Aug 25, 2008

ಆಗ

ವೇಗದ ಮನವಿಡಿದು
ಜೋರು ಉಸಿರೆಳೆದು
ನಿಧಾನಗತಿಯಲ್ಲಿ ಹೊರಬಿಡಲು
ನಿರಾಳ ಅಂತರಾಳ

ಮನೆತುಂಬ ನೆಂಟರು
ಜೋರು ಗಲಾಟೆ, ಮಂಡೆ ಬಿಸಿ ,
ಹೋದ ನಂತರ
ಮನಸು ಹಗುರ - ಭಾರ

ಒಂದೇ ಸಮನೆ ಟೀವಿ ಹಚ್ಚಿ
ಧಾರಾವಾಹಿ ನೋಡುವ ಛಟ
ಕೃತಕ ಭಾವೋದ್ರೇಕ
ನಿಂತರೆ ಮನಃಶಾಂತಿ

ನಿಮಿಷಗಟ್ಟಲೆ ಕಾಯಿಸುವ
ಟ್ರಾಫಿಕ್ ಸಿಗ್ನಲ್ಸ್
ಕ್ಷಣ ಕ್ಷಣ ರಕ್ತದೊತ್ತಡ ಏರುಪೇರು
ಗ್ರೀನ್ ಲೈಟಿಂದ ಬದುಕಿದ ತೃಪ್ತಿ

ಬಂಪರ್- ಟು - ಬಂಪರ್
ಟ್ರಾಫಿಕ್ ಜಾ...ಮ್ !
ಶೃತಿ, ಲಯ ತಪ್ಪಿದರೆ ಧರ್ಮದೇಟು, ದಂಡ
ಗೆದ್ದರೆ ದೊಡ್ಡ ನಿಟ್ಟುಸಿರು

Aug 22, 2008

ದಿನಚರಿ*

ಪ್ರತಿದಿನ ಮೂರು ಹೊತ್ತಿನ ಊಟ
ಹಗಲೆಲ್ಲ ಕೆಲಸ ,
ಗೆಳೆಯರೊಂದಿಗೆ ಹರಟೆ
ದಿನದ ವಿಶೇಷವೆ?

ಮಡದಿಯೊಂದಿಗೆ ಜಗಳ, ಮುನಿಸು ,
ಪಿಸುಮಾತು, ಸಿಹಿಮುತ್ತು ,
ಎದುಸಿರು, ನಿಟ್ಟುಸಿರು
ಸಮರ್ಥ ನಿರ್ವಹಣೆಯೆ?

ಮಗುವೆಬ್ಬಿಸಿ, ಹಲ್ಲುಜ್ಜಿ
ಹಾಲುಣಿಸಿ, ಸ್ನಾನ ,
ಶಾಲೆಯ ತಯಾರಿಯೊಂದಿಗೆ
ದಿನದ ಜವಾಬ್ದಾರಿ ಮುಗಿಯಿತೆ?

ಹೇಗಿತ್ತು ದಿನ, ಊಟವಾಯಿತೆ ,
ಆರೋಗ್ಯ ಹೇಗಿದೆ, ಇನ್ನೇನು ಸಮಾಚಾರ ,
ಪ್ರಶ್ನೆಗಳೊಂದಿಗೆ ,
ಅಮ್ಮನ ಆರೈಕೆ ಸಾಕೆ?

ದಿನಸಿ, ತರಕಾರಿ, ಕರೆಂಟು ಬಿಲ್ಲು
ಸಂಜೆ ಮಡದಿ ಮಗುವಿನ ಜೊತೆ
ಸಿನಿಮಾ, ತಿಂಡಿ, ತಿರುಗಾಟ...
ಬದುಕಿಗಿಷ್ಟು ಸಾಕೆ?

Aug 19, 2008

ಮತ್ತೆ ಬರುವನು ಚಂದಿರ

ಆರೋಹ, ಅವರೋಹವದ್ಭುತ
ಶೃತಿ, ಲಯವ ಬಿಡದ ಸುತ
ಜಗದ ನಿಯಮ ಪಾಲಿಸುವ
ವಿನಯವಂತ ಚಂದಿರ

ಸುರಿವ ಮಳೆಯೆ ಸಂಗೀತ
ಜಾರಿ ಬರುವ ಸ್ವರದ ಹಿತ
ರಾಗ ಯಾವುದಾದರೇನು
ಕೇಳಿ ಕುಣಿವ ಚಂದಿರ

ಅವನ ಅವಳ ನಡುವೆ ಜಗಳ
ನೋಡಿ ನಲಿವ ಕುತೂಹಳ
ವಿರಸ ಕಳೆದು ಸರಸ ಸೆಳೆದ
ಕ್ಷಣಕೆ ಮಾಯ ಚಂದಿರ

ಕಳೆದ ನಿನ್ನೆ, ಸಿಗದ ನಾಳೆ
ಬೇಕೆ ನಮಗೆ ಅವರ ರಗಳೆ
ಇರುವ ಇಂದು ಈಗಲೇ
ನಿಜವು ನಮಗೆ ಚಂದಿರ

ಜಾರಿ ಬಿದ್ದರೇನು ಚಿಂತೆ
ಎದ್ದು ಬರುವ ಎಂದಿನಂತೆ
ಬಿದ್ದು ಎದ್ದು ನಿಂತ ಮೇಲೆ
ಗೆದ್ದು ಬರುವ ಚಂದಿರ

ಬಿಳಿಯ ಹಾಳೆಯ ಮೇಲೆ
ಬೆಳೆದು ನಿಂತ ಭಾವಗಳೆ
ಭಾರವಾಗದಿರಿ ಎಚ್ಚರ
ಹೊರಲಾರನು ಚಂದಿರ

ಬಿಸಿಲು, ಮಳೆ, ಚಳಿಯ ಹಾಗೆ
ಬದಲಾಗುವ ಬಯಕೆ ಏಕೆ
ಹಣ್ಣಾಗುವ ಮೊದಲೇ ಮಣ್ಣಾಗ
ಬೇಕೆ ಚಂದಿರ

ಗಂಡು ಹೆಣ್ಣು ಜಗದ ಕಣ್ಣು
ಧರೆಗೆ ದೇಹ ಹಸಿರು, ಮಣ್ಣು
ಉಸಿರಿಗಿರಲು ಗಾಳಿ, ನೀರು
ಬೇರೆ ಬೇಕೆ ಚಂದಿರ

ಆದಿ, ಅಂತ್ಯ ನೆಪಕೆ ಮಾತ್ರ
ಮರಳಿ ಬರಲು ಬೇರೆ ಪಾತ್ರ
ಇರುವ ಮೂರು ದಿನವು ನಟಿಸಿ
ಇಹವ ತೊರೆಯೋ ಚಂದಿರ

ಒಂದು, ಎರಡು, ಮೂರು, ನಾಕು
ದಾರಿ, ನೆರಳು, ಬೆಳಕು ಬೇಕು
ಬಯಸಿ ಬಂದ ಭಾಗ್ಯ ಸವಿದು
ವಂದಿಸುವೆನೋ ಚಂದಿರ

Aug 12, 2008

ಅಳುತ್ತಿರುವ ಮಗುವೇ*

ಮಗು ಅಳುತ್ತಿದೆ ಬೆಳಗಿನಿಂದ;
ರೆಪ್ಪೆ ಒತ್ತಿದಷ್ಟೂ ಹೊಮ್ಮುವ
ಕಣ್ಣೀರ ಕಾಲುವೆ
ಕೆನ್ನೆಮೇಲೆ ಕಾಲುದಾರಿ.

ಅರಿವಿರದ ಮಗುವು
ಅಳುವಿಂದ ಎಲ್ಲ ತಿಳಿಸುವುದೆ?

ಸಜ್ಜನರ ಚಿತ್ತ
ಅವರವರ ಹಾದಿಯತ್ತ
ನೋಡಿಯು ನೋಡದಂತೆ
ನಿರ್ಲಿಪ್ತ ನೋಟ ಮಗುವಿನತ್ತ.

ಇದ್ದರು ಇಲ್ಲದ ಬದುಕು;
ಆದರೂ ಬದುಕುವಾಸೆ ಆಗಸದಷ್ಟು
ಕಂದ ಅಳುತ್ತಲೇ ಇರು ಅರಿಯುವವರೆಗೆ
ಸಂತೈಸಲು ಯಾರಾದರೂ ಬರುವವರೆಗೆ.

Aug 4, 2008

ಮತ್ತೆ ಮೂಡಿ ಬರುವನು ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕಥೆಯು ಮುಗಿಸಿದ ನಂತರ
ಮತ್ತೆ ಹೊಸ ಕಥೆಯ ಬರೆಯುವ ಚಂದಿರ

ದೇವ, ದಾನವನಿವನೆ ಮಾನವ
ಮತದ ಹೆಸರಲಿ ಮತಿಯ ಕೆಡಿಸುವ
ಮತಕೆ ಮತಿಗೆ ಹಣತೆ ಬೆಳಗುತ
ನಗುತಲಿರುವನು ಚಂದಿರ

ದೇಶಕಾಲದ ಪರಿಗೆ ಮಾಗದೆ
ಹಲವು ಋತುಗಳ ಕೈಗೆ ಸಿಗದೆ
ಅವನ ಕಾಯಕ ಕರ್ಮ ನಿಷ್ಠೆಗೆ
ಬದ್ಧನಾಗಿ ನಡೆವ ಚಂದಿರ

ಸೃಷ್ಠಿಕರ್ತನೆ ಸೂತ್ರಧಾರಿ
ಜಗವೆ ಅವನಿಗೆ ಪಾತ್ರಧಾರಿ
ಎಲ್ಲೆ ಮೀರದೆ ನಡೆದ ದಾರಿ
ಪರಿಧಿಯೊಳಗೆ ಚಂದಿರ

ನೋವು ನಲಿವುಗಳೆಲ್ಲ ಸಹಜ
ಬೆಳಕು ಕತ್ತಲು ಖಚಿತ ಮನುಜ
ಚಿಂತೆ ಮಾಡುತ ಸಂತೆ ಕಂತೆಯ
ನಿಶ್ಚಿಂತೆ ಸಿಗುವುದೆ ಚಂದಿರ

ವಿವಿಧ ಒತ್ತಡ ಬಿತ್ತಿ ದಿನವು
ಹೊರೆಗೆ ಬತ್ತಿದಂತೆ ಜಗವು
ಸರಳ ಜೀವನ ಮಂತ್ರ ಜಪಿಸಿ
ಮುಕ್ತಿ ಕೊಡುವನು ಚಂದಿರ

ಕತ್ತಲಲ್ಲಿ ಕದವ ಕದಲಿಸಿ
ಕಾದ ಕಾವಲಿಗೆ ಕಾವ ಕರಗಿಸಿ
ಬೆಳಗಾದ ನಂತರ ಸಂತನೆಂದರೆ
ಸುಮ್ಮನಿರುವನೆ ಚಂದಿರ

ರಾಗ, ದ್ವೇಷಗಳಲವು ಒಳಗೆ
ಕುಣಿಯುತಿರಲು ಕೊನೆಯವರೆಗೆ
ಸಾಧು ಸಂತನ ಮುಖವಾಡವಿಟ್ಟರೆ
ಕ್ಷಮೆಯು ಕೊಡುವನೆ ಚಂದಿರ

ಎದೆಯ ಮೇಲೆ ಒದೆವ ಕಂದನ
ಮನೆಯಲಿರಳು ಬಾಳು ನಂದನ
ಮುಗ್ಧ ಮನಸಿಗೆ ಮಾರು ಹೋದವ
ನಿಂತು ನಗಿಸುವ ಚಂದಿರ

ಇರುವುದೆಲ್ಲವ ಮರೆತು ಹಿಂದೆ
ನಡೆದು ಹೋಗಲು ಹಾದಿ ಮುಂದೆ
ಹೊಸತು ಜಗವ ದಿನವು ತೆರೆವ
ಸಾಕ್ಷಿ ಅವನೇ ಚಂದಿರ

ಸಪ್ತ ಸ್ವರಗಳ ರಾಗಲಹರಿ
ಸುಪ್ತ ಭಾವದ ನವಿಲ ಗರಿ
ಶಾಂತಿ ಚಿತ್ತದಿ ಹರಿವ ನದಿಗೆ
ತೃಪ್ತನಾಗುವ ಚಂದಿರ

ಆಸೆ ಕುದುರೆಯನೇರಿ ಬರುವ
ನಿರಾಸೆಯಾದರೆ ಖಿನ್ನನಾಗುವ
ಅವತರಿಪ ಆಸೆಗೆ ಕಡಿವಾಣವಿರಿಸಿ
ಸರಸ ಕಲಿಸುವ ಚಂದಿರ

ಉರಿವ ಬೆಂಕಿಗೆ ತೈಲವೆರೆಯುತ
ಮದ, ಮತ್ಸರಗಳಿಂದ ನರಳುತ
ಇರುವ ಕ್ಷಣಗಳ ಮರೆತ ಜನರ
ಕಣ್ಣು ತೆರೆಸುವ ಚಂದಿರ

ಮೋಡ ಕವಿದರು ನುಸುಳುವವನು
ಅಮ್ಮನಿಗೆ ಇವ ಆಪ್ತ ಗೆಳೆಯನು
ಅಳುವ ಕಂದನ ನಗಿಸುವವನು
ಅಡಗಿರುವನೆಲ್ಲಿ ಚಂದಿರ

ದಿನವು ಹಲವು ವೇಶ ಧರಿಸಿ
ದೇಶ ದೇಶಗಳೆಲ್ಲ ಪಯಣಿಸಿ
ದಣಿದ ದೇಹವ ತಣ್ಣಗಿರಿಸಿ
ಹಾರಿ ಹೋಗುವ ಚಂದಿರ

ಒಳಿತು ಕೆಡುಕು ನೋಡುತಿರುವ
ಬಿಸಿಲು ಮಳೆಗೆ ತಣಿಯದಿರುವ
ಆಗಸಕೆ ಅಂದ ನೀಡಿದ
ಚತುರ ಇವನೆ ಚಂದಿರ

ಕೋಪವೆಂಬ ಧೂರ್ತನನ್ನು
ಕಂಡ ಕ್ಷಣವೆ ಕರಗಿಸುವನು
ಸಂಯಮದಿ ಸಹಿಸುತ ಎಲ್ಲವ
ಹಿತವ ನುಡಿಯುವ ಚಂದಿರ

ಸಪ್ತ ಸಾಗರದಾಚೆಗೆಲ್ಲೋ
ನಿತ್ಯ ಹಸಿರಿನ ದಟ್ಟ ಕಾಡಲಿ
ಕಳೆದು ಹೋಗುವ ಹಂಬಲಕ್ಕೆ
ಬೆಂಬಲ ನೀಡುವ ಚಂದಿರ

ತಾನು ತನ್ನದೆ ಎಲ್ಲ ಎಂದರು
ತಾನೆ ಎಲ್ಲವ ಬಲ್ಲೆನೆಂದರು
ನಿಜವನರಿಯುವ ಸುಖದ ಸಿಹಿಯ
ನೀಡಿ ನಲಿವನು ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕಥೆಯು ಮುಗಿಸಿದ ನಂತರ
ಮತ್ತೆ ಹೊಸ ಕಥೆಯ ಬರೆಯುವ ಚಂದಿರ

Aug 2, 2008

ದಿವ್ಯ ಮಿಲನ

ಕದವ ತೆರೆದು ಹೊಳೆವ ಮೊಗದಿ
ಅರಳಿ ನಿಂತಿದೆ ಸಂಪಿಗೆ
ಬರುವುದೆಂತೋ ದುಂಬಿ ಹಾರಿ
ದಿವ್ಯ ಮಿಲನದಂಚಿಗೆ

ವಿರಹ ವೇದನೆ ಉಕ್ಕಿ ಬರಲು
ಸುಗಂಧ ಪರಿಮಳ ಸೆಳೆದು ತರಲಿ
ಒಳಗೆ ಮಿಂದು ತೇಲಿ ಹಾರಲಿ
ಎದೆಯಾಳದ ಕಡಲ ತೀರದಲ್ಲಿ

ಗೆಳೆಯ ಬರುವನು ಈಗಲೇ
ತೇಲಿ ಬಿಡುವೆನಾಕ್ಷಣದಲೇ
ದಾರಿ ತಪ್ಪಿ ತಡವಾಗದಿರಲಿ
ಕಾದಿರುವೆ ನಲ್ಲ ತುದಿಗಾಲಲಿ

ಸುರಿವ ಮಳೆಯೇ ಸುಪ್ರಭಾತ
ಬೆಳಗಿ ತಾರೆಗಳಿಂದ ಸ್ವಾಗತ
ಮರೆತಾಗ ಕರೆಯುವ ಚಂದಿರ
ನೀನೋಡಿ ಬಾರೋ ಹತ್ತಿರ

ಕೆರಳಿರುವ ಕುತೂಹಲ ಕರಗದಿರಲಿ
ಅರಳಿರುವ ನಗುವು ಬಾಡದಿರಲಿ
ಕಳೆದ ಕ್ಷಣಗಳು ಕಾಡದಿರಲಿ
ಈ ನಿರೀಕ್ಷೆ ಹುಸಿಯಾಗದಿರಲಿ