Oct 23, 2013

ನೀಲು ನೆನಪಲ್ಲಿ...


ನೀಲು –
ಅವಳ ಸೆಳೆಯಲು
ನೂರಾರು ಉದಯೋನ್ಮುಖ ಕವಿಗಳು ಎಷ್ಟು ಹೆಣಗಾಡಿದರೂ
ಅವಳು ಎಲ್ಲರ ಕಿವಿಹಿಂಡಿ ಕಿರುನಕ್ಕಿದ್ದು
ಅವರಿಗೆ ತುಸು ತೃಪ್ತಿ ಕೊಟ್ಟಿತ್ತು.

ನೀಲು –
ಎಲ್ಲಾ ಸಭ್ಯ,  ಸುಸಂಸ್ಕೃತರನ್ನು
ನಯವಾಗಿ ತಿರಸ್ಕರಿಸಿ
ಅಪ್ಪಟ ಒರಟನೊಬ್ಬನ ತೀವ್ರವಾಗಿ ವರಿಸಿದ್ದು
ಈಗ ಇತಿಹಾಸ.

ನೀಲು –
ಅವಳ ಗಾಢ ನಡೆ-ನುಡಿಯ ಸೊಗಡು
ಸೌಮ್ಯ ಮಾನಿನಿಯರಿಗೆ ಗರ ಬಡಿಸಿ,
ಮಹನೀಯರಿಗೆ ಬಿಸಿತುಪ್ಪವಾಗಿದ್ದು ಸುಳ್ಳಲ್ಲ.

ನೀಲು –
ಅವಳ ಮಾದಕ ಉನ್ಮಾದತೆಗೆ
ನಿಬ್ಬೆರಗಾದ ಪಡ್ಡೆ ಹುಡುಗರ ನಿಯಂತ್ರಿಸಲು
ಬಂದ ಪೋಲೀಸರು ಚಣ ಪೋಲಿಗಳಾಗಿದ್ದು ಸತ್ಯ.

Sep 26, 2013

ನಾಡಹಬ್ಬ



ತೂರಿ  ಜಿಗಿವ ಹಾಲ  ನೊರೆಯ ಜೋಗದಂತೆ
ಕನ್ನಡಿಗರೆ ಬನ್ನಿರಿ, ಮೈಗೊಡವಿಕೊಂಡು ನುಗ್ಗಿರಿ.
ಜಾತಿ ಭೇದ ತುಳಿಯುತಾ, 
ಮನದ ಮಲಿನ ತೊಳೆಯುತಾ,
ಮನುಜ ಮತವೆ ಹಿತವೆನ್ನುತಾ
ಹಾಡಿರಿ, ಕುಣಿಯಿರಿ,  ನಾಡಹಬ್ಬ ನಡೆಸಿರಿ.

ಬುದ್ಧ, ಬಸವ, ಮಹಾವೀರ, ಕಬೀರರಂತೆ
ಕ್ರಾಂತಿ, ಶಾಂತಿ, ಕಾಂತಿಧೂತರಾಗಿ,
ನೆಲೆಯ, ನುಡಿಯ ನಲಿವಿಗಾಗಿ,
ನಾಡ, ನದಿಯ ಹೃದಯವಾಗಿ,
ದಸರಾ, ದಸರಾ, ದಸರಾ ಎಂದು
ಹಾಡಿರಿ, ಕುಣಿಯಿರಿ, ನಾಡಹಬ್ಬ ನಡೆಸಿರಿ.



Aug 27, 2013

ಹಳಸಿದ ಅನ್ನ



ಮರಗಳ ತೊರೆದು
ಮನೆಗಳ ಹಪ್ಪಿಕೊಂಡ
ಜೇನು.
ವರ್ತುಲ ರಸ್ತೆ
ಹಸುಗಳ ನಿಲ್ದಾಣ.
ಗಡುವುಗಳ ಲೆಕ್ಕಾಚಾರಕ್ಕೆ
ಗತಿಸಿದ ಭೂಪ.
ಅನಾಥ ಶವಕ್ಕೆ
ಬೀದಿ ನಾಯಿಗಳ ಬೆಂಗಾವಲು.
ಕೋಳಿ ತುಟ್ಟಿಯಾದಂತೆ
ಕುಲುಮೆಗೆ ಕಪೋತ.
ಇಂಗದ ಹಸಿವಿಗೆ
ಹಳಸಿದ ಅನ್ನ.
ಸೊಳ್ಳೆಗಳ ಆಕ್ರಮಣಕ್ಕೆ
ದಿಕ್ಕೆಟ್ಟ ಸಂತ.
ಮಾಯವಾದ ಮೌನ
,
ಮಂದಹಾಸ.
ಮಗಳಿಗೆ ಗುಬ್ಬಿ
ಹುಡುಕುವ ಹಟ.

May 13, 2013

ಹುತಾತ್ಮ




ಮುನ್ನಡೆದು
ಹಾದಿ ತೆರದಂತೆ
ಕತ್ತಲು ಬೆಳಗಿನ ಜೋಡು
ಕುಗ್ಗದೆ, ದಣಿದು, ಸಾವರಿಸಿಕೊಂಡು
ಕೋಪ ತಾಪಗಳ ಸೆಲೆಯಲ್ಲಿ
ಸ್ವಹಿತದ ಚಿತ್ತ
ಪಿತ್ತ ನೆತ್ತಿಗೇರಿಸಿಕೊಂಡು
ದುರಾಸೆ, ನಿರಾಸೆಗಳ
ವಿಕ್ರಯಗೊಳ್ಳದ
ರಾಶಿ ರಾಶಿ ಗೊಬ್ಬರ
ನೋವು ನಲಿವುಗಳ
ಸೆಳೆತಕೆ ವಿಚಲಿತಗೊಳ್ಳದೆ
ತಳಮಳ, ಪುಳಕಗಳ
ಪೊದೆಯೊಳಗೆ ತೂರಿ, ತೆರೆದು
ಆಸೆ, ಆಶಯಗಳೊಂದಿಗೆ
ಆಯುಷ್ಯವೂ ಕ್ರಯಿಸಿ
ಪಳಗಿ, ಪಳಗಿಸಿಗೊಂಡು
ಫಲ ಪುಷ್ಪಗಳ ಗೊಂಚಲು
ಹುತಾತ್ಮನಾಗುವ ಹಂಬಲ
ಈಡೇರದ ಬಯಕೆ
ಚಲಿಸದ ಗೇಹ
ತೊರೆದ ಚಣ
ಆತ್ಮಕೆ ಪ್ರಾಪ್ತಿ
ನಿಟ್ಟುಸಿರು.

Apr 28, 2013

ವೈರುಧ್ಯ




ಬರಿದಾದ ತೊರೆಯಲ್ಲಿ
ಇರುವೆಗಳ ಸವಾರಿ
ಸೊರಗಿದ ಒಡಲಿಗೆ
ಬೆಟ್ಟದ ಹೂ
ಬೊಟ್ಟು
ಬೆತ್ತಲೆ ಮರದಲಿ
ಖಗಗಳ ಕೂಟ
ಮುಪ್ಪಿಗೆ
ಮಾಗಿಯ ಕಾಟ
ಚಿಗುರಿಗೆ
ವಸಂತದ ಹಠ
ಉರಿ ಬಿಸಿಲ
ನರ್ತನಕೆ
ಉಕ್ಕುವ ಬೆವರು
ಇಂಗದ ದಾಹ
ಕರಗದ ಕಾವ
ವಿರಹದ ಸಖ್ಯ
ಮತ್ತೆ ನೆರಳಿಗಿಲ್ಲ
ವಿವರಗಳ ಅಗತ್ಯ.

Apr 1, 2013

ತಪ್ಪೊಪ್ಪಿಗೆ



ಕವನ ಆರಂಭಿಸುವುದು ನನಗೆ ಖಂಡಿತ ಗೊತ್ತಿಲ್ಲ,
ಆದ್ದರಿಂದಲೇ ಇತರರ ಕವನಗಳ,  ವಿಶೇಷವಾಗಿ ಮೊದಲ ಸಾಲುಗಳನ್ನು
ಕುತೂಹಲದಿಂದ ಗಮನಿಸುವೆ.
ಕವನ ಹೇಗೆ ಶುರುಮಾಡುತ್ತಾರೆಂಬುದನ್ನು ಅರಿಯುವ ಆಸೆಯಿಂದ
ಕಳ್ಳ ಬೆಕ್ಕಿನಂತೆ ತುಸು ತೆರೆದ ಬಾಗಿಲಲ್ಲಿ ಹೊಂಚುಹಾಕಿ ನೋಡುವೆ.
ನಂತರ ಅವರ ಕವನ ರಚಿಸುವ ಬಗೆಯನ್ನು
ಅವರು ಪದಗಳ ಸಾಂಗತ್ಯ ಸಾಧಿಸುವ ಪರಿಯನ್ನು ಪರಿಶೀಲಿಸುವೆ.
ಪದಗಳ ಕೆಣಕುವುದನ್ನು, ಸೆಣಸಾಡುವುದನ್ನು, ಪಳಗಿಸುವುದನ್ನು,
ಹೆಕ್ಕಿ ಪೋಣಿಸಿ, ಮತ್ತೆ ಅದರ ಸೌಂದರ್ಯ ಸವಿಯುವುದನ್ನು ಕಿಟಕಿಯಿಂದ ಇಣುಕಿ ನೋಡುವೆ.
ಮೊದಲು ಎಚ್ಚರಿಕೆಯಿಂದ, ನಂತರ ತೀವ್ರಗತಿಯಲ್ಲಿ ಸಂಪೂರ್ಣವಾಗಿ,
ದಯವಿಟ್ಟು ತಪ್ಪಾಗಿ ಅರ್ಥೈಸಬೇಡಿ, ನಾನಲ್ಲಿ ಹೆಚ್ಚು ಸಮಯ ಇರುವುದಿಲ್ಲ.
ಅವರು ಆ ರೋಮಾಂಚನದ ಅನುಭೂತಿ ಪಡೆಯುವ ಕ್ಷಣದವರೆಗೆ ಮಾತ್ರ ಅಲ್ಲಿರುವೆ.
ಆಮೇಲೆ ಆ ಕಿಟಕಿಯಿಂದ ವಾಪಸ್ಸಾಗುವೆ,
ಸೂರ್ಯನ ಕಿರಣಗಳು ಆಗಷ್ಟೇ ಧರೆಗೆ ಚುಂಬಿಸುತ್ತಿದ್ದವು.
ಮುಂಜಾವಿನ ಮುಂದಿನ ಕೆಲಸದ ಸಲುವಾಗಿ, ಕೈಯಲ್ಲಿ ಪೆನ್ಸಿಲ್ ಹಿಡಿದು,
ನಾನು ರಸ್ತೆಯ ಬದಿಯಿಂದ ನಡೆದು ಬಂದೆ.

ಮೂಲ : ಗಿಲಿಯನ್ ವೆಗನರ್

Confession by Gillian Wegener/USA

I never know how to start a poem,
so I scan the first lines of other people's work,
a poetic peeping tom, wanting to see how
they find a way in. I climb in the window
after them to see how they do it, how they
become so intimate with words, how they
finger them and pick them up and put them
down and feint and fall and finally taste them,
first gingerly, then with the whole yearning body.
I mean no harm. And I don't stay long.
Just long enough to see their thrill
and then I'm back out the window,
dawn's poking at the horizon,
I'm heading down the sidewalk,
pencil in hand and a morning's work ahead.