ವಿಲಕ್ಷಣ ಬಂಧಗಳ ಧಾವಂತ
ಹಂತಹಂತವಾಗಿ ಹತನಾಗುತ
ಮೂಡಣ ಪಡುವಣಗಳ ವಸಂತ
ಜೊತೆಗೆ ಬರುವುದೆ ಚಂದಿರ
ಸತತ ಕಾಡುವ ಪ್ರೇಮಭಂಗ
ಕಿತ್ತು ತಿನ್ನುವ ಸ್ವಾರ್ಥರಸಂಗ
ಅನುದಿನವು ಅದೇ ರಣರಂಗ
ನಿಟ್ಟುಸಿರಿಡುವಾಸೆ ಚಂದಿರ
ನಿತ್ಯ ಜೂಜಿನ ಸೆಳೆತದಿಂದ
ಸಂಜೆ ಮದ್ಯದ ಸ್ನೇಹಬಂಧ
ಸತತ ಸೋಲಿನ ಚಡಿಯೇಟು
ಚಿತ್ತ ಚಿಗುರುವುದೆ ಚಂದಿರ
ಸೂಕ್ಷ್ಮ ಸಂವೇದಿಗಳ ಗ್ರಹಿಸದೆ
ಆತ್ಮರತಿಯನು ಅನುಭವಿಸದೆ
ವಿವೇಚನೆಗೆ ಅವಕಾಶ ನೀಡದೆ
ನೋಡು ಬೆಪ್ಪನಾಗಿಹೆ ಚಂದಿರ
ಸಂಕಟ, ಅಪಮಾನಗಳ ಸಾಲು
ನಿರಾಶೆ, ಹತಾಶೆಯ ವಿಷವರ್ತುಲ
ಕದಡಿದ ಚಿತ್ತ ಹಾರಿದೆ ಎತ್ತೆತ್ತಲೊ
ಹುಡುಕಿ ಕೊಡುವೆಯಾ ಚಂದಿರ
ಬದುಕಿನ ಸರಳ ವಿವರಗಳೆಲ್ಲ
ಮರೆಯಾದವೊ ಬಿರುಗಾಳಿಗೆ
ಪಾನಮತ್ತನ ಚಿತ್ತ ಚದುರಿದೆ
ಇನ್ನು ಸಹಿಸಿಲಾಗದೆ ಚಂದಿರ
ಹೆಣ್ಣು, ಹೊನ್ನು, ಮಣ್ಣುಗಳ
ನಿರಂತರ ಸೆಳೆತಕೆ ಸಿಲುಕಿ
ಮತಿಹೀನನಾದವನಿಗೆ ಮುಕ್ತಿ
ಸಿಗದೆ ತತ್ತರಿಸುವ ಚಂದಿರ
ಖಿನ್ನತೆಯಿಂದ ಪಾರಾಗಲು
ಮದ್ಯಸಾರವೆ ನಿತ್ಯ ನೈವೇದ್ಯ
ಬೆನ್ನಟ್ಟಿ ಬರುವ ಭೂತಗಳಿಂದ
ಪಾರಾಗ ಬಲ್ಲನೆ ಚಂದಿರ
ವಿಪರೀತ ನಿರೀಕ್ಷೆಯ ಪ್ರತಿಫಲ
ತಾರಾಫಲದ ದಿಗ್ದರ್ಶನದ ಬಲ
ಸಾಕ್ಷಿಪ್ರಜ್ಞೆ ತೊರೆದ ಅಂತರಾತ್ಮ
ಸ್ವಯಂಕೃತ ಅಪರಾಧ ಚಂದಿರ
ಜೀವನಪ್ರೀತಿಯನ್ನು ತೊರೆದು
ಮಾನವಪ್ರೀತಿಯನ್ನು ಮರೆತು
ತೆರೆದಿಡುವ ತುಡಿತಕೆ ಹಿಂಜರಿದು
ಪಲಾಯನ ಮಾಡಿದೆ ಚಂದಿರ
4 comments:
tumba chennagide.... dukha, hataashe mana muttuvantide...
ವಾಹ್!!! ಎಂತಹ ಸಾಲುಗಳು ತುಂಬಾ ಚೆನ್ನಾಗಿದೆ ಸರ್
ತುಂಬಾ ಸುಂದರ ಸಾಲುಗಳು
ಅರ್ಥ ಪೂರ್ಣವೂ ಆಗಿವೆ
ಧನ್ಯವಾದಗಳು ಜ್ಯೋತಿ, ಮನಸು ಮೇಡಮ್, ಮತ್ತೆ ಡಾ.ಗುರುಪ್ರಸಾದ್ ಅವರಿಗೆ...
Post a Comment