Jun 12, 2008

ಅಂತರಾಳದಲ್ಲೊಂದು

ಅಂತರಾಳದಲ್ಲೊಂದು ಮನೆ
ಆಗಲೇ ಕಟ್ಟಿದೆ
ನಂತರ ನಾನೊಂದು
ನಿವೇಶನ ಹುಡುಕಿದೆ

ತಳಪಾಯ ಬೇಕಲ್ಲವೆ
ಒಂದು ಕಡೆ
ಗಟ್ಟಿಗೆ ತಳವೂರಲು
ಅಲ್ಲಲ್ಲಿ ಅಲೆಯದಿರಲು

ಇಟ್ಟಿಗೆ ಬೇಕೇ ಬೇಕು
ಮನೆ ಕಟ್ಟಲು
ಅದಕೆ ಕಟ್ಟಿಗೆಯ
ಕಿಟಕಿ, ಬಾಗಿಲು

ಹಿಡಿದಿಡಲು ಅಲುಗಾಡದೆ
ಅವರಿಗೆ ಬೇಕಲ್ಲವೆ
ಸಿಮೆಂಟು, ಮರಳು
ಇವರಿಗೆ ಸಾಕಷ್ಟು ನೀರು

ತದನಂತರವಲ್ಲವೆ
ಒಳ, ಹೊರ ವಿನ್ಯಾಸ
ಅಭಿರುಚಿಗೆ ತಕ್ಕ ಬಣ್ಣ
ಒಳನೋಟ, ಹೊರನೋಟ

ಅವಸರ, ಆವೇಶದಿಂದ
ಆಡುವ ಆಟ ಇದಲ್ಲವಲ್ಲ
ಮುದ್ದು ಮಗುವಿಗೆ ಒಂಬತ್ತು
ತಿಂಗಳು ಕಾಯಲೇ ಬೇಕಲ್ಲ

Jun 11, 2008

ಅಲ್ಲಿಗೆ ಹತ್ತಿರ

ಅಲ್ಲಿಗೆ ಹತ್ತಿರ ಇಲ್ಲಿಗೆ ದೂರ
ಬಂದು ಹೋಗುವ ನಡುವಿನ ಅಂತರ
ನಾನಾ ಅವತಾರ
ಇದುವೇ ಇಲ್ಲಿನ ಚಮತ್ಕಾರ

ಬಿದ್ದ ಕ್ಷಣದಿಂದ
ಬಿಡುವ ಕ್ಷಣದವರೆಗೂ
ತಿಳಿಯದಾಗಿದೇ ಈ ಸಾಗರ
ತಿಳಿಸಲಾಗದೇ ಶಂಕರ

ಪಡೆದುದೆಲ್ಲಾ ಪಡೆಯುವವರೆಗೆ
ಪಡೆದ ಮೇಲೆ ಬೇರೆಯೆಡೆಗೆ ,
ಬಿಟ್ಟಮೇಲೆ ಬೇರೆಯವರಿಗೆ
ಪಡೆದು ಪಡೆಯದೆ ಪಡೆದೆನೆಂಬುವೆ
ಪಡೆದುದೇನೋ ನರಹರ

ದಿನವು ಹತ್ತಿರ ದಿನವು ದೂರ
ದೈತ್ಯನಾಗುವ ಬಯಕೆ ಭಾರ
ನಾಳೆ ನಾಳೆಗಳಾಚೆ ಬಾರ
ಇರುವುದಿಂದೇ ನಿಜವೊ ಶೂರ

ದೀನ ದಾನವ ದೇವನಾಗು
ದಣಿದ ದೇಹಕೆ ದಾಸನಾಗು
ಇಹದ ಪರಿಗಳ ಅರಿತು ಅರಸನಾಗು
ಅಗು ನೀನು, ನೀನು ನೀನಾಗು

Jun 10, 2008

ಕ್ರಿಯೆ

ಕಳ್ಳಬಟ್ಟಿಗೆ ಕುಡುಕರ ಸಂಹಾರ
ಬಾಂಬ್ ಬ್ಲಾಸ್ಟ್ ಐವತ್ತು ಡೆತ್
ತಂದೆ ಮಗಳ ಕೊಂದ
ಪ್ರಿಯಕರನ ಜೊತೆ ನಟಿ
ಕತ್ತರಿಸಿದಳು ಅವನ ಮುನ್ನೂರು ಚೂರು
ಎಸೆದು ಸುಟ್ಟರು ಹಚ್ಚಿ ಪೆಟ್ರೋಲು
ಅಲ್ಲೊಬ್ಬ ಕುಡಿದು ಮಂದಿಯ ಮೇಲೆ
ಹತ್ತಿಸಿದ ಕಾರು
ಗುಂಡು ನಿರಾಕರಿಸಿದ ಕಾರಣ
ಮತ್ತೊಬ್ಬ ಗುಂಡ್ಹಾರಿಸಿ ಕೊಂದ ಅವಳ ,
ತಂಗಿಯ ಪ್ರೀತಿಸಿದವನ ಖೂನಿ
ಪ್ರೀತಿ ನಿರಾಕರಿಸಿದ್ದಕ್ಕೆ ಇಲ್ಲೊಬ್ಬ
ಎರಚಿದ ಆಸಿಡ್ ಅವಳ ಮುಖಕ್ಕೆ

ತರಕಾರಿ ಹಚ್ಚುತ್ತಿದ್ದಳು ಆಕೆ
ಹವಣಿಸುತ್ತಿದ್ದನವ ಅಲ್ಲೇ ಬೆಳಗಿನಿಂದ ಜೊತೆಗೆ
ಮಾಂಸದಂಗಡಿಯಾತ ಮೂಳೆಗಳ
ಕತ್ತರಿಸುತ್ತಿದ್ದ ಎಂದಿನಂತೆ ,
ಭಿನ್ನ ವ್ಯವಹಾರ, ನಿಗೂಢತೆಯ ಆಗರ
ನಡೆದದ್ದು, ನಡೆಯ ಬೇಕಾದುದು
ನಡೆಯುತ್ತಲೇ ಇತ್ತು

ಪಟ್ಟಿ ಬೆಳೆಯುತ್ತಲೇ ಇದೆ
ಆದಿ, ಅಂತ್ಯ ತಿಳಿಯದೆ
ಹಿನ್ನಲೆಗಳು ಹಲವಾರು
ಮನಸು ಸ್ಥಿಮಿತ ಕಳೆದುಕೊಂಡ ಕ್ಷಣ
ನಿರೀಕ್ಷೆ ಹುಸಿಯಾದಾಗ, ಗುಮಾನಿ ಯಾರಮೇಲೆ
ಬೇಲಿಯೆದ್ದು ತಿರುಗಿಬಿದ್ದಾಗ
ಕಾರಣ ಕ್ಷುಲ್ಲಕ, ಕ್ರಿಯೆ ಭಯಾನಕ
ಅನಾಯಾಸವಾಗಿ ಹಾಡ ಹಗಲೆ
ಜನರ ಸಮಕ್ಷಮದಲೆ ನಡೆದಿತ್ತಂದು ಕೊಲೆ
ಅಸಮಾಧಾನ, ಆತಂಕ ಗಿರಕಿ ಹೊಡೆಯುತ್ತಿವೆ
ಯಾರ ನೆತ್ತಿಯ ಮೇಲೆ, ಯಾವಾಗ ,
ಏಕೆ, ಹೇಗೆ ಬೀಳುತ್ತದೆ ಕತ್ತಿ
ಬಿದ್ದ ನಂತರ ಸುದ್ದಿ

ಪ್ರಕರಣ ದಾಖಲು, ಇನ್ವೆಸ್ಟಿಗೇಷನ್ ಮೊದಲು
ಸಾಕ್ಷಿಗಳ ಹುಡುಕಾಟ, ಆರೋಪಿಗಳ ಪತ್ತೆ ,
ಬಂಧನ, ಭೇಟಿ, ಬಿಡುಗಡೆ ಮತ್ತೆ
ಅದೇ ಆಟ ಶುರು ,
ಈಗ ದೊಡ್ಡ ಮಟ್ಟದಲ್ಲಿ
ಚದುರಂಗದಾಟಕೆ ಕಳೆದು ಹೋದವರೆಷ್ಟೋ
ಮಂದಿ, ಆಡಿಸುವವರ ಆಟ
ನಡೆಯುತ್ತಲೇ ಇದೆ ನಿಲ್ಲದೆ
ವ್ಯವಸ್ಥೆ ಜನರ ಅಣಕಿಸುತ್ತಲೇ

Jun 6, 2008

ಚಕ್ರ

ಚಕ್ರ ತಿರುಗುತ್ತಲೇ ಇತ್ತು
ತದೇಕಚಿತ್ತವಾಗಿ ನಿಲ್ಲದಂತೆ
ಅದುವೇ ಅದಕೆ ಗೊತ್ತಿದ್ದ
ಕಾರ್ಯ, ಕರ್ಮ, ತತ್ವ ,
ತರ್ಕ, ತಪಸ್ಸು ಎಲ್ಲವೂ ,
ದಣಿವು, ದಾಹವೇನೂ
ಇದ್ದಂತಿರಲಿಲ್ಲ ,
ಮುಖಭಾವ ನಿರ್ಲಿಪ್ತ, ನಿಶ್ಚಲವಾಗಿ
ಊಹೆಗಳಿಗೆ ಮೀಸಲಿಟ್ಟಂತೆ
ಇತಿಹಾಸಕಾರನಿಗೊಂದು ,
ಕವಿಗೊಂದು ಮುಖ ,
ವಿಜ್ಞಾನಿಗೊಂದು, ಧರ್ಮದರ್ಶಿಗೆ ,
ಹೀಗೆ ಕ್ಷೇತ್ರಾವಾರು ಅವರವರ
ಸಾಮರ್ಥ್ಯಕ್ಕೆ ತಕ್ಕಂತೆ
ಭಿನ್ನ ಉತ್ತರಗಳಿದ್ದರೂ
ಇನ್ನೂ ಪ್ರಶ್ನೆಗಳು ಬಹಳ ಉಳಿಸಿ
ಅದಕಿರಲಿಲ್ಲ ಯಾವ ಚಿಂತೆ
ಎಲ್ಲವೂ ನಮಗೇ ಬಿಟ್ಟಂತೆ
ಉದಾರ ಮನೋಭಾವವೋ ,
ಉದಾಸೀನವೋ ಗೊತ್ತಿಲ್ಲ
ನೆಗೆಯುತ್ತಿದ್ದರು ಕಪ್ಪೆಗಳಂತೆ ,
ನಾಯಿ, ನರಿಗಳಂತೆ ಬೊಗಳುತ್ತ
ಕರುಣೆ, ಸಹನೆ, ಸಂಯಮ
ಮರೆತಂತೆ ,
ಅಗಾಧ ಭಾರ ಹೊತ್ತು
ಇಳಿಸಲೂ, ಹೊರಲೂ
ಆಗದಂತೆ
ಚಕ್ರ ಸುತ್ತುತ್ತಲೇ ಇದೆ
ನಿಶ್ಚಿಂತನಾಗಿ, ನಿರಾಳವಾಗಿ ,
ನಿರಮ್ಮಳವಾಗಿ ಹಾಗೇ ...
ತಂತ್ರಜ್ಞಾನ, ವಿಜ್ಞಾನ ,
ವೈಚಾರಿಕತೆ, ಪುರಾವೆ ,
ಚಿಂತನೆ, ಮಂಥನ ,
ತರ್ಕ, ವಾದ-ವಿವಾದಗಳ
ಸೃಷ್ಠಿಸಿದವರು ಯಾರೋ
ತನಗರಿವಿಲ್ಲದಂತೆಯೇ
ಮುಂದುವರೆಸಿದೆ ಹಾಗೇ ...
ಅದೇ ಶೃತಿ ಲಯದಲ್ಲಿ
ರಾಗ ತಾಳಗಳರಿವಿರದೆ
ಯೋಗ ಭೋಗಗಳ ನೋಡುತ
ಹಸಿವು, ನಲಿವುಗಳಿಗೆ ಪ್ರತಿಕ್ರಿಯಿಸದೆ
ಬಡವ, ಬಲ್ಲಿದರಿಗೆ ,
ಜಾತಿ, ಮತಗಳಿಗೆ
ಯಾವುದೇ ಉತ್ತರ ನೀಡದೆ
ತನ್ನಷ್ಟಕ್ಕೆ ತಾನೇ ಜೊತೆಯಾಗಿ
ಚಕ್ರ ಸುತ್ತುತ್ತಲೇ ಇದೆ
ನಿಲ್ಲದೆ ಎಂದಿನಂತೆ

Jun 4, 2008

ದೊಡ್ಡಾಟ - ದುಡ್ಡಾಟ

ಸಣ್ಣಾಟವಲ್ಲವೋ ಗೆಳೆಯ
ಘಟಾನುಘಟಿಗರು ಕಣದಲಿ
ದಶಕಗಳಿಂದ ಮೊಹರೊತ್ತಿ
ಪ್ರತಿಷ್ಠೆ ಪಣಕ್ಕಿಟ್ಟವರಿವರು

ವ್ಯಕ್ತಿತ್ವದ ದ್ವಂದ್ವತೆ ಬೆಟ್ಟದಷ್ಟು
ಅಷ್ಟೇ ಮಟ್ಟಕ್ಕೆ ಹಣವನಿಟ್ಟು
ಜಾತಿ ಧರ್ಮದ ನಶೆಯೇರಿಸಿ
ಬಿಟ್ಟಿ ಹೆಂಡ ಹಂಚಿದವರು

ಚಂದುರಂಗದಾಟವಲ್ಲವೋ
ಮೌಲ್ಯ, ಸಿದ್ಧಾಂತ, ಬದ್ಧತೆ
ಮುಖವಾಡ ಹೊತ್ತು
ಸ್ವರ್ಧೆಗೆ ಸೈ ಎಂದವರು

ಜನನಾಯಕರಿವರಲ್ಲವೋ
ಹಣವಿಟ್ಟು ಪಣತೊಟ್ಟು
ಜನರ ಮತ ಖರೀದಿಸಿ
ನರ ಭಕ್ಷಕರಾದವರು

ಜನ ಸೇವೆ ನೆಪವೊಡ್ಡಿ
ಜನಾರ್ಧನನಾಗುವವರೆಗೆ
ತಲೆಬಾಗಿ ದಾಹಕೆ
ತಾವಿರಲು ಮಾರಾಟಕೆ

ಶ್ರೀಮಂತಿಕೆ ವಿಕೃತ ಪ್ರದರ್ಶನ
ಹಣವೇ ಜನ ಗಣ ಮನ
ಲೆಕ್ಕಾಚಾರದ ವ್ಯವಹಾರ
ಗೆದ್ದವರೇ ಅಪಾರ

ದೇವ ದೇವತೆಯರ ದರ್ಶನ
ಜಾತಿ ಮಠಾದೀಶರಿಗೆ ನಮನ
ಜ್ಯೋತಿಷಿಗರಿಗೊಂದು ಸವಾಲು
ಒಳಗೊಳಗೇ ಎಲ್ಲ ಡೀಲು

ಚಿಕ್ಕವನಿದ್ದಾಗ ನೆನಪಿದೆ
ಆಕೆಯ ಕೈಗೆ ಹತ್ತು ರುಪಾಯಿ
ನನ್ನ ತಲೆಗೊಂದು ಕುಲಾಯಿ
ಮೇಲೆ ಕೈ, ಇಲ್ಲವೆ ನೇಗಿಲು

ಹಿರಿಯರಿಗೆ ಇತ್ತಲ್ಲ ಸರಾಯಿ
ಮಕ್ಕಳ ಜೋಬಿಗೆ ಕೈ ಪತ್ರ
ತಮ್ಮಟೆ ಜೊತೆಗೆ ಪ್ರಚಾರ
ಸದ್ಯಕೆ ಅಷ್ಟೇ ನೆನಪು

ಭಿನ್ನವಿಲ್ಲ ಈಗಲೂ ಅದೇ
ಹತ್ತು ರೂ ಸಾವಿರ ಆಗಿದೆ
ಸೀರೆ ಸೇರಿದೆ, ಪ್ಯಾಕೆಟ್
ಜೊತೆಗೆ ಬಾಟಲ್ ಬಂದಿದೆ

ಬದಲಾಗಿರುವುದು ಕೇವಲ
ನನ್ನ ವಯಸ್ಸಷ್ಟೆ, ಆಗ
ಹತ್ತು ಈಗ ನಲವತ್ತು
ಆಟದೊಳಗಾಟ ಮುನ್ನಡೆದಿತ್ತು

ಸ್ಪರ್ಧೆ

ಭಾರಿ ಉದ್ದಗಲದ ಸ್ಪರ್ಧೆ
ಕದ್ದೆಲ್ಲರ ನಿದ್ದೆ
ಹಳ್ಳಿಗೂ, ಡೆಲ್ಲಿಗೂ
ಕೊಟ್ಟೊಂದು ಒದೆ

ವಿಲ ವಿಲ ವಿಲ ಒದ್ದಾಡುತ
ಇದೀಗ ದಡಕೆಸದ ಮೀನಂತೆ
ನೆಗೆದು ಬಿದ್ದರೇನಂತೆ
ನಗದು ಸಿಗುವುದಾದರೆ

ಯಾವ ಪರಿ ರಿಯಾಯಿತಿ
ಇಲ್ಲಿ ಸಲ್ಲದು
ಸಾಲ ಬೇಕೆ ಸಿಗುವುದು
ಸುಲಿಗೆ ಆನಂತರವಷ್ಟೆ

ಮಾಹಿತಿಗಷ್ಟೇ, ಖಂಡಿತ
ಇಲ್ಲಾ ಇಲ್ಲಿ ಸಾಲಮನ್ನಾ
ಕೇವಲ ರಾಜಕೀಯ
ಆಟವಷ್ಟೇ

ಸುಳಿಗೆ ಸಿಕ್ಕವರೆಷ್ಟೋ
ಲೆಕ್ಕಕೆ ಸಿಗದವರು
ಮುಖಭಾವದಿಂದೇನು
ತಿಳಿಸದವರು

ಕಾಲಹರಣ ಕಾಲದಲ್ಲಿ
ಆಗ ಕನಸು ಕಾಣಲು
ಸಹ ಸಮಯವಿತ್ತು
ಸ್ಪರ್ಧೆಗೂ ಸೀಮಿತ

ಕಾರ್ಯಕ್ರಮಗಳ ಮಂಥನ
ಕಾರ್ಯರೂಪದಲಿ ಮಗ್ನ
ಕನಸಿಗೆಲ್ಲಿ ಸಮಯ
ನಿದ್ದೆ ಕಾಣೆಯಾಗಲು

ವೇಗ ಹೆಚ್ಚಾದಂತೆಯೆ
ನಾಡಿ ಮಿಡಿತ ಕೂಡ
ಹೇಗೆ, ಎಲ್ಲಿ, ಏಕೆ ಎಂಬ
ಪ್ರಶ್ನೆಗಳು ಮೌನ