Mar 6, 2008

ಮೌನ ಬಂಗಾರ

ಮೌನದೊಳಾಡಿದ ಮಾತು ಮುತ್ತು
ಆಗಲಾರದಾಗ ಯಾರಿಗೂ ಆಪತ್ತು
ಊಹೆಗಳೊಡನೆ ಅವರ ಕಸರತ್ತು
ಬೇಕಾದ ಉತ್ತರವೇ ಆಗ ಸಿಕ್ಕೀತು!

ಮಾತು ಬೆಳ್ಳಿ, ಮೌನ ಬಂಗಾರ
ಆದರೂ ನಮಗೇಕೀತರದ ಆತುರ
ಆಹಾ! ಬಂಗಾರ ಮಡದಿ ಸಿಂಗಾರ
ನಗುವಿನಲೇತಕಿವಳಿಷ್ಟು ಸುಂದರ

ಇವರಂತರಾಳ ಯಾರ್ಯಾರಿಗೆ ಗೊತ್ತು
ನೋವುಂಡ ಮಹನೀಯರಿಗಿದರ ತುತ್ತು
ಅನುಭವದಾರುಂಡ ಚೆಂಡಾಡಿ ಗುಂಡ
ಆದಾನು ಇವ ನಾಳೆ ಗಂಡ ಬೇರುಂಡ

ಸುಮ್ಮನಿರಲಾರದವನಿರುವೆ ಮೇಲೆರೆದಂತೆ
ಮಾತನಾಡುತಲಿವ ಮತಿಗೆಡಸಿಕೊಂಡತೆ
ಸತಿ ನೀನು, ಮತಿ ನೀನು ಅಂದರೇನಂತೆ
ನಿಜ ನುಡಿವೆ ಜಾಣನೇ ನಿನಗಿರದು ಚಿಂತೆ

ಗುಟ್ಟು ಬಿಟ್ಟರೆ ಗೆಳೆಯ ಕಟ್ಟೆ ಹೊಡೆದಂತೆ
ಗಟ್ಟಿಯಾಗಿರು ನೀನು ಜುಟ್ಟು ಹಿಡಿದಂತೆ
ಆದಿ ಕೇಶವರಾಯ ವರ ಕೊಡುವನಂತೆ
ಮುದೆಂದಿಗಿರದು ನಿನಗಾವ ಕೊರತೆ

ಮೌನದಾಮಂತ್ರವನು ಪಠಿಸುತಾ ನೀನು
ಮರಣದಂಡನೆಯನು ನೀ ಗೆಲ್ಲ ಬಹುದು
ಸುಮ್ಮನಿರು ಕಂದ ಜೋ ಜೋ ಮುಕುಂದ
ಇದನರಿತು ನಡೆದರೆ ಚಂದ ನಿತ್ಯಾನಂದ

Mar 5, 2008

ತುಟಿಯ ಚಿಹ್ನೆ

ಸುಮ್ಮನೆ ಸುಮ್ಮಸುಮ್ಮನೇ ನಿನ್ನಾಣೆ
ಸುಳ್ಳು ಹೇಳುವವನಲ್ಲನಾ ನಂಬು ಕಣೆ
ನನ್ನ ಮನದನ್ನೆ ನಿನ್ನೆ ನೋಡಿದೆ ಕೆನ್ನೆ
ಅದಕೊಮ್ಮೆ ಕೊಡಲೇನು ತುಟಿಯ ಚಿಹ್ನೆ

ಹೊತ್ತಿ ಉರಿಯುವುದು ನನ್ನಲ್ಲಿ ಬೆಂಕಿ
ಕಂಡಾಗ ಯಾರೋ ನಿನ್ನನೇ ಅಣುಕಿ
ಅಟ್ಟಹಾಸದಿ ಮೆರೆದವ ನಿನ್ನ ಕೈಕುಲುಕಿ
ಬಿಡಲು ಸಾಧ್ಯವೇ ಅವಗೆ ಕೊಟ್ಟು ಧಮ್ಕಿ

ಒಲವಿನೋಲೆಯನೆಸೆದೆ ಕಸದ ಬುಟ್ಟಿಗೆ
ತುಟಿಕಚ್ಚಿ ಸಹಿಸಿ ತೋರಗೊಡದೆ ನಿನಗೆ
ಮೊನಚಾದ ಚೂರಿಯಂತಿರುವ ಮಾತಿನ
ಕದನ ನಾ ನಗುವಿನಲೇ ಮಾಡಿದೆ ಶಮನ

ಅನಿಸಿತೂ ಎಲ್ಲವೂ ಪ್ರೇಮ ಪರೀಕ್ಷೆಯಂತೆ
ಉತ್ತರಿಸಿರಿವೆನಾದರೂ ಬಿಡದಲ್ಲಾ ಚಿಂತೆ
ದೂರ ದೂರಕೆ ಸರಿವೆ ಬೇಸರವಿರುವಂತೆ
ಅನಿಸುತಿದೆ ನನಗೇಕೋ ಬಳಿ ಬರುವಂತೆ

ಗೆಳತಿ ಬೇಹುಗಾರಿಕೆಯ ಬೆಂಬಲವಿರಲೆನಗೆ
ಆದರೂ ಎಲ್ಲವನು ತಿಳಿಸುವ ಬಯಕೆ ನಿನಗೆ
ಸಂಯಮದಿ ಕಾದಿರುವೆ ತಿಳಿದಿರಲು ನಿನಗೆ
ನಟಿಸುವೆ ಜಾಣೆ ನೀ ಇನ್ನೂ ಎಲ್ಲಿಯವರೆಗೆ

ನಿನಗೆ ತಿಳಿದಿರಲಿ ನಾನಲ್ಲ ಸಂತ, ಶರೀಫ
ಹೊತ್ತು ಮುಳುಗುವ ತನಕ ಮಾತ್ರವೇ ಜಪ
ಕತ್ತಲು ಜಾರುವ ಮುನ್ನವೇ ಕೊಡುವೆ ನೆಪ
ಮತ್ತೆ ಕನಸಿನಲಿ ಮರೆವೆನೆಲ್ಲಾ ಕೋಪ

ಬಯಸುವೆ

ಪ್ರಚಲಿತದಿಂದ ವಿಚಲಿತನಾಗದೆ
ಉತ್ಕಟತನಕೆ ವಿಮುಖನಾಗದೆ
ಕಂಡ ಮಾದರಿಗೆ ಮರುಳಾಗದೆ
ಜಾಹೀರಾತಿಗೆ ಮಾರುಹೋಗದೆ

ವಿಕೇಂದ್ರೀಕೃತ ಪ್ರಕ್ರಿಯೆಗಳನು
ಸ್ಥಿರ ಚಿತ್ತದಿ ಬಡಿದೋಡಿಸುವೆನು
ವಕ್ರ ಕುಣಿತವನಾನಂದಿಸುವರನು
ವಿನಮ್ರತೆಯಿಂದಲೇ ಬೇಡುವೆನು

ಕುಸಿವ ಮಾನವೀಯ ಮೌಲ್ಯಗಳ
ಸೂಕ್ಷ್ಮ ನೈತಿಕ ಪ್ರಶ್ನೆಗಳು ಬಹಳ
ವಿಕಾಸದ ವಿಶಾಲತೆಯನರಿಯಲು
ಪರ್ಯಾಯ ದೃಷ್ಟಿಯಿಂದ ಕಾಣಲು

ಕುಣಿಯುವ ಮನವನು ಪಳಗಿಸಲು
ಆಂತರಿಕ ನೆಲೆಗಳ ಜೊತೆಗೂಡಲು
ಸಾಮಾಜಿಕ ಮಾದರಿಯು ಬೆಳಗಲು
ಭವಿಷ್ಯವು ಉಜ್ವಲದ ಪಥವಿಡಿಯಲು

ಹಿಂಸಾ ಮಾರ್ಗವ ವಿರೋಧಿಸುವೆ
ಗಾಂಧಿಗಿರಿಯನು ಬಲ ಪಡಿಸುವೆ
ಪ್ರಜಾಸತ್ತೆಯಲಿ ನಂಬಿಕೆಯನಿಟ್ಟು
ಸಾಮ್ರಾಜ್ಯಶಾಹಿಯಾ ದ್ವೇಷಿಸುವೆ

ಕೇಳೋ ಶಿವ

ಅನಿಸಿಕೆಗಳ ಬಿಡಿಸಿಡಲು
ಅಪ್ಪಣೆಯು ಅನಿವಾರ್ಯವೇ
ನನ್ನೊಳಗಿರುವ ನನ್ನನು
ಕಾಣಲು ಕಾರಣದಗತ್ಯವೆ

ಆವಿಷ್ಕರಿಸುವ ಆತುರಕೆ
ಪರಿಷ್ಕರಿಸುವ ತಂತ್ರದಿ
ವ್ಯಕ್ತಿ ಸ್ವಾಯತ್ತತೆಯನು
ಕಾಯ್ದುಕೊಳ್ಳುವ ಈ ಬಗೆ

ಸಂದಿಗ್ಧ ಪರಿಸ್ಥಿತಿಯಲಿರೆ
ವಿಕಾಸದ ವಿಸ್ತರಣೆಗೆ ಬಲ
ಆಳ, ಹಂದರ, ಅಗಲವೆಲ್ಲಾ
ಮನಸ್ಥಿತಿಗೆ ನೀಡುವ ಛಲ

ನನ್ನಲ್ಲಿ ನಾ ಹುಡುಕುತಿರುವೆ
ಕಳೆದುಕೊಂಡೇನೆಂದರಿಯದೆ
ಪಡೆದೆನೇನೇನೋ ತಿಳಿಯದೆ
ಸುಮ್ಮನೆ ಕುಳಿತಿರಲಾಗದೆ

ನನಗೆ ನೆಚ್ಚಿದ ಆಪ್ತರೆಲ್ಲರನು
ಜಗವ ತಿಳಿಸುವ ಗುರುವನು
ಒಲವು ನೀಡಿ ಸೆಳೆದವರನು
ಕೇಳೋ ಶಿವನವರ ಬಿಡನು

Mar 4, 2008

ಕ್ಷಮೆಯಾಚನೆ

ಯಾವ ಮಾಯೆಯ ಮೋಡಿಗೆ ಸಿಲುಕಿದೆ
ಆವ ಪರಿಯ ಕ್ರಮಕೆ ನೀ ತಲೆತೂಗಿದೆ
ಕರುಳ ಕುಡಿಗಳ ಕಸಿದು ಕಟುಕ ನೀನಾದೆ
ಮಾತೆಯ ಮಮತೆ ಮಗುವಿಗೆ ಸಿಗದೇ

ನೋವ ಬಣ್ಣಿಸಲು ಸಾಧ್ಯವೇ ಮರುಳೇ
ಮುಗ್ದ ಕಂದಮ್ಮಗಳ ಚೀರಾಟ ತರವೇ
ತಾಯಿ ಚಡಪಡಿಸಿ ಭಯದ ಆಕ್ರಂದನ
ತಂದೆ ಮೌನದಲೇ ಮರುಗಿದಾ ದಿನ

ಹಕ್ಕಿಗೂಡನು ಕಿತ್ತೆಸೆದು, ಚುಕ್ಕಿಗಳ ಚಲ್ಲಾಡಿ
ಗಳಗಳನೆ ಗೋಳಿಟ್ಟವೇ ಗತಿಯ ಅರಿಯದೆ
ಮೂಕವಾಗಿಯೇ ಕೊರಗಿ ಕರುಳು ಕತ್ತರಿಸಿರಲು
ಸರಳವಾಗಿಯೇ ಮುಗಿಸಿ ನೀ ನಿಟ್ಟುಸಿರಿಡಲು

ಈ ಬಗೆಯ ಕ್ರೂರಿಯು ನೀನಾದೆ ಆ ಜನಕೆ
ಕುರುಡಾಗಿ ಕಾಡಿರುವೆ ಸತತ ಬಲವಾಗಿ
ಕಿವುಡಾಗಿ ನಟಿಸಿ ಅಸಹಾಯಕರ ಕರೆಗೆ
ದಶಕಗಳು ಅಮಾನವೀಯತೆಯನೆಸಗಿ

ಹುಚ್ಚು ನಾಗರೀಕತೆಯ ಹೆಸರಿನ ಹಿನ್ನಲೆ
ಕೊಚ್ಚಿ ಹಾಕಿರುವೆ ಅವರ ಅಸ್ತಿತ್ವದ ನೆಲೆ
ಚುಚ್ಚು ಮಾತಿನಿಂದ ಬೆಚ್ಚಿ ಬೀಳಿಸುತಿರುವೆ
ಮುಚ್ಚಿಹಾಕುವ ಯತ್ನಕೆ ಮತ್ತೆ ಸೋತಿರುವೆ

ಅಮಾನುಶವಾಗಿ ಕೊಲೆಗೈದೆ ಮುಗ್ದರನು
ಕೇಡುಗನು ನೀನಾಗಿ ಕಿತ್ತೆಸೆದೆ ಇರುವನು
ಅಣ್ಣನಾ, ಅಕ್ಕನಾ, ತಮ್ಮನಾ, ತಂಗಿಯಾ
ಅಲ್ಲಲ್ಲಿ ಹಂಚಿದೇ ಅಟ್ಟಹಾಸ ಮೆರೆದು ನೀನು

ತೋರಿಕೆಯ ಸಮಾಜದಿ ನೆಮ್ಮದಿ ಸಿಗುವುದೇ
ಬೇಡಿಕೆಗಳ ಜಗಕೆ ಕರೆತಂದು ಕೈಬಿಟ್ಟಿರುವೇ
ಅನಾಗರೀಕತೆಯಲಿ ಜಾಗರೂಕತೆ ಸಾಧ್ಯವೇ
ತನ್ನವರು ಜೊತೆಗಿರದ ಪಯಣವು ಸಂತಸವೇ

ಕೆರೆಯ ಮೀನು ಕ್ಷೀರ ಸಾಗರವ ಬಯಸುವುದೇ
ಹಾರುವ ಹಕ್ಕಿಯು ಪಂಜರದ ಸುಖ ಬೇಡುವುದೇ
ಸರಳ ಚಿತ್ತವನರಿಯಲು ವರುಷಗಳ ಅವಶ್ಯವೇ
ಕ್ಷಮೆಯಾಚನೆಯಿಂದ ನೋವು ಮರೆಯಾಗುವುದೇ

( ಆಸ್ಟ್ರೇಲಿಯಾ ಪ್ರಧಾನಿ ಬುಡಕಟ್ಟಿನ ಜನಾಂಗಕ್ಕೆ
ಕ್ಷಮೆಯಾಚಿಸಿದ ಹಿನ್ನಲೆಯಲ್ಲಿ )

Mar 3, 2008

ಕಾಯುವೆನು

ಕಾಯುವೆನು ಕಾತುರವ ತ್ಯಜಿಸಿ
ಆತಂಕವ ಹಾರಿಹೋಗುವವರೆಗೆ
ಉದ್ರೇಕದ ಊರುಗೋಲನಗಲಿ
ಆವೇಶವು ಅಂತ್ಯವಾಗುವವರೆಗೆ

ವ್ಯಂಗ್ಯದ ನಿಯಂತ್ರಣಕೆ ಬಾಗದೆ
ವಿಮರ್ಶೆಯ ಧಾಳಿಗೆ ಸೋಲದೆ
ಆದರ್ಶದ ಹಾದರಕೆ ನಾ ಹೆದರದೆ
ಆತುರದ ಗರಿಗೆದರಿ ನಾ ಹಾರದೆ

ಅಂಕಿ, ಸಂಖ್ಯೆಗಳ ಸೋಂಕುಗಳಿರದೆ
ಪ್ರಶಂಸೆಗಳ ಸೆಳೆತಕೆ ಸರಿಯೆನ್ನದೆ
ನಿಟ್ಟುಸಿರು ಒತ್ತಾಯಕೆ ಉತ್ತರವಾಗದೆ
ಹಗಲಿರುಳು ಗೊಂದಲದ ಗೂಡಾಗದೆ

ಅನುಭವದ ಅನಂತತೆಯನಾದರಿಸಿ
ಸ್ಪಷ್ಟತೆಯ ಅನುಭಾವಕೆ ತಲೆಬಾಗಿಸಿ
ಸರಳತೆಗೆ, ಮುಗ್ಧತೆಗೆ ಮನದೂಗಿಸಿ
ಪ್ರಾಮಾಣಿಕತೆ ಜೊತೆಗೆ ನಾ ಪಯಣಿಸಿ

ಅಂತರಾಳದ ಆಶಯಗಳಿಗೆ ದನಿಯಾಗಿ
ಹೊರ ಜಗಕೆ ನಾನೆಸೆವ ಸವಾಲಿಗಾಗಿ
ನಾ ನಾನಾಗಲು ಯತ್ನಿಸಿ ದೃಢವಾಗಿ
ಅರಿವನು ಹರಿಸಿ ನೆನಪಿನ ನದಿಯಾಗಿ