May 22, 2009

ನನಗಾಗಿ ಅಲ್ಲ

ಏಪ್ರಿಲ್ ರಾತ್ರಿಗಳು ನಿಶ್ಚಲ ಮತ್ತು ಸುಮಧುರ
ಎಲ್ಲಾ ಮರಗಳು ಹೂವುಗಳಿಂದ ಶೃಂಗಾರಗೊಂಡಿರುತ್ತವೆ
ನೆಮ್ಮದಿಯೆಂಬುದು ನಿಶಬ್ಧವಾಗಿ ಅವರ ಬಳಿಗೆ ನಡೆದು ಬರುತ್ತದೆ
ಆದರೆ ನನಗಾಗಿ ಅಲ್ಲ.

ನನ್ನ ನೆಮ್ಮದಿ ಅವಿತುಕೊಂಡಿದೆ ಅವನ ಹೃದಯದಲ್ಲಿ
ಅಲ್ಲಿಗೆ ಹೋಗಲು ನನಗೆ ಸಾಧ್ಯವಿಲ್ಲ,
ಈ ರಾತ್ರಿ ಎಲ್ಲರಿಗೂ ಪ್ರೀತಿ ಸಿಗುತ್ತದೆ
ಆದರೆ ನನಗಾಗಿ ಅಲ್ಲ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಭಸ್ಮವಾದ ಪ್ರೀತಿ

ಸೊರಗಿದ ನನ್ನ ಪ್ರೀತಿಯನ್ನು ಬೂದಿಯಾಗಿಸುವೆ
ಆ ಮರದಡಿಯಲ್ಲಿ,
ಆಗಸವ ಚುಂಬಿಸಲು ಹಾತೊರೆಯುವ ದಟ್ಟ ಕಾಡಲ್ಲಿ
ಯಾರಿಗೂ ಕಾಣದಂತೆ.

ಅವನ ತಲೆಗೆ ಯಾವ ಹೂವುಗಳನ್ನೂ ಹಾಕುವುದಿಲ್ಲ,
ಪಾದದ ಬಳಿ ಕಲ್ಲನ್ನೂ ಸಹ ನೆಡುವುದಿಲ್ಲ,
ಅವು ತೀವ್ರವಾಗಿ ಪ್ರೀತಿಸಿದ ತುಟಿಗಳು
ಕಹಿಯಾದ ಸಿಹಿ.

ಅವನ ಸಮಾಧಿಯ ಹತ್ತಿರ ಇನ್ನೆಂದೂ ಸುಳಿಯುವುದಿಲ್ಲ,
ತೀಕ್ಷ್ಣವಾಗಿ ತಂಪಾಗಿರುವ ಮರಗಳಿರುವುದರಿಂದ.
ಸಾಧ್ಯವಾದಷ್ಟೂ ಸಂತಸ ಪಡೆಯಲೆತ್ನಿಸುವೆ
ನನ್ನ ಕೈಗಳು ಹಿಡಿಯುವಷ್ಟು.

ದಿನ ಪೂರ ಹೊರಗೇ ಕಳೆಯುತ್ತೇನೆ ಸೂರ್ಯನಿರುವಲ್ಲಿ,
ವಿಶಾಲವಾಗಿ ಬೀಸುತ್ತಿರುವ ಮುಕ್ತ ಗಾಳಿಯಲ್ಲಿ,
ಆದರೂ ಸಹ, ಪ್ರತೀರಾತ್ರಿ ಅಳುತ್ತಾ ಕಣ್ಣೀರಿಡುತ್ತೇನೆ
ಯಾರಿಗೂ ತಿಳಿಯದ ಸಮಯದಲ್ಲಿ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 21, 2009

ಪ್ರೀತಿಯ ನಂತರ

ಇನ್ನು ಅಲ್ಲಿ ಯಾವ ಮೋಡಿಯೂ ನಡೆಯುವುದಿಲ್ಲ
ಎಲ್ಲರಂತೆಯೇ ನಾವೂ ಸಹ ಭೇಟಿಯಾಗುತ್ತೇವೆ
ನೀನು ಯಾವ ವಿಸ್ಮಯವನ್ನೂ ನನ್ನಲ್ಲಿ ಸೃಷ್ಟಿಸಲು ಆಗುತ್ತಿಲ್ಲ,
ಹಾಗೇ ನಾನೂ ಸಹ ನಿನ್ನಲ್ಲಿ.

ನೀನು ಬೀಸುವ ಗಾಳಿಯಾಗಿದ್ದೆ ಮತ್ತೆ ನಾನು ಸಾಗರ---
ಅಲ್ಲಿ ಯಾವ ಅದ್ಭುತವೂ ಘಟಿಸುವುದಿಲ್ಲ
ನಾನು ಬೆಳೆದಿದ್ದೇನೆ ಲೆಕ್ಕವಿಲ್ಲದಷ್ಟು
ದಡದ ಪಕ್ಕದಲ್ಲಿರುವ ಹೊಂಡದಂತೆ.

ಆದರೆ, ಹೊಂಡವು ಭೋರ್ಗರೆವ ಅಲೆಗಳು ಅಪ್ಪಳಿಸುವುದರಿಂದ ಪಾರಾದರೂ
ಮತ್ತೆ ಅಲೆಗಳ ತೀವ್ರ ಏರಿಳಿತಗಳನ್ನು ಕ್ರಮೇಣ ಕ್ಷೀಣಿಸಿ ನಿಲ್ಲಿಸಿದರೂ
ಅದು ಸಾಗರಕ್ಕಿಂತಲೂ ಹೆಚ್ಚು ಕಹಿಯಾಗಿ ಬೆಳೆಯುತ್ತದೆ
ಎಲ್ಲಾ ಅದರ ನೆಮ್ಮದಿಗಾಗಿ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

“ನಿನಗೆ ಗೊತ್ತಾಗಲೇ ಇಲ್ಲವೇ?”

ನಿನಗೆ ಗೊತ್ತಾಗಲೇ ಇಲ್ಲವೇ, ತುಂಬಾ ಹಿಂದೆ, ನೀನೆಷ್ಟೊಂದು ನನ್ನ ಪ್ರೀತಿಸುತ್ತಿದ್ದೆ ಎಂದು---
ನಿನ್ನ ಪ್ರೀತಿ ಎಂದಿಗೂ ಕಡಿಮೆಯಾಗುವ, ಮತ್ತೆ ಕಳೆದು ಹೋಗುವ ಸಾಧ್ಯತೆ ಇಲ್ಲವೇ ಇಲ್ಲವೆಂದು?
ನೀನು ಆಗ ಯೌವನದಲ್ಲಿದ್ದೆ, ಹೆಮ್ಮೆಯಿಂದ ತಾಜಾ ಹೃದಯದೊಂದಿಗೆ,
ತಿಳಿದುಕೊಳ್ಳುವುದಕ್ಕೆ ನೀನು ಸಾಕಷ್ಟು ಚಿಕ್ಕವನಾಗಿದ್ದೆ.

ವಿಧಿ ಬಿರುಗಾಳಿಯಿದ್ದಂತೆ, ಅದರ ಮುಂದೆ ಕೆಂಪು ಎಲೆಗಳು ಹಾರುತ್ತವೆ
ತುಂಬಾ ಬಿರುಕುಂಟಾಗಿದೆ, ವರ್ಷದಲ್ಲಿ ಸಂಭವಿಸಿದ ತೀಕ್ಷ್ಣ ಕಲಹಗಳಿಂದ---
ಇತ್ತೀಚೆಗೆ ನಮ್ಮ ಭೇಟಿ ವಿರಳ, ಆದರೂ ನೀನು ಮಾತನಾಡುವುದು ಕೇಳಿಸಿಕೊಂಡಾಗ
ನಿನ್ನ ಗುಟ್ಟೇನೆಂದು ಗೊತ್ತಾಗುತ್ತದೆ, ನನ್ನ ಪ್ರಿಯನೆ, ನನ್ನ ಗೆಳೆಯನೆ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ನಿನ್ನ ನೆನಪಾದಾಗ

ನಿನ್ನ ಬಗ್ಗೆ ಯೋಚಿಸಿದೆ, ನೀನು ಹೇಗೆ ಈ ಸೌಂದರ್ಯವನ್ನು
ಇಷ್ಟಪಡಬಹುದೆಂಬ ಕುತೂಹಲದಿಂದ,
ಹಾಗೇ ಈ ಉದ್ದನೆಯ ಕಡಲತೀರದಲ್ಲಿ ಏಕಾಂಗಿ ನಡೆಯುತ್ತಾ
ನಾನು ಕೇಳಿಸಿಕೊಂಡೆ, ಅಲೆಗಳು ಲಯಬದ್ಧವಾಗಿ ಬಿರುಸಾಗಿ ಸೀಳುವ ಸದ್ದನ್ನು
ಒಮ್ಮೆ ನೀನು ನಾನು ಅವುಗಳ ಹಳೆಯರಾಗವನ್ನು ಕೇಳಿಸಿಕೊಂಡಂತೆ.

ನನ್ನ ಸುತ್ತಲೂ ಮಾರ್ದನಿಸುವ ಮರಳು ಗುಡ್ಡಗಳು, ಹಿಂದೆ ಎಲ್ಲೋ
ತಣ್ಣಗೆ ಹಾಯಾಗಿ ಬೆಳ್ಳಿಯಂತೆ ಮಿಂಚುತ್ತಿರುವ ಸಾಗರ---
ನಾವಿಬ್ಬರೂ ಸಾವಿನ ಮುಕಾಂತರ ಸಾಗುತ್ತೇವೆ, ಹಾಗೇ ವಯಸ್ಸು ಹೆಚ್ಚಾದಂತೆ
ಮತ್ತೆ ನೀನು ಆ ಶಬ್ಧವನ್ನು ನನ್ನೊಂದಿಗೆ ಕೇಳುವ ಮೊದಲೇ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಏಕಾಂಗಿ

ಪ್ರೀತಿಯಿದ್ದರೂ ಸಹ, ನಾನು ಏಕಾಂಗಿ
ನಾನು ಎಲ್ಲವನ್ನೂ ಪಡೆದಿದ್ದರೂ, ನೀಡಿದ್ದರೂ ಸಹ
ನಿನ್ನ ನವಿರಾದ ಹಾರೈಕೆಯ ಜೊತೆಗಿದ್ದರೂ,
ಒಮ್ಮೊಮ್ಮೆ ಬದುಕುವ ಹಂಬಲ ನನಗಿಲ್ಲ.

ನಾನು ಒಬ್ಬಂಟಿ, ಅತಿ ಎತ್ತರದ ಶಿಖರದ ತುದಿಯಲ್ಲಿ
ನಿಂತಂತೆ ಅನ್ನಿಸುತ್ತದೆ, ದಣಿದು ಬತ್ತಿರುವ ಬರಡು ಜಗದಲ್ಲಿ,
ಕೇವಲ ಹಿಮವೊಂದೇ ನನ್ನ ಸುತ್ತುಲೂ ಮುತ್ತಿಕೊಂಡಂತೆ,
ನನ್ನ ಮೇಲೆ ಕೊನೆಯಿಲ್ಲದ ನೆಲೆಯೊಂದು ತೆರೆದಿಟ್ಟಂತೆ

ಮರೆಯಾದ ಭೂರಮೆ ಮತ್ತು ಅವಿತುಕೊಂಡ ಸ್ವರ್ಗ
ಕೇವಲ ನನ್ನಲ್ಲಿರುವ ಚೈತನ್ಯದ ಹೆಮ್ಮೆಯಿಂದಲೇ
ನನಗೆ ನೆಮ್ಮದಿಯಿಂದಿರಲು ಸಾಧ್ಯವಾಗಿದೆ
ಸತ್ತು, ಏಕಾಂಗಿಯಾಗಿರದೆ ಇರುವವರಿಂದ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ