Nov 3, 2008

ಮತ್ತೆ ಬರುವನು ಚಂದಿರ - 5

ಪ್ರತಿಫಲ ಬೇಡದ ಪರಿಶ್ರಮ ,
ನಿರೀಕ್ಷೆಯಿರದ ಮನಃಸ್ಥಿತಿಯತ್ತ
ನಿರಾಸೆ ಸುಳಿವುದೆ ಹತ್ತಿರ
ಮತ್ತೆ ಬರುವನು ಚಂದಿರ

ನಿಲುವು, ಒಲವು ಇರಲು ಚೆಲುವು
ಸ್ವಾಭಿಮಾನವೆ ಆತ್ಮ ಬಲವು
ದಿಟ್ಟ ನಡೆಗೆ ಬಿಟ್ಟು ಹೋದವರ
ತಂಟೆಯೇಕೆ ಚಂದಿರ

ನೀಲಿ ಬಾನಲಿ ನಗುವ ಚಂದಿರ
ಹೊಳೆವ ತಾರೆಗಳೊಡನೆ ಸುಂದರ
ಇವನಿರದ ಇರುಳು ಬಹಳ ಬೇಸರ
ಚತುರನಲ್ಲವೆ ಇವನು ಚಂದಿರ

ಭೂತಕಾಲದ ಭೂತ ಹಿಡಿದು
ಭವಿಷ್ಯತ್ತಿನ ಭಯಕೆ ಸಿಡಿದು
ವರ್ತಮಾನದ ವಿದ್ಯಮಾನ
ಮರೆತೆಯಲ್ಲೋ ಚಂದಿರ

ಒತ್ತಡಗಳಿಗೆ ತತ್ತರಿಸುತ
ವಿಚಿತ್ರ ವ್ಯಾಧಿಗೆ ತುತ್ತಾಗುತ
ಸುತ್ತ ಮುತ್ತ ಮಾಡಿ ಕಲುಷಿತ
ಬೆಪ್ಪನಾದೆಯೊ ಚಂದಿರ

ನೂರು ಹುಳಗಳು ಒಳಗೆ ತೂರಿ
ಭೂತ ಹಿಡಿದವನಂತೆ ಹಾರಿ
ಬುದ್ಧಿಭ್ರಮಣೆಗೆ ಮತಿಯು ಜಾರಿ
ಭೂತಗನ್ನಡಿ ಬೇಕೆ ಚಂದಿರ

ಎಲ್ಲ ತೊರೆದವನು ಎಲ್ಲರೊಳು ಉತ್ತಮನು
ಇತಿಮಿತಿಗಳ ಸುತ್ತಿಕೊಂಡವನು ಮಧ್ಯಮನು
ಪ್ರಯತ್ನಿಸದೆ ಪಠಿಸುವವನು ಅಧಮನು
ಎಲ್ಲರೊಳಗಿರುವವನು ಚಂದಿರ

ಧರ್ಮದೆಸರಲ್ಲಿ ವಿಷಬೀಜ ಬಿತ್ತಿ
ಬೆಳೆದ ಅಫೀಮಿಂದ ಮತ್ತೇರಿಸಿ
ಮನುಕುಲದ ಮತಿಗೆಡಿಸಿದ ಮತಿಹೀನ
ಮನುಜರ ಕಣ್ಣ ತೆರೆಸೋ ಚಂದಿರ

ಬಣ್ಣ ಬಣ್ಣದ ಮಾತುಗಳಾಡುತ
ಚಂಗ ಚಂಗನೆ ಜಿಗಿಯುವನೀತ
ಮರುಳು ಮಾಡಿ ಮಂದಿಯ ಸತತ
ಉದರನಿಮಿತ್ತ ಎಂದ ಚಂದಿರ

ಕತ್ತಲ ಕಳೆಯುತ ಬೆಳಕು ಕಾಣುವ
ಕಲಿತು ಕಲಿಸುವ ಕಾಯಕ ಕರ್ಮವ
ನಿತ್ಯ ನಿರ್ಮಲ ಮನಕೆ ಸ್ವರ್ಗದ
ಮಾರ್ಗ ತೋರುವ ಚಂದಿರ

2 comments:

Shree said...

Yureka.....! Now I know you!

Wonderful sir... Sso.. nice to see you here! I was wondering who is this newcomer, today I got to know after checking your profile...!

Anonymous said...

ಮತ್ತೆ ಮತ್ತೆ ಬಂದು, ಸಲಹೆಗಳ ಮೂಲಕ ಕೂಗನ್ನು ಬಲಪಡಿಸಿ.

- ಚಂದಿನ