Jul 16, 2009

ಮತ್ತೆ ಬರುವನು ಚಂದಿರ - 29

ಅತಂತ್ರ ಸ್ಥಿತಿಯ ಭೀಕರ ಚಿತ್ರ
ಕದಡಿ, ಕಾಡುವ ಭಾವಾತಿರೇಕ
ಮುಕ್ತಿ, ಮೋಕ್ಷಗಳ ಶೋಧನೆಗೆ
ಅಂತಿಮ ಎಲ್ಲಿ ಹೇಳೊ ಚಂದಿರ

ವಾಸ್ತವದ ವ್ಯವಹಾರಿಕ ನೆಲೆಯಲ್ಲಿ
ಮೌಲ್ಯಗಳ ಹುಡುಕುವ ನೆಪವೇಕೆ
ಪ್ರತಿಫಲದ ಆಪೇಕ್ಷೆಯಿಂದ ಬೆಸದ
ಸ್ನೇಹಕೆ, ಜರಿಯುವೆ ಏಕೆ ಚಂದಿರ

ಸೈದ್ಧಾಂತಿಕ, ತಾತ್ವಿಕ ನೆಲೆಗಟ್ಟು,
ಗತಕಾಲದ ವೈಭವಗಳ ಜೊತೆಗೆ
ವಾಸ್ತವಕ್ಕೆ ಹಿಡಿದಾಗ ನೈಜ ಕನ್ನಡಿ
ನಿರ್ಲಿಪ್ತ ನಗೆ ಬೀಸುವ ಚಂದಿರ

ಚಾರಿತ್ರಿಕ ಪಾತ್ರದ ಹಿನ್ನಲೆಯಲ್ಲಿ
ಸಮಕಾಲೀನ ಪ್ರತಿರೂಪಗಳನ್ನು
ಪ್ರತಿಮೆಗಳಾಗಿ ಬಳಸುವ ಪ್ರಕ್ರಿಯೆ
ಶ್ರೇಷ್ಟತೆಗೆ ಮಾದರಿಯೆ ಚಂದಿರ

ವಿಭಿನ್ನ ಮಗ್ಗುಲುಗಳಿಗೆ ತಿರುಗಿಸಿ
ಸೂಕ್ಷ ಪರಿಶೀಲನೆಗೆ ಅಳವಡಿಸಿ
ನಿರ್ಲಿಪ್ತ ಮನಸ್ಥಿತಿ ಹಿನ್ನಲೆಯಲ್ಲಿ
ಸತ್ಯಕ್ಕೆ ಹತ್ತರವಾಗುವೆ ಚಂದಿರ

ಬಿಡಿ ಬಿಡಿಯಾಗಿ ಕಡಿದ ನಂತರ
ವಿಚಿತ್ರವಾಗಿ ಜೋಡಿಸುವುದನ್ನೇ
ಕ್ರೀಯಾಶೀಲತೆಗೆ ಕನ್ನಡಿಯೆಂದು
ಸೃಜನಶೀಲ ತಾನೆನ್ನುವ ಚಂದಿರ

ಆಕರ್ಷಕವಾಗಿ, ಸಾರ್ಥಕವಾಗಿ
ಕಟ್ಟಿಕೊಡುವ ಕಠಿಣ ಪರಿಶ್ರಮಕ್ಕೆ,
ಸಂಯಮ, ಸಹನೆಯ ಪರೀಕ್ಷೆಗೆ
ಹಿಂಜರಿಯುವೆ ಏಕೆ ಚಂದಿರ

ಭಾವ ಲಯಗಳ ಮಿಡಿತದಿಂದ
ಭಾವ ಲಹರಿಯ ಹಿಡಿತದಿಂದ
ಚಲನಶೀಲತೆ ಮೊಟಕುಗೊಳ್ಳದೆ
ಸತತ ಚಲಿಸುತಿರು ಚಂದಿರ

ಬಾಳಿನ ಅನಿರೀಕ್ಷಿತ ತಿರುವುಗಳಿಗೆ
ಕುತೂಹಲ ಕೆರಳಿಸುವ ಸನ್ನಿವೇಶಕೆ,
ಮುಗ್ಥ ಅಚ್ಚರಿಗಳಿಗೆ ಬೆರಗಾಗುತ
ಜೀವ ಚೈತನ್ಯ ತುಂಬಿಸು ಚಂದಿರ

ತಂತ್ರ ಮಂತ್ರಕೆ ತಲೆದೂಗುತ್ತಾ
ಅಂಧ ಆಮಿಷಗಳಿಗೆ ಜಾರಿ ಬಿದ್ದು
ಧರ್ಮ ಸಂಕಟಕ್ಕೆ ಸಿಕ್ಕಿ ಕೊಂಡೆನು
ಪಾರುಮಾಡೊ ಗೆಳೆಯ ಚಂದಿರ

2 comments:

ಜಲನಯನ said...

ಚಂದಿನ, ನೈಜ ಎನಿಸುವುದು ಕೆಲವೊಮ್ಮೆ ಕೃತ್ರಿಮವಾಗುತ್ತದೆ ಎನ್ನುವ ಭಾವವೇ?? ಪ್ರತಿಫಲದ ಅಪೇಕ್ಷೆಯ ಸ್ನೇಹವನ್ನು ಜರಿವ ಚಂದಿರನ ಪ್ರಶ್ನಿಸುವ ಮೂಲಕ ಇಂದಿನ ವಾಸ್ತವತೆಗೆ ಕನ್ನಡಿ ಹಿಡಿಯುವ ಕವನ...ಚನ್ನಾಗಿವೆ ಅದರಲ್ಲೂ ಈ ಸಾಲುಗಳು....
ವಾಸ್ತವದ ವ್ಯವಹಾರಿಕ ನೆಲೆಯಲ್ಲಿ
ಮೌಲ್ಯಗಳ ಹುಡುಕುವ ನೆಪವೇಕೆ
ಪ್ರತಿಫಲದ ಆಪೇಕ್ಷೆಯಿಂದ ಬೆಸದ
ಸ್ನೇಹಕೆ, ಜರಿಯುವೆ ಏಕೆ ಚಂದಿರ

ಚಂದಿನ | Chandrashekar said...

ಧನ್ಯವಾದಗಳು ಜಲನಯನ ಅವರೆ,