Nov 17, 2009

ಮತ್ತೆ ಮತ್ತೆ ಕಾಡುವ ಬಾಪೂ, ಥೆರೆಸಾ...

ನಿಮ್ಮ ಸರಳತೆ, ನಿಸ್ವಾರ್ಥ ಸೇವೆ, ಆ ಮುಕ್ತ ಪ್ರೀತಿ, ತತ್ವ-ಸಿದ್ಧಾಂತ
ಮತ್ತು ಆದರ್ಶಗಳ ಕಿಂಚಿತ್ ಪರಿಚಯವೂ ಸಹ
ನಮಗೆ ನಿಜವಾಗಲೂ ಇರಬಾರದಿತ್ತು.

ಇದರೊಂದಿಗೆ ಖಂಡಿತವಾಗಿ,
ಇತಿಹಾಸವೇ ಇಲ್ಲದ ನೆಲೆಯಲ್ಲಿ ಮಾತ್ರ
ನಾವು ಹುಟ್ಟಬೇಕಾಗಿತ್ತು, ಹಾ...ಇತಿಹಾಸವಿಲ್ಲದ ನೆಲದಲ್ಲಿ...


ಏಕೆಂದರೆ,
ಆಗ ಮಾತ್ರ...ನಿಜವಾಗಲೂ ಆಗ ಮಾತ್ರ
ನಮಗೆ ನಿಸ್ಸಂಕೋಚವಾಗಿ ಅನುಭವಿಸಲು,
ಎಳ್ಳಷ್ಟೂ ಸಂದೇಹವಿಲ್ಲದೆ ಒಪ್ಪಿಕೊಳ್ಳಲು ಸಾಧ್ಯವಿತ್ತು
ಈ ಪ್ರಸಕ್ತ ಕಾಲಮಾನದಲ್ಲಿ ಘಟಿಸುವ ಎಲ್ಲ ದುಷ್ಕೃತ್ಯಗಳನ್ನೂ
ಸಹಜವೇ ಎಂಬಂತೆ, ತೀರಾ ಸ್ವಾಭಾವಿಕವೆನ್ನುವಂತೆ
ಯಾವ ಅಡಚನೆಯೂ ಇಲ್ಲದೆ, ನಿಬಂಧನೆಗಳೂ ಇಲ್ಲದೆ ಸ್ವೀಕರಿಸಬಹುದಿತ್ತು.

ನಮಸ್ತೆ,
ಬಾಪೂ, ಥೆರೆಸಾ!
ಖಂಡಿತ ನಾನು ಬಲ್ಲೆ
ನಿಮಗಿನ್ನೂ ಕೇಳಿಸಿಕೊಳ್ಳುವ ಸಂಯಮವಿದೆಯೆಂದು?
ಆದ್ದರಿಂದಲೇ ನಾನು ಸಾಧ್ಯವಾದಷ್ಟು ಗಟ್ಟಿಯಾಗಿಯೇ ಹೇಳಬಯಸುವೆ
ನೀವಿಬ್ಬರೂ ಅತೀ ದೊಡ್ಡ ತಪ್ಪುಮಾಡಿದ್ದೀರಿ,
ದುರದೃಷ್ಟವಶಾತ್ ನೀವು ಇದೇ ಈ ನೆಲದಲ್ಲೇ ಹುಟ್ಟಿ,
ಅಗಾಧವಾದ ಅಸಾಧ್ಯತೆಗಳೆಲ್ಲವನ್ನೂ ಸರಳವೆನ್ನುವಷ್ಟು ಸಲೀಸಾಗಿ ಸಾಧಿಸಿ, ಸಾಧ್ಯವಾಗಿಸಿ
ಹಾಗೇ ನೆಮ್ಮದಿಯಾಗಿ ಯಾರೂ ಅರಿಯದ ಯಾವುದೋ ಶ್ರೇಷ್ಠ ಗೂಡಿಗೆ ಹಾರಿ ಬಿಟ್ಟಿದ್ದೀರಿ,
ಹೀಗೆ ನಮ್ಮನ್ನು ನಿರಂತರವಾಗಿ ಎಂದೂ ಕಂಡರಿಯದಂತೆ ಎಡಬಿಡದೆ ಕಾಡುತ್ತಾ ಅಜರಾಮರರಾಗಿ...

ಈಗ,
ಕೇಳಿಸಿಕೊಳ್ಳಿ...ನೀವು ಕೇಳಿಸಿಕೊಳ್ಳಲೇ ಬೇಕು
ಜನಸಾಮಾನ್ಯರನ್ನಾಳುವ ಆಪ್ತ ಅರಸರೇ
ಸಾಮಾನ್ಯರಿಗೆ...ಶ್ರೀಸಾಮಾನ್ಯರಿಗೆ...ಗತಿಯಿಲ್ಲದವರಿಗೆಲ್ಲಾ
ಜನನಾಯಕರೆಂದೆನಿಸಿಕೊಂಡಿರುವ ಅಗ್ರಗಣ್ಯರೇ
ನಿಮ್ಮಿಂದ ಕೂಡಲೇ ಒಂದು ಮುಖ್ಯ, ಬಹಳ ಮುಖ್ಯ ಕಾರ್ಯ ಆಗಬೇಕಾಗಿದೆ
ಇದರಲ್ಲಿ ಖಂಡಿತ ಆಯ್ಕೆಯ ಅವಕಾಶವೂ ಸಹ ನಿಮಗಿರುತ್ತದೆ...ಅದೇನೆಂದರೆ
ಒಂದೋ, ನೀವು ಬಾಪೂ, ಥೆರೆಸಾ ಇವರಿಬ್ಬರ ನೆನಪಿಲ್ಲದಂತೆ, ಜೊತೆಗೆ ಸಮಗ್ರ ಇತಿಹಾಸದ
ಲವಲೇಶವೂ ಉಳಿಸದಂತೆ ಕೂಡಲೇ ದ್ವಂಸಮಾಡಿ.

ಇಲ್ಲಾ,
ಆ ದೇವರ ಕೃಪೆಯಿಂದ ದಯಮಾಡಿ
ಈ ಅಸಹಾಯಕರೆಲ್ಲರ ಜೊತೆಗೆ ಅಮಾಯಕರನ್ನೂ ಸೇರಿಸಿ,
ಇವರೆಲ್ಲರ ಇರುವನ್ನು ಇನ್ನಿಲ್ಲದಂತೆ ನಾಶಮಾಡಿ,
ಮತ್ತೆಂದೂ ಹುಟ್ಟಿಬರಲು ಸಾಧ್ಯವೇ ಇಲ್ಲದಂತೆ
ಒಮ್ಮೆಗೇ ಕೊಚ್ಚಿಹಾಕಿ...

3 comments:

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ ಸಾಲುಗಳು
ಬಾಪೂ ಥೆರೇಸಾ ನಿಜಕ್ಕೂ ಆದರ್ಶ ವ್ಯಕ್ತಿಗಳು

ಮನಸು said...

ತುಂಬಾ ವಿಶೇಷವಾಗಿದೆ ಸರ್, ಚೆನ್ನಾಗಿದೆ

ಚಂದಿನ | Chandrashekar said...

ಧನ್ಯವಾದಗಳು ಡಾ.ಗುರುಮೂರ್ತಿಯವರೆ ಹಾಗು ಮನಸು ಮೇಡಮ್...