Aug 20, 2009

ಮತ್ತೆ ಬರುವನು ಚಂದಿರ - 31


ಹಾಡು ಹಕ್ಕಿಯೆ ಹಾರುತ
ಹಾದಿ ಸನಿಹಕೆ ಜಾರಿದೆ
ನಲಿವ ನವಿಲಿನ ಮಾಯೆ
ನಯನಮನೋಹರ ಚಂದಿರ
***
ನವ ದಿಗಂತದ ಆಗಮನಕೆ
ರವಿಯು ಆರತಿ ಬೆಳಗುವ
ಮಸ್ಸಂಚೆ ಪರದೆ ಸರಿಯಲು
ನಗುನಗುತ ಬರುವ ಚಂದಿರ
***
ಚೆಲುವ ಚತುರ ಚಕೋರನು
ಚದುರಂಗದಾಟವನಾಡುವ
ಯಾವ ಮಾಯಾ ಮೋಡಿಗೆ
ತಲೆತೂಗುತಿರುವ ಚಂದಿರ
***
ಮೋಡ ಕವಿಯುವ ಮಾತ್ರಕೆ
ಮಂದಹಾಸವು ಮಸುಕಾವುದೆ
ಶೃಂಗಾರ ಲಹರಿಯ ಹರಿಸುತ
ಪ್ರೇಮಿಗಳ ಹರಸುವ ಚಂದಿರ
***
ಬಾನಿನಂಚಿನ ಬೆಳ್ಳಿ ಬೆಳಗು
ಯಾವ ರಾಗದ ಆರೋಹಣ
ಇದ್ಯಾವ ತಾಳದ ದಿಂದಿಂನ
ತಾರೆಗಳ ರಿಂಗಣ ಚಂದಿರ
***
ಯಾವ ಚುಕ್ಕಿಯ ಸೆಳೆತಕೆ
ಹಾರುವ ಹಕ್ಕಿ ಮಿಡಿದಿದೆ
ಗಮ್ಯವ ಸೇರೊ ತುಡಿತಕೆ
ಸಕಲ ತೊರೆದಿದೆ ಚಂದಿರ
***
ಸಹಜ ರೀತಿಯ ಸೌಂದರ್ಯ
ಸವಿಯುವ ಕ್ರಮ ಸ್ವಾಭಾವಿಕ
ಅಸಹಜ ರೀತಿಯ ಆಸ್ವಾಧ
ಅಪರಾಧ ಅಲ್ಲವೆ ಚಂದಿರ?
***
ಮಾನ್ಯ ಶಿಷ್ಟ ಸಜ್ಜನರು
ಮದ್ಯಪಾನ ಬಲಹೀನತೆ
ಎಂದು ಬಿಂಬಿಸುವ ಪರಿ
ಸಭ್ಯತೆಯೆ ಹೇಳು ಚಂದಿರ?
***
ಪ್ರಾಮಾಣಿಕವಾಗಿ ಬಯಸುವ
ನಿಸ್ವಾರ್ಥದಿಂದ ಅಪ್ಪಿಕೊಳ್ಳುವ
ನಿತ್ಯ ಮುತ್ತಿಟ್ಟು ಮತ್ತೇರಿಸುವ
ಸಾಧನ ಮದ್ಯ ಅಲ್ಲವೆ ಚಂದಿರ?
***
ಪ್ರಾಮಾಣಿಕತೆ, ಸತ್ಯ, ನಿಷ್ಠೆಗಳು,
ನಂಬಿಕೆ, ನೈತಿಕತೆ, ಮೌಲ್ಯಗಳು
ಕೇಳಲು ಮತ್ತು ಹೇಳಲು ಬಹಳ
ಸೊಗಸಾಗಿದೆಯಲ್ಲವೆ ಚಂದಿರ?

No comments: