೆಕ್ಕಾಚಾರವೆಲ್ಲ
ಅದಲು ಬದಲಾಗಿ
ಒಬ್ಬಂಟಿ ತಾನಾಗಿ
ತನ್ನವರು ಇರದಾಗಿ...

ಮುಂಜಾನೆ ಮುಗಿಬಿದ್ದು
ಮಧ್ಯಾಹ್ನಕೆ ಮೇಲೆದ್ದು ನಿಂತರೆ
ಸಂಜೆ ಸರದಿಯಂತೆ
ಮತ್ತೆ ಅದೇ ಚಿಂತೆ.