Mar 16, 2010

ಹಾಯ್ಕು - 14

ಅಂಗೈತುಂಬ ಮಲ್ಲಿಗೆ ಹಿಡಿದು
ಪೂರ್ಣಚಂದ್ರನು ಇವನೆ ಎನ್ನುವ
ಅವಳ ಪ್ರಖರ ಮುಗ್ಧತೆಗೆ ಬೆರಗಾದೆ...

Mar 8, 2010

ಹತಾಶೆಯ ಕಣ್ಣು...

ರೆಕ್ಕೆ ಮುರಿದ ಹಕ್ಕಿಗೆ
ಹಾರುವ ಹಂಬಲ
ನಿಲ್ಲದ ಯತ್ನ
ಅತೀವ ಹತಾಶೆ

ಬದಿಯಲ್ಲೊಂದು
ಕುಂಟ ಬೆಕ್ಕಿನ
ಸೋತ ಕಣ್ಣುಗಳಿಂದ
ಸಾಂತ್ವನ

ಕಾಫಿ ಕಪ್ಪಿನ
ಸುಳಿಗೆ ಸಿಲುಕಿ
ತಳ ತಾಕಿದ
ದುರ್ದೈವದ ಇರುವೆ

ಪಾಪದ ಸೊಳ್ಳೆ
ಬ್ಯಾಟರಿ ಬ್ಯಾಟಿಗೆ
ಸಿಕ್ಕಿ ಚಿನಕುರಳಿ ಸದ್ದು
ಅದರ ಸತ್ತ ಸಂದೇಶ

ಮನೆಯೊಡತಿಗೆ
ಗ್ಯಾಸು
ಮುಗಿದೇ ಹೋಯಿತೆನ್ನುವ
ಎಂದಿನ ಆತಂಕ

ಇವರಿಗೆ ಮಾವಿನೆಲೆಯ
ರೆಂಬೆ ಕಡಿದು
ಮನೆಗೆ ತೋರಣ
ಕಟ್ಟುವ ಧಾವಂತ

Mar 7, 2010

ಹಾಯ್ಕು - 13

ಹೆಜ್ಜೆಯ ಗುರುತುಗಳೆಲ್ಲಾ
ಅಲೆಗಳು ಅಳಿಸಿ ಹಾಕಿದರೂ ಸಹ
ತಪ್ಪುಗಳಿನ್ನೂ ತೀವ್ರವಾಗಿ ಕಾಡುತ್ತಿವೆ ...

Mar 1, 2010

ಇಂದು ಮತ್ತೆ ನಾಳೆ...

ಇಂದು, ಈ ಜಗತ್ತು ಅಧಿಕಾರಿಶಾಹಿ ಶ್ರೀಮಂತರ ಪಾಲಾಗಿದೆ
ಯೋಚಿಸಬೇಡಿ ಪ್ರಿಯ ಬಂಧುಗಳೆ,
ಬನ್ನಿ ನಾವೆಲ್ಲ ಒಂದಾಗಿ ಹಾರೈಸೋಣ
ಅವರಿಗೆ “ಶುಭವಾಗಲಿ” ಎಂದು!

ನಿಮಗೆ ಇನ್ನೊಂದು ಬಹಳ ಕುತೂಹಲಕಾರಿ ಮತ್ತು ಅಚ್ಚರಿಯ ಸಂಗತಿ ಏನೆಂದು ಗೊತ್ತೆ?
ಮತ್ತೊಂದು ದಿಸೆಯಲ್ಲಿ;
ನಮ್ಮ ಅಂದರೆ ಅಸಹಾಯಕ ನಿರ್ಗತಿಕರ ಸಂಖ್ಯೆ
ನಿರಂತರವಾಗಿ ಹೆಚ್ಚಾಗುತ್ತಿರುವುದು ತುಂಬಾ ಒಳ್ಳೆಯದಲ್ಲವೆ?
ಏಕೆಂದರೆ, ಇಂತಹ ಸನ್ನಿವೇಶದಲ್ಲಿ
ನಾವು ದ್ರುತಿಗೆಡದೆ, ಸಹನೆ, ಸಂಯಮದಿಂದ ಮಾನವತ್ವ ಮೆರೆಯೋಣ
ನಾಳೆ ಎಂಬುದು ನಿಸ್ಸಂಶಯವಾಗಿ ನಮ್ಮದಾಗಲಿದೆ!

Feb 12, 2010

ಬಿಂಬ : 51 - 55

ಬಿಂಬ - 51
ಜಗವೆಲ್ಲಾ ಮಾಯೆ
ನನ್ನವಳು ಅದರ ಛಾಯೆ...

ಬಿಂಬ - 52
ಅವಳ ತವಕ ತಲ್ಲಣಗಳೂ
ಸಹ ಪ್ರೀತಿಯ ಬಾಣಗಳು...

ಬಿಂಬ - 53
ಮದಿರೆಯೆ ದಾಹ
ನಿಯಂತ್ರಿಸುವುದು, ಅವಳ ಕಾಡುವ ಮೋಹ...

ಬಿಂಬ – 54
ಅವಳ ಮೌನ ರಾಗಗಳಗೆ,
ಹಾರುವ ಹಕ್ಕಿ ಉತ್ತರ ನೀಡಿದೆ...

ಬಿಂಬ – 55
ಅವಳ ನಗುವಲ್ಲೂ ನೋವನ್ನು
ಬಿಂಬಿಸುವ ಪರಿ, ಕಳವಳ ಮೂಡಿಸುತ್ತದೆ...

Feb 10, 2010

ಹಾಯ್ಕು - 12

ನಲ್ಲಿಯಿಂದ ನೀರು ತೊಟ್ಟಿಕ್ಕುತ್ತಿದೆ
ಗಡಿಯಾರದ ಪೆಂಡುಲಮ್ ಲಯದೊಂದಿಗೆ,
ಜಾಗತಿಕ ತಾಪಮಾನದ ಮುನ್ಸೂಚನೆ ನೀಡುತ್ತಾ...