ಶತಮಾನದ ಸಾಕ್ಷಿಯಾಗಿ
ತಾರುಣ್ಯದ ಮೊಹರಿನಂತೆ
ಈ ಹೊಟೇಲಿನ ಕೋಣೆ
ಇಲ್ಲಿ ಬಂದು ಮಿಂದವರು
ಸಹಸ್ರಾರು
ನಾಯಕ, ಸೇವಕ,
ನಟ-ನಟಿಯರು,
ಪುಂಡರು, ಕಳ್ಳಕಾಕರರು,
ಕವಿ, ಕಲಾವಿದ, ಯಾತ್ರಿಕರೆಷ್ಟೋ
ತಂಗಿ, ತಡವರಿಸಿ, ತೂಗಿ, ತೇಲಾಡಿದವರು
ದಿಟ್ಟಿಸಿ, ಎದುಸಿರಿಂದ ನಿಟ್ಟುಸಿರಿಟ್ಟವರು
ನಿತ್ರಾಣಗೊಂಡು ಎದ್ದವರು,
ಬಿದ್ದವರು ಎಲ್ಲಿ, ಏಕೆ ಎಂಬ ಅರಿವಿರದೆ.
ಇದರ ದಿಂಬು, ಹಾಸಿಗೆ, ಮಂಚಗಳು
ಪರದೆ, ಹೊದಿಕೆಗಳು ಮಾಸಿ, ಮುರಿದು
ಬದಲಾದವುಗಲೆಷ್ಟೋ
ಇಲ್ಲೇ, ಇದೇ ಕೊಣೆಯೊಳಗೆ.
ಎಷ್ಟೊ ಕನಸುಗಳು, ಕೂಸುಗಳು ಕಸಿಯಾದವಿಲ್ಲಿ
ಅದರಲ್ಲಿ ಗರ್ಭಪಾತಗಳೆಷ್ಟೋ
ಉಳಿದವರು
ನಾಡಿಗೆ, ಕಾಡಿಗೆ
ಕೇಡು, ಕೊಡುಗೆಗಳಿತ್ತವರು ಎಷ್ಟೋ
ಇಲ್ಲಿ, ಪ್ರಣಯ ಪಕ್ಷಿಗಳ ಪ್ರಯೋಗಗಳು
ಅಂಚು-ಅಂಚಲ್ಲೂ ಮಿಂಚಿನ ಸಂಚಲನಗಳು,
ಸಂಚುಗಳು, ಮಾನಭಂಗಗಳು
ಎಷ್ಟೋ ಲೆಕ್ಕವಿಲ್ಲದಷ್ಟು
ಅಷ್ಟನ್ನೂ ಕಂಡು, ನುಂಗಿ ಅರಗಿಸಿಕೊಂಡ ನೀನು
ಇನ್ನೂ ಅಲ್ಲಾಡದಂತೆ, ನಿರ್ವಿಣ್ಣಗೊಂಡರೂ
ತೋರ್ಗೊಡದೆ, ತೇಜೋಮಯವಾಗಿ,
ರಾರಾಜಿಸುತ್ತಿರುವ ಗೋಡೆಗಳೆ...
ನಿಮ್ಮ ಸಹನೆ, ಸಂಯಮ, ಸಹಾನುಭೂತಿಯ
ಎಳ್ಳಷ್ಟಾದರೂ ಕರುಣಿಸಿ ಕೃತಾರ್ಥರಾಗಿ
ಹೊರಗೆ ಘಟಿಸುವುದನ್ನು
ಸಹಿಸಿಕೊಳ್ಳುವ ಸಲುವಾಗಿ.
No comments:
Post a Comment