Dec 2, 2008

ಅಸಹಾಯಕತೆ

ಮತ್ತೆ ಅಸಹಾಯಕನ ಮಾಡದಿರು ತಂದೆ
ಕೈ ಕಾಲು ಕಟ್ಟಿ, ಕಣ್ಣು ತೆರೆಸಿ
ಬಲಹೀನನಾಗಿ ಬದುಕ ಬಿಡದಿರು
ಸ್ವಾಭಿಮಾನದ ಪ್ರಶ್ನೆ, ಕರುಣೆಯಿರಲಿ

ತಂದೆ, ತಾಯಿಯ ಬಿಡದೆ, ಅಳುವ ಕಂದನ ಕೊಂದು
ಅಕ್ಕ, ತಂಗಿಯ ಜೊತೆಗೆ ಅಣ್ಣ, ತಮ್ಮನ ಇರಿದು
ಒಲವಿನ ಮಡದಿಯನು ಕಣ್ಮುಂದೆ ಹರಿದು
ಗುಂಡಿಕ್ಕಿ ಗರ್ಜಿಸಿ, ತೊಡೆತಟ್ಟಿ ಕುಣಿಯುತಿಹರು

ಇಂಗಿ ಹೋಯಿತು ಶೌರ್ಯ, ಕುಸಿದು ಬಿದ್ದಿದೆ ಸ್ಧೈರ್ಯ
ಅಡಗಿಕೊಳ್ಳಲು ಸಹ ಕೊಡದೆ ಅವಕಾಶ
ಇಲಿಯೊಂದು ತನ್ನ ಸ್ವೇಚ್ಛತೆ ತೋರಿ ಅಣಕಿಸುತ್ತಿದೆ ಇಲ್ಲಿ
ನರಕ ಸದೃಶ ಬಾಳಿದು ಸತತ ಸುಡುವ ಬೆಂಕಿ

ಬದುಕಿಸಿ ಸಾಯಿಸುವ ಸೂತ್ರ ಪ್ರಯೋಗ
ಕೆರಳಿಸಿ, ಕೆಣಕುತಲೆ ಮೆರೆಯುತಿರೆ ಎದುರೇ
ಬರಡು ಭೂಮಿಯಿದು ಬಿಡು ಹಸಿರಿನ ಕನಸು
ಕರೆದುಕೋ ಈಗಲೇ ವ್ಯರ್ಥ ಈ ಉಸಿರು

ನಗ್ನ ದರ್ಶನವಿದು ಪರದೆ ಕಳಚಿದ ಮೇಲೆ
ಮತ್ತೆ ಪರೀಕ್ಷೆಗೆ ಇರುವುದೇ ಸಾಮರ್ಥ್ಯ
ಅಸಹಾಯಕತೆ ಎನ್ನ ಕಾಡುತಿದೆ ಕ್ಷಣಕ್ಷಣವು
ಸಹನೆ, ಸಂಯಮ ಬತ್ತಿಹೋಗಿದೆ ಎಂದೋ

ದಿಟ್ಟ ಉತ್ತರ ಕೊಡಲು ಹಾತೊರೆಯುತಿದೆ ಆತ್ಮ
ಅಲ್ಲಿ ಹೋಗುವ ಮುನ್ನ, ಕಸವ ಗುಡಿಸುವ ಕರ್ಮ
ಮತ್ತೆ ಬಾರದಿರಲಿ ಎಂದಿಗೂ, ಯಾರಿಗೂ
ಸ್ವಾಭಿಮಾನದ ಪ್ರಶ್ನೆ, ಕರುಣೆಯಿರಲಿ

No comments: