Aug 4, 2015

ನಿನಗೆ ಯಾರೆ ಮಾದರಿ?


ನೀನೇ ಆರಿಸಿದ
ಕೊತ್ತೊಂಬರಿ ಕಟ್ಟು, ತಾಜಾ ಹಣ್ಣು, ತರಕಾರಿ
ಕೊಳೆತಿದೆ ಎಂದು
ದಿನವಿಡೀ ಅವನಿಗೆ ಶಪಿಸುವೆ.
ಮನೆಗೆಲಸದವಳನ್ನು ಬೆಂಬಿಡದೆ ಇನ್ನಿಲ್ಲದಂತೆ ಕಾಡುವೆ,
ಯಾವುದೋ ಹಳೇ ಸೇಡು ತೀರಿಸಿಕೊಳ್ಳುವವಳಂತೆ. 
ಮಮ್ಮೊಕ್ಕಳಾದರೂ ನಿನ್ನ ಮಕ್ಕಳ ಕಾಳಜಿಯಲ್ಲಿ
ಇಂದಿಗೂ ತುಸು ಕರಗದ ನಿನ್ನ ಧಾವಂತ,
ಹೇಗೆ ಇನ್ನೂ ಜೀವಂತ?

ನಮಗಾಗಿ ಇಡೀ ಜಗವನ್ನೇ ಯುದ್ಧಕ್ಕೆ ಕರೆಯುವ
ನಿನ್ನ ಭಂಡ ಧೈರ್ಯಕ್ಕೊಂದು ಸಲಾಮು.
ನಿರ್ಲಜ್ಜೆಯ ಪರಾಕಾಷ್ಠೆಯ ಪ್ರಚಂಡ ಪ್ರದರ್ಶನ
ನಿನ್ನ ಮಕ್ಕಳ ಬಗ್ಗೆ ಸುಖಾಸುಮ್ಮನೆ ಕೊಚ್ಚಿಕೊಳ್ಳುವಾಗ.
ಮೈಮನಸಿನ ಕಿಂಚಿತ್ ಗಾಯಕ್ಕೂ
ಬೇಕೇ ಬೇಕು ಇಂದಿಗೂ ನಮಗೆ
ನಿನ್ನ ಪ್ರೀತಿಯ ಮುಲಾಮು.

ನಮಗಾಗಿ ಏನೆಲ್ಲಾ ಆದೆ ಕಣೇ
ಸುಳ್ಳಿಯಾದೆ, ಕಳ್ಳಿಯಾದೆ,
ಮಾತಿನ ಮಳ್ಳಿಯಾದೆ,
ಮಾರಿ-ಹೆಮ್ಮಾರಿಯಾದೆ.
ಮಾನ, ಸ್ವಾಭಿಮಾನ
ಎಲ್ಲವೂ ಅಡವಿಟ್ಟೆ.
ನೀ ಕೋಪಗೊಂಡ ಕರಾಳ ಸನ್ನವೇಶಗಳಲ್ಲಿ,
ನಮಗೆ ದನಕ್ಕೆ ಬಡಿದಂಗೆ ಬಡಿದು,
ನೆರೆಹೊರೆಯವರಿಗೆ ವಿಚಿತ್ರ ಭಯ ಕೊಟ್ಟು,
ಊರಿನವರೆಲ್ಲರನ್ನೂ ಬೆಚ್ಚಿಬೀಳಿಸಿದೆ.
ಚಂಡಿ-ಚಾಮುಂಡಿಯೂ ಆ ಘಳಿಗೆಯಲ್ಲಿ
ನಿನ್ನ ಮುಂದೆ ಮಂಡಿಯೂರಲೇಬೇಕಿತ್ತು.

ನಿನ್ನ ಆಸೆ, ಆಶಯಗಳಿಗೆ,
ಎಲ್ಲಾ ಕನಸುಗಳಿಗೆ ಕೊಲ್ಲಿಯಿಟ್ಟು,
ನಮ್ಮ ಕನಸುಗಳಿಗೆ ನಿರಂತರ ನೀರು-ಗೊಬ್ಬರವೆರೆದು,
ಜಾಗರೂಕತೆಯಿಂದ ಸಲುಹಿ, ಬೆಳೆಸಿ
ನಮಗಿಂತ ಹೆಚ್ಚಾಗಿ ನೀನೇ ಖುಷಿಪಟ್ಟೆ.

ಎಂದೂ ಅಳಿಸಲಾಗದ ಘಟನೆಗಳು;
ಅಂದು ಅವರಿತ್ತ ಮುದ್ದೆಸಾರು ನಮಗಿಟ್ಟು
ನಾವು ಅದರೊಂದಿಗೆ ಕಾಳಗವಿಟ್ಟು,
ಕ್ಷಣದಿ ಕರಗಿಸಿದ ಚಣಗಳನ್ನು,
ಆಸ್ಥೆಯಿಂದ ಆಸ್ವಾಧಿಸಿ,
ಚಂಬು ನೀರು ಕುಡಿದು ಮಲಗಿದ
ನಿನ್ನ ಎಷ್ಟೋ ರಾತ್ರಿಗಳಿಗೆ ಲೆಕ್ಕವುಂಟೇನೆ?
ದಟ್ಟ-ದಾರಿದ್ರ್ಯದ ಅಟ್ಟಹಾಸವ
ನಸು ನಗೆಯಿಂದಲೇ ಮಣಿಸಿದ
ನಿನ್ನ ಸಾಹಸಕ್ಕೆ ಶರಣು, ಶರಣು.
ಹಸಿವು,
ಅದೆಂಥಹ ಮಹಾಕ್ರೂರಿ, ನಿರ್ದಯಿ, ಕಡುಪಾಪಿ!
ನಮ್ಮ ಹಸಿವಲ್ಲಿ ನಿನ್ನ ಹಸಿವಿಗೆ 
ಆಗ ಜಾಗವೆಲ್ಲಿ.

ಆದರೂ ನೀನು ಮಾಹನ್ ಸ್ವಾರ್ಥಿ!
ಕುಡುಕ ಅಪ್ಪನ ಸಾವು ಸಹಿಸಿಕೊಂಡು,
ಒಮ್ಮೆಯಾದರೂ ಅದರ ನೋವು,
ಇಲ್ಲಾ ಅವನ ನೆನಪು ಸುಳಿಯದಂತೆ ನೋಡಿಕೊಂಡ
ನಿನಗೆ ಯಾರೆ ಮಾದರಿ?

ಅಮ್ಮ,
ಎಷ್ಟೋ ಸಲ ನಿನ್ನೊಂದಿಗೆ ಬಹಳ ಕಠುವಾಗಿ ವರ್ತಿಸಿರುವೆ,
ಕೈಮುಗಿವೆ ಒಮ್ಮೆ ಎನ್ನ ಕ್ಷಮಿಸಿಬಿಡೆ.

ಇನ್ನಾದರೂ ನೆಮ್ಮದಿಯಾಗಿ, ಆರೋಗ್ಯದಿಂದ,
ನಗುನಗುತ್ತಾ ನಮ್ಮೊಂದಿಗೆ ನೂರ್ಕಾಲ ನೂಕಿಬಿಡು.
ನೀನೆಂದೆಂದಿಗೂ ನಮಗೆ,
ಸ್ಪೂರ್ತಿಯ ಚಿಲುಮೆ,
ಸಹನೆಯ ಚಂದಿರ,
ಸ್ಥೈರ್ಯದ ಸೂರ್ಯ.







No comments: