Sep 21, 2009

ಒಂದೆರಡು ಮಾತು

ನಾ ನಡೆದ ಹಾದಿಯಲಿ
ತಿರುವುಗಳು, ಏರಿಳಿತಗಳು
ಬೆಟ್ಟಗುಡ್ಡಗಳು, ದಟ್ಟಕಾಡುಗಳು,

ಪಚ್ಚೆಪೈರುಗಳು, ನದಿತೀರಗಳು
ಬಯಲುಸೀಮೆ, ಬಾಯ್ಬಿಟ್ಟ ನೆಲ
ಕಲ್ಲು-ಮುಳ್ಳುಗಳೂ ಸಹ
ಚುಚ್ಚಿದ್ದು, ಸವರಿದ್ದು, ತಾಗಿದ್ದು, ಎಡವಿ ಮುಗ್ಗರಿಸಿದ್ದು
ಎಷ್ಟೋ ಲೆಕ್ಕವಿಲ್ಲದಷ್ಟು...

ಹಾದೀಲಿ ಎದುರುಗೊಂಡವರು
ಹುಸಿನಗೆ ಬೀರಿ ಪಕ್ಕ ಸರಿದವರು
ಎತ್ತರದಿಂದ ಕೂಗಿ ಆಬ್ಬರಿಸಿದವರು
ಆಳದಲೆಲ್ಲೋ ಕೈ ಹಿಡಿದೆಬ್ಬಿಸಿ
ಸಾಂತ್ವನ ನುಡಿದವರು
ಜೊತೆಜೊತೆಗೆ ಹೆಜ್ಜೆಯಿಟ್ಟವರು
ಹಾದಿ ಕ್ರಮಿಸಿದ ಹಾಗೆ
ಜೊತೆಗಾರರಾದವರು...

ಹಾದಿಯ ಎರಡೂಬದಿ
ಬಣ್ಣ ಬಣ್ಣಗಳ ಕಡೆಗೆಣಿಸಿ
ಪಯಣದಲಿ ಸಂಯಮದಿ
ಅಡ್ಡದಾರಿಯ ದಿಕ್ಕರಿಸಿ ಮುನ್ನಡೆದು
ಸಾಧಿಸಿದ್ದೇನೊ ನಾನರಿಯೆ
ಆದರೂ, ಸಂತೃಪ್ತಿ
ಸಿದ್ಧಿಸಿದ್ದಂತೂ ಸರ್ವಸತ್ಯ

ಎಲ್ಲವೂ ನೆನಪಿಲ್ಲ ಕ್ಷಮಿಸಿ
ವಯಸ್ಸಾಯಿತೆಂದು ನೆಪವಲ್ಲ
ಕೆಲವು ಮರೆಯ ಬೇಕೆಂದಿರುವೆ
ಆದರೂ ಸೋತಿರುವೆ
ಮತ್ತೆ ಕೆಲವನ್ನು ಮರೆಯಲೇಕೊ
ನನಗೆ ಖಂಡಿತ ಇಷ್ಟವಿಲ್ಲ
ಉಳಿದೆರಡು ದಿನಗಳಿಗೆ ಜೊತೆಯಾಗಿ
ಆ ಸವಿ ನೆನಪುಗಳಾದರೂ
ಬೇಕಲ್ಲ...

2 comments:

ಬಿಸಿಲ ಹನಿ said...

ತುಂಬಾ ಚನ್ನಾಗಿ ಮೂಡಿಬಂದಿದೆ

ಚಂದಿನ | Chandrashekar said...

ಧನ್ಯವಾದಗಳು ಉದಯ್ ಅವರಿಗೆ.