Dec 31, 2007

ನನ್ನ ದೇಶ

ಜಡ ಆಡಳಿತದ ಕ್ರೌರ್ಯ
ಭ್ರಷ್ಟಾಚಾರದ ರಾಜಕೀಯ
ಹಚ್ಚಿ ಕೋಮು ಗಲಭೆಗಳ ಬತ್ತಿ
ಜಾತಿ ಮತಭೇದಗಳ ಭಿತ್ತಿ

ರಾರಾಜಿಸುತ್ತಿದೆ ಅಧಿಕಾರಶಾಹಿ
ವಿಜೃಂಭಿಸುತ್ತಿದೆ ಬಂಡವಾಳಶಾಹಿ
ಹಗಲು ದರೋಡೆ ಮಾಡುತ್ತಿರುವರು
ಸಾಮಾನ್ಯರು ಮೊಕ ಪ್ರೇಕ್ಷಕರಾಗಿರಲು

ಮೇಲಿರುವವರು ಮೇಲೇರುತಿಹರು
ಕೆಳಗಿರುವವರು ಕೆಳಜಾರುತಿಹರು
ಅಸಮತೋಲನ, ಅಸಮಾಧಾನ
ಅಗಾಧವಾಗಿ ಬೆಳೆಸುತಿಹರು

ಮಾಯವಾಗುತಿದೆ ಜಾತ್ಯಾತೀತತೆ
ಎಲ್ಲಿ ಅಡಗಿದೆ ಸರ್ವ ಸೌಹಾರ್ದತೆ
ಕನಸೇ ಸಮ ಸಮಾಜ ನಿರ್ಮಾಣ
ಸಾಧ್ಯವೇ ಸರ್ವ ಧರ್ಮ ಸಮ್ಮಿಲನ

ಪ್ರಗತಿಯ ರಥ

ವಿಶೇಷ ಆರ್ಥಿಕ ವಲಯ
ದೇಶದ ಪ್ರಗತಿಗೆ ಆಲಯ
ಈ ಅಸ್ತ್ರವ ಬಳಸಿ ರೈತರನು
ಸಜೀವ ದಹನ ಮಾಡುವರು

ಹಸಿರನು ಅಳಿಸಿ ರಕ್ತವ ಹರಿಸಿ
ಕಟ್ಟಡಗಳ ಕಾಡನು ಕಟ್ಟುವರು
ಬಡವರ ಬಾಳಿಗೆ ಕೊಳ್ಳಿಯನಿಟ್ಟು
ಹಲವರು ಸಿರಿಯಲಿ ಮೆರೆಯುವರು

ದೇಶಕೆ ಬೆನ್ನೆಲುಬು ಈತನು
ಕಾಲದಿ ಭೂಮಿಯ ಒಡೆಯನು
ಹಸಿರನು ಬೆಳೆಸಿ ಬದುಕುವನು
ಭೂಮಿಗೆ ಜೀವ ಬಿಡುವವನು

ಕತ್ತಲ ಕೂಪಕೆ ಬೀಳುವ ಮುನ್ನ
ನೆತ್ತರ ಓಕುಳಿ ಹಾಡುವ ಮುನ್ನ
ಕೃಷಿಕರ ಮನಸನು ಅರಿತು ನೀನು
ಎಳೆಯೋ ಪ್ರಗತಿಯ ರಥವನು

Dec 29, 2007

ಸರ್ವಸೃಷ್ಟಿಯ ಜನಕ

ಇವ ಸರ್ವಸೃಷ್ಟಿಯ ಜನಕ
ಜೀವರಾಷಿಗಳ ಪೋಷಕ
ಸಕಲ ಕಾರ್ಯಗಳ ನಿಯಂತ್ರಕ
ಎಲ್ಲಿರುವೆಯೋ ನೀ ಮಾಂತ್ರಿಕ

ಕಲ್ಪನೆಗೆ ಎಟುಕದ ಜಗವೋ
ಹಲವು ವಿಸ್ಮಯಗಳ ತಾಣವೋ
ಕಾಣದ ಕನಸುಗಳ ಬೆನ್ನತ್ತಿ
ಹುಡುಕುತ ನಡೆವೆವು ನಾವು

ಅದ್ಭುತ ಮಾನವ ಕುಲವು
ಇಲ್ಲಿರುವುದು ನಾಕ ನರಕವು
ನಿನ್ನ ಶಕ್ತಿಯ ಸ್ಮರಿಸುತ ನಾವು
ಬಾಳಿನ ಬಂಡಿ ನಡೆಸುವೆವು

Dec 28, 2007

ಯಾವ ಕೊರತೆ?*

ಹಕ್ಕಿಯ ಹಾಡಿಗೆ ರಾಗಗಳುಂಟೆ
ಹರಿಯುವ ನದಿಗೆ ಜಾಗದ ನಂಟೆ
ಬೀಸುವ ಗಾಳಿಗೆ ಯಾರ ಚಿಂತೆ
ಸುರಿಯುವ ಮಳೆಗೆ ಸುಳಿಯುಂಟೆ?

ಕುಣಿಯುವ ನವಿಲಿಗೆ ತಾಳಗಳಿವೆಯೇ?
ಬಣ್ಣದ ಚಿಟ್ಟೆಗೆ ಅಂದದ ಕೊರತೆಯೆ
ವನ್ಯ ಮೃಗಗಳಿಗೆ ಸ್ನೇಹದ ಬರವೆ
ಹಸಿರಿನ ವನಕೆ ಭೇದಗಳುಂಟೇ?

ಕಾಣುವ ಕಣ್ಣು ಕುರುಡಾಯಿತೇಕೆ
ಕೇಳುವ ಕಿವಿಯು ಕಿವುಡಾಯಿತೇಕೆ
ಶಾಂತಿ ಚಿತ್ತದಲಿ ಸಂತಸ ಮನಕೆ
ನೆಮ್ಮದಿ ಬದುಕಿಗೆ ಬೇರೆ ಬೇಕೆ?

ಜಾಗತೀಕರಣದ ಮಳೆ

ಸ್ಪರ್ಧಾಪೂರ್ಣ ಜಗ
ಆಧುನಿಕತೆಯ ವೇಗ
ಇಲ್ಲಿ ಭಾವಕ್ಕಿಲ್ಲ ಜಾಗ
ಮಾಡಿ ಲಾಭಕ್ಕೆಲ್ಲ ತ್ಯಾಗ

ಇಲ್ಲಿ ದುಡ್ಡಿದ್ದವನೆ ದೊಡ್ಡಪ್ಪ
ಅಧಿಕಾರವಿದ್ದರೆ ಅವನಪ್ಪ
ಈ ಹುಚ್ಚು ಕುದುರೆ ಓಟ
ಇದು ಯಾವ ಪರಿಯ ಆಟ

ಶರವೇಗದ ಸರದಾರರು
ಅಪ್ರತಿಮ, ಅಸಾಧ್ಯ ಶೂರರು
ಸಕಲವ ಬಲ್ಲ ಪ್ರಗತಿಪರರು
ದೇಶವನಾಳುವ ಅರಸರು

ಜಾಗತೀಕರಣದ ಮಳೆ
ಇಲ್ಲಿ ಸಾಮರ್ಥ್ಯಕ್ಕೆ ಬೆಲೆ
ಇದ್ದವರೆಲ್ಲಾ ಗೆದ್ದವರು
ಇರದವರೆಲ್ಲ ಸಾಯುವರು

Dec 27, 2007

ಚತುರ ಶಿಖಾಮಣಿ*

ಅಡ್ಡ ಗೋಡೆಯ ಮೇಲಿನ
ದೀಪದಂತೆ ನುಡಿವವನ,
ನಡೆವವನ ಮನದಾಳ
ಅವಿಶ್ವಾಸದ ಕೊಳ.

ಅಭದ್ರತೆಯಿಂದ ನರಳುವ
ಪರಾವಲಂಬಿಯಾಗಿರುವ
ದೃಢ ನಿರ್ಧಾರದ ಕೊರತೆ;
ಅಸ್ಪಷ್ಟ ವಿಚಾರಗಳ ಸಂತೆ.

ತಾತ್ಕಾಲಿಕ ತಂತ್ರಗಳು
ನಡೆದಾಡುವ ಯಂತ್ರಗಳು
ಸಿಹಿಲೇಪಿತ ವಿಷಗುಳಿಗೆ
ಬಳಸಿ ಮಾಡುವರು ಸುಲಿಗೆ.

ಸ್ಥಿರ ಚಿತ್ತ ಇವರಿಗೆ ಪಿತ್ತ
ತೋರುಂಬ ಪರಿಶ್ರಮದತ್ತ
ಗಮನ ಹರಿಸುವ ಚತುರರು
ಎಲ್ಲೆಲ್ಲೂ ವಿಜೃಂಭಿಸುತಿಹರು.

Dec 26, 2007

ಭೂರಮೆಯೊಂದಿಗೆ ಪಿಸುಮಾತು*

ಹೆಸರು : ಭೂಮಿ
ವಯಸ್ಸು : ಎರಡು ಸಾವಿರದ ಏಳು
ವಿಳಾಸ : ಸೌರಮಂಡಲ
ಧರ್ಮ: ಅದು ನಿಮ್ಮ ಕರ್ಮ
ಆಯಸ್ಸು : ನೀವಂದುಕೊಂಡಷ್ಟು
ಸಾಧನೆ : ಅನವಶ್ಯಕವಾಗಿ ನಿಮ್ಮನ್ನು ಹೊರುತ್ತಿರುವುದು
ಮಿತ್ರರು : ಸಾಗರ, ಜಲಚರ, ವನ, ಕಾನನ
ಶತ್ರುಗಳು : ಮನುಜರು
ಕೆಲಸ : ಸುತ್ತುವುದು
ಹವ್ಯಾಸ : ಚಳಿ, ಬಿಸಿಲು, ಮಳೆ
ಕೊಡುಗೆ : ನೆಲ, ಜಲ, ಗಾಳಿ, ಬೆಳಕು, ಕತ್ತಲು
ಅಭ್ಯಾಸ : ತಾಳ್ಮೆಯಿಂದ ಕಾಯುವುದು
ದುರಭ್ಯಾಸ : ಭೂಕಂಪ, ಪ್ರವಾಹ, ತ್ಸುನಾಮಿ ಇತ್ಯಾದಿ
ಉದ್ದೇಶ : ನೀವೇ ನಿರ್ಧರಿಸಿ
ಸಂದೇಶ : ಎಚ್ಚರವಿರಲಿ
ಸಶೇಷ : ಮುಂದೆ ನಿಮಗೆ
ಒಳ್ಳೆಯದಾಗಲಿ : ಧನ್ಯವಾದಗಳು

Dec 25, 2007

ಮನಸ್ಸಮಾಧಾನ

ಗೀಚುವ ಗೀಳು ಅವಿರತ
ಸುಖಾನುಭಾವ ನೀಡುತ
ವಕ್ರ ವ್ಯಾಕರಣಗಳ ತಿದ್ದಿ
ಮಾಡಿ ಭಾವಗಳ ಶುದ್ಧಿ

ಪುಸ್ತಕ ಪ್ರೇಮ ಬೆಳೆಸುತಾ
ಸಾಧಕರ ಸಾಂಗತ್ಯ ಹರಸಿ
ಸಾಹಿತ್ಯದ ಹೂರಣ ಉಣಿಸಿದ
ಗೆಳೆಯರೆಲ್ಲರನು ಸ್ಮರಿಸುತಾ

ವ್ಯಕ್ತಿ, ವ್ಯಕ್ತಿತ್ವಗಳ ಸೃಷ್ಟಿ
ಅನುಭವಗಳ ಅಭಿವ್ಯಕ್ತಿ
ಆ ಕ್ಷಣ ಮನಸ್ಸಮಾಧಾನ
ನವ ನವೀನ ಅನುದಿನ

ಜೀವಾಳ

ಸೊಲ್ಲೆತ್ತದೆ ಸರಿಪಡಿಸಿ
ಬದಿಗಿಟ್ಟು ಬಲಪಡಿಸಿ
ಬರಲಿ ನೂರೈವತ್ತು
ವಿರಸಗಳ ಕುತ್ತು

ವಿಘ್ನಗಳ ಛೇಡಿಸುವೆ
ಭಗ್ನಗಳ ಭೇದಿಸುವೆ
ಜನರ ಬಾಯಿಗೆ ಬೀಗ
ಜಡಿದು ಬರುವೆನು ಬೇಗ

ಒಲವೇ ಬಂಡವಾಳ
ನೀ ಅದರ ಜೀವಾಳ
ಬಾ ಬಳಿಗೆ ತಡವೇಕೆ
ಕೂಡಿ ಬಾಳುವುದಕೆ

ದೊರೆತ ದಾರಿ

ಒಂದು ಹಾದಿಯ ಬಯಸಿ
ದೊರೆತ ದಾರಿಯ ಪ್ರೀತಿಸಿ
ನೋವು ನಲಿವುಗಳನುಂಡು
ಹತ್ತು ಮೊಗಗಳ ಕಂಡು

ಸನ್ಮಾರ್ಗದಲಿ ವಿಶ್ವಾಸವಿರಿಸಿ
ಇರಲು ಸಹನೆ, ಸಂಯಮ
ರೋಷ, ದ್ವೇಷ, ಲೋಭ ತ್ಯಜಿಸಿ
ನೀನಿಟ್ಟು ದಿಟ್ಟ ಪರಿಶ್ರಮ

ಸರಳ ಜೀವನ ಮಂತ್ರ ಜಪಿಸಿ
ಗತ ಕಾಲವನೊಮ್ಮೆ ಸ್ಮರಿಸಿ
ಹಿರಿಯರ ಹಿತ ನುಡಿಗಳನು
ಕೇಳುವ ಮನವಿರಿಸಿ ನೀನು

ಇರಲು ನಿತ್ಯ ಹರುಷವು
ಕ್ಷಣವೇ ಒಂದು ವರುಷವು
ಸಮರಸವೀ ಜೀವನ
ಇದುವೆ ಬಾಳ ನಂದನ

Dec 24, 2007

ಆತ್ಮ ಸಂತುಷ್ಟಿ

ಹಿಂದೆ ನೋಡದೆ
ಮುಂದೆ ನಡೆದೆ
ಬೇಕಾದ್ದು ಬರಲಿ
ಬೇಡದ್ದೂ ಇರಲಿ

ಮುಟ್ಟಿದ್ದೆಲ್ಲಾ ಚಿನ್ನ
ತೊಟ್ಟದ್ದೆಲ್ಲಾ ರನ್ನ
ಸಕಲ ಸವಲತ್ತು
ಸಾಕಷ್ಟು ದೌಲತ್ತು

ಪಡೆದಾಗ ತೃಪ್ತಿ
ಇರದಾಗ ಅತೃಪ್ತಿ
ಕೊಟ್ಟು ಹೊರಟಾಗ
ಆತ್ಮ ಸಂತುಷ್ಟಿ

Dec 23, 2007

ಗಾಳಿ ಮಾತು*

ಗಾಳಿ ಮಾತು ಕಿವಿಗೆ ಬಿದ್ದು
ಒಳಗೆ ಬಿರುಗಾಳಿ ಎಬ್ಬಿಸಿ
ಬೆಂಕಿಯ ಬಲೆಗೆನ್ನ ದೂಡಿ
ಚಿತ್ತ ಹೂತು ಕ್ರೋಧ ಹುಟ್ಟಿತು.

ಮತಿಗೆಟ್ಟ ಗೂಳಿಯಾಗಿತ್ತು
ಸುಂಟರಗಾಳಿಯಂತೆ ಸುತ್ತಿ
ಸುಳಿಗೆತ್ತಿ ಎಸೆದಂತಾಗಿತ್ತು
ನಿಲ್ಲದೇ ಮೈ ಬೆವರುತ್ತಿತ್ತು.

ನಾಲಿಗೆ ಒಣಗಿ ಬೆಂಡಾಗಿತ್ತು
ಎಲ್ಲೆಡೆ ಕಗ್ಗತ್ತಲು ಕವಿದಿತ್ತು
ಕಳೆದು ಹೋಗುವ ಭಯ
ಬಹಳ ಕಾಡಿತ್ತುಯ

ಬೇಸಿಗೆ ಬೇಗೆಯಲಿ ಬೆಂದೆ
ಬೆಳಕು ಕಾಣದೇ ನೊಂದೆ
ಕಣ್ತೆರೆದೊಂದೇ ಒಂದು ಕ್ಷಣ
ಕಂಡ ಕನ್ನಡಿ ಜಾಣನಹುದೆ?

Dec 22, 2007

ಚಂಚಲ ಮನದ ದೊರೆ

ಕಡಿವಾಣವಿಲ್ಲದ ಕುದುರೆ
ಏರಿ ಬಂದಿಹನು ನೋಡಿ
ಚಂಚಲ ಮನದ ದೊರೆ
ಮಾಡುವನು ಏನೊ ಮೋಡಿ

ಚಂಗ ಚಂಗನೆ ಎಗರುವನು
ಸಾವಿರ ಸುಳ್ಳು ಹೇಳುವನು
ಸುಮ್ಮ ಸುಮ್ಮನೆ ನಗುತಿರುವ
ಚಕು- ಬುಕು ರೈಲು ಬಿಡುತಿರುವ

ಸೂಟು ಬೂಟು ಧರಿಸಿರುವ
ಕಣ್ಣಿಗೆ ಕಪ್ಪು ಕನ್ನಡಕ ತೊಟ್ಟು
ಮರುಳು ಮಾಡುವ ತಂತ್ರಗಾರ
ಇರಲಿ ನಿಮಗೆ ಬಲು ಎಚ್ಚರ

ಸೋಲು ಗೆಲುವು

ಸೋಲು ಗೆಲುವು
ಗೊಂದಲಮಯವೋ
ಎಂದಿಗೂ ಅರಿಯದ
ಸಾಗರದ ಆಳವೋ

ಈ ಪದಗಳ ವ್ಯಾಪ್ತಿ
ಅರ್ಥೈಸುವ ಯುಕ್ತಿ
ಮತ್ತೆ ಬಳಸುವ ಶಕ್ತಿ
ಅವರವರಿಗಿರುವ ಆಸಕ್ತಿ

ಅಂತಸ್ತು, ಆಸ್ತಿ, ಹಣ
ಇದ್ದವರೆಲ್ಲಾ ಗೆದ್ದವರಲ್ಲ
ಸಹನೆ, ಸಂಯಮ, ಸದ್ಗುಣ
ಇರುವವರೆಲ್ಲಾ ಸೋತವರಲ್ಲ

ಗೆದ್ದವರು ಸೋತವರು
ಎಂಬ ಪದಗಳಿಗೆ ಅರ್ಥವಿಲ್ಲ
ಈ ಬಾಳ ಹಾದಿಯಲ್ಲಿ
ಸಾಗುವ ಪಯಣಿಗರು ನಾವೆಲ್ಲಾ

Dec 17, 2007

ಗುರಿ

ಗುರಿಯಿಲ್ಲದ ಓಟ
ಅಸ್ಪಷ್ಟ ನೋಟ
ಇವರ ಸೆಣಸಾಟ
ಕತ್ತಲಲ್ಲಿ ಹುಡುಕಾಟ

ನಿರ್ದಿಷ್ಟ ಗುರಿಯಿರಲು
ಸೂಕ್ತ ಹಾದಿಯಲ್ಲಿ
ದಿಟ್ಟ ಪರಿಶ್ರಮವಿಟ್ಟು
ಸ್ಪಷ್ಟ ಹಿನ್ನೆಲೆಯಲ್ಲಿ

ತೊಡಕುಗಳು ಬಂದಷ್ಟು
ಬಲವಾಗಿ ಮತ್ತಷ್ಟು
ಕಾಣುತಾ ಗುರಿಯೊಂದೆ
ಸಾಗಿ ನಡೆ ಮುಂದೆ

Dec 15, 2007

ಕೋಪವೆಂಬ ಧೂರ್ತ*

ಕೋಪವೆಂಬ ಧೂರ್ತನೊಬ್ಬ
ಭೂತದಂತೆ ಮೈಯ್ಯನೇರಿ
ಭುಸಭುಸನೆ ಉಸಿರನಿಟ್ಟು
ರಭಸದಿಂದ ಗುಡುಗುವನು.

ಕಣ್ಣು ಕೆಂಪೇರಿಸಿರುವನು
ಕುರುಡಾಗಿ ವರ್ತಿಸುವನು
ಕೇಳುವ ಮನಸ್ಥಿತಿಯ
ತ್ಯಜಿಸಿರುವ ಮೂರ್ಖ.

ಪಿತ್ಥವೇರಿದ ಚಿತ್ತ
ಸುಟ್ಟುಹಾಕುವ ಮುನ್ನ
ಸಹನೆ ಸಂಯಮದ
ದೀಪ ಬೆಳಗು ಗೆಳೆಯ.

Dec 14, 2007

ಕಾಗುಣಿತ

ಕನ್ನಡದ ಕಾಗುಣಿತ
ತಿಳಿದವರಿಗಿದು ಕುಣಿತ
ತಿಳಿಯದವರಿಗೆ ಗಣಿತ
ಸತತ ಯತ್ನವ ಮಾಡುತ

ಹಲವು ಪುಸ್ತಕ ಓದುತಾ
ಗೆಳೆಯರೊಂದಿಗೆ ಹರಟುತಾ
ಭಾಷೆಯ ಬಳಕೆ ಬಯಸಿ
ಸಿಕ್ಕ ಸಲಹೆಗಳ ಸ್ವೀಕರಿಸಿ

ಚಿಗುರಿದ ಭಾವಗಳ
ಬಿಡಿಸುವ ಬಯಕೆಗಳ
ಜೊತೆ ನಿಮ್ಮೊಂದಿಗೆ
ನಡೆವ ಆಸೆ ಎನಗೆ

Dec 8, 2007

ಕಳಚಿದ ಕೊಂಡಿ*

ಎಂದೋ ಕಳಚಿದ ಕೊಂಡಿ
ಮತ್ತೆ ಕೂಡಿಕೊಂಡಾಗ
ಸಂತಸದ ಹೊನಲು
ಮುಟ್ಟಿತ್ತು ಮುಗಿಲು.

ಯಾರ್ಯಾರು ಎಲ್ಲೆಲ್ಲಿ
ಏನೇನು ಮಾಡುವರು
ಮಾಸಿ ಮರೆಯಾಗಿರುವ
ನೆನಪುಳಿಸಿ ಹೊರಟವರು.

ಒಮ್ಮೆ ನೋಡಿಬರುವೆನು
ಇರುವ ಗೆಳೆಯರನೆಲ್ಲ;
ಕಡೆತನಕ ಹಿಡಿಯುವೆನು
ಕೂಡಿರುವ ಕೊಂಡಿಯನು.

ಮತ್ತೆ ಮುತ್ತುವ ನೆನಪು*

ಕಳೆದ ಕಾಲದ ನೆನಪೇ
ಚುಚ್ಚದಿರು ಮತ್ತೆ ಮತ್ತೆ
ಮರೆಯಲೆಂದೇ ನಿನ್ನ
ಸೋತಿಹೆನು ಪ್ರತಿದಿನ.

ಕಹಿಯಾದ ಘಟನೆಗಳ
ಹಳೆಯ ಪುಟಗಳಲಿ
ಮುಚ್ಚಿಟ್ಟಿರುವೆ
ಮತ್ತೆ ಎದ್ದು ಬರದಿರಲೆಂದು.

ಹತ್ತಾರು ವರುಷಗಳಿಂದ
ಹಲವು ಊರುಗಳ ದಾಟಿ
ನಿತ್ಯ ಹಸಿರನು ಹೊತ್ತು
ನಿನ್ನ ಮರೆಯಲೆಂದೇ ನನ್ನ ತವಕ.

ನಿನ್ನ ತೊರೆಯಲು ನಾ
ಮರಳಿ ಯತ್ನವ ಮಾಡಲಾರೆನು
ಇರುವೆ ನಿನ್ನ ಜೊತೆಗೇ
ನಾ ಮರೆಯಾಗುವವರೆಗೆ.

Dec 7, 2007

ಧರ್ಮಕಾರಣ*

ನನ್ನ ಪ್ರೀತಿಸಲು,
ಇಲ್ಲಾ ದ್ವೇಷಿಸಲು
ಗುರುತಿಸಲು
ಇಲ್ಲಾ ಗುರುತಿಸದಿರಲು-

ಬೆನ್ನು ತಟ್ಟಲು
ಇಲ್ಲ ಅದಕೆ ಚೂರಿ ಇಡಲು
ನನ್ನ ಒಪ್ಪಲು
ಇಲ್ಲಾ ಹೊರದಬ್ಬಲು-

ಕೊನೆಗೆ ಬದುಕಲು
ಇಲ್ಲಾ ಸಾಯಲು
ದಯಮಾಡಿ
ಒಂದು ಅವಕಾಶ ಕೊಡಿ

ಕೂಗುವೆನು ಎಲ್ಲರನು
ತೀರ ಕಾಣದ
ಪ್ರೀತಿಯ ಸಾಗರದೆಡೆಗೆ.

ಜೇಡರ ಬಲೆ*

ಏಕತಾನತೆಯ ಭೂತ
ಕಾಡುತ್ತಿದೆ ಸತತ
ಬೆನ್ನಟ್ಟಿ ಬರುತ್ತಿದೆ
ನೊಂದ ನನ್ನ ಬಿಡದೆ.

ಎಲ್ಲೆಲ್ಲು ಕಗ್ಗತ್ತಲು
ದ್ವೇಷ ರಾಗದ ತಂತಿ
ಮೀಟಿದ ಹಾಡನ್ನು ಕೇಳುವವರಾರು?

ನಾ ಹೆಣೆದ ಜೇಡರ ಬಲೆ
ನನ್ನನ್ನೇ ಮುತ್ತಿದೆ ಇಂದು
ತಿಳಿಯದೆ ಸೇರಿದ ನೆಲೆಯಿಂದ
ಹೊರಬರುವೆನು ನಾ ಎಂದು?

ಬಿಡುಗಡೆಯ ಕೋರಿ
ಕೂಗುವೆನು ಪ್ರತಿಸಾರಿ
ಬಿಟ್ಟು ಬಂದವರನ್ನು
ನಾ ಎಂದು ಸೇರುವೆನು?

ಕಡಲ ಕಿನಾರೆ*

ಈ ಕಡಲ ಕಿನಾರೆ
ಕಣ್ತಣಿಸುವ ಜಲಧಾರೆ
ಹೊಮ್ಮುವ ಹಾಲಿನ ನೊರೆ
ಅನಂತ ಅಮೃತಧಾರೆ.

ಸನಿದಪ ಅಲೆಗಳ ಚಲನ
ಜುಮ್ಮನೆರಗುವಾಲಿಂಗನ
ಮತ್ತದೇ ಸಿಹಿ ಚುಂಬನ
ತೇಲಾಡುತಿದೆ ನನ್ನ ಮನ.

ಸುಯ್ಯನೆ ನುಸುಳುವ ತಂಗಾಳಿ
ಹಾರುವ ಹಕ್ಕಿಯ ರಂಗೋಲಿ
ಒಡಲು ತೂಗುವ ಉಯ್ಯಾಲೆ
ಮನದಲ್ಲಿ ಹಾಡಿನ ಸರಮಾಲೆ.

Dec 4, 2007

ಕತ್ತಲೆಯೆಡೆಗೆ...*

ಸಕಲ ಬಲ್ಲವನೆಂಬವರ
ಅರಿವಿಲ್ಲದೆ ನುಡಿವವರ
ಇವರೆಲ್ಲರ ನಡಿಗೆ
ಕತ್ತಲೆಯೆಡೆಗೆ ...

ಭಾವಗಳ ಬೆಸೆಯದೆ
ಕನಸುಗಳ ಬೆನ್ನತ್ತದೆ
ನಡೆಯುವ ನಡಿಗೆ
ಕತ್ತಲೆಯೆಡೆಗೆ ...

ಆಸೆಯ ಕುದುರೆಯನೇರಿ
ಮದ-ಮತ್ಸರಗಳ ತೋರಿ
ಮುನ್ನಡೆವವರ ನಡಿಗೆ
ಕತ್ತಲೆಯೆಡೆಗೆ ...

ನೆರೆಹೊರೆಯ ಪರಿವಿರದೆ
ಜೊತೆಗಾಗಿ ಯಾರಿರದೆ
ಸಾಗುವ ನಡಿಗೆ
ಕತ್ತಲೆಯೆಡೆಗೆ ...

Dec 2, 2007

ಹನಿಗವನ*

ಬರಿಬೇಕಂತ
ಹನಿಗವನ
ಸಂಜೆ ಬಾರಿಗೆ
ಹೊಂಟೆ.

ಈ ಸುಂದರ ತಾಣ
ಆ ಜಾಣರ ಮೌನ
ಮದಿರೆಯ ಪಾನ
ಮಂಜುಳ ಗಾನ.

ಮೆಲ್ಲನೆ ಮತ್ತೇರಿಸಿತ್ತು
ನಡೆದಿತ್ತೇನೋ ಗಮ್ಮತ್ತು
ಮನಸ್ಸು ಬಿಸಿಯಾಗಿತ್ತು
ಆಗ ಗಂಟೆ ಹನ್ನೊಂದಾಗಿತ್ತು.

ಕಿಸೆಗೆ ಕತ್ತರಿ
ಮನಕೆ ಕಿರಿಕಿರಿ
ಬರೆಯಲಿ ಹ್ಯಾಂಗ ಹನಿಗವನ
ಮರೆಯಲಿ ಹ್ಯಾಂಗ ಮಧುಪಾನ?

Dec 1, 2007

ಇವನ ಕವನ

ಬರಿಬೇಕಂತ
ಹನಿಗವನ
ಬಾರಲಿ ಕುಂತ
ವನಾ

ಮದಿರೆಯ ಪಾನ
ಕೊಳಲಿನ ಗಾನ
ಮತ್ತಿನ ಗಮ್ಮತ್ತು
ಮನ ಬಿಸಿಯಾಗಿತ್ತು

ಜೋಬಿಗೆ ಕತ್ತರಿ
ಮನೆಯಲಿ ಕಿರಿಕಿರಿ
ಮರೆಯಲಿ ಹ್ಯಾಂಗ ಇವನ
ಬರೆಯಲಿ ಹ್ಯಾಂಗ ಕವನ

ನಿನ್ನ ಜೊತೆಗೆ

ಒಪ್ಪಿ ಅಪ್ಪಿಕೊ ಗೆಳತಿ
ಹಳೆಯ ನೆನಪುಗಳ ದೂಡಿ
ಒಲವಿನ ಆಸರೆ ನೀಡಿ
ಬೆಳಕು ಕರಗುವ ಮುನ್ನ

ನೊಂದ ಮನವನು ತೊಳೆದು
ಬಿಂಕ-ಬಿನ್ನಾಣಗಳ ತೊರೆದು
ಚಂದ ಚಿತ್ತದಿಂದ ಚೆಲುವೆ
ಕಿರು ನಗೆಯ ನೋಟ ನನಗಾಗಿ

ಜೊತೆ ಜೊತೆಗೆ ನಡೆವೆ
ಭಾವ ಬೆಸುಗೆಯ ಬೀಸಿ
ಕಲ್ಲು ಮಣ್ಣುಗಳ ನಡುವೆ
ಕೈ ಹಿಡಿದು ಮುನ್ನಡೆಸುವೆ