Jun 4, 2009

ಬಿಂಬ – 10

ಸಾಧನೆಯ
ಸಾಧ್ಯತೆ ಎಂಬುದು
ಯಾವುದೇ ವ್ಯಕ್ತಿಯ
ಸರ್ವತೋಮುಖವಲ್ಲ
ಕೇವಲ ಕೆಲವೊಂದು
ಕ್ಷೇತ್ರಗಳಿಗಷ್ಟೇ
ಸೀಮಿತ.

ಬಿಂಬ – 9

ಕೋಪವೆಂಬುದು
ಯಾರಿಗೂ ಬೇಡದ,
ಎಲ್ಲರೂ ದ್ವೇಷಿಸುವ,
ನಿಯಂತ್ರಿಸಲು ಬಯಸಿ
ಸಂಪೂರ್ಣವಾಗಿ
ಯಶಸ್ಸಾಗದಿರುವುದು.
ಮತ್ತೆ ನಿಂರತರವಾಗಿ
ನಮ್ಮನ್ನು ಬಾಧಿಸುವ
ಒಂದು ದೊಡ್ಡ
ಕಾಯಿಲೆ.

ಬಿಂಬ – 8

ಪ್ರಾಮಾಣಿಕತೆ
ಎಂಬುದು ಎಲ್ಲರೂ
ಎಲ್ಲ ಸನ್ನಿವೇಶದಲ್ಲೂ
ಶೇಕಡಾ ನೂರರಷ್ಟು
ಅನುಸರಿಸದೆ/ಲಾಗದೆ
ಎಲ್ಲರಲ್ಲೂ ಅಪೇಕ್ಷಿಸುವ
ಮತ್ತು ನಿರೀಕ್ಷಿಸುವ
ಸದ್ಗುಣ.

Jun 3, 2009

ಸಾಲು – 6

- 1 -
ಆ ರಸ್ತೆ ಬದಿಯಲ್ಲಿ,
ಹೋಡಾಡುತ್ತಿರುವ ಜನರ ಸಮಕ್ಷಮದಲ್ಲೇ,
ಎಂಬತ್ತರ ಹರಯದ ಮುದುಕಿಯೊಬ್ಬಳು
ದುಷ್ಟ ಮಂತ್ರಿಯ ಪೋಸ್ಟರಿಗೆ
ಕ್ಯಾಕರಿಸಿ ಉಗಿದು ಗೊಣಗುತ್ತಿರುವುದನ್ನು
ಪ್ರಾಜಾಪ್ರಭುತ್ವದ ಸಾಧನೆಯೆನ್ನುವಿರೊ,
ಅಥವಾ ಅದರ ಅಣಕವೊ?

- 2 -
ಮಡದಿಯನ್ನು ಗಾಢವಾಗಿ ಮೋಹಿಸುವ
ಉನ್ಮತ್ತತೆಯಲ್ಲಿ, ಹಠಾತ್ತನೆ ಅವಳ ಕಿವಿಗೆ
ಗೆಳತಿಯ ಹೆಸರನ್ನು ಪಿಸುಗೊಟ್ಟಿದ್ದು,
ಅಂಧ ಪ್ರೇಮದ ಪ್ರತೀಕವೊ,
ಇಲ್ಲಾ ಅವನ ಅಂಧಕಾರವೊ?

- 3 -
ಎಲ್ಲ ಪಕ್ಷದ ನಾಯಕರು ಹೇರಳವಾಗಿ
ಹಂಚಿದ ಹೆಂಡ, ಹಣ, ಬಳುವಳಿಗಳನ್ನು
ವಿನಮ್ರವಾಗಿ, ಖುಷಿಯಾಗಿ ಸ್ವೀಕರಿಸಿದ ಮತದಾರ,
ನಂತರ ಎಲ್ಲರನ್ನೂ, ಎಲ್ಲವನ್ನೂ ಧಿಕ್ಕರಿಸಿ,
ತನ್ನಿಚ್ಛೆಯಂತೆ ಮತ ಚಾಲಾಯಿಸಿದ್ದು
ಅವನ ಧೀಮಂತಿಕೆಯ ಪ್ರತೀಕ ಅಲ್ಲವೆ?

- 4 -
ಅಲ್ಲಿ, ಕಳ್ಳಬಟ್ಟಿ ಸೆರೆಯೇರಿಸಿದ ಕಡು ಬಡವ
ಹಾದಿಯಲ್ಲೆಲ್ಲಾ ಸ್ವಚ್ಛಂದ ಹಾಡಿ ಕುಣಿದು
ಪಡೆಯುವ ಪರಮ ಸುಖ.
ಇಲ್ಲಿ, ಉತ್ಕೃಷ್ಟ ವಿದೇಶೀ ಮದ್ಯ ಸೇವಿಸಿದ
ಶ್ರೀಮಂತ ಏರಿದ ಅಮಲನ್ನು
ನಿಯಂತ್ರಿಸಲು ಪರದಾಡುವ ಸನ್ನಿವೇಶ
ವಿಪರ್ಯಾಸ ಅಲ್ಲವೆ?

Jun 1, 2009

ಮತ್ತೆ ಬರುವನು ಚಂದಿರ - 23

ಸುಪ್ತ ಮನಸಿನ ಸಂವೇದನೆ
ಭಾವಸ್ತರಗಳ ಕದವ ತೆರೆದು
ವಾಸ್ತವಗಳಿಗೆ ಸ್ಪಂದಿಸಿದರೆ
ಮುದಗೊಳ್ಳುವನೊ ಚಂದಿರ

ಕಣ್ಣಾಮುಚ್ಚಾಲೆಯಾಟ ತರವಲ್ಲ
ಎದುರುಗೊಳ್ಳುವ ಸ್ಥೈರ್ಯವಿರಲಿ
ಸೋಗುಹಾಕುವ ಸರದಿ ಬೇಡ
ಸೋತು ಹೋಗುವೆ ಚಂದಿರ

ತಂತ್ರಗಾರಿಕೆ ಸತತ ಸರಿಯೆ
ಯಂತ್ರ, ಮಂತ್ರಗಳೆಲ್ಲ ವ್ಯರ್ಥ
ಸಹಜ ಒಲವೇ ಬದುಕಿನ ಅರ್ಥ
ಈ ನಿಜವನರಿಯೊ ಚಂದಿರ

ಮುಖವಾಡ ತೊರೆಯೊ ಸ್ನೇಹಿತ
ಕೃತಕ ಕುಣಿತದ ಅಮಲು ವಿಕೃತ
ಅಂತರಾಳದ ಸಲಹೆಗಳ ಪಾಲಿಸು
ಒಳ ಜಗವು ನಗುವುದು ಚಂದಿರ

ನೋವು, ನಷ್ಟ, ದುಮ್ಮಾನಗಳ ನಡುವೆ
ನಿಲ್ಲದೇ ಸಾಗಲಿ ಹೋರಾಟ ಎಂದಿಗೂ
ಹಿತ, ಮಿತವಾಗಿ ಸಿಗುವ ಹಿತಾನುಭಾವ
ಬದುಕಿಗೆ ತೃಪ್ತಿ ಪಡೆಯಲು ಚಂದಿರ

ಆರಿಹೋಗುತ್ತಿದೆ ಸಂಸಾರದ ಹಣತೆ
ಸೋರಿಹೋಗುತ್ತಿದೆ ನಶ್ವರ ಬದುಕು
ಹಲಸಿಹೋಗುತ್ತಿವೆ ಸಂಬಂಧ, ಸ್ನೇಹಗಳು
ಸಲಹೆ ನೀಡೊ ಚಂದಿರ

ಮೃತ್ಯುಪ್ರಜ್ಞೆಯ ನೀಡಿದ ಅರಿವು
ವ್ಯರ್ಥವಾದ ಬದುಕಿನ ಪಯಣ
ಅಂತ್ಯದಲ್ಲಿಯೂ ಈ ಪಾಪಪ್ರಜ್ಞೆ
ಕಾಡುತಿರುವುದೊ ಚಂದಿರ

ವಿಫಲ ಜೀವನದ ಚಿತ್ರಣಗಳೆ
ಸತತ ನುಸುಳಿ ಕೆದಕುತಿರಲು
ಆತ್ಮಸಾಕ್ಷಿ ಎಸೆದ ಪ್ರಶ್ನೆಗಳನ್ನು
ತಿರಸ್ಕರಿಸಿದ ಪ್ರತಿಫಲವಿದು ಚಂದಿರ

ಪ್ರಕೃತಿಯೊಡನೆ ತಾದ್ಯಾತ್ಮ ಭಾವ
ಆತ್ಮಜ್ಞಾನದ ಬಲವಿರಲು ಜೊತೆಗೆ
ಎಲ್ಲಾ ವಿಕೃತಿಗಳನ್ನು ಮೆಟ್ಟಿ ನಿಲ್ಲುವ
ಸಾಧ್ಯತೆ ಇದೆಯೊ ಚಂದಿರ

ಬಾಳಿನ ಅಸಾಂಗತ್ಯ, ಅಪೂರ್ಣತೆ,
ನಿರಂತರತೆಯೊಳಗಿನ ಸಾರ್ಥಕತೆ
ಹುಟ್ಟು, ಸಾವಿನ ಅಂತರದಲ್ಲಿ ಬದುಕು
ಅರ್ಥಪೂರ್ಣವಾಗಿರಲಿ ಚಂದಿರ

ಸಾಲು - 5

- 1 -
ಮದ, ಮತ್ಸರ, ಕಾಮ, ಕ್ರೋಧ,
ಲೋಭ, ವ್ಯಾಮೋಹ ಮತ್ತು ಛಲ
ಇವುಗಳನೆಲ್ಲಾ ತೊರೆಯಬೇಕು
ಎನ್ನುವುದು ಶಿಷ್ಟರ ಸಲಹೆ.
ಆದರೆ, ಇವೆಲ್ಲವನ್ನು ತೊರೆದ ಮೇಲೆ
ಮನುಷ್ಯನಾಗಿ ಉಳಿಯುವ
ಸ್ಪಷ್ಟ ಸಾಧ್ಯತೆ ಅಥವಾ ಅರ್ಹತೆ ಇದೆಯೆ?

- 2 -
ಮದುವೆಯಾದ ಮೇಲೆ ಬೇರೆಯವರನ್ನು
ಬಯಸಬಾರದೆನ್ನುವುದು ಸಾಪೇಕ್ಷವಾದರೂ.
ಇಲ್ಲವೆಂದು ಯಾರಾದರೂ ದಿಟ್ಟ ಉತ್ತರ ಕೊಟ್ಟರೆ
ಸೋಗುಹಾಕುತ್ತಿದ್ದಾರೆಂಬುದು ಶೇಕಡಾ ನೂರರಷ್ಟು
ನಿಸ್ಸಂಶಯ ಅಲ್ಲವೆ?

- 3 -
ಪರಿಮಳ ಭರಿತ ಗುಲಾಬಿಯೊಂದು
ಚಿರಯೌವನದಲ್ಲಿ ತೇಲಾಡುತ್ತಾ
ಸಂದಿಗ್ಧ ಸನ್ನಿವೇಶದಲ್ಲಿ ಸಿಲುಕಿದೆ.
ಮೊದಲು ಅವಳ ಮುಡಿಗೆ ಮುತ್ತಿಡಲೊ,
ಅಥವಾ ಅವನ ಹೃದಯವನ್ನಪ್ಪಿಕೊಳ್ಳಲೊ
ಎಂಬುದರ ತೀವ್ರ ಗೊಂದಲದಲ್ಲಿ.
ಇದು ಸಮಯಾಭಾವದ ಸೃಷ್ಟಿ ಇರಬಹುದೆ?

- 4 -
ತುಂಟ ಬೇಟೆಗಾರನ ಬಂದೂಕಿನ ಗುಂಡಿಗೆ
ಉರುಳಿ ಬಿದ್ದಿದೆ ಒಂದು ಸಾಧು ಜಿಂಕೆ
ಕಾನೂನಿನ ಕಣ್ಣಿಗೆ ಸಿಕ್ಕಿಬಿದ್ದ ನಂತರ
ಅವನು ಆತ್ಮಸಂರಕ್ಷಣೆಗೆ ಎಂದು ಬೊಬ್ಬೆಯಿಟ್ಟದ್ದು
ದೊಡ್ಡ ವಿಪರ್ಯಾಸ ಅಲ್ಲವೆ?