Mar 22, 2008

ಚೆಲುವಿನಾ ಸಿರಿ

ಸಿರಿಯೇನೆಂದರಿಯಲು ಸರಿ ದಾರಿಯ ನೆರಳು
ಕಹಿ ಬೇವಿನ ಚಿಗುರ ಸವಿಯುಂಡವನನೇ ಕೇಳು

ಚೆಲುವಿನಾ ಸಿರಿ ಹೊತ್ತು ನಲಿದಾಡುವ ತೇರು
ಬೆಳದಿಂಗಳ ಕಣ್ಣಲ್ಲೇ ಕಲೆ ಹಾಕುವೇ ಜೋರು

ನನ್ನ ಅಂದದ ಗಂಧ ತಿಳಿಸುವೇ ನಿನ್ನ ಕಣ್ಣಿಂದ
ಜಾರುತಿಹ ಮನವ ಸೆರೆಹಿಡಿವೆ ನೀ ಅದರಿಂದ

ಮರಳ ಮೇಲ್ದಂಡೆಯ ಹೊಂಗೆ ಮರದಡಿಯಲ್ಲಿ
ಉರಿಬಿಸಿಲನಟ್ಟಿ ಕರಿನೆರಳು ಕೊಡುವ ಸುಖದಲ್ಲಿ

ಸಂಜೆ ಕಾರ್ಮೋಡ ಸುರಿವ ಮಳೆಯಲಿ ತೋಯುತ
ಕೈ ಹಿಡಿದು ಜೊತೆ ನಡೆದು ಬಿಸಿಯುಸಿರನು ಹೀರುತ

ಮಂದ ಬೆಳಕಿನಲಿ ಮೆಲ್ಲ ಮಲ್ಲನೆ ಮಲ್ಲಿಗೆ ಮಳ್ಳಿ
ಇಡುವ ಕಚಗುಳಿಗೆ ಓಡಿತು ಚಳಿ ಸುತ್ತಿ ಹೂಬಳ್ಳಿ

ನೆನೆಯುತಾ ನನ್ನನೇ

ನೆನೆಯುತಾ ನನ್ನನೇ ನಿನ್ನ ನೆನಪೇಕೆ ತರುವೆ
ತೆರಳಿರುವ ಜಾಗದ ಸುಳಿವನೀಡುತಲೇ ನಗುವೆ

ನಿದಿರಿಸುವ ನಟನೆ ನನಗೆ ಹೊಸತಲ್ಲಾ ಚಂಚಲೆ
ನೆಪ ಮಾತ್ರಕೇ ಕೋಪ ತಿಳಿದಿರುವೆ ನಾ ನವಿಲೆ

ಅಂದು ಮುಂಜಾವಿನಲಿ ನೀ ಬಿಡಿಸಿದ ರಂಗೋಲಿ
ತಿಳಿಯಿತೆನಗೆ ಅದು ನೀ ಬರೆದ ಒಲವಿನಾ ಓಲೆ

ಮುಸ್ಸಂಜೆಯಲಿ ಮುಂಗೋಪ ಕರಗಿದಂತಿರಲಿಲ್ಲ
ಚೆಲುವಿನಲೇ ಸೆರೆಯಿಡಿದೆನ್ನ ಮೈ ಮನವನೆಲ್ಲಾ

ನೆನಪುಗಳ ಸವಿಯುಂಡು ದಿನವ ದೂಡುವೆನು
ನೆಪಗಳನು ನೀಡುತಲೇ ಮತ್ತೆ ಸೋತಿರುವೆನು

ಭಾರವಾಗಿದೆ ಮನವು ಬರಲಾಗದೇ ನೊಂದಿಹೆನು
ಕನಸಿನಲಿ ಕಾಣುವ ಬಯಕೆಗೆ ಬೇಗ ಮಲಗುವೆನು

Mar 21, 2008

ಬದುಕಲು ಬಿಡಿ

ಬದುಕಲು ಬಿಡಿ ರಾಯರೇ ಬಡಿದಾಡುವಿರೇಕೆ
ದೇಶ ಯಾವುದಾದರೇನು ನೆಲದ ಸೆಳೆಗೆ
ನೆಲೆಸುವೆ, ಭಾಷೆ ಯಾವುದಾದರೇನು
ಭಾವನೆಗಳ ಹರಿಸಿ ಬೆಳಕ ಕಾಣುವೆ

ಹೆಸರು ಯಾವುದಾದರೇನು ಮನ
ಮಾನವೀಯತೆ ಸದಾ ಪಲುಕಲು
ನೆಪಕೆ ಮಾತ್ರ ಕಾರ್ಯಸಿದ್ಧಿ ಹಸಿವಿಗೆ
ಮನುಜನಾಗಿ ಬರುವೆ ಈ ಬದುಕಿಗೆ

ನನ್ನ ಪಯಣ ನನಗೆ ಬಿಡಿ ದಾರಿ ನಾನೇ
ಹುಡುಕುವೆ, ನೂರು ತಡೆಗಳೊಡ್ಡಿ ನನಗೆ
ದ್ವಂದ್ವ ಬೀಜ ಬಿತ್ತಿ ಕೊನೆಗೆ ನಗುವಿರೇಕೆ
ಹೇಸಿಗೆ, ನಾನು ನಾನಾಗುವ ಬಯಕೆಗೆ

ಮೊದಲಿಗೊಂದು ಹೆಸರನಿತ್ತು ಜೊತೆಗೆ
ಕುಲದ ಕುತ್ತು, ಬೇಕೇ ಬೇಕು ಧರ್ಮದ
ಹಣೆಯ ಪಟ್ಟಿ, ಸಾಲದಕೆ ಭಾಷೆ ಕಟ್ಟಿ
ಗೆರೆಗಳೆಳೆದು ದೇಶ ಹಲವು ಸಹಜವೇ

ಜನನವಿತ್ತ ಮಾತೆ ಮುಂದೆ ರಕ್ತ ಹರಿಸಿ
ದಿಕ್ಕು ತಪ್ಪಿಸಿ, ಗೊಂದಲಗಳು ಬಹಳಿವೇ
ರಕ್ತ ಸಿಕ್ತ ಮನಕೆ ಪಿತ್ತ ಎತ್ತಕಡೆ ಹೊರಳುವೆ
ಮನುಕುಲ ಮಲಿನಕೆ ಯಾರ ಬೇಹುಗಾರಿಕೆ

ನೆವವನಿತ್ತು ಹಲವು ಸರಳ, ಮುಗ್ಧ ಮಗುವ
ಕಡಿದು ಕೊರಳ, ಮಮತೆ ಮಾಯ ಮರುಗಿದೆ
ಹಿಡಿತ ತಪ್ಪಿ ನಡೆವುದಕೆ ಜೀವಹರಣ ನಿಲ್ಲದೆ
ತೊರೆದು ಮನುಜರಾಗಲೆತ್ನಿಸೋಣ ಒಮ್ಮೆಗೆ

Mar 20, 2008

ಅಮ್ಮ

ಹಸಿದಿರುವೆನೇ ಅಮ್ಮ ಕೇಳೇ
ಅನ್ನ ಕೊಡು ಬೇಗನೆ
ಕುಸಿದೆನೊಮ್ಮೆಗೆ
ಅಮ್ಮನಿಲ್ಲ

ಅಮ್ಮನಿಗೆ ಎಂದೂ ಕೇಳಿದವ ನಾನಲ್ಲ
ಅದಕೆ ಅವಕಾಶವೇ ಕೊಡಲಿಲ್ಲ
ಹಸಿದಿರುವೆ ಬಹಳವೇ
ಈಗ ಅವಳಿಲ್ಲ

ಹಸಿವಿನ ಅನುಭವ ಇಷ್ಟಾಗಿ ಕಾಡಿರಲಿಲ್ಲ
ಅನ್ನದ ಹಸಿವೋ, ಅಮ್ಮನ
ಕಾಣುವ ಹಸಿವೋ
ಗೊತ್ತಿಲ್ಲ

ಅನಾಥಭಾವ ಆವರಿಸಿದೆ ನನಗೆ
ಎಲ್ಲಿರುವಳವಳೆಂದು ನಿಲ್ಲದೇ
ಕೇಳುತಿದೆ ಮತ್ತೆ ಮತ್ತೆ
ಉಸಿರಿಲ್ಲ

ನನ್ನರಿತಂತವರು ಮತ್ಯಾರಿಹರು ಹೇಳೇ
ಅವರನು ಹುಡುಕುವೇ ನಾನೀಗಲೇ
ಒಮ್ಮ ಕಂಡೆ ಕನಸಿನಲಿ
ನನ್ನ ಹಸಿವಿನಲಿ

ಅಬ್ಬಾ! ಎಂಥಾ ಘೋರ ಪರಿಸ್ಥಿತಿಯೆನಗೆ ತಂದಿರುವೆ ನೀನು
ಎದುರಿಸಲಿಲ್ಲ ಶಕ್ತಿ, ಅಮ್ಮನ ಕೊಡಲಾರದವನು
ಹಸಿವನೇಕೆ ಕೊಟ್ಟನೆಂದರಿಯೆನು
ಮೌನವಾಗಿಹನು

ನಂಬಿಕೆ

ಕಿರುನಗೆ ಬೀಸಿದ ತರು ಮೊಗವ ತೂಗಿ
ಹಸಿರ ಸಿರಿಯಲಿ ಯೌವನದ ಮೈದಾಳಿ
ಕಡೆಗೆ ಹೊದಿಕೆಯ ಸುರುಳಿ ಸಿಡಿದುರುಳಿ
ಹಸಿವಿಗೆ ಬಾಗಿ ಬೆಂಡಾಗಿ ಬೆಂಕಿಗಾಹುತಿ

ಗುಡಿಗಳು ಹಲವು ಗೊಂದಲಗಳ ಓಡಿಸುವವು
ಆಕರ್ಷಕ ಕೆತ್ತನೆಗಳನೊತ್ತಿಹ ಶಿಲ್ಪಕಲೆಯ
ಶಿಖರ ಸೆಳೆಯುವುದು ಹಲವರನದರೆಡೆಗೆ
ಕತ್ತಲಲಿ ಹುಡುಕುವ ಹುರುಪಿರದೆ ಬೆಳಕಿಗೆ

ಬಗೆ ಬಗೆ ಬಣ್ಣದ ಚಿತ್ತಾರ ಚಂದದ ಆಕಾರ
ಆಕಳಿಸುವ ಆಕಳ ಕರುವು ಕೂಡ ಪರಿಕರ
ನಡೆದಾಡುವ ನರರಿಗೂ ಸುತ್ತುವರೆದವರ
ಸರ್ರನೆ ಸರವ ತೆಗೆದು ಕೊಡುವವರಿವರ

ಪರಕಾಯ ಪ್ರವೇಶದೊಂದಿಗಿವರ ಆವೇಶ
ಹಲವಾರು ವೇಷ ಆನಂದಿಸುವವರ ಭಾಗ್ಯ
ಸೃಜನಶೀಲತೆಗೆ ಶೀಲವಿದೆ ಅದೃಷ್ಟದ ದೇಶ
ಧಿಗ್ಗನೆರಗುವವರಿವರು ಅನೇಕ ಭಾವಾವೇಶ

ಶಕ್ತಿ, ಸಾಮರ್ಥ್ಯವು ಸಹಜವಲ್ಲವೇ ಪ್ರದರ್ಶನ
ಹೆಸರಿಗೆ ಹಲವರು ಹುಂಬರು, ಮುಗ್ಧರು ಮುಂದೆ
ಊಟದ ಜೊತೆಗೆ ನೂರು ರೂ ಕೊಟ್ಟು ಸಂಜೆ
ಬದುಕುಳಿದರೆ ಆ ದೇವರ ಹೆಸರೇ ನಂಬಿಕೆಗೆ

ಪಾಪ ಪುಣ್ಯ

ಪಾಪ ಪುಣ್ಯ ಪುಸ್ತಕದ ಮೇಲೆ
ದುಡ್ಡಿದರೆ ದುನಿಯಾ ಮೇಲೆ
ಕಂಡೆನು ಆಟೋ ಹೆಗಲ ಮೇಲೆ
ಮನ ನೆಟ್ಟಿತು ಗಟ್ಟಿ ಅದರ ಮೇಲೆ

ಸರಳ ಅಭಿವ್ಯಕ್ತಿ ಬಲು ಸುಂದರ
ನಿಜವ ಒಪ್ಪಲು ಬಹಳ ಕಷ್ಟಕರ
ಪರದೆಗಳರಿಯದ ಮನಸುಳ್ಳವರ
ವಲಸಿಗರಿಟ್ಟ ಧಾಳಿಗೆ ಸೋತವರ

ಹಣವಿದ್ದವರದೇ ಅಂತಃಪುರ
ಮಾನದಂಡವೊಂದೇ ಇವರ
ಸುತ್ತುವರೆಲ್ಲರು ಇವರ ಹತ್ತಿರ
ತಿಳಿಯದು ಯಾರಿಗಿದರ ಖದರ

ನೀತಿಪಾಠ ನುಡಿಯಲು ಸೀಮಿತ
ಮೌಲ್ಯಗಳಿರಲು ಮಲಗಿ ಅಂಗಾತ
ಮಾನವೀಯತೆ ಮಾಯವಾಗುತ
ನೈತಿಕತೆಯಿಂದು ಅಂಬೆಗಾಲಿಡುತ

ಹಣವೊಂದಿದ್ದರೆ ದಕ್ಕುವುದೆಲ್ಲವು
ಖಾದಿ, ಕಾವಿ, ಖಾಕಿಯ ಕಾವು
ಅಂಗನೆ ಚಂಗನೆ ಕುಣಿವ ತರವು
ಇರದವರೆಲ್ಲರೂ ಹೆಣವಾಗುವೆವು

ಕಾಮ, ಕ್ರೌರ್ಯ ತುಂಬಿದ ಜಗವು
ಅಧಿಕಾರ, ಹಣಕೆ ಇಂಗದ ದಾಹವು
ಬಡವರ ಬಾಳಿಗೆ ಮೂರು ತುತ್ತಿರಿಸಿ
ಅಸಹಾಯಕರನು ಅಸ್ತ್ರವಾಗಿ ಬಳಸಿ

ಮೊಳಕೆಯಿಂದಲೇ ಮಲಿನವಾಗಿದೆ
ಆಂತರ್ಯದಾಳಕೇ ಬೇರು ಬಿಟ್ಟಿದೆ
ದೇವನೆ ದಯಪಾಲಿಸು ವರವೊಂದ
ದೊರಕಿಸೋ ಮುಕ್ತಿ ನಮಗಿದರಿಂದ