Dec 10, 2008

ಮತ್ತೆ ಬರುವನು ಚಂದಿರ - 8

ಹಣದ ಮೇಲೆ ಹೊಳೆವ ಕಣ್ಣು
ಹೆಣದ ಮೇಲೆ ಧೂಳು ಮಣ್ಣು
ಗಂಧ, ನೀರು, ಹೂವು, ಹಣ್ಣು
ಗೌಣ ಗುಣವೊ ಚಂದಿರ

ಋತುಚಕ್ರ ತಿರುಗಿ ತರುವ
ನವ ನವೀನ ಪ್ರತಿ ದಿನವ
ಕಪ್ಪು ಬಿಳುಪು ನೆನಪು ಉಳಿಸಿ
ಮರೆಯಾಗುವ ಚಂದಿರ

ಕನ್ನಡಿಯೆದುರು ನೋಡಬೇಕು
ಜ್ಞಾನವಿದ್ದಕಡೆ ಹೋಗಬೇಕು
ನಿಜವ ನುಡಿವವರ ಬೆನ್ನುತಟ್ಟಿ
ನೀನಾಗು ಮನುಜ ಚಂದಿರ

ಎಳೆಬಿಸಿಲಿಗೆ ಮೈ ತೆರೆದಿಟ್ಟು
ತಂಗಾಳಿಗೆ ರೋಮಾಂಚನ
ತೆಳುವಾದ ಮನದ ನೋವು
ತೂಗಾಡುವ ಹೂವು ಚಂದಿರ

ಆದಿ ಶೂನ್ಯ, ಅಂತ್ಯ ಶೂನ್ಯ
ಶೂನ್ಯ ಜಗದ ಪಯಣವು
ಪಡೆದುದೆಲ್ಲ ಪಡೆದುದಲ್ಲ
ಶೂನ್ಯ ನಿಜವು ಚಂದಿರ

ಇತಿ ಮಿತಿಗಳ ಅರಿವಿರದೆ
ಆಳ, ಅಗಲ ತಿಳಿಯದೆ
ಬಲ್ಲೆನೆಂದು ನಟಿಸುವವಗೆ
ಭಯವು ಒಳಗೆ ಚಂದಿರ

ಹಾಲೊಳಗೆ ಬೆಣ್ಣೆ, ಕಾಯೊಳಗೆ ಎಣ್ಣೆ
ಅಡಗಿರುವುದು ನಿಜವು ತಾನೆ
ಹುಡುಕಿ ಪಡೆಯೊ ಉತ್ತರ
ದುಗುಡ ತೊರೆದು ಚಂದಿರ

ಹೊರಗೆ ಬೆಳಕು, ಒಳಗೆ ಕೊಳಕು
ಕಪ್ಪು ಬಿಳುಪು ಪ್ರತಿ ದಿನದ ಬದುಕು
ಕಪ್ಪ ಕೊಟ್ಟು ಬೆಪ್ಪನಾಗಿ,
ತುಪ್ಪ ಬೇಡುತಿರುವೆ ಚಂದಿರ

ಉದ್ದೇಶರಹಿತ ಸ್ನೇಹ ವಿರಳ
ಕಾಲಹರಣಕಿಂದು ಕಾಲವಿಲ್ಲ
ತಿರುಗಿನೋಡದೆ ಓಡುತಿಹರು
ಒಮ್ಮೆ ಕೂಗಿ ತಡೆಯೊ ಚಂದಿರ

ಗಮನಕೊಡದೆ ಕಳೆದ ಬಾಲ್ಯ
ಯಶಸ್ಸಿಗಾಗಿ ಮರೆತು ಮೌಲ್ಯ
ತೂಗು ತಕ್ಕಡಿಯಲ್ಲಿ ತತ್ತರಿಸಿ
ಬಿದ್ದು, ಉಸಿರು ಬಿಟ್ಟ ಚಂದಿರ

No comments: