Aug 19, 2008

ಮತ್ತೆ ಬರುವನು ಚಂದಿರ

ಆರೋಹ, ಅವರೋಹವದ್ಭುತ
ಶೃತಿ, ಲಯವ ಬಿಡದ ಸುತ
ಜಗದ ನಿಯಮ ಪಾಲಿಸುವ
ವಿನಯವಂತ ಚಂದಿರ

ಸುರಿವ ಮಳೆಯೆ ಸಂಗೀತ
ಜಾರಿ ಬರುವ ಸ್ವರದ ಹಿತ
ರಾಗ ಯಾವುದಾದರೇನು
ಕೇಳಿ ಕುಣಿವ ಚಂದಿರ

ಅವನ ಅವಳ ನಡುವೆ ಜಗಳ
ನೋಡಿ ನಲಿವ ಕುತೂಹಳ
ವಿರಸ ಕಳೆದು ಸರಸ ಸೆಳೆದ
ಕ್ಷಣಕೆ ಮಾಯ ಚಂದಿರ

ಕಳೆದ ನಿನ್ನೆ, ಸಿಗದ ನಾಳೆ
ಬೇಕೆ ನಮಗೆ ಅವರ ರಗಳೆ
ಇರುವ ಇಂದು ಈಗಲೇ
ನಿಜವು ನಮಗೆ ಚಂದಿರ

ಜಾರಿ ಬಿದ್ದರೇನು ಚಿಂತೆ
ಎದ್ದು ಬರುವ ಎಂದಿನಂತೆ
ಬಿದ್ದು ಎದ್ದು ನಿಂತ ಮೇಲೆ
ಗೆದ್ದು ಬರುವ ಚಂದಿರ

ಬಿಳಿಯ ಹಾಳೆಯ ಮೇಲೆ
ಬೆಳೆದು ನಿಂತ ಭಾವಗಳೆ
ಭಾರವಾಗದಿರಿ ಎಚ್ಚರ
ಹೊರಲಾರನು ಚಂದಿರ

ಬಿಸಿಲು, ಮಳೆ, ಚಳಿಯ ಹಾಗೆ
ಬದಲಾಗುವ ಬಯಕೆ ಏಕೆ
ಹಣ್ಣಾಗುವ ಮೊದಲೇ ಮಣ್ಣಾಗ
ಬೇಕೆ ಚಂದಿರ

ಗಂಡು ಹೆಣ್ಣು ಜಗದ ಕಣ್ಣು
ಧರೆಗೆ ದೇಹ ಹಸಿರು, ಮಣ್ಣು
ಉಸಿರಿಗಿರಲು ಗಾಳಿ, ನೀರು
ಬೇರೆ ಬೇಕೆ ಚಂದಿರ

ಆದಿ, ಅಂತ್ಯ ನೆಪಕೆ ಮಾತ್ರ
ಮರಳಿ ಬರಲು ಬೇರೆ ಪಾತ್ರ
ಇರುವ ಮೂರು ದಿನವು ನಟಿಸಿ
ಇಹವ ತೊರೆಯೋ ಚಂದಿರ

ಒಂದು, ಎರಡು, ಮೂರು, ನಾಕು
ದಾರಿ, ನೆರಳು, ಬೆಳಕು ಬೇಕು
ಬಯಸಿ ಬಂದ ಭಾಗ್ಯ ಸವಿದು
ವಂದಿಸುವೆನೋ ಚಂದಿರ

No comments: