Sep 29, 2011

ಬಿಂಬ: 71 - 75


ಬಿಂಬ - 71
ಮಾರಕವನ್ನು ಪೂರಕವೆಂದು ಬಿಂಬಿಸುವ ಕಲೆ ರಾಜಕೀಯ.

ಬಿಂಬ – 72
ಬಡವರ ಹಸಿವಿಗೆ ಬಲ್ಲಿದ ಬಲಿಯಾಗುವ ದಿನ ಮುಂದೆ ಬರಬಹುದು.

ಬಿಂಬ - 73
ಪರಿಮಳ ಹೊಮ್ಮಿಸಿ ಸೆಳೆವ ಹೂವೆ, ಹಾದರವೆಂದಾರು ಜೋಕೆ?

ಬಿಂಬ - 74
ಪೊರೆ ಕಳಚಿ ಕೊಳೆ ಕಳೆವ ಹಾವೇ, ವಿಷವ ತೊರೆಯಲು ಸಾಧ್ಯವೆ?

ಬಿಂಬ - 75
ಬೆಲ್ಲಕ್ಕೆ ಮುತ್ತುವ ಇರುವೆ, ಹೆಣಕ್ಕೂ ದಾಂಗುಡಿ ಇಡಲು ಹೇಸುವುದಿಲ್ಲ.

Sep 28, 2011

ಬಿಂಬ : 66 - 70




ಬಿಂಬ - 66
ಆ ಕಾಡ್ಗಿಚ್ಚಿಗೆ ಕರಗಿ ಹೋಗಿದ್ದು ಕೇವಲ ಕಾಡಲ್ಲ..?

ಬಿಂಬ – 67
ಅವಳು ಕಾರ್ಮೋಡ, ಅವನು ಕಗ್ಗಾಡು
ಅವರ ಕಾಳಗಕ್ಕೆ ಗುಡುಗು, ಮಿಂಚು, ಮಳೆ.

ಬಿಂಬ - 68
ಪಕ್ವವಾದ ಹಣ್ಣು ಬಯಸೀತಾದರೂ ಏನನ್ನು..?

ಬಿಂಬ - 69
ಬಾಟಮ್ ಜೀನ್ಸ್ ತುಂಬಿಕೊಂಡ ಪೋರಿ,
ಪಡ್ಡೆ ಹೋರಿಗಳೆಲ್ಲಾ ಚೆಲ್ಲಾಪಿಲ್ಲಿ...

ಬಿಂಬ - 70
ಮೋಹಕ ಕಂಗಳ ಮಾದಕ ನಗೆಯ ಪ್ರವಾಹಕ್ಕೆ
ಸಿಲುಕದ ಮಹನೀಯರು ಇದ್ದರೆ, ಅದು ಖಂಡಿತ ಸುಳ್ಳು.

Sep 27, 2011

ಹಾಯ್ಕು - 16



ಸೂರ್ಯನ ಸೆರೆಯಿಡಿದೆ
ಎಂದು ಬೊಬ್ಬಿಡುವ ಅವಳ ಅಂಗೈಯಲ್ಲಿ ಸೇವಂತಿ ಕಂಡು
ತುಸು ಬೆಚ್ಚಿದ್ದು ಸುಳ್ಳಲ್ಲ...

Sep 26, 2011

ಮತ್ತದೇ...


ಒಲ್ಲದ ವಿಷಯಗಳು?
ಒಂದೇ ಸಮ ದಾಡಿಯಿಟ್ಟಿವೆ,
ಯಾರದೋ ಸಾವು ನೋವಿಗೆ
ಕದಡುವ ಮನಸಿಗೆ ಕೊಟ್ಟವರಾರು ಅಪ್ಪಣೆ?
ರಾಡಿಯೆಬ್ಬಿಸಿ, ಉಬ್ಬೇರಿಸುವವರಿಗೆ
ನೀಡಬೇಕೆ ಉತ್ತರ!

ಛೆ,
ದಿನ ಬೆಳಗಾದರೆ ಇದೇ ಗೋಳು.
ಯಾರಿಗೋ ಆಘಾತ, ಅಪಘಾತ,
ಅಪಹರಣ, ಹರಣ,
ಕೊಲೆ, ಕೇಸು, ಕೋರ್ಟು.
ಇದನ್ನೇ ನೋಡುತ್ತಾ,
ಸಂಖ್ಯೆಗಳ ಕೂಡುತ್ತಾ,
ಕಣ್ಮನ ತುಂಬಿಸಿಕೊಳ್ಳುವ
ಕೆಟ್ಟ ಧಾವಂತ.

ಹಸಿವು,
ತಿಂದಷ್ಟೂ ತೀರದ,
ಅಜೀರ್ಣದಿಂದ ವಾಕರಿಕೆಯಾಗಿ,
ಆರೋಗ್ಯ ಹಾಳಾಗಿ ಸತ್ತರೂ ಸೈ,
ಬೇಕು, ಬೇಕು, ಇನ್ನೂ ಬೇಕು.

ಅಬ್ಬಬ್ಬಾ...
ದೋಚಿದ್ದೋ, ದೋಚಿದ್ದು
ಈಗ ಎಚ್ಚೆತ್ತವರು ಜನರೋ,
ಸರಕಾರವೋ, ಇಲ್ಲಾ ನ್ಯಾಯಾಂಗವೋ,
ಇಲ್ಲಾ ಇವರೆಲ್ಲರ ತಲೆಗೆ ಹುಳಬಿಟ್ಟು
ಮಗುಮ್ಮನೆ ನಗುವ ಮಾಧ್ಯಮವೋ?
ಭ್ರಷ್ಟರಿಗೇಕೋ ಕಾಲ ಕೆಟ್ಟಿದೆ,
ಕಂಬಿ ಎಣಿಸುವ ಭಯ,
ಹಾವು-ಏಣಿ ಆಟದ ನಡುವೆ,
ಸಾಮಾನ್ಯನಿಗೊಂದಿಷ್ಟು ನಿಟ್ಟುಸಿರು.
ದಿನ - ರಾತ್ರಿ ಮತ್ತಿವೇ
ಗೋಜು-ಗೊಂದಲಗಳು...

ಈಗಷ್ಟೇ ಕರೆ ಮಾಡಿದ ಗೆಳತಿಗೆ
ಬೇಕಂತೆ ಪೀಝಾ, ಬರ್ಗರ್.
ಅಮ್ಮ ಮಾಡಿದ ಮುದ್ದೆ ಬಸ್ಸಾರಿಗೆ,
ಮತ್ತೆ ಹಳೆಯ ಹಾಡಿಗೆ,
ನನಗಿಲ್ಲ ಯಾವ ತಕರಾರು.