Apr 1, 2013

ಸೊಳ್ಳೆಗಳ ಸಂಹಾರ




ನಿಯಂತ್ರಣವಲ್ಲ, ಸಂಹಾರ.
ಅದು ಅಷ್ಟು ಸುಲಭದ ಮಾತಲ್ಲ,
ಅವು ಸೊಪ್ಪಾಕುವುದಿಲ್ಲ ಯಾರಿಗೂ.
ಅವುಗಳಿಗೆಷ್ಟೋ  ನೆಮ್ಮದಿಯ ನಿಲ್ದಾಣಗಳು,
ಮನೆಯಲ್ಲಿ ಅಡಗಿಕೊಳ್ಳಲು.
ನಾವುಗಳು ತಲುಪಲು ಅಸಾಧ್ಯವಾದ ಜಾಗಗಳಲ್ಲಿ.
ಸಂಜೆ ತೆಲುವಾಗಿ, ಗೆಲುವಾಗಿ,
ಹಾಡುತ್ತಾ, ಕುಣಿಯುತ್ತಾ, ಛೇಡಿಸುವವು.
ನಮ್ಮ ಸಹನೆಗೆ ಸತ್ವ ಪರೀಕ್ಷೆಯೊಡ್ಡಿ,
ಶತ ಪ್ರಯತ್ನಗಳಿಗೂ, ಸೈ ಎಂದು ಸೆಣಸಾಡುವವು.
ಪ್ರತಿಫಲ ಮಾತ್ರ ಶೂನ್ಯ, ಇಲ್ಲಾ ನಗಣ್ಯ.
ಸುಲಭವಾಗಿ ಸಿಗುವುದಿಲ್ಲ ಕೈಗೆ,
ಯಾವ ಬ್ರಾಂಡಿನ ಬ್ಯಾಟರಿ ಬ್ಯಾಟಿಗೆ
,
ಗುಡ್ ನೈಟ್ ಲಿಕ್ವಿಡ್ ಗೆ, ಇಲ್ಲಾ ದೇಸೀ ಸೊಳ್ಳೆ ಬತ್ತಿಗೆ.


ತಾಲ್ಮೆಯಿಂದ ಕಾಯಬೇಕು,
ಸ್ವೇಚ್ಛೆಯಾಗಿರಕೂಡದು ನಮ್ಮ ಹಾಸಿಗೆಯಲ್ಲಿ
ತುಸು ಅಲುಗಾಡದೆ ಅವುಗಳಿಗೆ ರಸಭಂಗವಾಗದಂತೆ
ಎಚ್ಚರವಹಿಸಬೇಕು.
ನಿದ್ರಿಸುವಂತೆ ನಟಿಸಬೇಕು,
ಚುಚ್ಚಿಸಿಕೊಳ್ಳಬೇಕು,
ರಕ್ತ ಹೀರಲು ಬಿಡಬೇಕು,
ಸಂತೃಪ್ತಿಯಿಂದ, ಹಾರಲು ತ್ರಾಸಾಗುವವರೆಗೂ,
ಹೊಟ್ಟೆಗಳು ಊದಿಕೊಂಡು ಐನಾತಿ ಹೆಗ್ಗಣಗಳಂತೆ
ಹೆಪ್ಪುಗಟ್ಟಿದ ರಕ್ತದೊಂದಿಗೆ ಕುಡಿದು ತೂರಾಡುವವರೆಗೂ,
ತೆಪ್ಪಗಿರಬೇಕು ಬೆಪ್ಪರಂತೆ.

ನಂತರವಷ್ಟೇ
ನಮ್ಮ ಪ್ರಯತ್ನಕ್ಕೆ,
ಮತ್ತು ಸಹನೆ, ಸಹಕಾರಕ್ಕೆ,
ತಲೆ ಬಾಗುವವು, ಬಲಿಯಾಗುವವು.

No comments: