Aug 7, 2009

ಮತ್ತೆ ಬರುವನು ಚಂದಿರ - 30

ಅಸ್ಪಷ್ಟ ಹಾದಿಯ ಹಕ್ಕಿಗೆ
ಹಲವಾರು ಹಂಬಲದ ತೇರು
ಕಲಹ, ಕದನ, ಕೋಲಾಹಲ
ಉನ್ಮತ್ತ ಚಿತ್ತ ಚಂದಿರ

ವೇಗ, ಉದ್ವೇಗದ ಸವಾರಿ
ಹಗಲು ವೇಶದ ಅನಾಮಧೇಯ
ಹರಹರ ಅರ್ಧನಾರೀಶ್ವರಿನಿಗೆ
ಸಂಯಮ ಪರಾರಿ ಚಂದಿರ

ಮಾತಿಗಿಲ್ಲ ಪುರಸೊತ್ತು
ಮತಿಗೆ ಎಲ್ಲಿಲ್ಲದ ಕಸರತ್ತು
ನುಸುಳುವ ಸ್ಮಶಾನ ಮೌನ
ಉರಿವ ಅಂತಃರಾತ್ಮ ಚಂದಿರ

ಏನೇನೋ ಲೆಕ್ಕಾಚಾರ
ಇಲ್ಲಿ ಎಲ್ಲವೂ ಅಗೋಚರ
ಪಿಸುಮಾತು, ಗುಸುಗುಸು
ಸಂಚಿಗೆ ಮದ್ಯಸಾರ ಚಂದಿರ

ಬಡಪಾಯಿ ಶಂಭುವಿಗೇಕೋ
ರಿಂಗಣಿಸುವ ತವಕ ತಲ್ಲಣ
ಅತಂತ್ರತೆ, ಅಸಹಾಯಕತೆ
ನಿತ್ಯನೂತನ ಸಿದ್ಧಿ ಚಂದಿರ

ಮನೆಯ ಹಿತ್ತಲಲ್ಲಿ ಗುಲಾಬಿ ಮೊಗ್ಗು
ಆ ಬದಿ ಮನೆಯೊಡತಿಗೆ ಏಕೋ
ಎಲ್ಲಿಲ್ಲದ ಉರುಪು, ಉಮ್ಮಸ್ಸು
ಯಾವ ವಿಸ್ಮಯಕೋ ಚಂದಿರ

ಪಂಚರಂಗಿ ಪರಮಾತ್ಮ ಮನೆಯೊಡೆಯ
ಸದಾ ಅಲೆಯುವ ಪರದೇಸಿ ಪುಣ್ಯಾತ್ಮ
ಹಸಿದಾಗ ಅಪ್ಪಣೆಯ ಬೇಡುವುದೆ ಧರ್ಮ
ಕಾದ ಕಾವಲಿಗೆ ತೀವ್ರ ಕಳವಳ ಚಂದಿರ

ಆ ಮರದಲ್ಲಿ ಮಿಡಿಗಾಯಿ
ಇಲ್ಲಿ ಸಂಯಮವು ಬತ್ತಿರಲು
ರುಚಿ ನೋಡುವ ಅತಿಯಾಸೆಗೆ
ಆಗ ನೋಟ ಮಂಪರು ಚಂದಿರ

ತರ್ಕಕ್ಕೆ ನಿಲುಕದ ಆ ಪುಳಕ
ಅದೇ ಸಂಗ್ರಾಮ, ಸಂಭ್ರಮ
ಮಂದಹಾಸದಿ ಮತ್ತೆ ಮರಳಿ
ವಾಸ್ತವಕ್ಕೆ ಪ್ರವೇಶ ಚಂದಿರ

ಮರದಿಂದ ಜಾರಿದ ಮಂಜು
ಹೃದಯಕ್ಕೆ ರೋಮಾಂಚನ
ಬೇಸರ ತುಂಬಿದ ದಿನದಿಂದ
ಕ್ಷಣದಲಿ ಮುಕ್ತಿ ಚಂದಿರ

2 comments:

ಶ್ರೀನಿವಾಸಗೌಡ said...

ಹರಳು ಉರಿದ ಹಾಗಿದೆ ನಿಮ್ಮ ಪದ್ಯ. ನಿಮ್ಮ ಪದ್ಯದಲ್ಲಿ ಬರವಣಿಗೆ ಸರಾಗ, ಮತ್ತು ಉನ್ಮತ್ತವಾಗಿದೆ.
ಹಿತವಾದ ಪದ್ಯ..!

ಚಂದಿನ | Chandrashekar said...

ಧನ್ಯವಾದಗಳು ಗೌಡ್ರೆ....